ಮೈಸೂರು: ಮುಂದೊಂದು ದಿನ ಯುದ್ಧ ನಡೆದರೆ ಅದು ನೀರಿಗಾಗಿ ನಡೆಯುತ್ತದೆ ಎಂದು ಹೇಳುತ್ತಲೇ ಬರುತ್ತಿದ್ದೆವು. ಆದರೆ ಅದು ಈಗ ನಿಜವಾಗುತ್ತಿದೆ. ನೀರಿಗಾಗಿ ರಾಜ್ಯ ರಾಜ್ಯಗಳ, ಜಿಲ್ಲೆಜಿಲ್ಲೆಗಳ ನಡುವಿನ ಜನರ ನಡುವೆ ದ್ವೇಷ, ಆಕ್ರೋಶ, ಹೋರಾಟಗಳು ಆರಂಭವಾಗಿರುವುದು ಕಂಡು ಬರತೊಡಗಿದೆ.
ಹಳ್ಳಿಗಳಲ್ಲಿ ನೀರಿಗಾಗಿ ಜನ ಕಿ.ಮೀ.ಗಟ್ಟಲೆ ನಡೆಯುವಂತಾಗಿದೆ. ಮನೆಗಳಲ್ಲಿ ಬೆಳಿಗ್ಗೆ ಎದ್ದು ನೀರಿಗಾಗಿ ಹುಡುಕಾಟ ಆರಂಭವಾಗಿದೆ. ಕೆಲವರಿಗೆ ನೀರು ತರುವುದೇ ಕೆಲಸವಾಗಿ ಪರಿಣಮಿಸಿದೆ. ಬಹಳಷ್ಟು ಕಡೆ ನೀರಿನ ಮೂಲಗಳೇ ಬತ್ತಿ ಹೋಗಿವೆ. ಈಗಲೇ ಹೀಗಾದರೆ ಮುಂದಿನ ದಿನಗಳನ್ನು ನೆನಪಿಸಿಕೊಂಡರೆ ಭಯವಾಗುತ್ತದೆ. ಎಂದೂ ಬತ್ತದ ಕೆರೆಗಳಲ್ಲಿಯೂ ನೀರು ಬತ್ತುತ್ತಿದೆ. ಇದರಿಂದ ಕೇವಲ ಮನುಷ್ಯ ಮಾತ್ರವಲ್ಲ ಪ್ರಾಣಿಗಳು ಕೂಡ ನೀರಿಗಾಗಿ ತವಕಿಸುವಂತಾಗಿದೆ. ಕೋಟ್ಯಂತರ ಜನರ ದಾಹ ತಣಿಸುವ ಕೆಆರ್ ಎಸ್ ಜಲಾಶಯ ಕೂಡ ತಳ ಸೇರುತ್ತಿದೆ. ಕೆಲವು ಸಮಯಗಳ ಹಿಂದೆ ಹೇಮಾವತಿ ಜಲಾಶಯದಿಂದ ನೀರು ಹರಿಸಿದ ಪರಿಣಾಮ ತಳ ಸೇರಿದ್ದ ಕೆಆರ್ ಎಸ್ ಜಲಾಶಯದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡು ಬಂದಿತ್ತು. ಆದರೆ ನಿಧಾನವಾಗಿ ತಳ ಸೇರುತ್ತಿದೆ.
ಕುಡಿಯುವ ನೀರನ್ನು ಸಮರ್ಪಕವಾಗಿ ಜನತೆಗೆ ತಲುಪಿಸುವ ಸಲುವಾಗಿ ಸರ್ಕಾರ ಸರ್ಕಸ್ ಮಾಡುತ್ತಿದೆಯಾದರೂ ಒಬ್ಬರಿಗೆ ಒಳಿತಾದರೆ ಮತ್ತೊಬ್ಬರಿಗೆ ತೊಂದರೆ ಎಂಬಂತಾಗಿದೆ. ಬಹಳಷ್ಟು ಕಡೆ ಬೋರ್ವೆಲ್ ಗಳಲ್ಲಿ ನೀರೇ ಬರುತ್ತಿಲ್ಲ. ಮಳೆಯಾಗದ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಸದ್ಯದ ಮಟ್ಟಿಗೆ ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡುವುದನ್ನು ಹೊರತುಪಡಿಸಿದರೆ ಮತ್ಯಾವುದನ್ನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಕೊಡಗಿನಲ್ಲಿ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಸಾಧಾರಣ ಮಳೆ ಸುರಿಯುತ್ತಿದೆಯಾದರೂ ಅದರಿಂದ ಕಾವೇರಿ ನೀರಿನ ಹರಿಯುವ ಮಟ್ಟ ಹೆಚ್ಚಳವಂತು ಸಾಧ್ಯವೇ ಇಲ್ಲ. ಹೀಗಾಗಿ ಅಲ್ಲಿಯೂ ಮಳೆಗಾಗಿ ಪೂಜೆ ಪುರಸ್ಕಾರಗಳು ನಡೆಯುತ್ತಿವೆ. ಹಾಗೆನೋಡಿದರೆ ಕೊಡಗಿನಲ್ಲಿ ಮಳೆಗಾಗಿ ದೇವಾಲಯಗಳಲ್ಲಿ ಪೂಜೆ ಮಾಡುವುದು ಹೊಸತೇನಲ್ಲ. ಹಿಂದಿನ ಕಾಲದಿಂದಲೂ ನಡೆದು ಬಂದಿದೆ. ಮಳೆ ದೇವರು ಎಂದೇ ಕರೆಯಲ್ಪಡುವ ಪಾಡಿ ಇಗ್ಗುತ್ತಪ್ಪ ದೇವಾಲಯ ಸೇರಿದಂತೆ ಗ್ರಾಮಗಳಲ್ಲಿರುವ ಹಲವು ದೇವಾಲಯಗಳಲ್ಲಿ ಮಳೆಗಾಗಿ ಪೂಜೆ ಮಾಡಿದರೆ ಮಳೆ ಬರುತ್ತದೆ ಎಂಬ ಪ್ರತೀತಿ ಇದೆ. ಕೊಡಗಿನಲ್ಲಿ ಮಳೆಯಾದರೆ ಮಾತ್ರ ಕಾವೇರಿ ಕಣಿವೆಯ ಜನಕ್ಕೆ ತಟ್ಟಿರುವ ಜಲಕ್ಷಾಮವನ್ನು ದೂರ ಮಾಡಲು ಸಾಧ್ಯವಾಗಲಿದೆ. ಕೆಆರ್ ಎಸ್ ನಲ್ಲಿ ಈಗಿರುವ ನೀರಿನಲ್ಲಿ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರಿಗೆ ಕುಡಿಯುವ ನೀರನ್ನು ಸರಬರಾಜು ಮಾಡಬೇಕಾಗಿದೆ. ಇದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಹಳ್ಳಿಗಳಲ್ಲಿಯೂ ನೀರಿನ ಸೆಲೆಗಳಾಗಿದ್ದ ಕೆರೆ, ಕಟ್ಟೆಗಳು ಬತ್ತಿವೆ. ಹೀಗಾಗಿ ಇದೇ ನೀರನ್ನೇ ಟ್ಯಾಂಕರ್ ಗಳ ಮೂಲಕ ಸರಬರಾಜು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಕೆಲವೇ ಸಮಯದಲ್ಲಿ ತಳ ಸೇರುವ ಎಲ್ಲ ಲಕ್ಷಣಗಳು ಕಂಡು ಬರತೊಡಗಿದೆ. ಡೆಡ್ ಸ್ಟೋರೆಜ್ ನೀರನ್ನು ಬಳಸಿದರೂ ನಡು ಬೇಸಿಗೆಯಲ್ಲಿ ಜಲಕ್ಷಾಮ ಎದುರಾಗುವುದು ಖಚಿತ. ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಬೇಕಾದರೆ ಮಳೆ ಬಂದರೆ ಮಾತ್ರ ಸಾಧ್ಯ. ಅದರಲ್ಲೂ ಕೊಡಗಿನಲ್ಲಿ ಮಳೆ ಬರಲೇ ಬೇಕಾಗಿದೆ. ಕಳೆದ ವರ್ಷ ಕೊಡಗಿನಲ್ಲಿ ಬೇಸಿಗೆಯಲ್ಲಿ ಮಳೆಯೇ ಬರಲಿಲ್ಲ. ಮುಂಗಾರಿನಲ್ಲೂ ವಾಡಿಕೆಯ ಮಳೆ ಸುರಿಯಲಿಲ್ಲ. ಇದರ ಪರಿಣಾಮ ಎಂಬಂತೆ ಕೆಆರ್ ಎಸ್ ಜಲಾಶಯ ಭರ್ತಿಯಾಗಲಿಲ್ಲ. ಈ ಬಾರಿ ಫೆಬ್ರವರಿಯಲ್ಲಿ ಮಳೆಯಾಗಿದೆ. ಇನ್ನು ಮುಂದೆ ಮಳೆ ಬಂದರೆ ಜನ ನೆಮ್ಮದಿಯುಸಿರು ಬಿಡಬಹುದು. ಆದ್ದರಿಂದ ಹುಯ್ಯೋ ಹುಯ್ಯೋ ಮಳೆರಾಯ ಎಂದು ಪ್ರಾರ್ಥಿಸುವುದು ಅನಿವಾರ್ಯವಾಗಿದೆ.