ಮಡಿಕೇರಿ: ರಾಷ್ಟ್ರ ರಕರ್ಷಣೆಗಾಗಿ ಮಡಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸುವ ಮೂಲಕ ನಗರದ ಹುತಾತ್ಮರ ಸ್ಮಾರಕದಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ವತಿಯಿಂದ ಇಲ್ಲಿನ ನಗರಸಭೆಯ ಬಳಿಯಲ್ಲಿರುವ 1939 ರಿಂದ 1945 ರವರೆಗೆ ನಡೆದ ದ್ವಿತೀಯ ಮಹಾಯುದ್ಧದಲ್ಲಿ ಮಡಿದ ಯೋಧರ ಸ್ಮಾರಕದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸೈನ್ಯಾಧಿಕಾರಿಗಳು, ಮಾಜಿ ಯೋಧರು, ಜಿಲ್ಲಾಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಲ್ ಎನ್.ಕೆ. ಕರುಂಬಯ್ಯ(ನಿವೃತ್ತ) ಅವರು ಸ್ಮಾರಕಕ್ಕೆ ಹೂಗುಚ್ಛವನ್ನಿರಿಸಿ ಹುತಾತ್ಮ ಯೋಧರಿಗೆ ಗೌರವವನ್ನು ಸಲ್ಲಿಸಿದರು, ನಂತರ ಲೆಫ್ಟಿನೆಂಟ್ ಜನರಲ್(ನಿವೃತ್ತ) ಬಿ.ಸಿ.ನಂದ, ಏರ್ ಮಾರ್ಷಲ್ ನಂದ ಕಾರ್ಯಪ್ಪ, ಬ್ರಿಗೇಡಿಯರ್ ಕೆ.ಎಂ. ಮುತ್ತಣ್ಣ, ಲೆ.ಕ. ನಾಚಪ್ಪ, ಕ್ಯಾಪ್ಟನ್ ಪಿ.ಎ. ಸುಬ್ಬಯ್ಯ, ಕ್ಯಾ. ಭಾಸ್ಕರ್, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿ ಸೋಜ, ಎಸ್ಪಿ ಪಿ. ರಾಜೇಂದ್ರ ಪ್ರಸಾದ್, ಮಡಿಕೇರಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಏರ್ ಕಮಾಡೋರ್ ಕೆ.ಸಿ. ದೇವಯ್ಯ, ಲೆ.ಕ. ಪಿ.ಎಸ್. ನಾಣಯ್ಯ, ಕ್ಯಾಪ್ಟನ್ ಎಸ್.ಕೆ. ಸುಬ್ಬಯ್ಯ, ಕ. ಪಟ್ಟಮಾಡ ಮುತ್ತಣ್ಣ, ಫೀ.ಮಾ. ಕೆ.ಎಂ. ಕಾರ್ಯಪ್ಪ ಮತ್ತು ಜ.ತಿಮ್ಮಯ್ಯ ಫೋರಂನ ಅಧ್ಯಕ್ಷರಾದ ಕ. ಕೆ.ಸಿ.ಸುಬ್ಬಯ್ಯ, ಹೋಂ ಗಾಡ್ಸರ್್ ಕಮಾಂಡೆಂಟ್ ಮೇ. ಚಿಂಗಪ್ಪ, ಮೊದಲಾದವರು ಸ್ಮಾರಕಕ್ಕೆ ಹೂ ಗುಚ್ಛವನ್ನಿರಿಸಿ ಗೌರವ ಸಲ್ಲಿಸಿದರು.
ಸಶಸ್ತ್ರ ಪಡೆಗಳ ಧ್ವಜ ದಿನದ ಪ್ರಯುಕ್ತ ಜಿಲ್ಲಾ ಸಶಸ್ತ್ರ ಪೊಲೀಸ್ ದಳದಿಂದ ನಭಕ್ಕೆ ಕುಶಾಲತೋಪನ್ನು ಸಿಡಿಸಿ ಗೌರವ ಸಲ್ಲಿಸಲಾಯಿತಲ್ಲದೆ, ಪೊಲೀಸ್ ಬ್ಯಾಂಡ್ ದಳ ಅತ್ಯಂತ ವಿಶಿಷ್ಟ ಬ್ಯೂಗಲ್ ರಿಟ್ರೀಟ್ ಗಮನ ಸೆಳೆಯಿತು. ಸಶಸ್ತ್ರ ಪಡೆಗಳ ಧ್ವಜ ದಿನದ ಪ್ರಯುಕ್ತ ಹೊರ ತರಲಾದ ಧ್ವಜವನ್ನು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿ ಸೋಜ ಅವರು ಬಿಡುಗಡೆ ಮಾಡಿದರು.