ವೇದ ಸೇರಿದಂತೆ ಹಲವು ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್. ವೇದ ಶೂಟಿಂಗ್ ನಡುವೆಯೂ ಅವರು ಇನ್ನೂ ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಒಂದು ಚಿತ್ರಕ್ಕೆ ಶ್ರೀನಿ ನಿರ್ದೇಶನ ಮಾಡುತ್ತಿದ್ದರೆ, ಮತ್ತೊಂದು ಸಿನಿಮಾವನ್ನು ಸಚಿನ್ ಎನ್ನುವವರು ನಿರ್ದೇಶನ ಮಾಡಲಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಮತ್ತೊಂದು ಹೊಸ ಸುದ್ದಿ ನೀಡಿದ್ದಾರೆ ಶಿವರಾಜ್ ಕುಮಾರ್. ಅದು ನಿಜಕ್ಕೂ ಅಚ್ಚರಿ ಮೂಡಿಸುವಂತಹ ಸುದ್ದಿ ಆಗಿದೆ.
ಶಿವರಾಜ್ ಕುಮಾರ್ ಪುತ್ರಿ ಈಗಾಗಲೇ ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟಾಗಿದೆ. ಹನಿಮೂನ್ ಎಂಬ ವೆಬ್ ಸಿರೀಸ್ ಅನ್ನು ಅವರು ನಿರ್ಮಾಣ ಮಾಡಿದ್ದಾರೆ. ಅಲ್ಲದೇ, ಈ ಹಿಂದೆ ಪ್ರದೀಪ್ ಜೊತೆಗೂಡಿ ಲೂಸ್ ಕನೆಕ್ಷನ್ ಎಂಬ ವೆಬ್ ಸೀರಿಸ್ ಕೂಡ ಮಾಡಿದ್ದರು. ಇದೀಗ ಮತ್ತೊಂದು ವೆಬ್ ಸೀರಿಸ್ ಮಾಡಲು ಮುಂದಾಗಿದೆ ಈ ಟೀಮ್. ಶಿವರಾಜ್ ಕುಮಾರ್ ಅವರಿಗಾಗಿಯೇ ಕತೆಯನ್ನು ಸಿದ್ಧ ಮಾಡಿಕೊಂಡಿದೆಯಂತೆ.
ಓಂಕಾರ ಹೆಸರಿನ ಕಥೆಯನ್ನು ವೆಬ್ ಸೀರಿಸ್ ಗಾಗಿಯೇ ಈ ಟೀಮ್ ರೆಡಿ ಮಾಡಿಕೊಂಡಿದ್ದು, ಶಿವರಾಜ್ ಕುಮಾರ್ ಅವರಿಗೆ ಕಥೆಯನ್ನು ಹೇಳಿದೆಯಂತೆ. ಕಥೆ ಕೇಳಿ ಶಿವಣ್ಣ ಥ್ರಿಲ್ ಆಗಿದ್ದು, ಮುಂದಿನ ದಿನಗಳಲ್ಲಿ ಕಾಲ್ ಶೀಟ್ ಕೊಡುವುದಾಗಿಯೂ ಹೇಳಿದ್ದಾರೆ ಎನ್ನುವ ಸುದ್ದಿಯಿದೆ. ಈಗಾಗಲೇ ಕೈಯಲ್ಲಿ ಇರುವ ಸಿನಿಮಾಗಳನ್ನು ಮುಗಿಸಿ, ನಂತರ ವೆಬ್ ಸೀರಿಸ್ ನಲ್ಲಿ ಅವರು ನಟಿಸಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.