ಪುತ್ತೂರು : ಇತಿಹಾಸ ಪ್ರಸಿದ್ಧ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆ ದೇವಾಲಯದ ಒಳಗಿನ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ ನಗರ ಹಾಗೂ ಗ್ರಾಮಾಂತರ ಭಾಗಕ್ಕೂ ವಿವಿಧ ಕಾರ್ಯಕ್ರಮಗಳ ಮೂಲಕ, ರಾರಾಜಿಸುವ ಕಮಾನು, ಕಟೌಟ್ ಗಳ ಮೂಲಕ ಜಾತ್ರಾ ಮೆರುಗನ್ನು ಉಂಟುಮಾಡುತ್ತದೆ.
ಜಾತ್ರೆಯ ಹಿನ್ನೆಲೆಯಲ್ಲಿ ನಗರವಂತೂ ತಳಿರು ತೋರಣ, ಮಹಾದ್ವಾರ, ದೇವರ ಕಟೌಟ್ ಗಳು, ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಳ್ಳುತ್ತಿದೆ. ನಗರವನ್ನು ಪ್ರವೇಶಿಸುವ ವಿವಿಧ ಕಡೆಗಳಲ್ಲಿ ಹಾಗೂ ದೇವರು ಸವಾರಿ ತೆರಳುವ ಕಡೆಗಳಲ್ಲಿ ಭಕ್ತಾಗಳು ಅಳವಡಿಸಿರುವ ಸ್ವಾಗತ ಕಮಾನುಗಳು ಜಾತ್ರೆಯ ಮೆರುಗನ್ನು ಹೆಚ್ಚಿಸಿವೆ. ಜಾತ್ರೆಯ ಸಂದರ್ಭದಲ್ಲಿ ಎ. 10 ರಿಂದ ಎ.18 ರವರೆಗೆ ರಾತ್ರಿ ಶ್ರೀ ದೇವರ ಪೇಟೆ ಸವಾರಿ ನಡೆಯುತ್ತದೆ. ಎ. 16 ರಂದು ಮಾತ್ರ ದೇವರ ಪೇಟೆ ಸವಾರಿ ನಡೆಯುವುದಿಲ್ಲ. ಶ್ರೀ ದೇವರ ಪೇಟೆ ಸವಾರಿಯ ಸಂದರ್ಭದಲ್ಲಿ ವಿವಿಧ ಕಟ್ಟೆಗಳಲ್ಲಿ ಪೂಜೆ ನಡೆಯುತ್ತದೆ. ಪೂಜೆ ನಡೆಯುವ ಕಟ್ಟೆಗಳಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಭಕ್ತಾಗಳು ಆಯೋಜಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅಲಂಕಾರಗಳೂ ನಡೆಯುತ್ತವೆ.
ಪೇಟೆ ಸವಾರಿ
ಶ್ರೀ ದೇವರ ಪೇಟೆ ಸವಾರಿ ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟು, ಶಿವಪೇಟೆ, ತೆಂಕಿಲ, ಕೊಟ್ಟಿಬೆಟ್ಟು ಏಳ್ನಾಡುಗುತ್ತು, ಬೈಪಾಸ್ ಹೆದ್ದಾರಿ, ರಾಧಾಕೃಷ್ಣ ಮಂದಿರ, ಕೋರ್ಟ್ ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಡಿ, ಬೊಳುವಾರುಬೈಲು, ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್ ಸವಾರಿ, ಬನ್ನೂರು, ಅಶೋಕನಗರ, ರೈಲ್ವೇ ಮಾರ್ಗ ಸವಾರಿ, ಬಂಗಾರ್ ಕಾಯರ್ಕಟ್ಟೆ ಸವಾರಿ ನಡೆಯುತ್ತದೆ.
ಆಕರ್ಷಕ ಸ್ವಾಗತ
ಶ್ರೀ ದೇವರ ಪೇಟೆ ಸವಾರಿಯ ಸಂದರ್ಭದಲ್ಲಿ ದೇವರನ್ನು ಸ್ವಾಗತಿಸುವ ಆಕರ್ಷಕ ಕಮಾನುಗಳು ನಗರದೆಲ್ಲೆಡೆ ಕಂಡುಬರುತ್ತಿದೆ. ಸೀಮೆಯ ಜನತೆ ಪುತ್ತೂರು ಜಾತ್ರಾ ಉತ್ಸವದ ಸಂಭ್ರಮವನ್ನು ಅನುಭವಿಸುತ್ತಾರೆ. ಶ್ರೀ ದೇವರ ಪೇಟೆ ಸವಾರಿ ಸಂದರ್ಭದಲ್ಲಿ ಅಂಗಡಿ ಮುಂಗಟ್ಟುಗಳು, ವ್ಯಾಪಾರಸ್ಥರು, ಮನೆಗಳನ್ನು ಹೊಂದಿರುವವರು ಎಲ್ಲಿಗೂ ತೆರಳದೆ ಶ್ರೀ ದೇವರ ಪೇಟೆ ಸವಾರಿ ದರ್ಶನಕ್ಕೆ ಕಾಯುತ್ತಾರೆ.
ಜಾತ್ರಾ ಗದ್ದೆಯಲ್ಲಿ ಸಂತೆ ಮಾರುಕಟ್ಟೆ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಈ ಮಧ್ಯೆ ಪುತ್ತೂರು ನಗರದಲ್ಲಿ ಜನಜಂಗುಳಿಯೂ ಹೆಚ್ಚಾಗಿದೆ. ಮಾಮೂಲಾಗಿ ಸಂಜೆ ಸಮಯದಲ್ಲಿ ನಗರದಲ್ಲಿ ಒಂದಷ್ಟು ಜನಸಂದಣಿ ಕಡಿಮೆಯಾದರೆ ಜಾತ್ರೆಯ ಸಂದರ್ಭದಲ್ಲಿ ಶ್ರೀ ದೇವರ ಪೇಟೆ ಸವಾರಿ ನಡೆಯುವುದರಿಂದ ತಡರಾತ್ರಿಯವರೆಗೂ ಜನಸಂದಣಿ ಕಂಡುಬರುತ್ತದೆ. ದೂರದೂರುಗಳಿಂದಲೂ ಭಕ್ತರು ಪೇಟೆ ಸವಾರಿಯನ್ನು ನೋಡಲು ಆಗಮಿಸುತ್ತಿದ್ದಾರೆ.