ವಿಶ್ವ ಆರೋಗ್ಯ ದಿನದಂದು ಆರೋಗ್ಯದ ಪಣ ತೊಡೋಣ

ವಿಶ್ವ ಆರೋಗ್ಯ ದಿನದಂದು ಆರೋಗ್ಯದ ಪಣ ತೊಡೋಣ

LK   ¦    Apr 07, 2020 03:04:00 PM (IST)
ವಿಶ್ವ ಆರೋಗ್ಯ ದಿನದಂದು ಆರೋಗ್ಯದ ಪಣ ತೊಡೋಣ

ವಿಶ್ವದಾದ್ಯಂತ ವಿಶ್ವ ಆರೋಗ್ಯ ದಿನವನ್ನು ಏಪ್ರಿಲ್ 7ರಂದು ಆಚರಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಾಗಿರಬೇಕೆಂಬುದು ಪ್ರತಿಯೊಬ್ಬನ ಬಯಕೆಯೂ ಹೌದು. ಎಲ್ಲ ದೇಶಗಳಲ್ಲಿಯೂ ರೋಗ ಎಂಬುದು ಇದ್ದೇ ಇದೆ. ಮದ್ದೇ ಇಲ್ಲದ ರೋಗಗಳಿಗೆ ಮದ್ದು ಕಂಡು ಹಿಡಿದಿರುವ ವಿಜ್ಞಾನಿಗಳು ಹಲವು ಕಾಯಿಲೆಗಳನ್ನು ವಾಸಿ ಮಾಡಲು ಬೇಕಾದ ಔಷಧಿ ಮತ್ತು ಶಸ್ತ್ರ ಚಿಕಿತ್ಸೆಯನ್ನು ಆಧುನೀಕರಣಗೊಳಿಸಿ ರೋಗಿಯ ಜೀವವನ್ನು ಉಳಿಸುವ ನಿಟ್ಟಿನಲ್ಲಿ ಸಂಶೋಧನೆಗಳನ್ನು ಮಾಡುತ್ತಲೇ ಬರುತಿದ್ದಾರೆ.

ಕೆಲವು ಕಾಯಿಲೆಗಳನ್ನು ವಾಸಿ ಮಾಡಲಾಗದಿದ್ದರೂ ನಿಯಂತ್ರಣ ಮಾಡಿ ಒಂದಷ್ಟು ದಿನಗಳ ಕಾಲ ರೋಗಿ ಬದುಕುವಂತೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಸಾಂಕ್ರಾಮಿಕ  ಕಾಯಿಲೆಗಳು ಗ್ರಾಮ, ಪಟ್ಟಣ ಹೀಗೆ ಸೀಮಿತ ಪ್ರದೇಶದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದವು. ಆದರೆ ಇದೀಗ ಬಂದಿರುವ ಕೊರೊನಾ ವೈರಸ್ ಚೀನಾದಲ್ಲಿ ಮೊದಲಿಗೆ ಕಾಣಿಸಿಕೊಂಡು ಈಗ ಜಗತ್ತಿನಾದ್ಯಂತ ಹರಡಿದ್ದು ಪರಿಣಾಮ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ವೈರಸ್‍ಗೆ ತುತ್ತಾದವರ ಸಂಖ್ಯೆ ಲಕ್ಷಾಂತರವಾಗಿದೆ. ಬಹುಶಃ ಇತಿಹಾಸದಲ್ಲಿ ಹೀಗೆ ಇಡೀ ವಿಶ್ವವನ್ನು ಕಾಡಿದ ಏಕೈಕ ಕಾಯಿಲೆ ಕೊರೊನಾ ಎಂದರೆ ತಪ್ಪಾಗಲಾರದು.

ಇವತ್ತಿನ ಪರಿಸ್ಥಿತಿಯಲ್ಲಿ ಇಡೀ ಜಗತ್ತಿನ ಆರ್ಥಿಕ ಪರಿಸ್ಥಿತಿಯನ್ನು ಪಾತಾಳಕ್ಕೆ ತಳ್ಳಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡು, ಕೋಟ್ಯಂತರ ಜನರನ್ನು ಭಯಕ್ಕೆ ದೂಡಿ, ಕಷ್ಟದಲ್ಲಿಯೇ ದಿನ ಕಳೆಯುವಂತೆ ಮಾಡಿರುವ ಕೊರೊನಾದ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ. ಬಹುಶಃ ಬೇರೆ ಯಾವುದೇ ಕಾಯಿಲೆಯಾಗಿದ್ದರೆ ನಾವು ಇಷ್ಟೊಂದು ಭಯ ಪಡಬೇಕಾಗಿರಲಿಲ್ಲ. ಜತೆಗೆ ಲಾಕ್ ಡೌನ್ ಮಾಡಿ ಮನೆಯಲ್ಲಿಯೇ ಇರಿ ಎಂದು ಮನವಿ ಮಾಡಿಕೊಳ್ಳಬೇಕಾಗಿರಲಿಲ್ಲ. ಆದರೆ ಕೊರೊನಾ ತೀವ್ರತೆ ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ಅದರಿಂದ ಏನೇನಾಗಿದೆ ಎಂಬುದು ಹಳ್ಳಿಯ ರೈತನಿಂದ ಹಿಡಿದು ನಂಬರ್ ವನ್ ಶ್ರೀಮಂತನವರೆಗೆ ಗೊತ್ತಾಗಿದೆ. ಎಲ್ಲರಿಗೂ ಜೀವ ಉಳಿದರೆ ಸಾಕು ಎನ್ನುವಷ್ಟರ ಮಟ್ಟಿಗೆ ಇದು ಹೊಡೆತ ನೀಡಿದೆ.

ಇಂತಹ ಸಂದರ್ಭದಲ್ಲಿ ನಾವು ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾದ ವಿರುದ್ಧ ಹೋರಾಡಬೇಕಾಗಿದೆ. ಬಹುಶಃ ಕೊರೊನಾವನ್ನು ಹೊಡೆದೋಡಿಸಲು ಪಣ ತೊಟ್ಟಿದ್ದೇ ಆದರೆ ನಾವು ಆಚರಣೆ ಮಾಡುತ್ತಿರುವ ವಿಶ್ವ ಆರೋಗ್ಯ ದಿನಕ್ಕೂ ಅರ್ಥ ಸಿಗಲಿದೆ. ಒಂದು ದೇಶ ಆರೋಗ್ಯವಾಗಿರಬೇಕಾದರೆ ಅಲ್ಲಿ ವಾಸಿಸುವ ಜನ ಆರೋಗ್ಯವಾಗಿರಬೇಕು ಹಾಗಿದ್ದಾಗ ಮಾತ್ರ ಆರೋಗ್ಯಕರ, ಸುಖಮಯ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ. ಇಲ್ಲದೆ ಹೋದರೆ ನಾವೊಬ್ಬರೆ ಆರೋಗ್ಯವಾಗಿದ್ದರೆ ಸಾಕೆಂಬುದು ನಮ್ಮ ಭ್ರಮೆಯಾಗಿ ಬಿಡುತ್ತದೆ. ನಮ್ಮ ಪಕ್ಕದಲ್ಲಿದ್ದವರು ಅನಾರೋಗ್ಯದಿಂದ ಬಳಲುತ್ತಿದ್ದರೆ ಅದರ ಪರಿಣಾಮ ಇವತ್ತಲ್ಲ ನಾಳೆ ನಮ್ಮ ಮೇಲೆ ಬೀರಬಹುದು ಎಂಬುದನ್ನು ತಳ್ಳಿ ಹಾಕುವಂತಿಲ್ಲ.

ಮೊದಲಿಗೆ ಮನೆ, ನಮ್ಮ ಕುಟುಂಬ, ನಮ್ಮ ಪಕ್ಕದವರು ಹೀಗೆ ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದಾದ ಸಾಂಕ್ರಾಮಿಕ ರೋಗಗಳಿಗೆ ಮೊದಲಿಗೆ ನಾವು ತಡೆಯೊಡ್ಡ ಬೇಕಾಗಿದೆ. ಅದರಲ್ಲಿ ಮೊದಲಿಗೆ ಯಶಸ್ಸಾದರೆ ಮುಂದಿನ ಅದಾಗಿಯೇ ಆಗಿಬಿಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಕಾಯಿಲೆ ಮನೆಯಲ್ಲಿ ಯಾರಾದರೊಬ್ಬರಿಗೆ ಕಾಣಿಸಿಕೊಳ್ಳುತ್ತಿತ್ತು. ಅದರಿಂದ ಕುಟುಂಬ ಸಂಕಷ್ಟಕ್ಕೀಡಾಗುತ್ತಿತ್ತು. ಆದರೆ ಈಗ ಪರಿಸ್ಥಿತಿಯೇ ವಿಭಿನ್ನವಾಗಿದೆ. ಇಡೀ ಜಗತ್ತು ಸಂಕಷ್ಟಕ್ಕೀಡಾಗಿದೆ. ಇದರಿಂದ ಹೊರಗೆ ಬರಬೇಕಾದರೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕ ತನಗೆ ತಾನೇ ಅಂಕುಶ ಹಾಕಿಕೊಂಡು ಮನೆಯಲ್ಲಿ ಉಳಿಯುವ ಮೂಲಕ ಮತ್ತು ವೈದ್ಯರು ಹೇಳಿದ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.