ಗೀತಾ ಸಿದ್ಧಿ ಮೂಲತಃ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಮಂಚಿಕೆರೆಯವರು. ನೀನಾಸಂ ಪದವೀಧರೆ, ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಪದವಿ ವ್ಯಾಸಾಂಗ, ರಂಗಭೂಮಿಯಲ್ಲಿ ಎಂ.ಎ ಪೂರೈಸಿ, ಇದೀಗ ಬೆಂಗಳೂರು ವಿ.ವಿ.ಯಲ್ಲಿ “ಆಧುನಿಕ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಸ್ತ್ರೀ ಲೋಕ” ಎಂಬ ವಿಷಯದಲ್ಲಿ ಪಿ.ಹೆಚ್.ಡಿ. ಮಾಡುತ್ತಿದ್ದಾರೆ.
ನಮ್ಮ ಬಣ್ಣ, ಗುಂಗುರು ಕೂದಲಿಂದಾಗಿ ನಮ್ಮ ಸುತ್ತಲಿನ ಜನರು ನಮ್ಮನ್ನು ಮನುಷ್ಯರಂತೆ ನೋಡುತ್ತಿರಲಿಲ್ಲ. ಅವರ ಪಾಲಿಗೆ ನಾವು ಮೃಗಗಳಾಗಿದ್ದೆವು. ಶಕ್ತಿಯುತವಾದ, ಕೆಲಸ ಮಾಡುವ ಯಂತ್ರಗಳಂತಿದ್ದೆವು. ಈ ಕಾರಣಗಳಿಂದಲೇ ನನ್ನ ಸಮುದಾಯ ಶಿಕ್ಷಣದಿಂದ ವಂಚಿತವಾಗಿತ್ತು. ಹೀಗೆಂದು ಯುವರಂಗಕರ್ಮಿ ಗೀತಾ ಸಿದ್ಧಿ ತನ್ನ ವಿಶಿಷ್ಟ ಕನ್ನಡದಲ್ಲಿ ನುಡಿಯುತ್ತಿದ್ದರೆ, ಇಡೀ ಸಿದ್ಧಿಜನಾಂಗದ ಕಥಾನಕಗಳು ಕಣ್ಣಮುಂದೆ ಹಾದು ಹೋದವು.. ಆ ಮಾತಿನ ಸ್ವರಭಾರದಲ್ಲೇ ರೋಷವಿತ್ತು, ಆವೇಶವಿತ್ತು, ಹಲವುತಲೆಮಾರುಗಳ ನೋವಿತ್ತು. ವಿಶ್ವಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಸಾಮಾಜಿಕವಾಗಿ ಇನ್ನೂ ಹಿಂದುಳಿದ ಜನಾಂಗ ಎನ್ನಲಾದ ಸಿದ್ಧಿ ಜನಾಂಗದ ಮೊದಲ ಸಂಶೋಧನಾ ವಿದ್ಯಾರ್ಥಿ, ರಂಗಕರ್ಮಿ, ಮಹಿಳಾಪರ ಹೋರಾಟಗಾರ್ತಿ , ನೀನಾಸಂ ಪದವೀಧರೆ ಗೀತಾ ಸಿದ್ಧಿಯವರಲ್ಲಿ ಮಾತನಾಡಿಸಿದಾಗ ಅವರು ತೆರೆದಿಟ್ಟ ವಿಚಾರಧಾರೆಗಳು ನಿಜಕ್ಕೂ ಮೈರೋಮಾಂಚನಗೊಳಿಸುತ್ತವೆ.
1.ಆಧುನಿಕ ರಂಗಭೂಮಿಯಲ್ಲಿ ಮಹಿಳಾ ಕಲಾವಿದರ ತೊಡಗುವಿಕೆಯ ಬಗ್ಗೆ ನಿಮ್ಮ ನಿಲುವು ?
ಪುರುಷ ಜಗತ್ತು ಹೆಣ್ಣೆಂದರೆ `ಜವಾಬ್ದಾರಿ’ಯ ಸಂಕೇತವಾಗಿಯೇ ಕಂಡಿದೆ. ಎಲ್ಲವನ್ನೂ ನಿಭಾಯಿಸುವ ಶಕ್ತಿ ಇರುವ ಒಂದು ಸಂಸಾರವನ್ನು ಕಟ್ಟುವ ಮುಖಾಂತರ ಈ ಸಮಾಜವನ್ನು ಸುಂದರವಾಗಿ ಕಟ್ಟುವ ಶಕ್ತಿ ಉಳ್ಳವಳು. ರಂಗಭೂಮಿ ಇತಿಹಾಸದಲ್ಲಿ ಅವಳ ಚರಿತ್ರೆ ಓದಿದರೆ ಪ್ರಾರಂಭದ ದಿನಗಳಲ್ಲಿ ಅವಳು ಆಸ್ಥಾನ ನೃತ್ಯಗಾರ್ತಿಯಾಗಿ, ಹಾಡುಗಾರಳಾಗಿ ಆಸ್ಥಾನದ ಪ್ರತಿ ವ್ಯಕ್ತಿಯನ್ನೂ ರಂಜಿಸಿದ್ದಾಳೆ. ಅವಳಿಲ್ಲದ ಇತಿಹಾಸವೇ ಇಲ್ಲ. ನೃತ್ಯಗಾರ್ತಿಯ ಮಕ್ಕಳು ನೃತ್ಯಗಾರನಾಗಿಯೋ/ನೃತ್ಯಗಾರ್ತಿಯರಾಗಿಯೋ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಸಂಗೀತ ರಂಗದಲ್ಲೂ ಹಾಗೆಯೇ.
ಹಿಂದೆಂದಿಗಿಂತಲೂ ಹೆಚ್ಚು ಜನ ಮಹಿಳೆಯರು ಆಧುನಿಕ ರಂಗಭೂಮಿಯಲ್ಲಿ ತೊಡಗಿಕೊಂಡಿರುವುದು ಸಂತಸದ ವಿಷಯವಾದರೂ, ಆಕೆಗೆ ಪುರುಷ ಸಮಾನವಾದ ಗೌರವಾಧರಗಳು ಇನ್ನೂ ದೊರಕಿಲ್ಲ. ಕೇವಲ ನಟನೆ ಮಾತ್ರವಲ್ಲದೇ ನಿರ್ದೇಶನ, ನಾಟಕ ರಚನೆ, ರಂಗತಂತ್ರಗಳ ಕ್ಷೇತ್ರದಲ್ಲೂ ಈಕೆ ಪರಿಣಿತಿಯನ್ನು ಸಾಧಿಸಿದ್ದಾಳೆ. ಆದರೆ ಮಹಿಳಾ ಪ್ರಧಾನವಾದ ಪ್ರಯೋಗಗಳು ಹೆಚ್ಚು ಆಗಬೇಕಿದೆ. ಇಡೀ ಸಮಾಜವನ್ನು ಹೆಣ್ಣಿನ ಕಣ್ಣಿನಿಂದ ಕಾಣುವ ಬದಲಾವಣೆಯ ಸಮಾಜ ರಂಗಭೂಮಿಯಿಂದ ಆಗಬೇಕಿದೆ. ಇದಕ್ಕೆ ಮಹಿಳೆ ಹೆಚ್ಚು ಸ್ವತಂತ್ರ ಚಿಂತನೆಯೊಡನೆ ರಂಗ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ. ಮಹಿಳೆ ರಂಗಭೂಮಿಗೆ ಬರುವುದರಿಂದ ಹೆಚ್ಚು ಹೆಚ್ಚು ಮಹಿಳಾ ವಿಷಯ ಆಧಾರಿತ ಸಾಹಿತ್ಯ ರಚನೆ ಸಾಧ್ಯವಾಗುತ್ತದೆ. ಅದರಿಂದ ಸಮಾಜದಲ್ಲಿ ಮಹಿಳೆಯ ಮೇಲಾಗುವ ದೌರ್ಜನ್ಯಗಳೂ ಕಡಿಮೆಯಾಗಬಹುದು.
2.ಸಿದ್ದಿ ಜನಾಂಗದಲ್ಲಿ ಹುಟ್ಟಿ ಬೆಳೆದ ನಿಮ್ಮ ಯೋಜನೆ ಭವಿಷ್ಯದ ದೃಷ್ಟಿಯಿಂದ?
ಸಿದ್ದಿ ಎಂದರೇನು? ಸಿದ್ದಿ ಜನರು ಎಲ್ಲಿಂದ ಬಂದವರು? ಯಾಕಾಗಿ ಬಂದವರು? ಅಥವಾ ವಲಸೆ ಬಂದರೋ? ವ್ಯಾಪಾರಕ್ಕಾಗಿ ಬಂದವರೋ? ಗುಲಾಮರಾಗಿ ಬಂದವರೋ? ಅಥವಾ ವ್ಯಾಪಾರಿ ಯಾತ್ರಿಕರು ಸಿದ್ದಿಯರನ್ನು ತಮ್ಮ ಅನುಕೂಲ ಸಾಧನೆಗಾಗಿ ಇಲ್ಲಿಗೆ ಕರೆತಂದರೋ? ಅಥವಾ ಸಿದ್ದಿಯರು ಇಲ್ಲಿಯ ಮೂಲ ನಿವಾಸಿಗಳೋ? ಇದು ನನ್ನನ್ನು ಯಾವಾಗಲೂ ಕಾಡುವ ಪ್ರಶ್ನೆಯಾಗಿದೆ. ಕನ್ನಡದವರಾದ ನಮ್ಮನ್ನು ಇಲ್ಲಿಯ ಶೇಕಡಾ 80%ರಷ್ಟು ಜನ ನಮ್ಮನ್ನು ಹಾಗೆ ಗುರುತಿಸಲು, ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ.
ಇಂತಹ ಸಮಾಜದಲ್ಲಿ ಈ ಸಮಸ್ಯೆಯ ನಡುವೆಯೂ ನನಗಾದ ಅವಮಾನಗಳನ್ನು ಸಹಿಸಿಕೊಂಡು ಬದುಕುತ್ತಿದ್ದೇನೆ ಎಂದರೆ ಅದಕ್ಕೆ ರಂಗಭೂಮಿಯೇ ಕಾರಣ. 1985ರಲ್ಲಿ ನನ್ನೂರಿನಲ್ಲಿ ನಡೆದ ಶಿಬಿರದ ಮೂಲಕ ನೀನಾಸಮ್ ನಮ್ಮ ಜನರನ್ನು ಗುರುತಿಸಿತು. ಆ ನಂತರ ನನ್ನ ಸಮುದಾಯದಲ್ಲಾದ ಬದಲಾವಣೆಯನ್ನು ನಾನು ಕಣ್ಣಾರೆ ಕಂಡಿದ್ದೇನೆ.
ರಂಗಭೂಮಿಯು ಬದಲಾವಣೆಯನ್ನು ತರುವ ಪ್ರಭಾವ ಮಾಧ್ಯಮವಾದ್ದರಿಂದ ನಾನು ನನ್ನ ಸಮುದಾಯದ ಮುಂದಿನ ಪೀಳಿಗೆಯವರನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂದುವರಿಯುವ ಉದ್ದೇಶವಿದೆ. ಸಧ್ಯ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದೇನೆ. ಸಿದ್ದಿ ಸಮುದಾಯದ ಮೊದಲ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದೇನೆ. ಭಾರತೀಯ ಸಿದ್ದಿಯರ ಪ್ರತಿನಿಧಿಯಾಗಿ ಅಮೇರಿಕಾದ ದಕ್ಷಿಣ ಕರೋಲಿನಾದಲ್ಲಿ ನಡೆದ ಕಪ್ಪು ಮಹಿಳೆಯರ ಸಮ್ಮೇಳನದಲ್ಲಿ ಭಾಗವಹಿಸಿ ವಿವಿಧ ದೇಶಗಳಿಂದ ಅಲ್ಲಿಗೆ ಬಂದಿದ್ದ ಕಪ್ಪು ಮಹಿಳಾ ಕಲಾವಿದರೊಂದಿಗೆ ಸಂಪರ್ಕ ಹೊಂದಿದ್ದೇನೆ. ಅವರೊಂದಿಗೆ ನಮ್ಮ ಮಕ್ಕಳನ್ನು ಮುಖಾಮುಖಿ ಮಾಡುವ ಗುರಿ ಹೊಂದಿದ್ದೇನೆ. ಕೇವಲ ಸಿದ್ದಿಯರಲ್ಲದೆ ನನ್ನ ಸುತ್ತಲಿನ ಇತರೆ ಸಮುದಾಯದ ಮಕ್ಕಳನ್ನೂ ಒಳಗೊಳ್ಳುವ ಯೋಜನೆಗಳನ್ನು ರೂಪಿಸುತ್ತಿದ್ದೇನೆ.
3.ಸಿದ್ದಿ ಮಹಿಳೆಯರ ಸ್ಥಿತಿ-ಗತಿ ಈಗ ಹೇಗಿದೆ?
ಸಿದ್ದಿ ಮಹಿಳೆಯ ಸ್ಥಿತಿ-ಗತಿಯಲ್ಲಿ ಮೊದಲಿಗೂ ಈಗಿನ ಸ್ಥಿತಿಗೂ ಹೆಚ್ಚು ಬದಲಾವಣೆ ಆದಂತೆ ಕಾಣಿಸುತ್ತಿಲ್ಲ. ಮೂಲತಃ ಸಿದ್ದಿ ಮಹಿಳೆಯರು ಸ್ವಾವಲಂಬಿಗಳು. ಪುರುಷರಿಗೆ ಸರಿ ಸಮಾನವಾಗಿ ದುಡಿಯುತ್ತಾರೆ. ಕಿತ್ತು ತಿನ್ನುವ ಬಡತನದ ಕಾರಣದಿಂದಾಗಿ, ಮಹಿಳೆ ಮತ್ತು ಪುರುಷರ ಹೆಚ್ಚು ಅಸಮಾನತೆಯ ಸಮಸ್ಯೆ ಇಲ್ಲ. ಆಕೆ ಪುರುಷರನ್ನು ಅವಲಂಬಿಸಿ ಬದುಕುವುದುದು ಬಹಳ ಅಪರೂಪ. ಶಿಕ್ಷಿತರಾದ ಕೆಲವು ಮಹಿಳೆಯರು ರಾಜಕೀಯದಲ್ಲಿ, ಸಮಾಜ ಸೇವೆಯಲ್ಲಿ, ಸ್ವಂತ ಉದ್ಯೋಗಗಳಲ್ಲಿ, ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಾವಕಾಶವಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದಾರೆ. ಸಿದ್ದಿಯರಿಗೆ ಈಗ ಶಿಕ್ಷಣದ ಮಹತ್ವ ಈಗ ಅರಿವಾಗಿದೆ. ಸಾಲ ಮಾಡಿಯಾದರೂ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಕೆಲಸ ಮಾಡುತ್ತಿದ್ದಾರೆ. ದೂರದ ಊರುಗಳಲ್ಲಿ ಹಾಸ್ಟೆಲ್ ಗಳಲ್ಲಿರಿಸಿ ಕಲಿಸುವ ಪ್ರಯತ್ನಗಳೂ ನಡೆದಿವೆ. ಕೆಲವು ಸಿದ್ದಿ ಯುವಕ-ಯುವತಿಯರು ಕಾನೂನು, ವಿಜ್ಞಾನ, ಸಮಾಜ ಸೇವೆಯ ಕ್ಷೇತ್ರಗಳಲ್ಲಿ ಅಭ್ಯಾಸಮಾಡುತ್ತಿದ್ದಾರೆ. ಶಿಕ್ಷಣ ಬೇಕೆಂಬ ಅರಿವಿರುವುದರಿಂದ ಸಿದ್ದಿ ಮಹಿಳೆಯರಲ್ಲಿ ಏಳರಿಂದ ಹತ್ತರವರೆಗೆ ಒದಿರುವವರು ಹೆಚ್ಚಾಗಿ ಸಿಗುತ್ತಾರೆ. ಒದಿಲ್ಲದ ಗಂಡು ಅಥವಾ ಹೆಣ್ಣನ್ನು ಮದುವೆ ಮಾಡಿಕೊಳ್ಳುವುದೂ ಕಷ್ಟದ ಸಂಗತಿಯಾಗಿದೆ. ಆದರೆ ಹೆಚ್ಚು ಓದಿದ ಹುಡುಗಿಯ ಮದುವೆಯಾಗುವುದೂ ಸ್ವಲ್ಪ ಕಷ್ಟವೇ. ಕೆಲವು ಸಿದ್ದಿ ಮಹಿಳೆಯರು ಸರಕಾರಿ ಕೆಲಸಗಳಲ್ಲಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಪೋಲಿಸ್ ಕೆಲಸದಲ್ಲಿ ಕೆಲವರಿದ್ದಾರೆ. ಶಿಕ್ಷಕಿಯರಾಗಿ, ನರ್ಸ್ ಗಳಾಗಿ ಅಲ್ಲದೇ ಸೇನೆಯಲ್ಲಿಯೂ ಕೆಲವರು ಸೇವೆ ಸಲ್ಲಿಸುತ್ತಿದ್ದಾರೆ. ಉಳಿದಂತೆ ಹೆಚ್ಚಿನವರು ಕೂಲಿ ಕೆಲಸ ಮಾಡುತ್ತಾರೆ. ಸ್ವಯಂ ಉದ್ಯೋಗಗಳನ್ನು ಮಾಡುವವರಿಗೆ ಸರಕಾರದ ಸಹಕಾರವೂ ಇದೆ.
4.ಸಾಮಾಜಿಕ ಸ್ಥಿತಿ ಸುಧಾರಣೆ ಕಂಡಿದೆಯೇ..?
ನಮ್ಮ ನಾಡಿನಲ್ಲಿ ಅದೆಷ್ಟೋ ಬುಡಕಟ್ಟು ಮತ್ತು ಹಿಂದುಳಿದ ಜನಾಂಗಗಳು ಬಹುಸಂಖ್ಯಾತ ಸಮುದಾಯಗಳೊಡನೆ ಧಾರ್ಮಿಕವಾಗಿ, ಸಾಮಾಜಿಕವಾಗಿ ಅದರಲ್ಲೂ ಮುಖ್ಯವಾಗಿ ಭೌತಿಕವಾಗಿ ಸಂಕೀರ್ಣಗೊಂಡಿರುವುದರಿಂದ, ಅವರು ತಮ್ಮ ಜಾತಿಯನ್ನು ಕುರಿತ, ಜನಾಂಗವನ್ನು ಕುರಿತ, ಹಿನ್ನೆಲೆಗಳನ್ನು ಬಚ್ಚಿಟ್ಟುಕೊಂಡು ತಮ್ಮ ಸಾಮಾಜಿಕ ಕೀಳರಿಮೆಯ ಭಾವಗಳನ್ನು ಮರೆಮಾಚಿಕೊಂಡು, `ಎಲ್ಲರಂತೆ’ ಬದುಕಲು ಸಾಧ್ಯವಾಗಿದೆ. ಆದರೆ ಆಫ್ರಿಕನ್ ಜನಾಂಗದ ದೇಹಲಕ್ಷಣಗಳನ್ನು ಹೊಂದಿದ ಸಿದ್ದಿ ಸಮುದಾಯಕ್ಕೆ ಅದು ಕಷ್ಟಸಾಧ್ಯವಾಗಿದೆ. ಸಾಮಾಜಿಕವಾಗಿ ಅವರು ನೊಂದಿದ್ದರೂ ತಮ್ಮ ಐಡೆಂಟಿಟಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ತಾವು ಅನುಭವಿಸಿದ ನೋವು ತಮ್ಮ ಮಕ್ಕಳು ಅನುಭವಿಸಬಾರದೆಂಬ ಮನಸ್ಥಿತಿ ಹಿರಿಯರಲ್ಲಿದೆ. ಪದವೀಧರರಾದ ಸಿದ್ದಿಹುಡುಗರಂತೂ ತಮ್ಮ ಜನಾಂಗದ ಹುಡುಗಿಯರನ್ನು ಮದುವೆಯಾಗಲು ಹಿಂಜರಿಯುತ್ತಿದ್ದಾರೆ. ತಮ್ಮ ಜನಾಂಗದ ಗುರುತಾದ ಗುಂಗುರು ಕೂದಲನ್ನು ನಾಶಗೊಳಿಸುವ ಕಡೆಗೆ ಸಾಗುತ್ತಿದ್ದಾರೆ. ಹೆಚ್ಚಿನವರು ಅಂತರ್ಜನಾಂಗೀಯ ವಿವಾಹದ ಕಡೆಗೆ ವಾಲುತ್ತಿದ್ದಾರೆ.
5.ನಿಮ್ಮ ಕಲಿಕೆ/ಶಿಕ್ಷಣದ ಆಸಕ್ತಿಗೆ ಪ್ರಭಾವ ಹೇಗೆ?
ನನ್ನ ಅಪ್ಪ ತೋಟದ ಕೆಲಸ ಮಾಡಿದರೆ, ಅಮ್ಮ ಹವ್ಯಕರ ಮನೆಯ ಪಾತ್ರೆ ತೊಳೆಯುವುದು, ಸಗಣಿ ತೆಗೆಯುವ ಕೆಲಸ ಮಾಡುತ್ತಿದ್ದರು. ಅವರು ಕೆಲಸದಲ್ಲಿ ತೊಡಗಿದ್ದಾಗ ನಾವು ಹವ್ಯಕರ ಮಕ್ಕಳೊಂದಿಗೆ ಚೂರುಪಾರು ಓದುವುದನ್ನು ಕಲಿಯುತ್ತಿದ್ದೆವು. ನನ್ನ ಬಾಲ್ಯ ಕಾಲಕ್ಕೆ ನನ್ನ ಮಾವ, ಚಿಕ್ಕಮ್ಮ ಉತ್ತಮ ಶಿಕ್ಷಣ ಪಡೆದು ಸರಕಾರಿ ಹುದ್ದೆಯಲ್ಲಿದ್ದರು. ಅವರ ಮಾರ್ಗದರ್ಶನ, ಅಮ್ಮ-ಅಪ್ಪರ ಒತ್ತಸೆಯಿಂದ ನಮಗೂ ಶಿಕ್ಷಣ ದೊರೆಯಿತು. ನನ್ನ ಅಣ್ಣ, ಅಕ್ಕರಿಂದಾಗಿ ಪ್ರಾಥಮಿಕ ಶಿಕ್ಷಣ ನನಗೆ ಮನೆಯಲ್ಲಿಯೇ ಸಿಕ್ಕಿತ್ತು. ನನ್ನ ಅಪ್ಪನೂ ಆ ಕಾಲದಲ್ಲಿಯೇ ಏಳನೇ ತರಗತಿವರೆಗೆ ಓದಿದ್ದರು. ಹಾಗಾಗಿ ಕಷ್ಟಪಟ್ಟು ನಮ್ಮನ್ನು ಶಾಲೆಗೆ ಸೇರಿಸಿದ್ದರು. ಶಿಕ್ಷಣದ ಜೊತೆಗೆ ಹಾಡು, ಯಕ್ಷಗಾನ ಕುಣಿತ, ಭಗವದ್ಗೀತೆಯ ಪಾಠ ನಮಗೆ ದೊರಕಿತು. ಎಲ್ಲ ಜಾತಿಯ ಮಕ್ಕಳೊಂದಿಗೆ ಸ್ಪರ್ಥಿಸಬೇಕಾದ್ದರಿಂದ ಶಿಕ್ಷಣ ನಮಗೆ ಸವಾಲಾಗಿತ್ತು. ನನ್ನ ಅಪ್ಪ ಒಳ್ಳೆಯ ನಟನಾಗಿದರು, ಅಮ್ಮ, ಚಿಕ್ಕಂದಿರು, ಮಾವಂದಿರು ಎಲ್ಲರೂ ಒಳ್ಳೆಯ ಕಲಾವಿದರಾಗಿದ್ದರು. ನಮ್ಮ ತಾತ ಒಳ್ಳೆಯ ಯಕ್ಷಗಾನ ಕಲಾವಿದರಾಗಿದ್ದರು. ನಾನು 10ನೇ ತರಗತಿಯಲ್ಲಿ ಅನುತ್ತೀರ್ಣಳಾಗಿ, ಅವಮಾನದ ದಿನಗಳನ್ನು ಎದುರಿಸಿದ್ದೆ, ಆಗ ನನಗೆ ನೀನಾಸಮ್ ಜೀವನ ಮಾರ್ಗ ತೋರಿಸಿತು. ನನ್ನ ಅಕ್ಕ ಆಗಲೇ ನೀನಾಸಮ್ ತಿರುಗಾಟದಲ್ಲಿದ್ದಳು. ನನಗೂ ಅಲ್ಲಿಗೆ ಹೋಗುವ ಅವಕಾಶ ಸಿಕ್ಕಿತು. ಅದು ನನ್ನ ಜೀವನದ ದೊಡ್ಡ ತಿರುವು. ಅದು ನನ್ನನ್ನು ಓದುವಂತೆ ಮಾಡಿತು. ನೀನಾಸಮ್ನ ವಾತಾವರಣದಲ್ಲಿ ಕಥೆ, ನಾಟಕ, ಕವಿತೆಗಳನ್ನು ಒದಲೇ ಬೇಕಿತ್ತು. ಅಲ್ಲಿಂದ ಓದುವ ಹವ್ಯಾಸ ಬೆಳೆಯಿತು. ನೀನಾಸಮ್ನಿಂದ ಬಂದ ನಂತರ ನಾನು ಪರೀಕ್ಷೆ ಕಟ್ಟಿ ಪಾಸು ಮಾಡಿದೆ. ಹಣದ ಅವಶ್ಯಕತೆ ಇದ್ದಿದ್ದರಿಂದ ನೀನಾಸಮ್ ತಿರುಗಾಟಕ್ಕೆ ಹೋದೆ. ಆ ನಂತರ ಪಿ.ಯು.ಸಿ.ಯನ್ನು ಹೊರಗಿನಿಂದ ಕಟ್ಟಿ ಪಾಸು ಮಾಡಿದೆ. ಅದೇ ಕಾಲಕ್ಕೆ ನಮ್ಮ ಕುಟುಂಬಕ್ಕೆ ನನ್ನ ಭಾವ, ರಂಗ ನಿರ್ದೇಶಕ ಚನ್ನಕೇಶವ ಅವರ ಪ್ರವೇಶ ಆಗಿತ್ತು. ಅವರ ಸಹಾಯದಿಂದ ಬೆಂಗಳೂರಿನ ಸುರಾನಾ ಕಾಲೇಜಿಗೆ ಸೇರಿದೆ. ಛಲ ಬಿಡದೆ ಡಿಗ್ರಿ ಮುಗಿಸಿ, ಎಮ್.ಎ ನಾಟಕದಲ್ಲಿ ಪದವಿ ಪಡೆದೆ. ಅದೇ ವಿಭಾಗದಲ್ಲಿ ಮಹಿಳಾ ರಂಗಭೂಮಿಯ ಕುರಿತ ಪಿ.ಹೆಚ್.ಡಿ ಮಾಡುತಿದ್ದೇನೆ. ಈಗ ಹಿಂದಿರುಗಿ ನೋಡಿದರೆ ನಾನು ನಡೆದು ಬಂದ ದಾರಿ ದೊಡ್ಡ ಸಾಹಸ ಎಂದನ್ನಿಸುತ್ತಿದೆ.
6.ಸಂಘಟನೆ, ಜಾಗೃತಿಗಾಗಿ, ರಂಗಭೂಮಿ ಸೂಕ್ತ ಮಾಧ್ಯಮವೇ?
ಮೂವತ್ತು ವರ್ಷಗಳ ಹಿಂದೆ ಸಮಾಜದ ಮುಖ್ಯವಾಹಿನಿಯಿಂದ ದೂರವಾಗಿ ಕಾಡಿನಲ್ಲಿದ್ದ ನಮ್ಮ ಜನರನ್ನು ಆಧುನಿಕ ಪ್ರಪಂಚಕ್ಕೆ ಕರೆತಂದಿದ್ದೇ ಈ ರಂಗಭೂಮಿ. ಕಳ್ಳರೆಂದು ಕರೆಯುತ್ತಿದ್ದ ನಮ್ಮ ಜನರನ್ನು ಒಗ್ಗೂಡಿಸಿ ಅವರಿಂದ ಅವರಿಗಾಗಿಯೇ, ಅವರಿರುವ ಸ್ಥಳಕ್ಕೆ ರಂಗಭೂಮಿಯನ್ನು ಒಯ್ದು ಅವರಿಗೆ ಹೊರಗಿನ ಪ್ರಪಂಚ ತೋರಿಸಿದ್ದು ಈ ರಂಗಭೂಮಿ. 1985ರಲ್ಲಿ ನಿರ್ದೇಶಕ ಚಿದಂಬರರಾವ್ ಜಂಬೆಯವರ ನೇತೃತ್ವದ ಆ ನೀನಾಸಮ್ ಶಿಬಿರದಲ್ಲಿ ಜಂಬೆಯವರು ಮೊದಲ ಭಾರಿಗೆ ಚಿನುವಾ ಅಚುಬೆಯ ‘ಥಿಂಗ್ಸ್ ಫಾಲ್ ಅಪಾರ್ಟ್’ ಕಾದಂಬರಿಯನ್ನು ಆಧರಿಸಿದ ‘ಕಪ್ಪು ಜನ ಕೆಂಪು ನೆರಳು’ ಎನ್ನುವ ಕನ್ನಡ ನಾಟಕವನ್ನು ಆ ನಿರ್ದೇಶಿಸಿದರು. ಅದರ ಪ್ರದರ್ಶನಗಳನ್ನು ಕರ್ನಾಟಕದ ಕೆಲವು ಪಟ್ಟಣಗಳಲ್ಲಿ ನಡೆಸಿದರು. ಆಗ ಮೊದಲಬಾರಿಗೆ ಸಿದ್ದಿಯರು ಭಾರತದಲ್ಲಿ ಇದ್ದಾರೆ ಎನ್ನುವ ವಿಚಾರ ಹೆಚ್ಚು ಜನರಿಗೆ ಗೊತ್ತಾಯಿತು.
ಆ ನಂತರ ಸರಕಾರ ಸಿದ್ದಿಯರಿಗಾಗಿ ಕ್ರೀಡಾ ಕೇಂದ್ರಗಳನ್ನು ಸ್ಥಾಪಿಸಿತು. ಹಲವಾರು ಸಿದ್ದಿ ಯುವಕರು ಕಾಡಿನಿಂದ ಆಚೆ ಬಂದು ವಿದ್ಯಾಬ್ಯಾಸದ ಕಡೆ ಒಲವು ತೋರಿದರು. ಸಿದ್ದಿ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಕಡೆ ಒಲವು ತೋರಿದರು. ಕೂಲಿ ಮಾಡುತ್ತಿದ್ದ ಮಕ್ಕಳನ್ನು ಶಾಲೆಗಳಿಗೆ ಸೇರಿಸಿದರು. ಅಷ್ಟೇ ಅಲ್ಲದೆ ಸುತ್ತಲಿನ ಸಮುದಾಯದವರು ಸಿದ್ದಿಯರನ್ನು ನೋಡುವ ದೃಷ್ಟಿಕೋನ ಬದಲಾಯಿತು. ಮುಂದಿನ ದಿನಗಳಲ್ಲಿ ಹವ್ಯಕರ ನಾಟಕಗಳಲ್ಲಿ ಸಿದ್ದಿಯರು ಪಾಲ್ಗೊಂಡರು ಹಾಗೂ ತಮ್ಮದೇ ಆದ ಸ್ವಂತ ತಂಡ ಕಟ್ಟಿದರು. ಹಲವಾರು ಎನ್.ಜಿ.ಓ.ಗಳು ಇವರೊಂದಿಗೆ ಕೆಲಸ ಮಾಡಲು ಅನುಕೂಲವಾಯಿತು. ಸಿದ್ದಿಯರ ಪುಗಡಿ, ದಮಾಮಿ ನೃತ್ಯದ ತಂಡ ದೇಶದಲ್ಲೆಲ್ಲ ಹೆಸರು ಮಾಡಿತು. ಈ ನಾಟಕವಲ್ಲದೇ ಜಂಬೆಯವರು 2000 ಇಸವಿಯಲ್ಲಿ ಸಿದ್ದಿ ಜನರಿಗಾಗಿಯೇ ಬರ್ಟೋಲ್ಟ್ ಬ್ರೆಕ್ಟ್ ನ ‘ಪುಂಟಿಲಾ’ ನಾಟಕವನ್ನು ನಿರ್ದೇಶಿಸಿದರು.’ಕಪ್ಪು ಜನ ಕೆಂಪು ನೆರಳು’ ನಾಟಕವು ಸಿದ್ದಿ ಜನರನ್ನು ಆಧುನಿಕ ಲೋಕಕ್ಕೆ ತೆರೆಯಲು ನೆರವಾದ ಒಂದು ಪ್ರಮುಖ ನಾಟಕ. ಇದು ಎಷ್ಟೋ ಜನ ಸಿದ್ದಿ ಯುವಕ-ಯುವತಿಯರು ಇಂದು ನಾಟಕ, ಸಿನೆಮಾ, ಸಂಗೀತ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಕಾರಣವಾಯ್ತು.
ನನ್ನನ್ನೂ ಸೇರಿದಂತೆ ಸಿದ್ದಿಯರಾದ ಗಿರಿಜಾ ಸಿದ್ದಿ, ರೇಣುಕಾ ಸಿದ್ದಿ, ದಾಕ್ಷಾಯಣಿ ಸಿದ್ದಿ, ಭಾಗ್ಯ ಸಿದ್ದಿ, ಪ್ರಶಾಂತ ಸಿದ್ದಿ — ಇವರೆಲ್ಲಾ ನೀನಾಸಮ್ ನಾಟಕ ಶಾಲೆಯಲ್ಲಿ ಕಲಿತು ಆಧುನಿಕ ರಂಗಭೂಮಿಯಲ್ಲಿ ತೊಡಗಿಕೊಂಡಿರುವುದು ಸಿದ್ದಿ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದ್ದು, ಸಾಮಾಜಿಕ ಬದಲಾವಣೆಗೆ ರಂಗಭೂಮಿ ನಿಜಕ್ಕೂ ಸೂಕ್ತ ಮಾರ್ಗ ಎನ್ನುವುದಕ್ಕೆ ನಮಗಿಂತ ದೊಡ್ಡ ಉದಾಹರಣೆ ಬೇಕಿಲ್ಲ..