ಸಮುದ್ರ ಮಟ್ಟದಿಂದ ಮೂರು ಸಾವಿರ ಅಡಿಯಷ್ಟು ಎತ್ತರದಲ್ಲಿರೋ ಆ ಪ್ರವಾಸಿ ತಾಣ ಒಂದು ಕಾಲದಲ್ಲಿ ವಿಶ್ವದ ಗಮನ ಸೆಳೆದಿತ್ತು. ಒಂದೇ ಉದ್ಯಾನವನದಲ್ಲಿ ಮೂರು ಸಾವಿರಕ್ಕೂ ಅಧಿಕ ವಿಭಿನ್ನ ಹೂಗಳಿದ್ದ ವಿಶ್ವದ ಏಕೈಕ ಪ್ರವಾಸಿ ತಾಣವದು. ಆದ್ರೆ, ಸರ್ಕಾರಗಳ ದೂರದೃಷ್ಟಿ ಕೊರತೆಯಿಂದ ಇಂದು ಆ ತಾಣ ಲೂಟಿ ಹೊಡೆದ ಕೋಟೆಯಂತಾಗಿದೆ. ಹೇಳಿಕೊಳ್ಳೋಕು ಅಲ್ಲಿ ಒಂದೇ ಒಂದು ಮೂಲಭೂತ ಸೌಕರ್ಯವಿಲ್ಲ. ಆದ್ರು, ಸರ್ಕಾರ ಅಲ್ಲಿಗೆ ಬರೋ ಪ್ರವಾಸಿಗರಿಂದ ಹಣ ವಸೂಲಿ ಮಾಡೋದು ಮಾತ್ರ ನಿಂತಿಲ್ಲ.
ಈ ಕುರಿತು ಒಂದು ವರದಿ ಇಲ್ಲಿದೇ ನೋಡಿ…ಹೌದು, ಚಿಕ್ಕಮಗಳೂರಿನ ಕೆಮ್ಮಣ್ಣುಗುಂಡಿ ಅಂದ್ರೆ ದೇಶ-ವಿದೇಶಕ್ಕೂ ಚಿರಪರಿಚಿತ. ಸಮುದ್ರ ಮಟ್ಟದಿಂದ ಮೂರು ಸಾವಿರ ಅಡಿ ಎತ್ತದಲ್ಲಿರೋ ಕೆಮ್ಮಣ್ಣುಗುಂಡಿಯಲ್ಲಿ ಒಂದು ಕಾಲದಲ್ಲಿ ದಿನಂಪ್ರತಿ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ, ಅಭಿವೃದ್ಧಿಯ ಹೆಸರಲ್ಲಿ ಸರ್ಕಾರವೇ ಈ ಪ್ರವಾಸಿ ತಾಣವನ್ನ ಹಾಳು ಮಾಡಿದೆ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ರೂಂಗಳು ಪಾಳು ಬಿದ್ದಿವೆ. ಇಂದು ಇಲ್ಲಿನ ದಾರಿ ನೋಡ್ದೋರು ಮತ್ತೆ ಇತ್ತ ತಲೆ ಹಾಕಿಯೂ ಮಲಗೋಲ್ಲ.
ಅಲ್ಲಿ ಪ್ರಾಣ ಹೋಗ್ತಿದೆ ಅಂದ್ರು ಕುಡಿಯೋಕೆ ಒಂದು ಹನಿ ನೀರು ಸಿಗೋದಿಲ್ಲ. ಆದರೆ ಅಲ್ಲಿಗೆ ಮೂಲಭೂತ ಸೌಲಭ್ಯ ನೀಡಿದ ಸರ್ಕಾರ ಬರೋ ಪ್ರವಾಸಿ ವಾಹನಗಳಿಂದ 50 ರಿಂದ 200 ರೂಪಾಯಿ ವರೆಗೂ ವಸೂಲಿ ಮಾಡ್ತಿರೋದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯಕ್ಕೆ ಕೆಮ್ಮಣ್ಣುಗುಂಡಿಯಲ್ಲಿ ತಣ್ಣನೆಯ ಗಾಳಿ, ಗಿಡ-ಮರ ಬಿಟ್ರೆ ಮತ್ತೇನೂ ಇಲ್ಲ. ಕುಡಿಯೋಕೆ ಹನಿ ನೀರೂ ಇಲ್ಲ. ಪಾರ್ಕಿಂಗ್, ಮೂಲಭೂತ ಸೌಲಭ್ಯವನ್ನಂತೂ ಕೇಳೋದೆ ಬೇಡ. ಆದರೆ ಸರ್ಕಾರ ಕೆಮ್ಮಣ್ಣುಗುಂಡಿ, ಕಲ್ಲತಿಗರಿಗೆ ಬರೋ ಪ್ರವಾಸಿಗರಿಂದ ಪಾರ್ಕಿಂಗ್ ಶುಲ್ಕ ಎಂದು ಹಣ ವಸೂಲಿ ಮಾಡ್ತಿದೆ.
ಕಲ್ಲತ್ತಿಗರಿ ಹಾಗೂ ಕೆಮ್ಮಣ್ಣುಗುಂಡಿಗೆ ಹೋಗೋ ಮಾರ್ಗ ತೀರಾ ಹದಗೆಟ್ಟಿದೆ. ಆದ್ರೆ, ಸರ್ಕಾರ ಇಲ್ಲಿಗೆ ರಸ್ತೆ ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಕಲ್ಪಿಸೋ ಬದಲು ಹಣ ಮಾಡಲು ಮುಂದಾಗ್ತಿರೋದು ಪ್ರವಾಸಿಗರು ಹಾಗೂ ಕಾರು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಮ್ಮಣ್ಣುಗುಂಡಿಯಿಂದ ಹೆಬ್ಬೆ ಫಾಲ್ಸ್ ಗೆ ಹೋಗಲು 500ರೂ. ವಸೂಲಿ ಮಾಡುತ್ತಿದ್ದು, ಆ ಹಣ ಎಲ್ಲಿಗೆ ಹೋಗುತ್ತೆ ಅನ್ನೋದು ದೇವರ ಬಲ್ಲ ಅಂತಾರೆ ಸ್ಥಳೀಯ ನಿವಾಸಿಗಳು.
ಒಟ್ಟಾರೆಯಾಗಿ ಸರ್ಕಾರ ಮಾಡಬೇಕಾದುದು ಬಿಟ್ಟು ಉಳಿದೆಲ್ಲವನ್ನೂ ಮಾಡ್ತಿದೆ. ಕಾಫಿನಾಡನ್ನ ಪ್ರವಾಸಿ ಜಿಲ್ಲೆ ಮಾಡ್ಬೇಕು ಅಂತಿರೋ ಸರ್ಕಾರ ಇಲ್ಲಿಗೆ ಬೇಕಾದ ಕನಿಷ್ಠ ಮೂಲಭೂತ ಸೌಕರ್ಯ ನೀಡಿದರೆ ಸಾಕಷ್ಟು ಪ್ರವಾಸಿ ತಾಣಗಳನ್ನು ಉಳಿಸಬಹುದು. ಆದರೆ ಸರ್ಕಾರ ಸೇವೆ ನೀಡೋ ಬದಲು ಹಣ ಮಾಡೋಕೆ ಮುಂದಾಗ್ತಿರೋದು ಮಾತ್ರ ದುರಂತ. ಇನ್ನಾದರೂ ಸರ್ಕಾರ ಇತ್ತ ಗಮನ ಹರಿಸಿ ಕಲೆಕ್ಟ್ ಮಾಡುವ ಹಣಕ್ಕೆ ತಕ್ಕಂತೆ ಮೂಲಭೂತ ಸೌಲಭ್ಯ ನೀಡಲಿ ಎಂದು ಪ್ರವಾಸಿಗರು ಸರ್ಕಾರಕ್ಕೆ ಆದೇಶಿಸಿದ್ದಾರೆ.