News Kannada
Sunday, September 25 2022

ನುಡಿಚಿತ್ರ

ಇಷ್ಟಾರ್ಥ ನೆರವೇರಿಸುವ ಬೆಟ್ಟದ ಚಾಮುಂಡೇಶ್ವರಿ - 1 min read

Photo Credit :

ಇಷ್ಟಾರ್ಥ ನೆರವೇರಿಸುವ ಬೆಟ್ಟದ ಚಾಮುಂಡೇಶ್ವರಿ

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಆಷಾಡ ಶುಕ್ರವಾರದ ಸಂಭ್ರಮ ಮನೆ ಮಾಡಿದೆ. ಸಾಗರೋಪಾದಿಯಲ್ಲಿ ಭಕ್ತರು ಸಾಗಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯುತ್ತಿದ್ದಾರೆ. ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜಾ ಕೈಂಕರ್ಯಗಳು ಕೂಡ ನಡೆಯುತ್ತಿದೆ. ಆಷಾಡ ಶುಕ್ರವಾರದ ವಿಶೇಷ ಪೂಜೆ ಜೂನ್ 30, ಜುಲೈ 7, ಜುಲೈ 14, ಜುಲೈ 21 ನಡೆಯಲಿದ್ದು, ಈ ನಡುವೆ ಜುಲೈ 16 ಚಾಮುಂಡೇಶ್ವರಿ ವರ್ಧಂತಿ ನಡೆಯಲಿದೆ.  ಹೀಗಾಗಿ ಕೇವಲ ಚಾಮುಂಡಿ ಬೆಟ್ಟದಲ್ಲಿ ಮಾತ್ರವಲ್ಲದೆ ಚಾಮುಂಡೇಶ್ವರಿ ದೇವಾಲಯಗಳು ಎಲ್ಲೆಲ್ಲಿ ಇವೆಯೋ ಅಲ್ಲೆಲ್ಲ ಆಷಾಡದ ವಿಶೇಷ ಪೂಜಾಕಾರ್ಯಕ್ರಮಗಳು ನಡೆಯುತ್ತಿವೆ. ಚಾಮುಂಡೇಶ್ವರಿ ಬೆಟ್ಟದಲ್ಲಿ ಆಷಾಡದ ವಿಶೇಷ ಪೂಜೆ ನಡೆಯುತ್ತಿರುವ  ಈ ಸಂದರ್ಭದಲ್ಲಿ ಮೈಸೂರಿನ ಚಾಮುಂಡಿಬೆಟ್ಟದ ಬಗ್ಗೆ ಮತ್ತು ಚಾಮುಂಡೇಶ್ವರಿ ಅಲ್ಲಿ ನೆಲೆನಿಂತ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಸಾಮಾನ್ಯವಾಗಿ ಮೈಸೂರು ಎಂದಾಕ್ಷಣ ಚಾಮುಂಡಿಬೆಟ್ಟ ಕಣ್ಮುಂದೆ ಬರುತ್ತದೆ. ಮೈಸೂರಿನ ಮುಕುಟಮಣಿ, ಮೈಸೂರು ಅರಸರ ಆರಾಧ್ಯದೇವತೆ, ದುಷ್ಟ ಶಿಕ್ಷಕಿ, ಶಿಷ್ಟರಕ್ಷಕಿಯಾಗಿ, ಇಷ್ಟಾರ್ಥ ನೆರವೇರಿಸೋ ಶಕ್ತಿ ದೇವತೆಯಾಗಿ ಕಾಪಾಡುತ್ತಾ ಬಂದಿರುವುದನ್ನು ಕಾಣಬಹುದು. ಹಾಗೆ ನೋಡಿದರೆ ಚಾಮುಂಡಿಬೆಟ್ಟ ದೈವಿಕ ನೆಲೆ ಮಾತ್ರವಲ್ಲದೆ ಪ್ರೇಕ್ಷಣೀಯ ತಾಣವೂ ಹೌದು. ಸಮುದ್ರಮಟ್ಟದಿಂದ ಸುಮಾರು 3,489 ಅಡಿಯಷ್ಟು ಎತ್ತರದಲ್ಲಿದ್ದು, ಇಲ್ಲಿನ ಹಸಿರು ಹಚ್ಚಡ ಹೊದ್ದ ನಿಸರ್ಗ ಸೌಂದರ್ಯ ಕಣ್ಮನ ತಣಿಸುತ್ತದೆ. ಬೆಟ್ಟದಿಂದ ಕಂಡುಬರುವಂತಹ ಮೈಸೂರು ನಗರ ಸೇರಿದಂತೆ ಸುತ್ತಮುತ್ತಲಿನ ವಿಹಂಗಮ ನೋಟ ಮೈಪುಳಕಗೊಳಿಸುತ್ತದೆ. ಚಾಮುಂಡಿಬೆಟ್ಟದ ಈ ಪ್ರಾಕೃತಿಕ ಸೌಂದರ್ಯವನ್ನು ವೀಕ್ಷಿಸಲೆಂದೇ ಸದಾ ಪ್ರವಾಸಿಗರ ದಂಡು ಸುಳಿಯುತ್ತಿರುತ್ತದೆ. ಬ್ರಹ್ಮ-ವಿಷ್ಣು-ಮಹೇಶ್ವರರ ಶಕ್ತಿದೇವತೆಯಾಗಿ, ಅಷ್ಟದಳ ಪರ್ವತಗಳಲ್ಲಿ ಪಶ್ಚಿಮದಳದ ಮಧ್ಯಭಾಗದ ಶೃಂಗದಲ್ಲಿಯೇ ಆದಿಶಕ್ತಿ ಸ್ವರೂಪಿಣಿಯಾಗಿ ಮಹಿಷಾಸುರನೆಂಬ ದುಷ್ಟ ರಕ್ಕಸವನ್ನು ಸಂಹರಿಸಿ ಚಾಮುಂಡಾ ಎಂಬ ಹೆಸರಿನಿಂದ ಪ್ರಖ್ಯಾತಿ ಪಡೆದಿರುವ ಚಾಮುಂಡೇಶ್ವರಿಯ ನೆಲೆಯಾಗಿರುವ ಚಾಮುಂಡಿಬೆಟ್ಟಕ್ಕೆ 11ನೇ ಶತಮಾನದ ಇತಿಹಾಸವಿದೆ.

11ನೇ ಶತಮಾನದಲ್ಲಿ ಈ ಕ್ಷೇತ್ರವನ್ನು ಮೊರ್ಬಲದ ತೀರ್ಥ, ಮೊಬೈಲದ ತೀರ್ಥ ಕರೆಯಲಾಗುತ್ತಿತ್ತು ಎನ್ನಲಾಗಿದೆ. ಪೌರಾಣಿಕ ಕಥೆಯ ಪ್ರಕಾರ ಹಿಂದೆ ಮಹಿಷಾಸುರ ಎಂಬ ರಾಕ್ಷಸನಿದ್ದನು. ಈತ ಜನರಿಗೆ ಹಾಗೂ ಋಷಿ ಮುನಿಗಳಿಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದನಲ್ಲದೆ ಯಜ್ಞಯಾಗಾದಿಗಳಿಗೆ  ಅಡ್ಡಿಪಡಿಸುತ್ತಿದ್ದನು. ಹೀಗಿರಲು ಮಹಿಷಾಸುರನ ಉಪಟಳದಿಂದ ಬೇಸತ್ತ ಋಷಿ ಮುನಿಗಳು ತಮ್ಮನ್ನು ದುಷ್ಟ ರಾಕ್ಷಸನಿಂದ ಪಾರು ಮಾಡುವಂತೆ ಶಿವನ ಮೂಲಕ ಪಾರ್ವತಿ ಮೊರೆಹೋದರು.  ಪಾರ್ವತಿ ದೇವಿಗೆ ಎಲ್ಲ ದೇವತೆಗಳು  ಶಕ್ತಿ ತುಂಬಿದಾಗ ಚಾಮುಂಡೇಶ್ವರಿಯಾಗಿ ಸಿಂಹಾರೂಢಳಾಗಿ ಆಯುಧಗಳೊಂದಿಗೆ ತೆರಳಿ ದುಷ್ಟ ಮಹಿಷಾಸುರನನ್ನು ಕೊಂದಳೆಂದು ಪುರಾಣದಲ್ಲಿ ಹೇಳಲಾಗಿದೆ.

ಚಾಮುಂಡಿಬೆಟ್ಟದ ದೇವಾಲಯದಲ್ಲಿರುವ ಅಷ್ಟಭುಜದ ಶ್ರೀ ಚಾಮುಂಡೇಶ್ವರಿ ಮೂಯು ಪುರಾತನದ್ದು ಎಂದು ಹೇಳಲಾಗಿದ್ದು,  ಇದನ್ನು ಮಾರ್ಕಂಡೇಯ ಋಷಿಗಳು ಪ್ರತಿಷ್ಠಾಪಿಸಿದರೆಂಬ ಐತಿಹ್ಯವಿದೆ. ಇಲ್ಲಿರುವ ಭವ್ಯ ದೇವಾಲಯ ಹಳೆಬೀಡು ಮತ್ತು ಬೇಲೂರಿನ ಹೊಯ್ಸಳರ ಕಾಲದ ದೇವಾಲಯಗಳ ಮಾದರಿಯಲ್ಲಿದ್ದು, ಗೋಪುರ ದ್ರಾವಿಡ ಶೈಲಿಯಲ್ಲಿ ತ್ರಿಕೋನಾಕಾರದಲ್ಲಿದೆ. ಈ ಗೋಪುರವನ್ನು 1825ರಲ್ಲಿ ಮೈಸೂರು ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿ ನಕ್ಷತ್ರ ಮಾಲಿಕ ಆಭರಣ ನೀಡಿದರೆಂದು ಸಂಸ್ಕೃತ ದಾಖಲೆಯಲ್ಲಿ ಉಲ್ಲೇಖವಿದೆ. ಮತ್ತೊಂದು ದಾಖಲೆಯ ಪ್ರಕಾರ ಚಾಮುಂಡೇಶ್ವರಿ ದೇವಿಯ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿದ್ದ ನಾಲ್ಕನೇ ಚಾಮರಾಜ ಒಡೆಯರ್ ಒಮ್ಮೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಸಿಡಿಲು ಬಡಿಯಿತು. ಈ ಸಂದರ್ಭ ಅವರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದರೆಂದು ತದ ನಂತರ ಅವರ ತಲೆಯ ಕೂದಲೆಲ್ಲಾ ಉದುರಿತೆಂದೂ ಇದರಿಂದ ಇವರನ್ನು ಬೋಳ ಚಾಮರಾಜ ಒಡೆಯರ್ ಎಂದು ಕರೆಯಲಾಗುತ್ತಿತ್ತೆಂದೂ ಹೇಳಲಾಗಿದೆ.

See also  20 ಕೋಟಿ ಆದಾಯ ತಂದ ಪ್ರಿನ್ಸ್ ಖ್ಯಾತಿಯ ಗಂಡು ಹುಲಿ ಇನ್ನಿಲ್ಲ

ದೊಡ್ಡದೇವರಾಜ ಒಡೆಯರ್ ಅವರು ದೇವಾಲಯಕ್ಕೆ ತೆರಳಲು ಅನುಕೂಲವಾಗುವಂತೆ ಬೆಟ್ಟವೇರಿ ಹೋಗಲು ಒಂದು ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಿಕೊಟ್ಟಿದ್ದಾರೆ.  ಹಾಗೆಯೇ 700 ಮೆಟ್ಟಿಲುಗಳ ಬಳಿಯಲ್ಲಿ ಕಲ್ಲಿನ ಬೃಹತ್ ನಂದಿಯನ್ನು ಸ್ಥಾಪಿಸಿದ್ದಾರೆ.  16 ಅಡಿ ಎತ್ತರ 26 ಅಡಿ ಉದ್ದದ ಈ ಶಿಲಾಮೂರ್ತಿ ನಂದಿ ಬಹು ಅಪರೂಪದ್ದಾಗಿದೆ.  ಒಟ್ಟಾರೆ ಚಾಮುಂಡಿಬೆಟ್ಟವು ಪವಿತ್ರಕ್ಷೇತ್ರ ಮತ್ತು ಪ್ರವಾಸಿ ತಾಣವಾಗಿಯೂ ಗಮನಸೆಳೆಯುತ್ತಿದ್ದು, ಇಲ್ಲಿಂದ ಕಂಡು ಬರುವ ಸುಂದರ ನೋಟ ಮನನವೀರೇಳಿಸುವಂತೆ ಮಾಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು