ಸಾಮಾನ್ಯವಾಗಿ ಮನೆಗಳಲ್ಲಿ ಗುಬ್ಬಿ, ಪಾರಿವಾಳಗಳು ಗೂಡುಕಟ್ಟಿ ಮೊಟ್ಟೆಯಿಟ್ಟು ಮರಿ ಮಾಡುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ಬುಲ್ಬುಲ್ ಪಕ್ಷಿಯೊಂದು ಮನೆಯೊಳಗೆ ಗೂಡುಕಟ್ಟಿ ಮೊಟ್ಟೆಯಿಡುವುದನ್ನು ನೋಡಿದವರು ವಿರಳವೇ ಎನ್ನಬೇಕು.
ಮನುಷ್ಯನನ್ನು ಕಂಡ ತಕ್ಷಣ ಹಾರಿಹೋಗುವ ಈ ಹಕ್ಕಿಗಳು ಮನೆಯೊಳಗೆ ಗೂಡು ಕಟ್ಟಿ ಮೊಟ್ಟೆಯಿಡುತ್ತಿರುವುದು ನಿಜಕ್ಕೂ ಸೋಜಿಗವೇ… ಇಷ್ಟಕ್ಕೂ ಬುಲ್ಬುಲ್ ಹಕ್ಕಿ ಗೂಡುಕಟ್ಟಿ ಮೊಟ್ಟೆಯಿಟ್ಟಿರುವುದು ಕೊಡಗಿನ ಕುಶಾಲನಗರ ಬಳಿಯ ಬೊಳ್ಳೂರು ಗ್ರಾಮದ ನಿವಾಸಿ ನಿವೃತ್ತ ಸೈನಿಕ ಕೋಡಿ ಮಾಚಯ್ಯ ಅವರ ಮನೆಯಲ್ಲಿ. ಈ ಅಚ್ಚರಿಯನ್ನು ನೋಡಲು ಜನ ಬರುತ್ತಿದ್ದಾರೆ. ಆದರೆ ಇದ್ಯಾವುದರ ಪರಿವೇ ಇಲ್ಲದೆ ಹಕ್ಕಿ ಮಾತ್ರ ಗೂಡಿನಲ್ಲಿ ಕೂತು ಮೊಟ್ಟೆಗೆ ಕಾವು ಕೊಡುತ್ತಿದೆ.
ಕೊಡಗಿನಲ್ಲಿ ಬುಲ್ಬುಲ್ ಹಕ್ಕಿಗಳು ಹೆಚ್ಚಾಗಿ ವಾಸಿಸುತ್ತವೆ. ಇಲ್ಲಿನವರು ಇದನ್ನು ಕೊಟ್ರುಮುಡ್ಚ ಎಂದು ಕರೆಯುತ್ತಾರೆ. ಗದ್ದೆಗಳ ಏರಿ ಸಂದಿಯ ಪೊದೆಯಲ್ಲಿ, ಕುರುಚಲು ಕಾಡಿನಲ್ಲಿ, ಪುಟ್ಟ ಗಿಡಗಳಲ್ಲಿ ಈ ಹಕ್ಕಿಗಳು ಗೂಡುಕಟ್ಟಿ ಮರಿ ಮಾಡುತ್ತವೆ. ಬೇಸಿಗೆಯ ದಿನಗಳಲ್ಲಿ ಇವು ಹೆಚ್ಚು ಹೆಚ್ಚಾಗಿ ಗೂಡುಕಟ್ಟಿ ಮರಿ ಮಾಡುವುದು ಕಂಡು ಬರುತ್ತವೆ. ಈಗಲೂ ಕೊಡಗಿಗೊಂದು ಸುತ್ತು ಹೊಡೆದರೆ ಮೊಟ್ಟೆಯಿಟ್ಟು ಮರಿಮಾಡಿ, ಮರಿಯನ್ನು ಪೋಷಿಸಿ ಹಾರಿಸಿದ ಖಾಲಿ ಗೂಡುಗಳು ಅಲ್ಲಲ್ಲಿ ಕಾಣಸಿಗುತ್ತವೆ. ಸಾಮಾನ್ಯವಾಗಿ ಗೂಡುಕಟ್ಟಲು ಪೊದೆಯಂತಹ ಸ್ಥಳವನ್ನೇ ಆಯ್ಕೆ ಮಾಡುವ ಈ ಹಕ್ಕಿಗಳು ಗೂಡು ಕಟ್ಟಲು ಮನೆಯನ್ನು ಆಯ್ಕೆ ಮಾಡಿರುವುದು ಮಾತ್ರ ಅಚ್ಚರಿ ಮೂಡಿಸಿದೆ.
ಮಾಚಯ್ಯ ಅವರು ಮನೆಯ ಕೊಠಡಿಯ ಕಿಟಿಕಿಯನ್ನು ಸದಾ ತೆಗೆದಿರಿಸುತ್ತಿದ್ದರಿಂದ ಕಿಟಿಕಿ ಮೂಲಕ ಒಳ ನುಗ್ಗಿದ ಬುಲ್ ಬುಲ್ ಹಕ್ಕಿಗೆ ಕೊಠಡಿಯ ಟ್ಯೂಬ್ಲೈಟ್ ಇರುವ ಜಾಗವೇ ಗೂಡು ಕಟ್ಟಲು ಪ್ರಶಸ್ತ ಸ್ಥಳ ಎಂದು ಅನಿಸಿರಬೇಕು. ಹಾಗಾಗಿ ಹೊರಗಿನಿಂದ ಕಸ ಕಡ್ಡಿ ತಂದು ಗೂಡು ಕಟ್ಟಲು ಆರಂಭಿಸಿದೆ. ಇದನ್ನು ನೋಡಿದ ಮನೆಯವರಿಗೆ ಅಚ್ಚರಿಯಾಗಿದೆ. ಅವರು ಕೂಡ ಹಕ್ಕಿಯ ಆಸೆಗೆ ತಣ್ಣೀರು ಎರಚುವ ಯತ್ನ ಮಾಡದೆ ಅವಕಾಶ ಮಾಡಿಕೊಟ್ಟಿದ್ದಾರೆ. ಟ್ಯೂಬ್ ಲೈಟ್ ಉರಿಸಿದರೆ ಹಕ್ಕಿಯ ಏಕಾನತೆಗೆ ತೊಂದರೆಯಾಗಬಹುದೆಂದು ಉರಿಸುವುದನ್ನು ನಿಲ್ಲಿಸಿದ್ದಾರೆ. ಫ್ಯಾನ್ ಕೂಡ ಹಾಕುತ್ತಿಲ್ಲ. ಕಿಟಿಕಿ ಬಾಗಿಲನ್ನು ತೆರೆದಿಡುತ್ತಾರೆ. ಇದರಿಂದಾಗಿ ಹಕ್ಕಿ ಯಾವುದೇ ಭಯವಿಲ್ಲದೆ ನಿರ್ಭಯವಾಗಿ ಗೂಡುಕಟ್ಟಿ ಮೊಟ್ಟೆಯಿಟ್ಟು ಮರಿ ಮಾಡಲು ಮುಂದಾಗಿದೆ. ಅದಕ್ಕೂ ಮನೆಯವರ ಪರಿಚಯವಾಗಿರುವುದರಿಂದ ಜನರನ್ನು ನೋಡಿದ ತಕ್ಷಣ ಗಾಬರಿಯಿಂದ ಹಾರಿಹೋಗುವುದಿಲ್ಲ.
ಒಟ್ಟಾರೆ ಮನೆಗೆ ಬಂದ ಅಪರೂಪದ ಅತಿಥಿಯನ್ನು ಜತನದಿಂದ ನೋಡುವ ಕಾರ್ಯವನ್ನು ಮಾಚಯ್ಯ ಅವರ ಮನೆಯವರು ಚಾಚೂ ತಪ್ಪದೆ ಮಾಡುತ್ತಿದ್ದಾರೆ.