ವಿಶ್ವಹುಲಿ ದಿನವನ್ನಾಗಿ ಜುಲೈ 29ನ್ನು ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ಹುಲಿಗಳನ್ನು ಕಾಡಿನಲ್ಲಿ ನೋಡಬೇಕೆಂದು ಇಷ್ಟಪಡುವವರೆಲ್ಲ ಬಂಡೀಪುರದತ್ತ ಹೆಜ್ಜೆ ಹಾಕುತ್ತಾರೆ. ಇದಕ್ಕೆ ಕಾರಣವೂ ಇದೆ. ಇಲ್ಲಿಗೆ ತೆರಳಿದವರಿಗೆಲ್ಲ ಹುಲಿಗಳ ಆಟ, ಗಂಭೀರ ನಡಿಗೆ ಎಲ್ಲವೂ ಗಮನಸೆಳೆಯುತ್ತಿದೆ.
ಈ ಹಿಂದೆ ಇಲ್ಲಿದ್ದ ಪ್ರಿನ್ಸ್ ಎಂಬ ಹುಲಿ ಬಂಡೀಪುರ ಅಭಯಾರಣ್ಯದ ರಾಯಭಾರಿ ಎಲ್ಲರ ಗಮನಸೆಳೆಯುತ್ತಿತ್ತು. ಅದರ ಕಾಲಾನಂತರ ಹಲವು ಹುಲಿಗಳು ಕಾಣಿಸುವುದರೊಂದಿಗೆ ಪ್ರಾಣಿ ಪ್ರಿಯರ ಮನತಣಿಸುತ್ತಾ ಬಂದಿವೆ. ಇದೀಗ ಬಂಡೀಪುರ ಹಸಿರು ಹಚ್ಚಡವನ್ನು ಹೊದ್ದು ಕಂಗೊಳಿಸುತ್ತಿದ್ದು ಅದರ ನಡುವೆ ಕಂಡು ಬರುವ ಹುಲಿಗಳು ನೋಡುಗರ ಕಣ್ಮನ ತಣಿಸುತ್ತಿವೆ.
ಹಾಗೆನೋಡಿದರೆ ಬಂಡೀಪುರದ ಪ್ರಮುಖ ಆಕರ್ಷಣೆಯೇ ಹುಲಿಗಳು. ಈ ಹುಲಿಗಳನ್ನು ನೋಡಲೆಂದೇ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವ ಪ್ರವಾಸಿಗರು ಸಫಾರಿಗೆ ತೆರಳುವಾಗ ಹುಲಿಗಳನ್ನು ಕಂಡರೆ ಖುಷಿಪಡುತ್ತಾರೆ. ಗಂಭೀರವಾಗಿ ನಡೆಯುವ ಹುಲಿಗಳು, ತಾಯಿ ಹುಲಿಯೊಂದಿಗೆ ಮರಿಗಳ ಆಟ, ನೀರು ಕುಡಿಯುವ ದೃಶ್ಯಗಳು ಹೀಗೆ ಒಂದೇ ಎರಡೇ ಹತ್ತಾರು ದೃಶ್ಯಗಳು ಎಲ್ಲರ ಗಮನಸೆಳೆಯುತ್ತಿವೆ.
ಕರ್ನಾಟದಲ್ಲಿಯೇ ಅತೀ ಹೆಚ್ಚು ಹುಲಿಗಳು ಬಂಡೀಪುರದಲ್ಲಿವೆ. ಸದ್ಯ 140ಕ್ಕೂ ಹುಲಿಗಳಿವೆ ಎನ್ನಲಾಗಿದ್ದು, ಈ ಪೈಕಿ ಕೆಲವೇ ಕೆಲವು ಹುಲಿಗಳು ಮಾತ್ರ ಕಾಣಸಿಗುತ್ತಿವೆ. ಈ ಪೈಕಿ ಹಲವರ ಕ್ಯಾಮರಾ ಕಣ್ಣಿಗೆ ಹಲವು ಹುಲಿಗಳು ಕಾಣಸಿಕ್ಕಿದ್ದು ಅವುಗಳೆಲ್ಲವೂ ವೈರಲ್ ಆಗಿವೆ. ಹೆಚ್ಚಿನವರು ಇಲ್ಲಿರುವ ಮಾದೇಶ ಹುಲಿಯ ದರ್ಶನಕ್ಕಾಗಿ ಹಾತೊರೆಯುವುದನ್ನು ಕೂಡ ಕಾಣಬಹುದು.
ಈ ಹಿಂದೆ ವೀಕೆಂಡ್ ಟ್ರಿಪ್ ಹೋದ ಪ್ರವಾಸಿಗರಿಗೆ ಸಫಾರಿ ವೇಳೆ ಎರಡು ದಿನದಲ್ಲಿ 13 ಹುಲಿಗಳ ದರ್ಶನವಾಗಿದ್ದನ್ನು ನಾವು ಸ್ಮರಿಸಬಹುದು. ಸಾಮಾನ್ಯವಾಗಿ ಬಂಡೀಪುರದ ಆನೆಕಟ್ಟೆ, ಸಿದ್ದರಾಯಕಟ್ಟೆ, ಕಡಮತ್ತೂರುಕಟ್ಟೆ, ಮಿನಿಸ್ಟ್ರೀಗುತ್ತಿ ಮೊದಲಾದ ಪ್ರದೇಶಗಳಲ್ಲಿ ಹುಲಿಗಳು ಕಂಡು ಬರುತ್ತಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಬಂಡೀಪುರ ಹುಲಿಗಳ ಆವಾಸ ತಾಣವಾಗಿದ್ದು ಇಲ್ಲಿಗೆ ತೆರಳುವ ಪ್ರವಾಸಿಗರಿಗೆ ಸಫಾರಿ ವೇಳೆ ಹುಲಿಗಳು ಕಾಣಸಿಗುವುದಂತು ಖಚಿತ.