ಬಿ.ಎಂ.ಲವಕುಮಾರ್
ಈಗ ತುತ್ತೂರಿಯಾಕಾರದ ಹೂಬಿಟ್ಟು ಮಿಂಚುಬಳ್ಳಿಯಾಗಿ ಮನೆಯ ಛಾವಣಿಯಲ್ಲಿ, ಹೂತೋಟದ ಮರಗಳಲ್ಲಿ, ಚಪ್ಪರಗಳಲ್ಲಿ, ಕಾಂಪೌಂಡ್‍ನಲ್ಲಿ ಹೀಗೆ ಎಲ್ಲೆಂದರಲ್ಲಿ ಪಿರೋಸ್ಟೇಜಿಯಾ ವೀನ್ ಸ್ಟಾ ಎಂಬ ಸುಂದರ ಹೂಬಳ್ಳಿ ಎಲ್ಲರ ಗಮನಸೆಳೆಯುತ್ತದೆ.
ಇದನ್ನು ಕೆಲವರು ಜಿಲೇಬಿ ಹೂವೆಂದು ಕರೆದರೆ, ಮತ್ತೆ ಕೆಲವರು ತುತ್ತೂರಿ ಹೂ ಎಂದೇ ಕರೆಯುತ್ತಾರೆ. ಈ ಹೂಬಳ್ಳಿ ಚಪ್ಪರದಲ್ಲೋ, ಕಾಂಪೌಂಡ್‍ನಲ್ಲೋ ಹಬ್ಬಿ ಹೂಬಿಟ್ಟಿತೆಂದರೆ ಅದರ ಸೌಂದರ್ಯವನ್ನು ಸವಿಯುವುದೇ ಒಂದು ರೀತಿಯ ಮಜಾ. ಹಾಗಾಗಿ ಇದನ್ನು ಮನೆಯ ಮುಂದಿನ ಚಿನ್ನದ ಮಳೆಗೆರೆವ ಹೂಬಳ್ಳಿ ಎಂದರೂ ತಪ್ಪಾಗಲಾರದು. ಸದಾ ಹೂಬಿಟ್ಟು ಕಂಗೊಳಿಸುತ್ತಾ ಮನೆಗೆ, ಉದ್ಯಾನವನಕ್ಕೆ ಮೆರಗು ತರುವ ಈ ಹೂಬಳ್ಳಿ ಮೂಲತಃ ಬ್ರೆಜಿಲ್ ದೇಶದ್ದು ಎನ್ನಲಾಗಿದೆ.
ಉಷ್ಣವಲಯ ಹಾಗೂ ಸಮಶೀತೋಷ್ಣವಲಯದಲ್ಲಿ ಹುಲುಸಾಗಿ ಬೆಳೆಯುತ್ತದೆ. ನಮ್ಮ ದೇಶದಲ್ಲಿ ಕರ್ನಾಟಕ, ಕೇರಳ, ತಮಿಳುನಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ದಕ್ಷಿಣ ಅಮೇರಿಕಾದಲ್ಲಿ ಪಿರೋಸ್ಟೆಜಿಯಾ ವೀನ್ ಸ್ಟಾಗೆ ಸೇರಿದ ಐದು ತಳಿಗಳಿವೆ ಎಂದು ಹೇಳಲಾಗಿದೆ. ಮನೆಯ ಮುಂದೆ ಚಪ್ಪರ ಹಾಕಿ ಹಬ್ಬಿಸಿದ್ದೇ ಆದರೆ ಸದಾ ಹೂಬಿಟ್ಟು ಮನೆಗೆ ಶೋಭೆ ತರುವುದರೊಂದಿಗೆ ತಂಪು ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಇದನ್ನು ಬೃಂದಾವನಗಳಲ್ಲಿ ಸುಂದರವಾಗಿ ವಿವಿಧ ವಿನ್ಯಾಸದಲ್ಲಿ ಹಬ್ಬಿಸಲಾಗುತ್ತದೆ. ಇದು ಹೂಬಿಟ್ಟಾಗ ತನ್ನ ಚೆಲುವಿನಿಂದ ದೂರದಿಂದಲೇ ಪುಷ್ಪಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತದೆ. ಸಾಮಾನ್ಯವಾಗಿ ಜನವರಿಯಿಂದ ಏಪ್ರಿಲ್ ನಡುವೆ ಬಳ್ಳಿಯ ತುಂಬಾ ಕಡು ಕೇಸರಿ ಬಣ್ಣದ ತುತ್ತೂರಿ ಆಕಾರದ ಹೂಗಳು ಗೊಂಚಲು ಗೊಂಚಲಾಗಿ ಬಳ್ಳಿ ತುಂಬಾ ಅರಳಿ ಕಂಗೊಳಿಸುವುದರೊಂದಿಗೆ ನೋಡುಗರನ್ನು ತನ್ನತ್ತ ಸೆಳೆಯುತ್ತವೆ.
ಬಳ್ಳಿಯನ್ನೇ ಕತ್ತರಿಸಿ ನೆಡುವ ಮೂಲಕ ಸಸ್ಯಾಭಿವೃದ್ಧಿಯನ್ನು ಮಾಡಬಹುದಾಗಿದೆ. ಒಂದು ವರ್ಷವಾಗಿರುವ ಬಳ್ಳಿಯನ್ನು ಕತ್ತರಿಸಿ ಸುಮಾರು ಇಪ್ಪತ್ತು ಸೆಂಟಿ ಮೀಟರ್ ಉದ್ದಕ್ಕೆ ತುಂಡುಗಳನ್ನಾಗಿ ಮಾಡಿ ನಾವು ಆಯ್ಕೆ ಮಾಡಿಕೊಂಡ ಸ್ಥಳದಲ್ಲಿ ಸುಮಾರು ಒಂದೂವರೆ ಅಡಿಯಷ್ಟು ಉದ್ದ ಹಾಗೂ ಅಗಲದ ಗುಂಡಿ ತೋಡಿ ಅದರಲ್ಲಿ ಕೊಟ್ಟಿಗೆ ಗೊಬ್ಬರ ಹಾಗೂ ಮಣ್ಣನ್ನು ಬೆರೆಸಿ ನಾಟಿ ಮಾಡಬೇಕು. ಮಣ್ಣಿನ ತೇವಾಂಶ ನೋಡಿಕೊಂಡು ನೀರು ಹಾಕಬೇಕು. ಕೆಲವು ದಿನಗಳಲ್ಲಿ ನೆಟ್ಟ ಬಳ್ಳಿ ಚಿಗುರೊಡೆದು ಹಬ್ಬಲಾರಂಭಿಸುತ್ತದೆ ಈ ಸಂದರ್ಭ ಆಧಾರ ನೀಡಿ ಹಬ್ಬಿಸಬೇಕು. ಇನ್ನು ಪಾಲಿಥೀನ್ ಚೀಲದಲ್ಲಿ ಬಳ್ಳಿಯನ್ನು ಕತ್ತರಿಸಿ ಒಂದು ಚೀಲದಲ್ಲಿ ಎರಡರಿಂದ ಮೂರು ಬಳ್ಳಿಯನ್ನು ನೆಡಬೇಕು ಅದು ಚಿಗುರಿದ ಬಳಿಕ ನಮಗೆ ಎಲ್ಲಿ ಬೇಕೋ ಅಲ್ಲಿ ಸೂಕ್ತ ಸ್ಥಳದಲ್ಲಿ ಅದನ್ನು ನೆಟ್ಟು ಬೆಳೆಸಬಹುದು. ಬಳ್ಳಿ ನೆಟ್ಟು ಒಂದೆರಡು ವರ್ಷದಲ್ಲಿ ಹೂಬಿಡಲು ಆರಂಭಿಸುತ್ತದೆ. ಅಷ್ಟೇ ಅಲ್ಲ ಹೂಗಳು ಹೆಚ್ಚು ಸಮಯ ಬಳ್ಳಿಯಲ್ಲಿದ್ದು ಮನೆಯಂಗಳದ ಚೆಲುವನ್ನು ಇಮ್ಮಡಿಗೊಳಿಸುತ್ತವೆ.
ಹಾಗೆ ನೋಡಿದರೆ, ಮನೆಯ ಸುತ್ತ ಒಂದಷ್ಟು ಜಾಗವಿದ್ದರೆ ಹೂಗಿಡಗಳನ್ನು ನೆಟ್ಟು ಬೆಳೆಸುವ ಹವ್ಯಾಸ ಬೆಳೆಸಿಕೊಂಡರೆ ಅದರ ಒಡನಾಟದಲ್ಲಿ ಸಮಯ ಕಳೆಯುವುದರಿಂದ ಮಾನಸಿಕವಾಗಿಯೂ ನೆಮ್ಮದಿಯಾಗಿರಲು ಸಾಧ್ಯವಿದೆ.
ಮೊಬೈಲ್ ಬದಿಗಿಟ್ಟು ಗಿಡ ನೆಡುವುದು, ಕಳೆ ತೆಗೆಯುವುದು ನೀರು ಹಾಕುವುದು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಸಮಯ ಸರಿಯುವುದೇ ತಿಳಿಯುವುದಿಲ್ಲ. ಜತೆಗೆ ಗಿಡಗಳ ಜತೆಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ಸಂತಸವೂ ಸಿಗುತ್ತದೆ.
ಹಳ್ಳಿಯಲ್ಲಿದ್ದು, ಮನೆ ಸುತ್ತಮುತ್ತ ಜಾಗವಿದ್ದರೆ ಹೂಗಿಡ ನೆಡಬಹುದು. ನಾವು ಪಟ್ಟಣದಲ್ಲಿರುವುದು ನಮಗೆಲ್ಲಿ ಜಾಗವಿದೆ ಎಂದು ಕೆಲವರು ಕೇಳಬಹುದು. ನೀವು ನಿಮ್ಮ ಮನೆ ಮುಂದೆ ಪುಟ್ಟ ಗಿಡ ನೆಟ್ಟು ಪ್ರತಿದಿನ ನೀರು ಹಾಕುತ್ತಾ ಅದು ಬೆಳೆಯುವುದನ್ನು ನೋಡುತ್ತಾ ಖುಷಿ ಪಡಬಹುದು. ಮನೆಯ ಟರೇಸ್‍ನಲ್ಲಿ ಕುಂಡಗಳನ್ನಿಟ್ಟು ಮನೆಯಲ್ಲಿ ಬಳಸಿ ಚೆಲ್ಲುವ ನೀರನ್ನೇ ಗಿಡಗಳಿಗೆ ಹಾಕಬಹುದಾಗಿದೆ. ಇದರಿಂದ ಹೂಗಿಡಕ್ಕಾಗಿಯೇ ಹೆಚ್ಚಿನ ನೀರು ವ್ಯಯಿಸುವ ಅಗತ್ಯವಿರುವುದಿಲ್ಲ. ಕುಂಡಗಳಲ್ಲಿ ಕ್ಯಾಕ್ಟಸ್ ಜಾತಿಯ ಗಿಡಗಳನ್ನು ನೆಡುವುದರಿಂದ ಅವು ಹೆಚ್ಚಿನ ನೀರು ಮತ್ತು ಗೊಬ್ಬರವನ್ನು ಅಪೇಕ್ಷಿಸುವುದಿಲ್ಲ. ಜತೆಗೆ ಅವುಗಳ ನಿರ್ವಹಣೆಯೂ ಕಷ್ಟವಾಗುವುದಿಲ್ಲ.
ಹಾಗಾದರೆ ಇನ್ನೇಕೆ ತಡ ಮಾಡುತ್ತೀರಾ ಸಾಧ್ಯವಾದರೆ ಮನೆ ಬಳಿ ಜಾಗವಿದ್ದರೆ ಈಗಲೇ ಹೂಗಿಡ, ಬಳ್ಳಿಯನ್ನು ನೆಟ್ಟು ಪೋಷಿಸಲು ಆರಂಭಿಸಿ… ಅದು ಬೆಳೆಯುತ್ತಾ ಹೋದಂತೆ ನಿಮ್ಮಲ್ಲೂ ಸಂತಸ ಹೆಚ್ಚಾಗುತ್ತಾ ಹೋಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.