News Kannada
Thursday, February 09 2023

ನುಡಿಚಿತ್ರ

ಇಂ”ಧನ” ಸೋರಿಕೆಗೆ ಕಡಿವಾಣವೆಂದು??

Photo Credit :

ಇಂ

ಕೊರೋನ ಸಂಕಷ್ಟದಿಂದ ಈಗಷ್ಟೆ ವಿಮುಕ್ತರಾಗಿ ಹೊಸ ಕನಸುಗಳೊಂದಿಗೆ , ಹೊಸ ಆಕಾಂಕ್ಷೆಗಳಿಗೆ ಮತ್ತೆ ತೆರೆದುಕೊಳ್ಳುತ್ತಿರುವ ಜನಸಾಮಾನ್ಯನಿಗೆ ಗಾಯದ ಮೇಲೆ ಬರೆ ಎಳೆದಂತೆ ಪೆಟ್ರೋಲ್-ಡೀಸೆಲ್ ದರದ “ವಿರಾಟ”ವತಾರ ಭಾಸವಾಗುತ್ತಿದೆ. ಸಾಲದೆಂಬಂತೆ ದಿನಬಳಕೆಯ ಅನಿಲ ಸಿಲಿಂಡರ್ ಬೆಲೆಯೂ ವಾರಗಳ ಅಂತರದಲ್ಲಿ ಹಿಗ್ಗುತ್ತಿದೆ. ದೈನಂದಿನ ವ್ಯಾಪಾರ-ವಹಿವಾಟುಗಳು ನಿರೀಕ್ಷಿತ ವೇಗ ಪಡೆದುಕೊಳ್ಳುವ ಹಂತದಲ್ಲಿರುವಾಗಲೇ ತೈಲ ದರ ಭರ್ಜರಿ ಪ್ರಹಾರ ನಡೆಸುತ್ತಿರುವುದು ಗ್ರಾಹಕರನ್ನು ಹೈರಾಣಾಗಿಸಿದೆ. ಬಹುತೇಕ ನಗರಗಳಲ್ಲಿ ಶತಕದ ಸಮೀಪ ತಲುಪಿರುವ ಇಂ”ಧನ” ಸಾರ್ವಕಾಲಿಕ ಗರಿಷ್ಟ ಮಟ್ಟ ತಲುಪಿದೆ. ತನ್ನೆಲ್ಲಾ ಮಿತಿಗಳನ್ನು ಮೀರಿ ಪ್ರತಿ ದಿನ ಸ್ಪರ್ಧೆಗಿಳಿದಂತೆ ದಾಖಲೆಗಳನ್ನು ಬರೆಯುತ್ತಿರುವ ಇಂಧನ ಬೆಲೆಯ ಕರಡಿಕುಣಿತಕ್ಕೆ ಕಡಿವಾಣವೆಂತು ಎಂಬುದು ಗ್ರಾಹಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

 

ದೇಶದ ಬಡ ಮತ್ತು ಮಧ್ಯಮ ವರ್ಗಕ್ಕಂತೂ ಬೆಲೆ ಏರಿಕೆ ನುಂಗಲಾರದ ತುತ್ತಾಗಿದೆ. ಈ ಅಗ್ಗದ ಜೀವನದ ಭಾರ ಹೊರಲಾರದಂತಾಗಿದೆ. ಈ ಕುರಿತು ಸಮಯೋಚಿತ ಪರಾಮರ್ಶೆ ಅತ್ಯಗತ್ಯ. ಸ್ವತಃ ದೇಶದ  ಪ್ರಧಾನಿಗಳೇ ಈ ಕುರಿತು ಕಳವಳ ವ್ಯಕ್ತಪಡಿಸಿದರೂ ಸೂಕ್ತ ಕ್ರಮ ಜಾರಿಯಾಗದಿರುವುದು ಜನಸಾಮಾನ್ಯನಲ್ಲಿ ಅಸಮಾಧಾನ ಸೃಷ್ಟಿಸಿದೆ. ಬಜೆಟ್ ಸಂಜೀವಿನಿಯಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಕೋವಿಡ್-19 ಆಕ್ರಮಣದಿಂದಾದ ಆರ್ಥಿಕ ಅನಾಹುತಗಳನ್ನ ಅವಲೋಕಿಸುವ ಸಂಧರ್ಭ ಅದರ ಮುಂದುವರಿದ ಭಾಗದಂತೆ ಜನಸಾಮಾನ್ಯನಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ.  ಸಂಕಷ್ಟದಲ್ಲಿರುವ ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಕೇವಲ ಇಂಧನದ ಮೇಲಿನ ತೆರಿಗೆ, ಸೆಸ್ ಹೇರಿಕೆಯ ಹೊರತಾಗಿ ಅನ್ಯ ಮಾರ್ಗಗಳ ಶೋಧ ಅನಿವಾರ್ಯ.ಇದರಿಂದ ಗ್ರಾಹಕರ ಮೇಲಿನ ಹೊರೆಯನ್ನು ಕೊಂಚ ಮಟ್ಟಿಗಾದರೂ ತಗ್ಗಿಸಬಹುದು.

 

ಪ್ರಸ್ತುತ ಪೆಟ್ರೋಲ್-ಡೀಸೆಲ್-ಅನಿಲಗಳು ಬರಿಯ ಇಂಧನಗಳಾಗಿ ಉಳಿದಿಲ್ಲ. ಅವು ದೈನಂದಿನ ಜೀವನದ ಅಗತ್ಯ ಅವಶ್ಯಕತೆಗಳಲ್ಲೊಂದಾಗಿ ಬದಲಾಗಿವೆ. ಅವನ್ನು ನೆಚ್ಚಿಕೊಂಡು ಬಹಳಷ್ಟು ವಹಿವಾಟುಗಳು ಲಕ್ಷಾಂತರ ಜೀವಗಳಿಗೆ ಉದ್ಯೋಗ ನೀಡುತ್ತಿವೆ. ಆಟೋಮೊಬೈಲ್ ಕ್ಷೇತ್ರವನ್ನು ಒಳಗೊಂಡಂತೆ ಬಹುತೇಕ ಯಾಂತ್ರಿಕ ಉದ್ಯಮಗಳು ತೈಲೋತ್ಪನ್ನಗಳನ್ನೇ ಅವಲಂಬಿಸಿವೆ. ಬೆಲೆ ಏರಿಕೆಯಿಂದ ಅವುಗಳ ಕಾರ್ಯನಿರ್ವಹಣೆಗೂ ಅಡಚಣೆಯಾಗುವುದು ಸಹಜ. ಇದರಿಂದ ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಪೂರೈಕೆಗಳಲ್ಲಿ ವ್ಯತ್ಯಯಕ್ಕೆ ಕಾರಣವಾಗಲೂಬಹುದು. ಒಂದು ಕಡೆ ತೆರಿಗೆ ಹೇರಿ ಅನುದಾನದ ಕ್ರೋಡೀಕರಣ ಮತ್ತೊಂದೆಡೆ ಮೇಲಿನ ಎಲ್ಲಾ ಕಾರಣಗಳಿಂದ  ನಷ್ಟದಲ್ಲಿರುವ ಕ್ಷೇತ್ರಗಳಿಗೆ ಅದೇ ಅನುದಾನದ ಮರುಪೂರೈಕೆ. ಇತ್ತ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ, ಉಜ್ವಲದಂತಹಾ ಯೋಜನೆಯ ಮೂಲಕ ಸಿಲಿಂಡರ್ ಖರೀದಿಗೆ ಪ್ರೋತ್ಸಾಹ, ಅತ್ತ ಇವೆರಡರ ಜೀವಾಳ ಇಂಧನ, ಅನಿಲ ಬೆಲೆ ಏರಿಕೆ. ಇದಂತೂ ವಿಪರ್ಯಾಸವೇ ಸರಿ.

 

ದೇಶದ ಆರ್ಥಿಕ ಬೆಳವಣಿಗೆಗೆ ಇಂಧನದ ಕೊಡುಗೆ ಅಪಾರ. ಆದರೆ ದೇಶದ ದೈನಂದಿನ ವಹಿವಾಟುಗಳಿಗೆ ತೊಡಕಾಗದಂತೆ ಇಂಧನ ಬೆಲೆಯ ಗತಿಯನ್ನು ನಿಯಂತ್ರಿಸುವುದು ಅತ್ಯವಶ್ಯಕ. ಜಿ.ಎಸ್.ಟಿ ವ್ಯಾಪ್ತಿಗೆ ತೈಲವನ್ನೂ ತರಬೇಕೆನ್ನುವ ಕೂಗು ದೇಶದೆಲ್ಲೆಡೆ ಬಲವಾಗಿದೆ. ಆರ್ಥಿಕ ತಜ್ಞರ ಅಭಿಪ್ರಾಯವೂ ಈ ಕುರಿತು ಸಕಾರಾತ್ಮಕವಾಗಿರುವುದರಿಂದ ಈ ಕುರಿತು ಸರಕಾರದ ಮಟ್ಟದಲ್ಲಿ ಆಲೋಚನೆ ಮತ್ತು ಅವಲೋಕನದೊಂದಿಗೆ ದಿಟ್ಟ ಜನಪರ ನಿರ್ಧಾರ ಕೈಗೊಳ್ಳಬೇಕಾಗಿದೆ.

See also  ಬಿರು ಬೇಸಿಗೆಯಲ್ಲೂ ಮೃಗಾಲಯದ ಪ್ರಾಣಿಗಳಾಗಿವೆ ಕೂಲ್ ಕೂಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು