ಮೈಸೂರು: ಆಷಾಡದಲ್ಲಿ ಸಾಮಾನ್ಯವಾಗಿ ಶುಭಕಾರ್ಯವನ್ನು ಮಾಡುವುದಿಲ್ಲ. ಆದರೆ ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ನಂಜನಗೂಡಿನ ನಂಜುಂಡೇಶ್ವರನಿಗೆ ಆಷಾಡದಲ್ಲಿಯೇ ಗಿರಿಜಾ ಕಲ್ಯಾಣ ಮಹೋತ್ಸವ ನಡೆಯುವುದು ವಿಶೇಷವಾಗಿದೆ.
ಒಂದುವಾರಗಳ ಕಾಲ ನಡೆಯುವ ಗಿರಿಜಾ ಕಲ್ಯಾಣ ಮಹೋತ್ಸವದಲ್ಲಿ ಪ್ರತಿದಿನ ಒಂದೊಂದು ಕಾರ್ಯಕ್ರಮಗಳು ನಡೆಯಲಿವೆ.ಪ್ರತಿವರ್ಷ ಮಿಥುನ ಮಾಸದಲ್ಲಿ ಪ್ರಾರಂಭವಾಗುವ ಗಿರಿಜಾ ಕಲ್ಯಾಣ ಒಂದು ವಾರಗಳ ಕಾಲ ನಡೆಯುತ್ತದೆ. ಈ ದೇವ ದಂಪತಿಗಳ ವಿವಾಹ ಮಹೋತ್ಸವಕ್ಕೆ ಲಕ್ಷಾಂತರ ಜನ ಪಾಲ್ಗೊಂಡು ಭಕ್ತಿ ಮೆರೆಯುತ್ತಾರೆ.
ಶುದ್ಧ ವೈದಿಕ ಸಂಪ್ರದಾಯದಲ್ಲಿ ಕಳಶ, ಕನ್ನಡಿ, ಎಣ್ಣೆ ಮಜ್ಜನ, ಆನೆ ಮೇಲೆ ಮೆರವಣಿಗೆ ನಡೆದರೆ, ಜಾನಪದ ನೃತ್ಯಗಳಾದ ಕಂಸಾಳೆ, ವೀರಗಾಸೆ ವಿವಾಹಕ್ಕೆ ಮೆರಗು ನೀಡುತ್ತದೆ.
ಕಲ್ಯಾಣೋತ್ಸವದ ಮೊದಲನೆಯ ದಿನ ವರಪೂಜೆ ಕಾರ್ಯಕ್ರಮ. ಪ್ರಾರಂಭದಲ್ಲಿ ಅರಿಶಿನ ಕುಂಕುಮ ಹಾಗೂ ಎಣ್ಣೆಯನ್ನು ಆನೆಯ ಮೇಲೆ ಮೆರವಣಿಗೆ ಮಾಡಿ ಇದೇ ಅರಿಶಿನ ಕುಂಕುಮವನ್ನು ರಥ ಬೀದಿಗಳಲ್ಲಿನ ಮನೆಯವರಿಗೆ ನೀಡಿ ಮದುವೆಗೆ ಕರೆಯುವುದು ಸಂಪ್ರದಾಯ. ನಂತರ ವರಪೂಜೆ ನಡೆಯುತ್ತದೆ. ಎರಡನೆಯ ದಿನ ಪ್ರಮುಖ ಘಟ್ಟ ಧಾರಾ ಕಾರ್ಯಕ್ರಮ ಅಂದು ನಾಂದಿ, ಧಾರಾ ಪೂಜೆ, ಗೃಹಯಜ್ಞ, ಕಾಶಿಯಾತ್ರೆಯ ನಂತರ ಪಾರ್ವತಿಯನ್ನು ವಿಷಕಂಠನೆನಿಸಿರುವ ನಂಜುಂಡೇಶ್ವರನಿಗೆ ಧಾರೆ ಎರೆಯಲಾಗುತ್ತದೆ. ನಂತರ ದೇವ ದಂಪತಿಗಳನ್ನು ಹಸೆಮಣೆಗೇರಿಸಿ ಭಕ್ತರು ತಮ್ಮ ಭಕ್ತಿಯನ್ನು ಮೆರೆಯುತ್ತಾರೆ.
ಶ್ರೀಕಂಠೇಶ್ವರ ದೇವಾಲಯದಲ್ಲಿ ಈ ಎರಡು ದಿನಗಳ ಕಾಲ ಮಾತ್ರ ಗಿರಿಜಾ ಶಂಕರರನ್ನು ಬೇರ್ಪಡಿಸಲಾಗುತ್ತದೆ. ಧಾರೆಯೊಂದಿಗೆ ಮತ್ತೆ ಒಂದಾಗುವ ಶ್ರೀಕಂಠೇಶ್ವರ ದಂಪತಿಗೆ ಮೂರನೆಯ ದಿನ ಉರುಟಣೆ, ಉಯ್ಯಾಲೋತ್ಸವಗಳನ್ನು ನಡೆಸಲಾಗುತ್ತದೆ. ನಾಲ್ಕನೆಯ ದಿನ ಪಾಕಿನಿ ಉತ್ಸವ ನಡೆಸಲಾಗುತ್ತದೆ. ಐದನೆಯ ದಿನ ನಾಗಬಲಿ, ಶೇಷಹೋಮ, ನಾಗವಲ್ಲಿ, ಗಜಾರೋಹಣ ಹಾಗೂ ವಧೂವರರ ಗೃಹಪ್ರವೇಶಕ್ಕೆ ಆದ್ಯತೆ ನೀಡಲಾಗುತ್ತದೆ. ಆರನೆಯ ದಿನ ವಿವಾಹಮಂಟಪದ ಕಂಬಗಳಿಗೆ ಪೂಜೆ ನೆರವೇರಿಸಿ ತೆಪ್ಪೋತ್ಸವ ಹಾಗೂ ಓಕಳಿ ಉತ್ಸವ ನಡೆಸಿ ಭಕ್ತರು ಸಂಭ್ರಮಿಸುತ್ತಾರೆ. ಏಳನೇ ದಿನ ಮತ್ತೆ ತೆಪ್ಪೋತ್ಸವದೊಂದಿಗೆ ಶ್ರೀಯವರ ಶಯನೋತ್ಸವವನ್ನೂ ನಡೆಸಿ ಗಿರಿಜಾ ಕಲ್ಯಾಣ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗುತ್ತಾರೆ.
ವಿವಾಹ ಕಾರ್ಯಕ್ರಮದಂದು ದೇವ ದಂಪತಿಗಳು ಹಸೆಮಣೆ ಏರಿದ ನಂತರ ಮುತ್ತೈದೆಯರಿಗೆ, ಅತಿಥಿ ಅಭ್ಯಾಗತರಿಗೆ ಗೌರಪೂರ್ವಕವಾಗಿ ಬಾಗಿನ ನೀಡುವ ಪದ್ಧತಿ ಇಲ್ಲಿ ನಡೆದುಕೊಂಡು ಬಂದಿದೆ. ಅಕ್ಕಿ, ತೆಂಗಿನಕಾಯಿ, ಬೇಳೆ, ಬೆಲ್ಲ, ಅರಿಶಿನ, ಕುಂಕುಮ ಹಾಗೂ ಬಳೆಯೊಂದಿಗಿನ ಬಾಗಿನವನ್ನು ನೀಡಲಾಗುತ್ತದೆ.