ಐತಿಹಾಸಿಕ ಸುತ್ತೂರು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಇಡೀ ಸುತ್ತೂರು ಕ್ಷೇತ್ರ ಸರ್ವಾಲಂಕೃತಗೊಳ್ಳುತ್ತಿದ್ದು ಸರ್ವ ರೀತಿಯಲ್ಲೂ ಸಜ್ಜುಗೊಳ್ಳುತ್ತಿದೆ.
ಈ ಬಾರಿ ಜ.24ರಿಂದ 29 ರವರೆಗೆ ಸುತ್ತೂರು ಶ್ರೀಕ್ಷೇತ್ರದಲ್ಲಿ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಜಾತ್ರೆ ನಡೆಯುತ್ತಿದೆ. ಜಾತ್ರೆಯಲ್ಲಿ ಕೇವಲ ರಥೋತ್ಸವ, ತೆಪ್ಪೋತ್ಸವ, ಕೊಂಡೋತ್ಸವ ಮಾತ್ರವಲ್ಲದೆ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳಲ್ಲದೆ, ಕೃಷಿ ಮೇಳ, ವಸ್ತುಪ್ರದರ್ಶನವೂ ನಡೆಯಲಿದೆ.
ರಾಜ್ಯಮಟ್ಟದ 25ನೇ ಭಜನಾ ಸ್ಪರ್ಧೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಅಲ್ಲದೆ ಕೇರಳ, ತಮಿಳುನಾಡು ರಾಜ್ಯಗಳಿಂದಲೂ ತಂಡಗಳು ಭಾಗವಹಿಸಲಿವೆ, ಭಾಗವಹಿಸುವ ತಂಡಗಳಿಗೆ 6 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗಕ್ಕೂ 5 ಬಹುಮಾನಗಳನ್ನು ನೀಡಲಾಗುವುದು. ಕಳೆದ ವರ್ಷ ಒಟ್ಟು 500 ತಂಡಗಳು ಭಾಗವಹಿಸಿದ್ದನ್ನು ಸ್ಮರಿಸಬಹುದು.
ಕರಕುಶಲ, ಕೈಮಗ್ಗ, ಗೃಹೋಪಯೋಗಿ, ಪದಾರ್ಥಗಳ ಪ್ರದರ್ಶನ, ಹಾಗೂ ಮಾರಾಟದೊಂದಿಗೆ ವಿವಿಧ ಸರ್ಕಾರಿ ಇಲಾಖೆಗಳು, ಕೈಗಾರಿಕೆಗಳು ಹಾಗೂ ಮಹಿಳಾ ಉದ್ಯಮಿಗಳು, ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡು ಮಾಹಿತಿ ನೀಡಲಿದ್ದಾರೆ. ವಸ್ತುಪ್ರದರ್ಶನದಲ್ಲಿ ಶೈಕ್ಷಣಿಕ ಮತ್ತು ವಿಜ್ಞಾನ ಪ್ರದರ್ಶನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ತಯಾರಿಸಿರುವ 200ಉತ್ತಮ ಮಾದರಿಗಳನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕೃಷಿ ಮೇಳದಲ್ಲಿ ರೈತರಿಗೆ ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ತಂತ್ರಜ್ಞಾನದ ಕುರಿತು ಮಾಹಿತಿ ನೀಡಲು ಈ ಮೇಳವನ್ನು ಏರ್ಪಡಿಸಲಾಗುತ್ತಿದ್ದು, ಸಮಗ್ರ ಬೆಳೆ ನಿರ್ವಹಣೆ, ಪಶುಸಂಗೋಪನೆಗಳ ಕುರಿತು ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ ಸಮಗ್ರ ಮಾಹಿತಿಯನ್ನು ರೈತರಿಗೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಈ ವರ್ಷವೂ ಕೃಷಿ ಬ್ರಹ್ಮಾಂಡ, ಕೃಷಿಸಮ್ಮೇಳನ ಹಾಗೂ ಪ್ರಾತ್ಯಕ್ಷಿತೆಗಳು ಮತ್ತು ಕೃಷಿ ಸಮ್ಮೇಳನವೂ ನಡೆಯಲಿದೆ. ಸಾಮೂಹಿಕ ವಿವಾಹ ಏರ್ಪಡಿಸಿದ್ದು, ವಧುವಿಗೆ ಸೀರೆ, ಮಾಂಗಲ್ಯ, ಕಾಲುಂಗುರ ಮತ್ತು ವರನಿಗೆ ಪಂಚೆ ಹಾಗೂ ಅಂಗಿಯನ್ನು ನೀಡಲಾಗುತ್ತಿದೆ.
ಮಕ್ಕಳಿಗಾಗಿ ಗಾಳಿಪಟ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ಜೆಎಸ್ಎಸ್ ಸಂಸ್ಥೆಯ ಬಾಲಕ ಬಾಲಕಿಯರಿಗಾಗಿ ವಿವಿಧ ದೇಸಿ ಆಟಗಳ ಸ್ಪರ್ಧೆ, ಸಾಂಸ್ಕೃತಿಕ ಮೇಳದಲ್ಲಿ ಸುಮಾರು 3500ಕ್ಕೂ ಹೆಚ್ಚು ವಿದ್ಯಾರ್ಥಿಗಳು 7 ವಿವಿಧ ವಿಭಾಗಗಳಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೆ ಈ ಬಾರಿಯ ಜಾತ್ರೆಗೆ 25ಲಕ್ಷ ಭಕ್ತಾಧಿಗಳು ಪಾಲ್ಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಸುತ್ತೂರಿನಲ್ಲಿ ಜಾತ್ರೆಗೆ ಸಂಬಂಧಿಸಿದಂತೆ ಸಿದ್ಧತೆಗಳು ಸಮಾರೋಪಾದಿಯಲ್ಲಿ ಸಾಗುತ್ತಿದ್ದು ಜ.24 ರಿಂದ ಜಾತ್ರೆ ಆರಂಭವಾಗಲಿದ್ದು ಜನ ಕಾತರದಿಂದ ಕಾಯುತ್ತಿದ್ದಾರೆ.