ಮಂಡ್ಯ: ಸವರ್ಣೀಯರು ಹಾಗೂ ದಲಿತರ ಮಧ್ಯೆ ಜಗಳವಾಗಿ 23 ವರ್ಷಗಳ ಹಿಂದೆ ನಿಂತು ಹೋಗಿದ್ದ ಪಾಂಡವಪುರ ಮಂಡಿಬೆಟ್ಟಹಳ್ಳಿ ಹಾಗೂ ಚಾಗಶೆಟ್ಟಹಳ್ಳಿಯ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ಬಂಡಿ ಉತ್ಸವವು ಮಂಗಳವಾರ ಪೊಲೀಸ್ ಬಿಗಿ ಭದ್ರತೆಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಹಬ್ಬದ ವಿಚಾರವಾಗಿ 23 ವರ್ಷಗಳ ಹಿಂದೆ ಸವರ್ಣೀಯರು ಹಾಗೂ ದಲಿತರ ಮಧ್ಯೆ ಜಗಳವಾಗಿ ಅಲ್ಲಿಂದ ಬಂಡಿ ಉತ್ಸವ ಸ್ಥಗಿತಗೊಂಡಿತ್ತು. ಆದರೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಯಾವುದೇ ರೀತಿಯ ಅಡಚಣೆಯಿಲ್ಲದೆ ನಡೆದಿದ್ದು ಗ್ರಾಮಸ್ಥರಿಗೆ ಸಂತಸ ತಂದಿದೆ. ಪುರಾತನ ಕಾಲದಿಂದಲೂ ಮಂಡಿಬೆಟ್ಟಹಳ್ಳಿ ಹಾಗೂ ಚಾಗಶೆಟ್ಟಹಳ್ಳಿ ಗ್ರಾಮದಲ್ಲಿ ಶ್ರೀ ಶಂಭುಲಿಂಗೇಶ್ವರ ಸ್ವಾಮಿ ಬಂಡಿ ಉತ್ಸವ ನಡೆದುಕೊಂಡು ಬರುತ್ತಿದೆ. ಉತ್ಸವದ ಅಂಗವಾಗಿ 13 ದಿನಗಳ ಹಿಂದೆ ಎರಡು ಗ್ರಾಮದಲ್ಲಿ ಕರಕು ಹಾಕಲಾಯಿತು. ಈ 13 ದಿನಗಳಲ್ಲಿ ಪ್ರತಿದಿನ ಶ್ರೀ ಬಸವೇಶ್ವರ ಹಾಗೂ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ತಮಟೆ ಬಡಿಯುವುದು ಹಾಗೂ ಕುಣಿತ ಹಾಕುವುದು ನಡೆಯುತ್ತದೆ.
ಪದ್ಧತಿಯಂತೆ ತಮಟೆ ಬಡಿಯುವುದು ಕುಳ್ಳಯ್ಯ ಹಾಗೂ ಎಲೆಪಿಟ್ಟಯ್ಯ ಮತ್ತು ಜವರಯ್ಯ ಹೊನ್ನಯ್ಯನವರ ಕುಟುಂಬಸ್ಥರು ಮಾಡುತ್ತಾರೆ. ಶ್ರೀ ಶಂಭುಲಿಂಗೇಶ್ವ ಹಾಗೂ ಕೋಡಿಲಿಂಗೇಶ್ವರ ಸ್ವಾಮಿ ದೇವರ ಉತ್ಸವವನ್ನು ಎರಡು ಗ್ರಾಮದ ಲಿಂಗಾಯತರು, ಮಡಿವಾಳಶೆಟ್ಟರು, ವಿಶ್ವಕರ್ಮ ಸಮುದಾಯದವರು ಬೀದಿಯಲ್ಲಿ ಮೆರವಣಿಗೆ ಮಾಡಿ ರಂಗಕ್ಕೆ ತರುತ್ತಾರೆ. ಅಲ್ಲಿ ದಲಿತರು ಉತ್ಸವಕ್ಕೆ ಪೂಜೆ ಕಾರ್ಯಗಳನ್ನು ಅರ್ಚಕರ ಮುಖಾಂತರ ಮಾಡಿಸುತ್ತಾರೆ.
ಮೊದಲು ಮಂಡಿ ಬೆಟ್ಟಹಳ್ಳಿಯಲ್ಲಿ ಬಂಡಿಯನ್ನು ತಯಾರಿಸುತ್ತಾರೆ. ಅಲಂಕರಿಸಿ ಗ್ರಾಮದ ಪೂಜಾ ಕುಣಿತ ಹಾಗೂ ಬಂಡಿಯನ್ನು ರಂಗಕ್ಕೆ ತಂದು ಉತ್ಸವ ನಡೆಸುತ್ತಾರೆ. ಅಲ್ಲಿಂದ ಪೂಜೆ, ಬಂಡಿಯ ಉತ್ಸವದೊಂದಿಗೆ ಚಾಗಶೆಟ್ಟಹಳ್ಳಿಗೆ ತೆರಳುತ್ತಾರೆ. ಚಾಗಶೆಟ್ಟಹಳ್ಳಿ ಗ್ರಾಮದ ಬಂಡಿ ಉತ್ಸವವನ್ನು ತಯಾರಿಸಿಕೊಂಡು ಗ್ರಾಮಸ್ಥರು ಮಂಡಿಬೆಟ್ಟಹಳ್ಳಿ ಗ್ರಾಮದ ಬಂಡಿ ಉತ್ಸವಕ್ಕಾಗಿ ಕಾದಿರುತ್ತಾರೆ.
ಮಂಡಿಬೆಟ್ಟಹಳ್ಳಿ ಗ್ರಾಮದ ಬಂಡಿ ಉತ್ಸವ ಬರುತ್ತಿದ್ದಂತೆ ಚಾಗಶೆಟ್ಟಹಳ್ಳಿ ಗ್ರಾಮದ ಬಂಡಿಯೂ ಅದರ ಹಿಂದೆ ಗ್ರಾಮದ ಹೊರಲಯದಲ್ಲಿರುವ ಶ್ರೀಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ಎರಡು ಗ್ರಾಮದ ಬಂಡಿಗಳು ಸಹ ದೇವಸ್ಥಾನದ ಸುತ್ತಲು ಮೂರು ಸುತ್ತು ಪ್ರದಕ್ಷಿಣೆ ಹಾಕುತ್ತಾರೆ. ಬಂಡಿಗಳನ್ನು ನಿಯಂತ್ರಿಸಲು ಬಂಡಿಯ ಸುತ್ತಲು ಯುವಕರು ನಿಂತಿರುತ್ತಾರೆ. ಬಂಡಿ ಉತ್ಸವ ನಡೆಯುವಾಗ ಭಕ್ತರು ಹರಹರ ಮಹದೇವ….. ಹರಹರ ಮಹದೇವ ಎಂದು ಘೋಷಣೆಕೂಗುವ ಮೂಲಕ ದೇವರ ಕೃಪೆ ಪಾತ್ರರಾಗುವುದು ವಿಶೇಷವಾಗಿದೆ.