ಮಹಿಳಾ ದಿನಾಚರಣೆ ಬಂದಾಗಲೆಲ್ಲಾ ನಮಗೆ ಐಟಿ, ಬಿಟಿ ಸೇರಿದಂತೆ ಉನ್ನತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರು ನಮಗೆ ನೆನಪಾಗುತ್ತಾರೆ. ಆದರೆ ಹಳ್ಳಿಗಳಲ್ಲಿ ದಿನನಿತ್ಯದ ಮನೆ ಜವಬ್ದಾರಿಗಳನ್ನು ನಿರ್ವಹಿಸುತ್ತಾ ಹೊರಗೆ ಹೋಗಿ ತೋಟ, ಗದ್ದೆ, ಹೊಲಗಳಲ್ಲಿ ದುಡಿಯುತ್ತಾ ಕುಟುಂಬ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರೈತಮಹಿಳೆಯರು ಹಾಗೂ ಮಹಿಳಾ ಕಾರ್ಮಿಕರು ನಮ್ಮ ಕಣ್ಣಿಗೆ ಕಾಣುವುದಿಲ್ಲ. ನಾವ್ಯಾರು ಅವರ ಬಗ್ಗೆ ಕಿಂಚಿತ್ ಯೋಚಿಸುವುದಿಲ್ಲ. ಅವರ ಶ್ರಮದ ಬಗ್ಗೆ ಮಾತನಾಡುವುದಿಲ್ಲ.
ಮಲೆನಾಡಿನ ಕಾಫಿ, ಟೀ, ಅಡಿಕೆ, ತೆಂಗು ತೋಟಗಳಲ್ಲಿ, ಬಯಲುಸೀಮೆಯ ಹೊಲ, ಗದ್ದೆಗಳಲ್ಲಿ ಗಂಡಿಗೆ ಸಮಾನವಾಗಿ ದುಡಿಯುವ ಮಹಿಳೆಯರು.. ತಲೆ ಮೇಲೆ ಸೌದೆ ಹೊರೆ ಹೊತ್ತು ಸಾಗುವ ಮಹಿಳಾ ಕಾರ್ಮಿಕರು ಅಲ್ಲಲ್ಲಿ ಕಣ್ಣಿಗೆ ಬೀಳುತ್ತಾರೆ. ಇವರು ನಿಜಕ್ಕೂ ಶ್ರಮಜೀವಿಗಳೇ.. ಅವರಿಗೊಂದು ಸಲಾಮ್ ಹೇಳಲೇ ಬೇಕು.
ಹಾಗೆ ನೋಡಿದರೆ ತೋಟಗಳಲ್ಲಿ ದುಡಿಯುವ ಕಾರ್ಮಿಕರು, ರೈತರ ಮನೆಗಳಲ್ಲಿ ನಿತ್ಯವೂ ಗಡಿಬಿಡಿ, ಧಾವಂತ ಇದ್ದೇ ಇರುತ್ತದೆ. ಬೆಳಿಗ್ಗೆ 6ಕ್ಕೆ ಎದ್ದು ಅಡುಗೆ ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸಿ ತೋಟ ಗದ್ದೆಗಳಿಗೆ ತೆರಳಿ ದುಡಿಯೋದು ಸುಲಭದ ಕೆಲಸವಲ್ಲ. ಆದರೂ ಅದಕ್ಕೆ ಅಂಜದೆ ಕಷ್ಟಪಟ್ಟು ದುಡಿದು ಕುಟುಂಬಕ್ಕೆ ಆಧಾರವಾಗಿದ್ದಾರೆ.
ಇವತ್ತು ಬೇರೆಯವರ ಮನೆಗಳ ಕಸಮುಸುರೆ ತಿಕ್ಕಿ, ತೋಟ, ಹೊಲಗದ್ದೆಗಳಲ್ಲಿ ಕೆಲಸ ಮಾಡಿ, ತಮ್ಮ ಮಕ್ಕಳನ್ನು ಓದಿಸಿ ತಾವು ಕಷ್ಟಪಟ್ಟಿದ್ದೇ ಸಾಕು ಮಕ್ಕಳು ಕಷ್ಟಪಡಬಾರದೆಂಬ ಕಾರಣಕ್ಕೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದು ಜೀವನ ಸಾರ್ಥಕಗೊಳಿಸಿದ ಅದೆಷ್ಟೋ ತಾಯಂದಿರು ಇದ್ದಾರೆ.
ಮೊದಲೆಲ್ಲಾ ಗಂಡ ದುಡಿದು ತಂದಿದ್ದನ್ನು ಬೇಯಿಸಿ ಹಾಕುತ್ತಾ ಮಕ್ಕಳನ್ನು ನೋಡಿಕೊಂಡಿದ್ದರಾಯಿತು ಎಂಬ ಮನೋಭಾವ ಮಹಿಳೆಯರದ್ದಾಗಿತ್ತು. ಈಗ ಹಾಗಿಲ್ಲ. ಎಲ್ಲವೂ ಬದಲಾಗಿದೆ. ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿದ್ದಾರೆ. ಮನೆಯಲ್ಲಿ ಕುಳಿತು ಟೈಲರಿಂಗ್ ನಂತಹ ಕೈಗಾರಿಕೆಗಳನ್ನು ಕೆಲವರು ಮಾಡಿದರೆ, ಇನ್ನು ಕೆಲವರು ಬ್ಯೂಟಿಪಾರ್ಲರ್, ವ್ಯಾಪಾರ, ಹೈನುಗಾರಿಕೆ, ಇನ್ನಿತರ ಉದ್ಯಮಗಳತ್ತ ಆಸಕ್ತಿ ವಹಿಸಿ ದುಡಿಯುತ್ತಾ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಕುಟುಂಬ ನಿರ್ವಹಣೆಯ ಜವಬ್ದಾರಿಯೊಂದಿಗೆ ತನ್ನ ಉದ್ಯೋಗವನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ತಮ್ಮ ಛಾಪು ಮೂಡಿಸಿದ್ದರೂ ಎಲ್ಲರೂ ಸುಖಿಗಳಾಗಿದ್ದಾರೆ ಎನ್ನಲಾಗುತ್ತಿಲ್ಲ. ಅಲ್ಲಲ್ಲಿ ಅತ್ಯಾಚಾರ, ದೌರ್ಜನ್ಯ, ವರದಕ್ಷಿಣೆ ಕಿರುಕುಳದಂತಹ ಅಮಾನವೀಯ ಕೃತ್ಯಗಳು ಮಹಿಳೆಯರ ಮೇಲೆ ನಡೆಯುತ್ತಲೇ ಇದೆ. ಧೈರ್ಯವಂತ ಕೆಲವು ಮಹಿಳೆಯರು ಎಲ್ಲವನ್ನೂ ಎದುರಿಸಿ ನಿಂತಿದ್ದಾರೆಯಾದರೂ ಕೆಲವರು ಆತ್ಮಹತ್ಯೆಯಂತಹ ಕೃತ್ಯಗಳಿಗೆ ಕೈಹಾಕುತ್ತಿರುವುದು ದುರಂತ.
ಇವತ್ತು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅನ್ಯಾಯಗಳಿಗೆ ಇತಿಶ್ರೀ ಹಾಡಲು ಸರ್ಕಾರ ಕಾನೂನು ಕ್ರಮ ಜಾರಿಗೆ ತಂದಿದೆಯಲ್ಲದೆ, ನೆರವಿಗೆ ಹಲವಾರು ಸಂಘಟನೆಗಳಿವೆ ಹೀಗಿರುವಾಗ ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯಗಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗುವುದನ್ನು ಮರೆತುಬಿಡಿ. ಎಲ್ಲವನ್ನು ಎದುರಿಸಿ ನಿಲ್ಲುವ ಧೈರ್ಯ ತೋರಿ.