ನಿಸರ್ಗಕ್ಕೂ ಹಬ್ಬಕ್ಕೂ ಅವಿನಾಭಾವ ಸಂಬಂಧವಿದೆ. ಅದರಲ್ಲೂ ಕ್ರಿಸ್ಮಸ್ ಹಬ್ಬವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಇಡೀ ಜಗತ್ತು ಸಿದ್ಧಗೊಳ್ಳುತ್ತದೆ. ಇನ್ನು ನಿಸರ್ಗದಲ್ಲೂ ಸದ್ದಿಲ್ಲದೆ ಬದಲಾವಣೆಯಾಗುತ್ತದೆ.
ಇತರೆ ದಿನಗಳಲ್ಲಿ ಬೃಂದಾವನಗಳಲ್ಲಿ, ತೋಟದ ಅಂಚಿನ ಬೇಲಿಯಲ್ಲಿ, ಕುಂಡಗಳಲ್ಲಿ ಕುಬ್ಜ(ಬೋನ್ಸಾಯ್)ವಾಗಿ ಬೆಳೆಯುತ್ತಾ ತನ್ನಪಾಡಿಗೆ ತಾನು ಎಂಬಂತಿದ್ದ ಗಿಡವೊಂದು ಮೈಕೊಡವಿಕೊಂಡು ಹೂಬಿಟ್ಟು ಕಂಗೊಳಿಸುತ್ತಾ ಕ್ರಿಸ್ಮಸ್ಗಾಗಿಯೇ ಅಲಂಕಾರಗೊಂಡಂತೆ ಕಂಗೊಳಿಸುತ್ತದೆ. ಅದುವೇ ಕ್ರಿಸ್ಮಸ್ ಸ್ಟಾರ್. ಬಹುಶಃ ಈ ಹೂಗಿಡವನ್ನು ನೋಡದವರು ವಿರಳ ಎನ್ನಬೇಕು. ಮೊದಲು ಬೇಲಿ ಅಂಚಿನಲ್ಲಿದ್ದ ಗಿಡ ಇದೀಗ ಉದ್ಯಾವನದಲ್ಲೂ ಕಾಣಸಿಗುತ್ತಿದೆ. ಅದರಲ್ಲೂ ಕ್ರಿಸ್ಮಸ್ ಹಬ್ಬದ ಅಲಂಕಾರದಲ್ಲಿ ಇದಕ್ಕೊಂದು ಸ್ಥಾನ ಇದ್ದೇ ಇರುತ್ತದೆ. ಮೊದಲೆಲ್ಲ ಇದನ್ನು ನಾವು ನಮ್ಮದೇ ಹೆಸರಿನಿಂದ ಕೆಂಪು ಹೂ ಎಂದು ಕರೆಯುತ್ತಿದ್ದೆವು. ಬೆನ್ನತ್ತಿ ಹೋದ ಬಳಿಕವಷ್ಟೆ ಇದರ ಮಹತ್ವ ಅರಿವಾದದ್ದು, ಇದಕ್ಕೆ ಇದರದ್ದೇ ಆದ ಇತಿಹಾಸವೂ ಇದೆ ಎಂಬುದು ಅರಿವಿಗೆ ಬಂದಿದ್ದು.
ಪಾಯಿನ್ಸೆಟಿಯ ಪಲ್ಚರಿಮ ಯಫೋರ್ಬೆಯೇಸಿ ಎಂಬ ಸಸ್ಯ ಕುಟುಂಬಕ್ಕೆ ಸೇರಿದ ಈ ಹೂವನ್ನು ಕ್ರಿಸ್ಮಸ್ ಫ್ಲವರ್ ಪೇಯಿಂಟೆಡ್ ಲೀಫ್, ಲಾಬ್ಸ್ಟರ್ ಪ್ಲಾಂಟ್, ಮೆಕ್ಸಿಕಿನ್ ಫ್ಲೇಮ್ ಲೀಫ್ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಸುಮಾರು ನಾಲ್ಕೆದು ಮೀಟರ್ ನಷ್ಟು ಎತ್ತರಕ್ಕೆ ಬೆಳೆಯುವ ಈ ಸಸ್ಯ ಮಧ್ಯ ಅಮೆರಿಕದ್ದು ಎಂದು ಹೇಳಲಾಗಿದೆ. ತನ್ನ ವಿಶಿಷ್ಟ ಸೌಂದರ್ಯದಿಂದಾಗಿ ಇತರ ಕಡೆಗಳಿಗೆ ಅಲ್ಲಿಂದ ವರ್ಗಾಯಿಸಲ್ಪಟ್ಟು ಈಗ ಪ್ರಪಂಚದಾದ್ಯಂತ ಬೆಳೆಯುತ್ತಿದೆ. ಕಡು ಹಸಿರು ಬಣ್ಣದಎಲೆಗಳನ್ನು ಹೊಂದಿದ್ದು, ಮೇಲ್ನೋಟಕ್ಕೆ ಅಂಡಾಕಾರವಾಗಿರುತ್ತದೆ. ಗಿಡದಲ್ಲಿ ಬಿಳಿ ಬಣ್ಣದಿಂದ ಕೂಡಿದ ರಾಸಾಯನಿಕ ದ್ರವವಿದು,್ದ ಇದು ವಿಷಕಾರಿಯಾಗಿದೆ. ಸಾಮಾನ್ಯವಾಗಿ ಈ ಸಸ್ಯವು ಅಕ್ಟೋಬರ್ ಅಥವಾ ನವೆಂಬರ್ನಿಂದ ಹೂ ಬಿಡಲು ಪ್ರಾರಂಭಿಸಿ ಕ್ರಿಸ್ಮಸ್ ವೇಳೆಗೆ ಎಲ್ಲೆಡೆಯೂ ಹೂವಿನಿಂದ ಕಂಗೊಳಿಸುತ್ತಾ ಫೆಬ್ರವರಿ ತನಕವೂ ಇರುತ್ತದೆ.
ಹೂ ಬಿಡುವಿಕೆಯಲ್ಲಿ ಇದು ಇತರೆ ಸಸ್ಯಗಳಿಕ್ಕಿಂತ ಭಿನ್ನವಾಗಿದ್ದು, ಹೂಗಳು ಸಹ ವಿಶೇಷತೆಯಿಂದ ಕೂಡಿರುತ್ತದೆ. ಗಿಡದ ಕೊಂಬೆಗಳ ತುದಿಯಲ್ಲಿ ಕೆಂಪು ಬಣ್ಣದ ಎಲೆಗಳನ್ನೊಳಗೊಂಡ ಪುಷ್ಪಗುಚ್ಛಗಳು ಸೃಷ್ಟಿಯಾಗಿ ಗಿಡ ಪೂರ್ತಿ ಕೆಂಪಾಗಿ ಕಂಗೊಳಿಸುತ್ತವೆ. ಪುಷ್ಪಗಳು (ಹೂ) ಚಿಕ್ಕದಾಗಿದ್ದು, ಹೆಣ್ಣು ಹಾಗೂ ಗಂಡು ಹೂವುಗಳು ಜೊತೆಯಾಗಿ ಸಯಾಥಿಯಮ್ ಎನ್ನುವಂತಹ ವಿಶಿಷ್ಟ ಪುಷ್ಪಗುಚ್ಛ ಉಂಟಾಗಿರುತ್ತದೆ. ನೋಡಲು ಬಟ್ಟಲಿನಾಕಾರದಲ್ಲಿರುವ ಸಯಾಥಿಯಮ್ನ ಮೇಲೆ ಹಳದಿ ಬಣ್ಣದ ಮಕರಂದದ ತಟ್ಟೆಗಳು ಇರುತ್ತವೆ. ಈ ರೀತಿಯ ಹಲವಾರು ಸಯಾಥಿಯಮ್ಗಳ ಸುತ್ತ ಕೃತಕವಾಗಿ ತಯಾರು ಮಾಡಿದ ಹೂಗುಚ್ಛವಿದ್ದು, ಇದರ ಅಡಿಯಲ್ಲಿ ಕೆಂಪು ಬಣ್ಣದ ಎಲೆಗಳು ಸೇರಿಕೊಂಡಿರುತ್ತವೆ. ಈ ಎಲೆಗಳೇ ಸಸ್ಯಕ್ಕೂ ಹೂಗಳಿಗೂ ಮೆರಗು ನೀಡಿರುವುದು ಎಂದರೆ ತಪ್ಪಾಗಲಾರದು. ಕೆಂಪು ಎಲೆಗಳ ಆಕರ್ಷಣೆಗೆ ಒಳಗಾದ ಕೀಟಗಳು ಹೂವಿನೆಡೆಗೆ ಬರುತ್ತವೆ. ಕೆಂಪು ಎಲೆಗಳ ಮಾಪರ್ಾಟು ಕೀಟಾಕರ್ಷಣೆಗಾಗಿ ಸಸ್ಯವೇ ಮಾಡಿಕೊಂಡಿರುವುದು ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ.
ಕ್ರಿಸ್ಮಸ್ ಸ್ಟಾರ್ನ ಸೌಂದರ್ಯಕ್ಕೆ ಮಾರು ಹೋದ ವಿಜ್ಞಾನಿಗಳು ಈ ಸಸ್ಯದ ಮೇಲೆ ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಿ ಬೇರೆಬೇರೆ ರೀತಿಯ ತಳಿಗಳನ್ನು ತಯಾರು ಮಾಡಿದ್ದಾರೆ. ಇವುಗಳಲ್ಲಿ ಹೂವಿನ ಸುತ್ತಲೂ ಕೆಂಪು ಎಲೆಯ ಬದಲಾಗಿ ಬಿಳಿಯ ಎಲೆಗಳನ್ನು ಸೃಷ್ಟಿಸಲಾಗಿದ್ದು, ಇದಕ್ಕೆ ಬಿಳಿ ಪಲ್ಚರಿಮ ಎಂದು ಹೆಸರಿಡಲಾಗಿದೆ. ಅಲ್ಲದೆ, ಗುಲಾಬಿ ಬಣ್ಣವನ್ನೂ ಸೃಷ್ಟಿಸಿದ್ದಾರೆ. 1972ರಲ್ಲಿ ಹಾಲಿವುಡ್ನಲ್ಲಿ ಪಾಯಿನ್ಸೆಟಿಯ ಪಲ್ಚರಿಮ ಹೆನ್ರಿಯಟಕ್ ಡಬಲ್ ಪಾಯಿನ್ಸೆಟ್ಯ ಎನ್ನುವಂತಹ ತಳಿಯನ್ನು ಕಂಡು ಹಿಡಿಯಲಾಗಿದ್ದು, ಈ ಗಿಡದ ತುದಿಯಲ್ಲಿ ಬಿಡುವ ಹೂವಿನ ಸುತ್ತಲೂ ಎರಡು ರೀತಿಯ ಎಲೆಗಳು ಇರುತ್ತವೆ. ಹೊರಭಾಗದಲ್ಲಿ ಅಗಲವಾಗಿ ಮಿರುಗುವ ಕುಂಕುಮ ಬಣ್ಣದ ಎಲೆಗಳಿದ್ದರೆ, ಒಳಭಾಗದಲ್ಲಿ ಬಣ್ಣದ ಸಣ್ಣ ಸಣ್ಣ ಎಲೆಗಳು ಇವೆ. ಈ ಜಾತಿಯ ಹೂಗಳು ಗಾತ್ರದಲ್ಲಿ ಹಿರಿದಾಗಿಯೂ ದಪ್ಪವಾಗಿಯೂ ಇರುತ್ತವೆ.
ಸಾಕಷ್ಟು ಬಿಸಿಲು ಬೀಳುವ ಸ್ಥಳದಲ್ಲಿ ಯಥೇಚ್ಛವಾಗಿ ಈ ಸಸ್ಯಗಳು ಬೆಳೆಯುತ್ತವೆ ಅಲ್ಲದೆ, ಉತ್ತಮವಾದ ಹೂಗಳನ್ನು ಸಹ ಬಿಡುತ್ತವೆ. ಸಸ್ಯಾಭಿವೃದ್ಧಿಯನ್ನು ಕಾಂಡದ ತುಂಡುಗಳನ್ನು ನೆಡುವ ಮೂಲಕ ಮಾಡಬಹುದಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಇದರ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯುತ್ತಿರುವುದನ್ನು ಕಾಣಬಹುದು. ಅದು ಏನೇ ಇರಲಿ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಇದಕ್ಕೊಂದು ಅಲಂಕಾರಿಕ ಸ್ಥಾನ ಸಿಕ್ಕಿರುವುದು ನಿಜಕ್ಕೂ ಸಂತೋಷದ ವಿಷಯವೇ. ಅಷ್ಟೇ ಅಲ್ಲ ಈ ಹೂ ದೇವರ ಸೃಷ್ಠಿ ಎಂದರೂ ತಪ್ಪಾಗಲಾರದು.