ಬಿಸಿಲ ಝಳದಲ್ಲಿಯೂ ಆರೋಗ್ಯ ಕಾಪಾಡುವುದು ಹೇಗೆ?

ಬಿಸಿಲ ಝಳದಲ್ಲಿಯೂ ಆರೋಗ್ಯ ಕಾಪಾಡುವುದು ಹೇಗೆ?

LK   ¦    Mar 20, 2020 11:18:56 AM (IST)
ಬಿಸಿಲ ಝಳದಲ್ಲಿಯೂ ಆರೋಗ್ಯ ಕಾಪಾಡುವುದು ಹೇಗೆ?

 ಬೇಸಿಗೆ ಬಂತೆಂದರೆ ಮನುಷ್ಯನ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಜತೆಗೆ ಸಾಂಕ್ರಾಮಿಕ ರೋಗಗಳು ಕೂಡ ದಾಳಿ ಮಾಡಿ ಇನ್ನಿಲ್ಲದಂತೆ ಕಾಡುತ್ತವೆ. ಈ ನಡುವೆ ಕೊರೋನಾ ಕೂಡ ಎಲ್ಲರನ್ನು ಭಯಬೀಳುವಂತೆ ಮಾಡಿದೆ. ಆದರೆ ಅದನ್ನು ಹೊರತು ಪಡಿಸಿ ಬಿಸಿಲ ಝಳದಿಂದಲೂ ಹಲವು ಆರೋಗ್ಯದ ಸಮಸ್ಯೆಗಳು ನಮ್ಮನ್ನು ಕಾಡುವ ಸಾಧ್ಯತೆಯಿರುವುದರಿಂದ ಒಂದಷ್ಟು ಎಚ್ಚರಿಕೆಯೊಂದಿಗೆ ಮುಂಜಾಗ್ರತಾ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ.

 ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ನಮ್ಮ ಶರೀರದಲ್ಲಿನ ಉಷ್ಣಾಂಶವು ಕೂಡ ಏರಿಕೆಯಾಗುತ್ತದೆ. ಇದರಿಂದ ವಯಸ್ಕರು ಮತ್ತು ಮಕ್ಕಳಲ್ಲಿ ಜೀರ್ಣ ಶಕ್ತಿ ದುರ್ಬಲವಾಗುತ್ತದೆ. ಹಾಗಾಗಿ ಆರೋಗ್ಯವಂತರಾಗಿರಲು ದೇಹಕ್ಕೆ ಶಕ್ತಿ ನೀಡುವಂತಹ ಆಹಾರ ಪಾನೀಯಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ.

 ಬೇಸಿಗೆಯ ದಿನಗಳಲ್ಲಿ ಬಿಸಿಲಿನ ತಾಪ ದೇಹದ ಮೇಲೆ ನೇರವಾಗಿ ಪರಿಣಾಮವನ್ನುಂಟು ಮಾಡುವುದರಿಂದ ದೇಹದಲ್ಲಿ ನೀರಿನ ಅಂಶವವನ್ನು ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಹಲವು ತೊಂದರೆಗಳಾಗುತ್ತವೆ. ಇದನ್ನು ತಪ್ಪಿಸುವ ಸಲುವಾಗಿ ಉಪ್ಪು ಸಕ್ಕರೆ ಮಿಶ್ರಿತ ನೀರನ್ನು ಆಗಾಗ್ಗೆ ನಿಧಾನವಾಗಿ ಕುಡಿಯುತ್ತಿರಬೇಕು. ಹಣ್ಣಿನ ರಸ, ಪಾನಕ, ನೀರು, ಮಜ್ಜಿಗೆ, ಲಸ್ಸಿ ನಿಂಬೆಪಾನಕ ಮತ್ತು ಎಳನೀರು ಮತ್ತು ಇನ್ನಿತರೆ ಪಾನೀಯ ಪದಾರ್ಥಗಳನ್ನು ಕುಡಿಯುತ್ತಿರಬೇಕು ಇದು ದೇಹಕ್ಕೆ ಅಗತ್ಯವಾದ ಗ್ಲೂಕೋಸ್‍ನ್ನು ನೀಡುವ ಮೂಲಕ ತಂಪಾಗಿಡಲು ಸಹಾಯ ಮಾಡುತ್ತದೆ.

 ಬೇಸಿಗೆ ದಿನಗಳಲ್ಲಿ ಬಾಯಿರುಚಿಗಾಗಿ ಅತಿಹೆಚ್ಚು ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸುತ್ತಿದ್ದರೆ ಅದನ್ನು ಕಡಿಮೆ ಮಾಡಬೇಕು. ಜತೆಗೆ ಮಾಂಸಾಹಾರವನ್ನು ಕಡಿಮೆ ಮಾಡಿ ತರಕಾರಿಗಳಾದ  ಸೌತೆಕಾಯಿ, ಕುಂಬಳಕಾಯಿ, ಬೂದಗುಂಬಳ, ಸೀಮೆಬದನೆಕಾಯಿ, ಸೋರೆಕಾಯಿ, ಟೊಮೆಟೊ, ಕ್ಯಾರೆಟ್, ಕಲ್ಲಂಗಡಿ, ಮಾವಿನ ಹಣ್ಣು, ದ್ರಾಕ್ಷಿ, ದಾಳಿಂಬೆ ಮೊದಲಾದವುಗಳನ್ನು ಸೇವಿಸಬೇಕು. ಇದು ನಮ್ಮ ದೇಹಕ್ಕೆ ಪೋಷಕ ಶಕ್ತಿಯನ್ನು ನೀಡುವಲ್ಲಿ ಮತ್ತು ದೇಹದಲ್ಲಿ ನೀರಿನಾಂಶವನ್ನು ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ.

 ಉಷ್ಣಾಂಶ ಹೆಚ್ಚುವುದರಿಂದ ಮಲಬದ್ಧತೆ, ಹೊಟ್ಟೆನೋವು ಇನ್ನಿತರೆ ಸಮಸ್ಯೆಗಳು ಕಾಣಿಸಿಕೊಳ್ಳುವುದರಿಂದ ಬೇಗ ಜೀರ್ಣವಾಗುವ ಬೆಚ್ಚಗಿನ ಮಸಾಲೆ ರಹಿತ ಶುದ್ದ ಸಾತ್ವಿಕ ಆಹಾರ ಸೇವಿಸುವುದರೊಂದಿಗೆ ಅತಿಯಾದ ಖಾರ, ಹುಳಿರಸ, ಜಿಡ್ಡಿನ ಪದಾರ್ಥಗಳ ಸೇವನೆಯನ್ನು ಸಂಪೂರ್ಣ ಕಡಿಮೆ ಮಾಡಿದಷ್ಟು ಒಳ್ಳೆಯದು. ಸಾಧ್ಯವಾದಷ್ಟು ಬಿಸಿಲಿಗೆ ಮೈವೊಡ್ಡದೆ ನೆರಳಿನಲ್ಲಿರಲು ಪ್ರಯತ್ನಿಸಬೇಕು.

 ಇನ್ನು ಬೇಸಿಗೆಯಲ್ಲಿ ಉಡುಪು ಧರಿಸುವಾಗಲೂ ಎಚ್ಚರಿಕೆ ವಹಿಸಬೇಕು. ಆದಷ್ಟು ಸಡಿಲವಾದ ತೆಳು ತಿಳಿ ಬಣ್ಣದ, ಬಿಳಿ  ಹತ್ತಿಯ ಬಟ್ಟೆ ಧರಿಸುವುದು ಒಳ್ಳೆಯದು ಬಿಗಿಯಾದ ಬಟ್ಟೆ ಧರಿಸುವುದರಿಂದ ಬೆವರು ಸಂಗ್ರಹವಾಗಿ ತುರಿಕೆ, ಕಜ್ಜಿಯಾಗುವುದರೊಂದಿಗೆ ಇತರೆ ಚರ್ಮರೋಗಗಳು ಬರಬಹುದು ಅದನ್ನು ತಡೆಯಲು  ಕರವಸ್ತ್ರದಿಂದ ಆಗಾಗ್ಗೆ ಬೆವರನ್ನು ಒರೆಸಿಕೊಳ್ಳುವುದು, ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದು, ಬಿಸಿಲಿನಿಂದ ರಕ್ಷಿಸುವ ಗಾಗಲ್ಸ್(ಕನ್ನಡಕ),ಕೊಡೆ ಮತ್ತು ತಲೆಗೆ ಕ್ಯಾಪ್ ಧರಿಸಿ ವಿಹರಿಸಬೇಕು. ಕಾಫಿ, ಟೀ, ಅತಿ ಸಕ್ಕರೆ ಅಂಶವುಳ್ಳ ಪಾನೀಯಗಳನ್ನು ಅತಿಯಾಗಿ ಸೇವಿಸಬಾರದು, ಸೋಡ, ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ಉಪಯೋಗಿಸಬಾರದು.  ಮದ್ಯಪಾನ ಮಾಡದಿರುವುದು ಒಳಿತು.

 ಒಂದು ವೇಳೆ ಬಿಸಿಲಿಗೆ ಓಡಾಡುತ್ತಿದ್ದವರು ಯಾರಾದರೂ ಸುಸ್ತಾಗಿ ತೊದಲು ಮಾತು ಅಥವಾ ಅರ್ಥರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ಅವರನ್ನು ನೆರಳಿನ ಪ್ರದೇಶಕ್ಕೆ ಕರೆದೊಯ್ದು ಹಣೆ, ಕತ್ತು, ಪಾದ ತೊಡೆಯ ಸಂದುಗಳನ್ನು ಒದ್ದೆಬಟ್ಟೆಯಿಂದ ತಣ್ಣೀರಿನಿಂದ ಒರೆಸಬೇಕು. ಆ ನಂತರ ನಿಧಾನವಾಗಿ ಸ್ವಲ್ಪ ಸಕ್ಕರೆ ಅಥವಾ ಉಪ್ಪು ಬೆರೆಸಿದ ನೀರನ್ನು ಕುಡಿಸುವ ಮೂಲಕ ಪ್ರಥಮ ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಗೆ ಕರೆದೊಯ್ಯಬಹುದಾಗಿದೆ.

ಬಿಸಿಲಿಗೆ ಹೊರಗೆ ಹೋಗುವವರು ನೀರಿನ ಬಾಟಲಿಗಳನ್ನಿಟ್ಟುಕೊಳ್ಳಬೇಕು. ನೀರಡಿಕೆಯಾದಾಗ ಒಮ್ಮೆಲೆ ನೀರು ಕುಡಿಯುವ ಬದಲು ಸ್ವಲ್ಪ ಸ್ವಲ್ಪ ಕುಡಿದು ನೀರಡಿಕೆಯನ್ನು ತಗ್ಗಿಸಿಕೊಳ್ಳಬೇಕು. ಬೇರೆಲ್ಲ ತಂಪು ಪಾನೀಯಗಳಿಗಿಂತ ಪ್ರಕೃತಿದತ್ತವಾದ ಎಳನೀರು ಸೇವನೆ ಬಹಳ ಒಳ್ಳೆಯದು. ಅದು ಕೇವಲ ಬಾಯಾರಿಕೆಯನ್ನು ಮಾತ್ರ ನೀಗಿಸದೆ, ಆರೋಗ್ಯದ ದೃಷ್ಟಿಯಿಂದಲೂ ದೇಹಕ್ಕೆ ಪೋಷಕ ಶಕ್ತಿಯನ್ನು ನೀಡುತ್ತದೆ. ಇದರಲ್ಲಿ ಅಧಿಕ ವಿಟಮಿನ್ ಹಾಗೂ ಖನಿಜವಿದ್ದು, ಬೊಜ್ಜು ಕರಗಲು ಜತೆಗೆ ದೇಹದ ಉಷ್ಣಾಂಶ ಕಡಿಮೆ ಮಾಡಿ ಲವಲವಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ.