ಕೊರೋನಾ ತಡೆಗೆ ಅರಿಶಿನವೂ ಮದ್ದೇ...

ಕೊರೋನಾ ತಡೆಗೆ ಅರಿಶಿನವೂ ಮದ್ದೇ...

LK   ¦    Oct 08, 2020 08:55:22 AM (IST)
ಕೊರೋನಾ ತಡೆಗೆ ಅರಿಶಿನವೂ ಮದ್ದೇ...

ಕೊರೋನಾ ಮಹಾಮಾರಿ ಇನ್ನಿಲ್ಲದಂತೆ ಕಾಡುತ್ತಿದೆ. ಅದರ ತಡೆಗಾಗಿ ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸುತ್ತಿದ್ದರೂ ಕಡಿಮೆಯಾದಂತೆ ಕಾಣುತ್ತಿಲ್ಲ ಆದರೂ ನಮ್ಮ ಕೈಗೆ ಸಿಗುವ ಪದಾರ್ಥದಿಂದಲೇ ಆರೋಗ್ಯ  ಕಾಪಾಡಿಕೊಳ್ಳಲೇ ಬೇಕಾಗಿದೆ.

ಕೊರೋನಾ ಕಾಡುತ್ತಿರುವ ಈ ಸಮಯದಲ್ಲಿ ಹೆಚ್ಚಿನವರು ಅರಶಿನವನ್ನು ಬಳಸುತ್ತಿದ್ದಾರೆ. ಉಪ್ಪು ಮತ್ತು ಅರಶಿನವನ್ನು ಬೆರಸಿ ಪ್ರತಿದಿನ ಬಾಯಿ ಮುಕ್ಕಳಿಸುವುದು ಕಂಡು ಬರುತ್ತಿದೆ. ಇನ್ನು ಅರಸಿನದಲ್ಲಿ ಹಲವು ಔಷಧೀಯ ಗುಣಗಳಿದ್ದು ನಮ್ಮ ಆರೋಗ್ಯ ಕಾಪಾಡುವಲ್ಲಿ ಇದು ಸಹಕಾರಿಯಾಗಿದೆ.

ಪ್ರತಿನಿತ್ಯದ ಬದುಕಿನಲ್ಲಿ ಅರಶಿನ ಹಲವು ರೀತಿಯಲ್ಲಿ ನಮಗೆ ಸಹಕಾರಿಯಾಗಿದ್ದು, ಅರಶಿನಪುಡಿಯನ್ನು ಸಮಭಾಗ ಸುಣ್ಣದೊಂದಿಗೆ ಕೂಡಿಸಿ ಮಿಶ್ರಣವನ್ನು ಚೆನ್ನಾಗಿ ಅರೆದು ದಪ್ಪವಾಗಿ ಲೇಪಿಸಿ ಉಗುರಿಗೆ ಕಟ್ಟಿದರೆ ಉಗುರು ಸುತ್ತು ಗುಣಮುಖವಾಗುತ್ತದೆ. ಮಳೆಗಾಲ ಕಳೆದು ಚಳಿಗಾಲ ಆರಂಭವಾಗುತ್ತಿದ್ದಂತೆಯೇ ತುಟಿ, ಅಂಗೈ, ಅಂಗಾಲು ಸಾಮಾನ್ಯವಾಗಿ ಬಿರುಕು ಬಿಡುತ್ತದೆ. ಈ ಸಂದರ್ಭ ಅರಶಿನ ಗಂಧವನ್ನು ಹಾಲಿನ ಕೆನೆಯಲ್ಲಿ ಚೆನ್ನಾಗಿ ಮಿಶ್ರಮಾಡಿ ಬಿರುಕುಗಳಿಗೆ ಲೇಪಿಸಿದರೆ ಬಿರುಕುಗಳು ಮಾಯವಾಗುತ್ತವೆ. ಅರಶಿನದ ಚೂರ್ಣವನ್ನು ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯಲ್ಲಿ ಮಿಶ್ರಮಾಡಿ ಅಂಗಾಂಗಳಿಗೆ ಹಚ್ಚಿ ಚೆನ್ನಾಗಿ ಸ್ನಾನ ಮಾಡಿದ್ದೇ ಆದರೆ  ಅಂಗಾಂಗಳ ನೋವು ನಿವಾರಣೆಯಾಗಿ ದೇಹಕ್ಕೆ ವಿಶ್ರಾಂತಿ ದೊರಕುವುದರೊಂದಿಗೆ ನಿದ್ದೆಯೂ ಚೆನ್ನಾಗಿ ಬರುತ್ತದೆ.

ಎಲೆಅಡಿಕೆ ತಿನ್ನುವಾಗ ಒಮ್ಮೊಮ್ಮೆ ಸುಣ್ಣ ಜಾಸ್ತಿಯಾಗಿ ನಾಲಿಗೆ ಬೆಂದು ಹೋದರೆ ಹಸಿ ಅರಶಿನದ ಕೊಂಬನ್ನು ನೀರಿನಲ್ಲಿ ತೇದು ನಾಲಿಗೆ ಮೇಲೆ ಬೆಂದ ಭಾಗಕ್ಕೆ ಲೇಪಿಸಬಹುದು. ಕೆಮ್ಮು, ನೆಗಡಿ, ಗಂಟಲು ನೋವು, ಕಾಣಿಸಿಕೊಂಡಾಗ ಬೆಳ್ಳುಳ್ಳಿ ಶುಂಠಿಯೊಂದಿಗೆ ಅರಶಿನದ ಪುಡಿಯನ್ನು ಸೇರಿಸಿ ಕುದಿಸಿದ ಹಾಲಿನೊಂದಿಗೆ ಮಲಗುವ ಮುನ್ನ ಸೇವಿಸಿದರೆ ನಿವಾರಣೆಯಾಗುತ್ತದೆ.

ಸ್ತ್ರೀಯರ ಮೈಯ್ಯಲ್ಲಿ ಅನಾವಶ್ಯಕ ಕೂದಲುಗಳಿದ್ದರೆ ಸ್ನಾನಕ್ಕೆ ಮುನ್ನ ಕೆನ್ನೆ, ಕೈಕಾಲುಗಳಿಗೆ ಅರಶಿನವನ್ನು ಹಚ್ಚಿ ಬಳಿಕ ಸ್ನಾನ ಮಾಡಿದರೆ ಕೂದಲು ಕಡಿಮೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ. ಜತೆಗೆ ಮೊಡವೆಗಳು ಕೂಡ ಮಾಯವಾಗುತ್ತವೆ. ಅರಶಿನದ ಬೇರಿನಲ್ಲಿ ಶೇ.5ರಷ್ಟು ‘ವಿರ್ಮೆರಾಲ್’ ಎಣ್ಣೆಯ ಅಂಶಗಳಿದ್ದು ಆಹಾರ ಪದಾರ್ಥಗಳಿಗೆ ರಂಗು ನೀಡುತ್ತದೆ. ನಿತ್ಯದ ಬದುಕಿನಲ್ಲಿ ಆರೋಗ್ಯದ ಬಗ್ಗೆ ಒಂದಷ್ಟು ಕಾಳಜಿ ವಹಿಸಲೇ ಬೇಕಾಗುತ್ತದೆ. ಅಂದರೆ ಆರೋಗ್ಯವಾಗಿರಬೇಕಾದರೆ ಏನೆಲ್ಲಾ ಮಾಡಬೇಕೋ ಅದನ್ನು ಮಾಡಲೇ ಬೇಕಾಗುತ್ತದೆ. ಶೀತ, ಜ್ವರ, ನೆಗಡಿ ಹೀಗೆ ಇವುಗಳು ಆಗಾಗ್ಗೆ ನಮ್ಮನ್ನು ಕಾಡುತ್ತಿರುತ್ತದೆ. ಅದು ಸಾಮಾನ್ಯ. ಆದರೆ ನಮಗೇ ಗೊತ್ತೇ ಆಗದಂತೆ ಕೆಲವು ರೋಗಗಳು ನಮ್ಮ ಆವರಿಸಿಕೊಳ್ಳುತ್ತವೆ. ಇದಕ್ಕೆ ಕಾರಣ ನಮ್ಮ ಆಹಾರ ಕ್ರಮದಲ್ಲಿನ ಬದಲಾವಣೆ ಮತ್ತು ಅರಶಿನ ಸೇರಿದಂತೆ ಆರೋಗ್ಯಕ್ಕೆ ಉಪಯೋಗಕರ ಮಸಾಲೆ ಪದಾರ್ಥಗಳನ್ನು ಸೇವಿಸುವುದು ಕೂಡ ಮುಖ್ಯ ಎಂಬುದನ್ನು ಮರೆಯಬಾರದು.