ಆರೋಗ್ಯವಾಗಿರಲು ಸ್ವಚ್ಛ ಪರಿಸರ ನಿರ್ಮಾಣ ಅಗತ್ಯ

ಆರೋಗ್ಯವಾಗಿರಲು ಸ್ವಚ್ಛ ಪರಿಸರ ನಿರ್ಮಾಣ ಅಗತ್ಯ

LK   ¦    Aug 05, 2018 08:45:04 AM (IST)
ಆರೋಗ್ಯವಾಗಿರಲು ಸ್ವಚ್ಛ ಪರಿಸರ ನಿರ್ಮಾಣ ಅಗತ್ಯ

ಈಗ ಮಳೆಗಾಲ... ಹೀಗಾಗಿ ಆರೋಗ್ಯದ ಬಗ್ಗೆ ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಕಾಯಿಲೆಗಳು ಅಡರಿಕೊಳ್ಳುವುದು ಖಚಿತ. ಆದ್ದರಿಂದ ಕೇವಲ ನಮ್ಮದು ಮಾತ್ರವಲ್ಲದೆ ಸುತ್ತಮುತ್ತಲ ಆರೋಗ್ಯಕರ ಪರಿಸರವನ್ನು ಕಾಪಾಡುವುದರಿಂದ ಒಂದಷ್ಟು ರೋಗಗಳನ್ನು ತಡೆಯಲು ಸಾಧ್ಯವಿದ್ದು ಮೊದಲಿಗೆ ನಮ್ಮ ಮನೆ ಮತ್ತು ನಾವು ವಾಸಿಸುವ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ಒಂದೊಳ್ಳೆಯ ಆರೋಗ್ಯಕರ ವಾತಾವರಣವನ್ನು ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಹಿಂದಿನ ಕಾಲದಲ್ಲಿ ಮಳೆಗಾಲದಲ್ಲಿ ಜ್ವರಗಳು ಕಾಡುವುದು ಸಾಮಾನ್ಯವಾಗಿತ್ತು. ಜತೆಗೆ ಯಾವುದಾದರೊಂದು ಜ್ವರಕ್ಕೆ ಸಂಬಂಧಿಸಿದ ಮಾತ್ರೆ ಸೇವಿಸಿಬಿಟ್ಟರೆ ಹೊರಟು ಹೋಗುತ್ತಿತ್ತು. ಆದರೆ ಈಗ ಹಾಗಿಲ್ಲ. ರಕ್ತ ಪರೀಕ್ಷೆ ಮಾಡಿದ ಬಳಿಕವಷ್ಟೆ ನಮಗೆ ತಗುಲಿದ ಜ್ವರ ಯಾವುದೆಂಬುದು ಗೊತ್ತಾಗುವುದು. ಬಹಳಷ್ಟು ಮಂದಿ ಜ್ವರ ತಾನೆ ಅದು ಹೋಗುತ್ತೆ ಎಂಬ ಉಡಾಫೆಯಿಂದ ವೈದ್ಯರ ಬಳಿ ಹೋಗದೆ ಯಾವುದೋ ಮಾತ್ರೆ ತೆಗೆದುಕೊಂಡು ಉಲ್ಭಣದ ಸ್ಥಿತಿಗೆ ತಲುಪಿದಾಗ ಕೊನೆಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ನಿದರ್ಶನಗಳು ಬೇಕಾದಷ್ಟಿವೆ. ಹೀಗಾಗಿ ಜ್ವರನಾ ಕಡಿಮೆಯಾಗುತ್ತೆ ಎಂಬ ಉಡಾಫೆಯನ್ನು ಬದಿಗೊತ್ತಿ ವೈದ್ಯರನ್ನು ಕಾಣುವುದು ಅಗತ್ಯವಾಗಿದೆ.

ಇನ್ನು ಕೆಲವು ಸೋಂಕು ರೋಗಗಳು ಹರಡಲು ಅಶುಚಿತ್ವವೇ ಕಾರಣ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಪಟ್ಟಣದಲ್ಲಿ ಮನೆಯ ಮುಂದೆ ಸುತ್ತಮುತ್ತ ಶುಚಿತ್ವ ಮಾಡಲು ಪೌರಕಾರ್ಮಿಕರನ್ನೇ ಕಾಯುವ ಬದಲು ನಮ್ಮ ಸುತ್ತಮುತ್ತ ನಾವೇ ಶುಚಿಯಾಗಿಡಲು ಮುಂದಾಗಬೇಕಿದೆ. ಸಾರ್ವಜನಿಕ ನೀರಿನ ಟ್ಯಾಂಕ್, ಬೋರ್‍ವೆಲ್, ಬಾವಿಗಳ ಬಳಿ ಕೊಳಚೆ ನೀರುಗಳು ನಿಲ್ಲುತ್ತಿದ್ದು ಇಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟಿರಿಯಾಗಳು ಕಾಯಿಲೆಗಳನ್ನು ಹರಡುತ್ತಿವೆ. ಕಾಲರಾ, ಕರಳುಬೇನೆ(ವಾಂತಿ ಬೇಧಿ), ಟೈಫಾಯ್ಡ್ (ವಿಷಮಶೀತಜ್ವರ), ಹೆಪಟೈಟಿಸ್, ಪೋಲಿಯೋ, ಆಮಶಂಕೆ, ಇಲಿಜ್ವರ, ಜಂತುಹುಳು ಸೋಂಕು, ಪ್ಲೋರೋಸಿಸ್, ನಾರುಹುಣ್ಣು ಮೊದಲಾದ ರೋಗಗಳು ಹರಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಇದನ್ನು ಅರಿತುಕೊಂಡು ಪ್ರತಿಯೊಬ್ಬರೂ ತಮ್ಮ ಮನೆ ಮತ್ತು ಸುತ್ತಮುತ್ತ ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವವನ್ನು ಕಾಪಾಡುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ನೀರಿನ ಮೂಲಗಳಾದ ಬಾವಿ, ಕೊಳವೆಬಾವಿ ಮತ್ತು ಟ್ಯಾಂಕರ್ ಸುತ್ತಮುತ್ತ ಬಳಸಿದ ನೀರು ನಿಲ್ಲುವುದರಿಂದ, ಕೆರೆ ಬಳಿ ಮಲ ವಿಸರ್ಜನೆ ಮಾಡುವುದು, ದನಕರುಗಳನ್ನು ತೊಳೆಯುವುದು, ಬಟ್ಟೆ ಪಾತ್ರೆ ತೊಳೆದ ನೀರು ಕುಡಿಯುವ ನೀರಿನ ಮೂಲಗಳಿಗೆ ಸೇರ್ಪಡೆಯಾಗುವುದು, ನೀರಿನ ಸಂಗ್ರಹಣೆ, ನೀರಿನ ಟ್ಯಾಂಕ್‍ನಿಂದ ಸರಬರಾಜಾಗುವ ಪೈಪುಗಳಲ್ಲಿ ಸೋರಿಕೆ ಮತ್ತು ನೀರಿನ ಟ್ಯಾಂಕ್‍ಗಳನ್ನು ಸ್ವಚ್ಛಗೊಳಿಸದಿರುವುದರಿಂದ, ನೀರು ಪೂರೈಕೆ ನಲ್ಲಿಗಳು ತಗ್ಗಿನಲ್ಲಿದ್ದಾಗ ಅದರಲ್ಲಿ ನೀರು ನಿಂತು ಕಲುಷಿತಗೊಂಡು ನೀರು ಪೂರೈಕೆ ಪೈಪುಗಳಲ್ಲಿ ಪುನಃ ಸೇರುವುದು. ಮನೆಯಲ್ಲಿ ಸಂಗ್ರಹಿಸಿದ ನೀರು ಕಲುಷಿತಗೊಳ್ಳುವುದರಿಂದಲೂ ವಿವಿಧ ಕಾಯಿಲೆಗಳು ಬರುವ ಸಾಧ್ಯತೆಯಿದೆ.

ಸಾಂಕ್ರಾಮಿಕ ಕಾಯಿಲೆ ಯಾರೋ ಒಬ್ಬರಿಗೆ ಬಂದು ಹೋಗುವಂತಹದಲ್ಲ ಆದ್ದರಿಂದ ಪ್ರತಿಯೊಬ್ಬರೂ ಇದರ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಗ್ರಾಮದಲ್ಲಿ ಅಥವಾ ಬಡಾವಣೆಗಳಲ್ಲಿ ಒಬ್ಬರಿಗೆ ಯಾವುದಾದರೂ ರೋಗ ಕಾಣಿಸಿಕೊಂಡರೆ ಅದು ಇತರರಿಗೂ ಹರಡುವ ಸಾಧ್ಯತೆಯಿರುವುದರಿಂದ ಎಲ್ಲರೂ ಇದರತ್ತ ಗಮನಹರಿಸಿ ಕಾಯಿಲೆ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.

ಇನ್ನು ಮಳೆಗಾಲದಲ್ಲಿ ಡೆಂಗ್ಯೂ ರೋಗ ಕಾಣಿಸಿಕೊಳ್ಳುವುದು ಮಾಮೂಲಿ. ಮಳೆ ರಭಸದಿಂದ ಬಂದು ಚರಂಡಿ, ಕೊಳಚೆ ತ್ಯಾಜ್ಯಗಳು ಕೊಚ್ಚಿ ಹೋಗಿ ಪರಿಸರ ಶುದ್ಧವಾದರೆ ಕಾಯಿಲೆಗಳ ತೊಂದರೆ ಇರುವುದಿಲ್ಲ. ಆದರೆ ಸಮರ್ಪಕವಾಗಿ ಮಳೆಯಾಗದೆ ಚರಂಡಿಗಳಲ್ಲಿ ನೀರು ಹರಿದು ಹೋಗದೆ ಅಲ್ಲಲ್ಲಿ ನೀರು ನಿಂತುಕೊಂಡಿದ್ದರೆ ಅಂತಹ ಅನೈರ್ಮಲ್ಯದ ಪರಿಸರದಲ್ಲಿ ಈಡಿಸ್ ಈಜಿಪ್ಟೆ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ ರೋಗವನ್ನು ಹರಡುತ್ತವೆ. ಡೆಂಗ್ಯೂವನ್ನು ಮೂಳೆಮುರಕ ಅಥವಾ ಬ್ರೇಕ್‍ಬೋನ್ ಜ್ವರವೆಂದು ಕೂಡ ಕರೆಯಲಾಗುತ್ತದೆ.

ಹೆಣ್ಣು ಸೊಳ್ಳೆಯು ಸೋಂಕಿಗೆ ತುತ್ತಾಗದ ವ್ಯಕ್ತಿಯನ್ನು ಕಚ್ಚಿದಲ್ಲಿ, ಆ ಸೊಳ್ಳೆಯ ಜೊಲ್ಲಿನ ಮೂಲಕ ವೈರಸ್ ವ್ಯಕ್ತಿಯ ದೇಹವನ್ನು ಪ್ರವೇಶಿಸಿ ದೇಹದಲ್ಲಿನ ಬಿಳಿ ರಕ್ತಕಣದೊಂದಿಗೆ ಸೇರಿಕೊಂಡು, ಬಿಳಿ ರಕ್ತ ಕಣಗಳಲ್ಲಿ ದ್ವಿಗುಣಗೊಳ್ಳುತ್ತಾ ಸಾಗುತ್ತದೆ. ಈ ದ್ವಿಗುಣಗೊಳ್ಳುವಿಕೆಯು ಡೆಂಗ್ಯೂ ರೋಗದ ರೋಗ ಲಕ್ಷಣವಾಗಿರುತ್ತದೆ. ಒಮ್ಮೆ ಈ ವೈರಸ್‍ಗಳ ಸಂಖ್ಯೆ ಬಿಳಿ ರಕ್ತಕಣಗಳಲ್ಲಿ ಹೆಚ್ಚಾದರೇ, ಲಿವರ್ (ಯಕೃತ್ತು) ಮತ್ತು ಮೂಳೆಯ ಮಜ್ಜೆ (ಬೋನ್ ಮ್ಯಾರೋ) ಮುಂತಾದ ಅಂಗಾಂಶಗಳ ಕಾರ್ಯನಿರ್ವಹಣೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಕೊನೆಗೆ ಇದು ದೇಹದಲ್ಲಿರುವ ಕಿರುತಟ್ಟೆಗಳ ಅಥವಾ ಕಿರುಬಿಲ್ಲೆಗಳ (ಪ್ಲೇಟ್‍ಲೆಟ್) ಸಂಖ್ಯೆಯನ್ನು ಕಡಿಮೆ ಮಾಡುತ್ತಾ ಹೋಗುತ್ತದೆ. ಆಗ ಕಾಯಿಲೆ ಉಲ್ಭಣವಾಗುತ್ತಾ ಹೋಗುತ್ತದೆ.

ಈ ವೇಳೆ ಕೀಲು ನೋವು, ಸ್ನಾಯು ನೋವು, ಕೆಳಹೊಟ್ಟೆಯಲ್ಲಿ ನೋವು, ವಾಂತಿ ಅಥವಾ ಮಲದಲ್ಲಿ ರಕ್ತ, ತ್ವಚೆಯ ಮೇಲೆ ಸಣ್ಣ ಕೆಂಪು ಚುಕ್ಕೆಗಳು ಕಾಣಿಸಿಕೊಂಡು ವ್ಯಕ್ತಿಯು ಸಂಪೂರ್ಣ ಕುಸಿದು ಬಿಡುತ್ತಾನೆ. ಪದೇ ಪದೇ ಜ್ವರ ಮರುಕಳಿಸುವುದು, ಜ್ವರದ ತಾಪಮಾನವು 104ಡಿಗ್ರಿ ವರೆಗೆ ಏರುವುದು, ಮೈ-ಕೈ ನೋವು ಮತ್ತು ಸ್ನಾಯುಗಳ ಸೆಳೆತ ಎಲ್ಲವೂ ಕಾಣಿಸಿಕೊಳ್ಳುತ್ತದೆ.

ವ್ಯಕ್ತಿಯನ್ನು ಬಾಧಿಸಿರುವುದು ಡೆಂಗ್ಯೂ ಎಂಬುದು ರಕ್ತ ಪರೀಕ್ಷೆಯಿಂದ ಪತ್ತೆ ಹಚ್ಚಲಾಗುತ್ತದೆ. ಕ್ಷಣಕ್ಷಣಕ್ಕೂ ಪ್ಲೇಟ್‍ಲೆಟ್‍ಗಳು ಕಡಿಮೆಯಾಗುವುದು ಡೆಂಗ್ಯೂನ ಲಕ್ಷಣವಾಗಿದೆ.

ಡೆಂಗ್ಯೂ ತಡೆಗೆ ಸಾಮೂಹಿಕವಾಗಿ ಸ್ವಚ್ಛತೆಗೆ ಆದ್ಯತೆ ನೀಡುವುದು ಅಗತ್ಯವಿದೆ. ಜತೆಗೆ ಸೊಳ್ಳೆಗಳಿಂದ ದೂರ ಇರುವುದು ಮತ್ತು ಸೊಳ್ಳೆಗಳು ಉತ್ಪತ್ತಿಯಾಗದಂತಹ ಪರಿಸರ ನಿರ್ಮಾಣ ಮಾಡುವುದು, ಸೊಳ್ಳೆಗಳು ಕಚ್ಚದಂತೆ ಸೊಳ್ಳೆ ನಿವಾರಕ, ಸೊಳ್ಳೆ ಪರದೆಗಳನ್ನು ಬಳಸುವುದು ಅತಿ ಮುಖ್ಯವಾಗಿದೆ.

ಮನೆಯ ಸುತ್ತ ಚರಂಡಿ ಸೇರಿದಂತೆ ಇತರೆ ಪ್ರದೇಶಗಳಲ್ಲಿ, ಬಕೆಟ್, ಟಯರ್, ಎಳನೀರು ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳು ಇರುವ ಪ್ರದೇಶಗಳಲ್ಲಿ ಫಾಗಿಂಗ್ ಮಾಡುವುದು ಒಳ್ಳೆಯದು. ಒಟ್ಟಾರೆಯಾಗಿ ಹೇಳುವುದಾದರೆ ಸ್ವಚ್ಛ ಪರಿಸರ ನಿರ್ಮಾಣ ಮಾಡುವುದು ಎಲ್ಲಕ್ಕಿಂತ ಮುಖ್ಯವಾಗಿದೆ.