ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಿಂದ ನಾಗಮಲೆ ಕಡೆಗೆ ಜೀಪಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ಅಬ್ಬಾ! ಬದುಕಿ ಊರು ಸೇರಿದರೆ ಸಾಕಪ್ಪಾ ಎಂದು ಆ ಮಲೆಮಹದೇಶ್ವರನಲ್ಲಿ ಬೇಡಿಕೊಳ್ಳುವುದು ಸಾಮಾನ್ಯವಾಗಿದೆ. ಇದಕ್ಕೆ ಇಲ್ಲಿ ಸಂಚರಿಸುವ ಡಕೋಟ ಜೀಪುಗಳು ಮತ್ತು ಕುರಿಗಳಂತೆ ಜನರನ್ನು ತುಂಬಿ ಕರದೊಯ್ಯುವ ಚಾಲಕರು ಕಾರಣ ಎಂದರೆ ತಪ್ಪಾಗಲಾರದು.
ಮತ್ತೊಂದು ವಿಚಾರ ಏನೆಂದರೆ ಈ ಡಕೋಟ ಜೀಪುಗಳನ್ನು ಹೊರತು ಪಡಿಸಿ ಇತರೆ ವಾಹನಗಳು ತೆರಳುವುದು ಅಷ್ಟು ಸುಲಭವಲ್ಲ. ಹೀಗಾಗಿ ಪ್ರಾಣವನ್ನು ಕೈಯ್ಯಲ್ಲಿಡಿದುಕೊಂಡು ನಾಗಮಲೆಗೆ ಹೋಗುವ ಪ್ರವಾಸಿಗರು ಈ ಡಕೋಟ ಜೀಪುಗಳನ್ನೇರುತ್ತಾರೆ. ಅಷ್ಟೇ ಅಲ್ಲ ಅವರಿಗೆ ನಾಗಮಲೆಗೆ ಹೋಗಿ ಹಿಂತಿರುಗುವ ವೇಳೆಗೆ ಯಮಲೋಕದ ಕದ ತಟ್ಟಿ ಬಂದ ಅನುಭವವಾಗಿ ಬಿಟ್ಟಿರುತ್ತದೆ. ಮಲೆಮಹದೇಶ್ವರ ಬೆಟ್ಟದ ಅಂತರಗಂಗೆಯಿಂದ ನಾಗಮಲೆಗೆ ಕರೆದೊಯ್ಯುವ ಈ ಜೀಪುಗಳನ್ನು ನೋಡಿದರೆ ಭಯವಾಗುತ್ತದೆ. ಕಾರಣ ಯಾವ ಜೀಪುಗಳು ಕೂಡ ಸುಸ್ಥಿಯಲ್ಲಿರುವಂತೆ ಕಂಡು ಬರುವುದಿಲ್ಲ. ಇಲ್ಲಿ ಸುಮಾರು ನಲುವತ್ತಕ್ಕೂ ಹೆಚ್ಚು ಜೀಪಿದ್ದರೂ ಅವುಗಳಲ್ಲಿ ಎಲ್ಲವೂ ಡಕೋಟವಾಗಿವೆ. ಆದರೂ ಈ ಜೀಪುಗಳಲ್ಲಿ ಯಾವುದೇ ಭಯವಿಲ್ಲದೆ ಪ್ರಯಾಣಿಕರನ್ನು ಸಾಗಿಸಲಾಗುತ್ತದೆ. ಈ ಜೀಪುಗಳು ದುರ್ಗಮ ಹಾದಿಯಲ್ಲಿ ಸಾಗುತ್ತಿದ್ದರೆ ಪ್ರಯಾಣಿಸುವ ಪ್ರಯಾಣಿಕರ ಜೀವ ಲಬಲಬ ಅಂಥ ಬಡಿದುಕೊಳ್ಳುತ್ತದೆ.
ತುಂಬಾ ಹಳೆಯ ಮಾಡೆಲ್ ನ ಗುಜರಿಗೆ ಹಾಕುವಂತಹ ಜೀಪುಗಳನ್ನು ಇಲ್ಲಿ ದುರಸ್ತಿ ಮಾಡಿ ಓಡಿಸಲಾಗುತ್ತದೆ ಎಂಬ ಆರೋಪ ಕೇಳಿ ಬರುತ್ತದೆ. ಸ್ಥಳೀಯ ಕೆಲವರು ಹೇಳುವ ಪ್ರಕಾರ ಬಹುತೇಕ ಜೀಪ್ಗಳನ್ನು ಎಪ್ಸಿ ಮಾಡಿಸಿಲ್ಲ. ಇವುಗಳಿಗೆ ಇನ್ಸೂರೆನ್ಸ್ ಕೂಡ ಇಲ್ಲವಂತೆ. ಅದಕ್ಕಿಂತ ಹೆಚ್ಚಾಗಿ ಈ ಜೀಪುಗಳನ್ನು ಓಡಿಸುವ ಬಹುತೇಕ ಚಾಲಕರಿಗೆ ಲೈಸನ್ಸೇ ಇಲ್ಲವಂತೆ. ಇಲ್ಲಿ ಯಾರೂ ಹೇಳುವವರು ಕೇಳುವವರು ಇಲ್ಲವಾಗಿರುವುದರಿಂದ ಡಕೋಟ ಜೀಪುಗಳ ಆಟಾಟೋಪ ಮುಂದುವರೆಯುತ್ತಿದೆ. ಅರಣ್ಯದೊಳಗಿರುವ ತುಳಸೀಕೆರೆ ಇಂಡಿಗನತ್ತ ಹಾಗೂ ನಾಗಮಲೆಗೆ ಹತ್ತಿರದ ಸುಮಾರು 8 ಕಿ.ಮೀ ದೂರದ ಹಾದಿಗೆ ಅಲ್ಲಿನ ನಿವಾಸಿಗಳು ಈ ಜೀಪುಗಳನ್ನೇ ಆಶ್ರಯಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಜನರನ್ನು ಕುರಿಗಳನ್ನು ತುಂಬಿಕೊಂಡು ಹೋಗಲಾಗುತ್ತದೆ. ಸದಾ ಇದೇ ಜೀಪುಗಳೇ ಸಂಚಾರ ಸಾಧನವಾಗಿರುವುದರಿಂದ ಇಲ್ಲಿಯ ಜನ ಅನಿವಾರ್ಯವಾಗಿ ಈ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಇವರಿಗೆ ಸುರಕ್ಷಿತ ಪ್ರಯಾಣ ಮರೀಚಿಕೆಯಾಗುತ್ತಿದೆ. ಜೀಪಿಗೆ ಹತ್ತುವಾಗ ಮತ್ತು ಇಳಿಯುವಾಗ ಆ ಮಲೆಮಹದೇಶ್ವರನ ನೆನಪಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಬಹಳಷ್ಟು ಬಾರಿ ಇಲ್ಲಿ ಅನಾಹುತ ಸಂಭವಿಸಿದೆ. ಈ ವೇಳೆ ಸಣ್ಣಪುಟ್ಟ ಪರಿಹಾರ ನೀಡಿ ಕೈತೊಳೆದು ಕೊಂಡು ಬಿಡುತ್ತಾರೆ. ಈ ವ್ಯಾಪ್ತಿಯ ಪೊಲೀಸರರಾಗಲೀ, ಸಾರಿಗೆ ಇಲಾಖೆಯಾಗಲೀ ಇತ್ತ ಅಷ್ಟಾಗಿ ಗಮನಹರಿಸಿದಂತೆ ಕಾಣುತ್ತಿಲ್ಲ. ಜಾತ್ರೆ ವೇಳೆ ಮಾತ್ರ ಒಂದಷ್ಟು ಕಠಿಣವಾಗಿ ವತರ್ಿಸಿದರೂ ಬಳಿಕ ಅದೇ ರಾಗ ಅದೇ ಹಾಡು ಎಂಬಂತಾಗಿದೆ. ಇನ್ನು ಮುಂದೆಯಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕಾಗಿದೆ. ತಪ್ಪಿದರೆ ಮುಂದೊಂದು ದಿನ ಭಾರೀ ಅನಾಹುತ ಸಂಭವಿಸುವುದು ಖಚಿತ