ಜಾಗತಿಕ ಮಟ್ಟದಲ್ಲಿ ಹವಮಾನ ಬದಲಾವಣೆಯಾಗುವ ಕಾರಣ ಪಕ್ಷಿಗಳು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವಲಸೆ ಹೋಗುತ್ತವೆ. ಅವು ತಮ್ಮ ಇರುವಿಕೆಯ ಜಾಗ ಹಾಗೂ ಬದುಕಲು ಬೇಕಾಗುವ ವಾತಾವರಣವನ್ನು ಹುಡುಕಿಕೊಂಡು ಮೈಲಿಗಟ್ಟಲೆ ಅಂದರೆ ದೇಶದಿಂದ ದೇಶ ಅಥವಾ ರಾಷ್ಟ್ರದಿಂದ ರಾಷ್ಟ್ರಕ್ಕೆ, ಪ್ರಪಂಚದ ಯಾವುದೇ ಮೂಲೆಯಿಂದ ಮತ್ತೊಂದು ಮೂಲೆಗೆ ಹೋಗುತ್ತವೆ. ಹೀಗೆ ವಲಸೆ ಬರುವ ಪಕ್ಷಿಗಳು ತಂಗಲು ಆರಿಸಿಕೊಳ್ಳುವ ಜಾಗಗಳು ಬಹುತೇಕ ನಿರ್ದಿಷ್ಟ ಪ್ರದೇಶಗಳಾಗಿರುತ್ತದೆ.
ರಂಗನತಿಟ್ಟು ಪಕ್ಷಿಧಾಮ, ಮಂಡಗದ್ದೆ ಪಕ್ಷಿಧಾಮ, ಮಾಗಡಿ ಪಕ್ಷಿಧಾಮ, ಗುಡವಿ ಪಕ್ಷಿಧಾಮ ಹೀಗೆ ಹತ್ತು ಹಲವು ನಿರ್ದಿಷ್ಟ ಪ್ರದೇಶಗಳನ್ನು ಕರ್ನಾಟಕದಲ್ಲಿ ಗುರುತಿಸಲಾಗಿದೆ. ಅದರಲ್ಲಿ ಒಂದು ತುಂಗಭದ್ರಾ ಹಿನ್ನೀರಿನಲ್ಲಿ ಕಾಣಿಸಿಕೊಳ್ಳುವ ಹಕ್ಕಿಗಳ ದಿಂಡು. ಇಂತಹ ಹಕ್ಕಿಗಳ ಗುಂಪಿನಲ್ಲಿ ಸುಮಾರು 40 ವರ್ಷಗಳ ನಂತರ ಅಪರೂಪದ ಪಕ್ಷಿಯೊಂದು ವಿಜಯನಗರ ಜಿಲ್ಲೆಯ ತುಂಗಭದ್ರಾ ಹಿನ್ನೀರಿನಲ್ಲಿ ಕೆಲ ದಿನಗಳ ಹಿಂದೆ ಕಾಣಿಸಿಕೊಂಡಿದೆ.
ಏವಿಯನ್ ಪ್ರಬೇಧದ ಭಾರತೀಯ ಸ್ಕಿಮ್ಮರ್ ಪಕ್ಷಿಗಳಲ್ಲಿ ಒಂದಿಷ್ಟು ಮಾತ್ರ ಅರಣ್ಯದಲ್ಲಿ ಉಳಿದಿರುವ ಈ ಪಕ್ಷಿಯನ್ನು, ನದಿ ದಂಡೆ ಮೇಲಿನ ಮರಳಿನ ಮೇಲೆ ಹಳದಿ- ಆರೆಂಜ್ ಬಣ್ಣದ ಪಕ್ಷಿಯೊಂದು ಕುಳಿತಿರುವುದನ್ನು ಗಮನಿಸಿ ಅಂಕಸಮುದ್ರ ಮೂಲದ ವಿಜಯ್ ಇಟಗಿ ತಮ್ಮ ಜೂಮ್ ಕ್ಯಾಮರಾದಿಂದ ನದಿ ದಂಡೆ ಮೇಲಿನ ಮರಳ ಮೇಲಿದ್ದ ಪಕ್ಷಿಯ ಚಿತ್ರವನ್ನು ಸೆರೆ ಹಿಡಿದಿದ್ದು, ಕುತೂಹಲದಿಂದಾಗಿ ಬೆಂಗಳೂರಿನಲ್ಲಿದ್ದ ಪಕ್ಷಿ ತಜ್ಞ ಡಾ.ಸುಬ್ರಹ್ಮಣ ಅವರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ದಾಖಲೆಗಳನ್ನು ಪರಿಶೀಲಿಸಿದಾಗ, ಈ ಹಿಂದೆ 1970ರ ಮಧ್ಯಭಾಗದಲ್ಲಿ ಸ್ಕಿಮ್ಮರ್ ಪಕ್ಷಿ ಕಾಣಿಸಿಕೊಂಡಿತ್ತು. ಕೊನೆಯ ಬಾರಿ ಕಾರವಾರದ ಹತ್ತಿರ ಕಾಣಿಸಿಕೊಂಡಿತ್ತು. ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಎಂದು ಇಟಗಿ ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಉತ್ತರ ಪ್ರದೇಶದ ಚಂಬಲ್ ನದಿ ಮತ್ತು ಮಧ್ಯಪ್ರದೇಶದಲ್ಲಿ ಸ್ಕಿಮ್ಮರ್ ಕಂಡುಬರುತ್ತದೆ. ಆದರೆ, ದಕ್ಷಿಣದಲ್ಲಿ ಈ ಪಕ್ಷಿ ಕಂಡುಬಂದ ದಾಖಲೆಗಳಿಲ್ಲ. ಆದಾಗ್ಯೂ, ಆಂಧ್ರಪ್ರದೇಶದ ಕಾಕಿನಾಡನಲ್ಲಿ ಆಗ್ಗಾಗೆ ಕಾಣಿಸಿಕೊಳ್ಳುತ್ತಿದ್ದವು. ತುಂಗಭದ್ರಾ ನದಿಯ ಬಳಿ ಮರಳಿನ ದಂಡೆ ಮೇಲೆ ಈ ಪಕ್ಷಿಗಳು ಕಂಡುಬಂದಿದೆ. ಸ್ಕಿಮ್ಮರ್ ಪಕ್ಷಿಗಳು ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಕನ್ಸರ್ ವೇಟಿವ್ ನೇಟ್ ವರ್ಕ್ (ಐಯುಸಿಎನ್) ನಿಂದ ಅಳಿವಿನಂಚಿರುವ ಪಕ್ಷಿಗಳು ಪಟ್ಟಿಯಲ್ಲಿವೆ ಎಂದು ತಜ್ಞರು ಈ ಪಕ್ಷಿಯ ಕುರಿತಂತ ಒಂದು ಸವಿಸ್ತಾರ ನೋಟವನ್ನು ಹೊರಬಿಟ್ಟಿದ್ದಾರೆ.