ಹೃದಯದ ಆರೋಗ್ಯ ಕಾಪಾಡಲು ಹೀಗೆ ಮಾಡಿ!

ಹೃದಯದ ಆರೋಗ್ಯ ಕಾಪಾಡಲು ಹೀಗೆ ಮಾಡಿ!

LK   ¦    May 29, 2020 05:27:40 PM (IST)
ಹೃದಯದ ಆರೋಗ್ಯ ಕಾಪಾಡಲು ಹೀಗೆ ಮಾಡಿ!

ಇತ್ತೀಚೆಗೆ ಹೃದಯದ ಸಂಬಂಧ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಹೃದಯದ ಆರೋಗ್ಯ ಕಾಪಾಡಲು ಕೆಲವೊಂದು ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಹಾಗಾದರೆ ಏನು ಮಾಡಬಹುದು ಇಲ್ಲಿದೆ ಒಂದಷ್ಟು ಕ್ರಮಗಳು.

ರಕ್ತದಲ್ಲಿ ಸಕ್ಕರೆ ಪ್ರಮಾಣ, ಕೊಬ್ಬಿನಾಂಶ, ಶರೀರದ ತೂಕ ಮತ್ತು ಸೊಂಟದ ಸುತ್ತಳತೆ, ಅತಿಯಾಸೆ ಈ ಐದು ಅಂಶಗಳನ್ನು ಕಡಿಮೆ ಮಾಡಿಕೊಳ್ಳವುದೆ ಪಂಚ ಸೂತ್ರ.  ಇದು ಸಾಧ್ಯವಾಗ ಬೇಕಾದರೆ ವ್ಯಾಯಾಮ,  ದೇಹದಂಡನೆ ಮುಖ್ಯವಾಗಿದ್ದು, ಇದರ ಜತೆಗೆ ಸಂಸಾರದ ಒತ್ತಡ, ವೃತ್ತಿಯ ಒತ್ತಡ, ಮಕ್ಕಳನ್ನು ನೋಡಿಕೊಳ್ಳುವ ಒತ್ತಡ, ಹಾರ್ಮೋನ್ ಅಸಮತೋಲನದಿಂದ ಒತ್ತಡ ಹೆಚ್ಚುತ್ತಿದೆ. 40 ವರ್ಷ ಮೀರಿದ ಬಳಿಕ ಗಂಡಸರು 45 ವರ್ಷ ಮೀರಿದ ಬಳಿಕ ಮಹಿಳೆಯರು ನಿಯಮಿತವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ, ಕೊಬ್ಬಿನಾಂಶ ಪರೀಕ್ಷೆ, ಥ್ರೆಡ್‍ಮಿಲ್ ಇಸಿಜಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ, ಪ್ರತಿ ಬಾರಿ ಸಾಮಾನ್ಯ ಸ್ಥಿತಿಯಲ್ಲಿದ್ದರೆ 2 ವರ್ಷಕೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳವುದು ಮುಖ್ಯ.

ಹೃದಯದ ತೊಂದರೆಗೆ ದೇಹ ಮತ್ತು ರಕ್ತದಲ್ಲಿ ಶೇಖರಣೆಯಾಗುವ ಕೊಬ್ಬು, ಕೊಲೆಸ್ಟ್ರಾಲ್, ಅತಿರಕ್ತದೊತ್ತಡ, ಅತಿತೂಕವೂ ಮಾರಕವಾಗಿದೆ. ಬಹಳಷ್ಟು ಕಾಯಿಲೆಗೆ ನಾವು ಸೇವಿಸುವ ಆಹಾರದಲ್ಲಿರುವ ಕೆಲವು ಪದಾರ್ಥಗಳು ಕೂಡ ಕಾರಣವಾಗಿವೆ.

ಬಾಯಿ ರುಚಿಗಾಗಿ ಸಿಕ್ಕಿದನೆಲ್ಲ ತಿನ್ನುವುದು ಕಾಯಿಲೆಗಳಿಗೆ ಆಶ್ರಯ ನೀಡುತ್ತವೆ. ಎಲ್ಲವೂ ಅಷ್ಟೆ ಹಿತಮಿತವಾಗಿದ್ದರೆ ಮಾತ್ರ ಒಳಿತಾಗುತ್ತದೆ. ಜಿಡ್ಡು ಕೊಬ್ಬಿನಂಶ, ಎಣ್ಣೆಯಲ್ಲಿ ಕರಿದ ತಿಂಡಿಗಳು ಬಾಯಿಗೆ ರುಚಿಯಾಗಿದ್ದರೂ ಅವು ಹೃದಯದ ಆರೋಗ್ಯ ಒಳ್ಳೆಯದಲ್ಲ. ಹೀಗಾಗಿ ಶೇ. 15ರಿಂದ 20ರಷ್ಟು ಮಾತ್ರ ಕೊಬ್ಬು ಆಹಾರದಲ್ಲಿರುವಂತೆ ನೋಡಿಕೊಳ್ಳಬೇಕು.

ತುಪ್ಪ, ವನಸ್ಪತಿ, ಕೊಬ್ಬರಿ ಎಣ್ಣೆ, ಬೆಣ್ಣೆ,  ಹಾಲಿನ ಉತ್ಪನ್ನಗಳಾದ ಖೋವಾ, ಪನ್ನೀರು, ಐಸ್‍ಕ್ರೀಮ್, ಗಿಣ್ಣು ಸೇವಿಸಬಾರದು. ಜತೆಗೆ ಮೊಟ್ಟೆಯ ಹಳದಿ ಭಾಗ, ಚರ್ಬಿ ಮಾಂಸ, ಕೋಳಿಯ ಚರ್ಮ, ಹಂದಿ ಮಾಂಸ, ದನಮಾಂಸ ಮೊದಲಾದವುಗಳನ್ನು ತಿನ್ನಬಾರದು. ಉಪ್ಪನ್ನು ಆದಷ್ಟು ಕಡಿಮೆ ಮಾಡಬೇಕು. ಚಿಪ್ಸ್, ಸಾಸ್, ಉಪ್ಪಿನಕಾಯಿ ಉಪ್ಪು ಮಿಶ್ರಿತ ಬಿಸ್ಕೆಟ್, ಸಂಡಿಗೆ ಮೊದಲಾದವುಗಳನ್ನು ತಿನ್ನಬಾರದು. ಧೂಮಪಾನ, ಮದ್ಯಪಾನ ನಿಲ್ಲಿಸಬೇಕು.  ಬೊಜ್ಜು ಬಾರದಂತೆ ನೋಡಿಕೊಳ್ಳಬೇಕು. ಒತ್ತಡದ ಬದುಕಿನಿಂದ ಹೊರಬರಬೇಕು. ಕಾಫಿ, ಟೀ ಸೇರಿದಂತೆ ಕೆಲವು ಪಾನೀಯಗಳನ್ನು ಹೆಚ್ಚು ಸೇವಿಸಬಾರದು.

ನಾರಿನ ಅಂಶದ ಆಹಾರಗಳು, ಕಾಳುಗಳು, ಮೊಳಕೆಕಾಳುಗಳು, ಸೊಪ್ಪು, ಹಣ್ಣು ಹಂಪಲುಗಳು, ರಾಗಿ, ಗೋಧಿ, ಜೋಳ, ಅಕ್ಕಿಯನ್ನು ಮಧ್ಯಮ ಪ್ರಮಾಣದಲ್ಲಿ ಸೇವಿಸಬೇಕು. ಎಣ್ಣೆಬೀಜ ಮತ್ತು ಒಣ ಹಣ್ಣುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.  ವಿಟಮಿನ್ ಸಿ ಯುಕ್ತ ಹಣ್ಣುಗಳಾದ ದ್ರಾಕ್ಷಿ, ಸೀಬೆ, ಕಿತ್ತಲೆ, ಮೋಸಂಬಿ, ನೆಲ್ಲಿಕಾಯಿ ಮಾವಿನ ಹಣ್ಣನ್ನು  ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಬೆಳ್ಳುಳ್ಳಿ ಹಸಿ ಈರುಳ್ಳಿ ಸೇವನೆ ಒಳ್ಳೆಯದು.