ಹೃದಯವಂತರಾಗಿ.. ಹೃದಯದ ಆರೋಗ್ಯ ಕಾಪಾಡಿಕೊಳ್ಳಿ..!

ಹೃದಯವಂತರಾಗಿ.. ಹೃದಯದ ಆರೋಗ್ಯ ಕಾಪಾಡಿಕೊಳ್ಳಿ..!

LK   ¦    Sep 29, 2020 05:27:26 PM (IST)
ಹೃದಯವಂತರಾಗಿ.. ಹೃದಯದ ಆರೋಗ್ಯ ಕಾಪಾಡಿಕೊಳ್ಳಿ..!

ಸೆಪ್ಟಂಬರ್ 29 ಹೃದಯದ ದಿನವಂತೆ. ಹೀಗಾಗಿ ನಾವೆಲ್ಲರೂ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಕಾಳಜಿ ವಹಿಸಬೇಕಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಹೃದಯದ ಸಮಸ್ಯೆಗಳು ಎಲ್ಲ ವಯೋಮಾನದವರನ್ನು ಕಾಡುತ್ತಿರುವುದರಿಂದ ಹೃದಯದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸುವುದು ಅಗತ್ಯವಾಗಿದೆ.

ಇವತ್ತಿನ ಪರಿಸ್ಥಿತಿಯಲ್ಲಿ ಹೃದಯದ ಮೇಲಿನ ಹೆಚ್ಚಿನ ಒತ್ತಡ, ಬದಲಾದ ಜೀವನ ಶೈಲಿ, ಒತ್ತಡ, ವ್ಯಾಯಾಮ ಕೊರತೆ, ವಾಯು ಮಾಲಿನ್ಯ ಇತರೆ ಕಾರಣಗಳಿಂದ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಮುನ್ನೆಚ್ಚರಿಕೆ ಜತೆಗೆ ಸಮಸ್ಯೆ ಕಾಣಿಸಿಕೊಂಡಾಗ ತಕ್ಷಣ ಕೆಲ ವಿಧಾನಗಳನ್ನು ಅನುಸರಿಸಿದರೆ ಹೃದಯ ಸಂಬಂಧಿ ಸಮಸ್ಯೆಯ ತೀವ್ರತೆ ತಗ್ಗಿಸಬಹುದಾಗಿದೆ.

ಹೃದಯದ ಸಮಸ್ಯೆ ತಲೆದೋರುವ ಮುನ್ನ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಗಮನಹರಿಸಬೇಕಾಗಿದೆ. ಹಾಗಾದರೆ ಹೃದಯದ ಆರೋಗ್ಯ ಕಾಪಾಡಬೇಕಾದರೆ ಏನು ಮಾಡಬೇಕು ಎಂಬ ಪ್ರಶ್ನೆ ಕಾಡಬಹುದು. ಅದಕ್ಕೊಂದಿಷ್ಟು ಸಲಹೆಗಳನ್ನು ವೈದ್ಯರು ಹೇಳುತ್ತಾರೆ.

ರಕ್ತದಲ್ಲಿ ಸಕ್ಕರೆ ಪ್ರಮಾಣ, ಕೊಬ್ಬಿನಾಂಶ, ಶರೀರದ ತೂಕ ಮತ್ತು ಸೊಂಟದ ಸುತ್ತಳತೆ, ಅತಿಯಾಸೆ ಈ ಐದು ಅಂಶಗಳನ್ನು ಕಡಿಮೆಯಿಟ್ಟುಕೊಂಡರೆ ಒಳಿತು. ಜತೆಗೆ ವ್ಯಾಯಾಮ,  ದೇಹದಂಡನೆ ಮುಖ್ಯ. ಹೃದಯದ ತೊಂದರೆಗೆ ದೇಹ ಮತ್ತು ರಕ್ತದಲ್ಲಿ ಶೇಖರಣೆಯಾಗುವ ಕೊಬ್ಬು, ಕೊಲೆಸ್ಟ್ರಾಲ್, ಅತಿರಕ್ತದೊತ್ತಡ, ಅತಿತೂಕವೂ ಮಾರಕವಾಗಿದೆ. ಬಹಳಷ್ಟು ಕಾಯಿಲೆಗೆ ನಾವು ಸೇವಿಸುವ ಆಹಾರದಲ್ಲಿರುವ ಕೆಲವು ಪದಾರ್ಥಗಳು ಕೂಡ ಕಾರಣವಾಗಿವೆ ಎಂದರೆ ತಪ್ಪಾಗಲಾರದು.

ಬಾಯಿ ರುಚಿಗಾಗಿ ಸಿಕ್ಕಿದನೆಲ್ಲ ತಿನ್ನುವುದು ಕಾಯಿಲೆಗಳಿಗೆ ಆಶ್ರಯ ನೀಡುತ್ತವೆ. ಎಲ್ಲವೂ ಅಷ್ಟೆ ಹಿತಮಿತಾಗಿದ್ದರೆ ಮಾತ್ರ ಒಳಿತಾಗುತ್ತದೆ.

ಜಿಡ್ಡು ಕೊಬ್ಬಿನಂಶ, ಎಣ್ಣೆಯಲ್ಲಿ ಕರಿದ ತಿಂಡಿಗಳು ಬಾಯಿಗೆ ರುಚಿಯಾಗಿದ್ದರೂ ಅವು ಹೃದಯದ ಆರೋಗ್ಯ ಒಳ್ಳೆಯದಲ್ಲ. ಹೀಗಾಗಿ ಶೇ. 15ರಿಂದ 20ರಷ್ಟು ಮಾತ್ರ ಕೊಬ್ಬು ಆಹಾರದಲ್ಲಿರುವಂತೆ ನೋಡಿಕೊಳ್ಳಬೇಕು. ಹಾಗಾದರೆ ಯಾವುದನ್ನು ಸೇವಿಸಬೇಕು? ಯಾವುದನ್ನು ಸೇವಿಸಬಾರದು ಎಂಬುದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ತುಪ್ಪ, ವನಸ್ಪತಿ, ಕೊಬ್ಬರಿ ಎಣ್ಣೆ, ಬೆಣ್ಣೆ,  ಹಾಲಿನ ಉತ್ಪನ್ನಗಳಾದ ಖೋವಾ, ಪನ್ನೀರು, ಐಸ್‍ಕ್ರೀಮ್, ಗಿಣ್ಣು ಸೇವಿಸಬಾರದು.

ಮೊಟ್ಟೆಯ ಹಳದಿ ಭಾಗ, ಚರ್ಬಿ ಮಾಂಸ, ಕೋಳಿಯ ಚರ್ಮ, ಹಂದಿ ಮಾಂಸ, ಕೆಂಪು ಮಾಂಸ ಮೊದಲಾದವುಗಳನ್ನು ತಿನ್ನಬಾರದು. ಉಪ್ಪನ್ನು ಆದಷ್ಟು ಕಡಿಮೆ ಮಾಡಬೇಕು. ಚಿಪ್ಸ್, ಸಾಸ್, ಉಪ್ಪಿನಕಾಯಿ ಉಪ್ಪು ಮಿಶ್ರಿತ ಬಿಸ್ಕೆಟ್, ಸಂಡಿಗೆ ಮೊದಲಾದವುಗಳನ್ನು ತಿನ್ನಬಾರದು. ಧೂಮಪಾನ, ಮದ್ಯಪಾನ ನಿಲ್ಲಿಸಬೇಕು.  ಬೊಜ್ಜು ಬಾರದಂತೆ ನೋಡಿಕೊಳ್ಳಬೇಕು. ಒತ್ತಡದ ಬದುಕಿನಿಂದ ಹೊರಬರಬೇಕು. ಕಾಫಿ, ಟೀ ಸೇರಿದಂತೆ ಕೆಲವು ಪಾನೀಯಗಳನ್ನು ಹೆಚ್ಚು ಸೇವಿಸಬಾರದು.

ನಾರಿನ ಅಂಶದ ಆಹಾರಗಳು, ಕಾಳುಗಳು, ಮೊಳಕೆಕಾಳುಗಳು, ಸೊಪ್ಪು, ಹಣ್ಣು ಹಂಪಲುಗಳು, ರಾಗಿ, ಗೋಧಿ, ಜೋಳ, ಅಕ್ಕಿಯನ್ನು ಮಧ್ಯಮ ಪ್ರಮಾಣದಲ್ಲಿ ಸೇವಿಸಬೇಕು. ಎಣ್ಣೆಬೀಜ ಮತ್ತು ಒಣ ಹಣ್ಣುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.  ವಿಟಮಿನ್ ಸಿ ಯುಕ್ತ ಹಣ್ಣುಗಳಾದ ದ್ರಾಕ್ಷಿ, ಸೀಬೆ, ಕಿತ್ತಲೆ, ಮೋಸಂಬಿ, ನೆಲ್ಲಿಕಾಯಿ ಮಾವಿನ ಹಣ್ಣನ್ನು  ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಬೆಳ್ಳುಳ್ಳಿ ಹಸಿ ಈರುಳ್ಳಿ ಸೇವನೆ ಒಳ್ಳೆಯದು.

 

40ವರ್ಷ ಮೀರಿದ ಬಳಿಕ ಗಂಡಸರು 45ವರ್ಷ ಮೀರಿದ ಬಳಿಕ ಮಹಿಳೆಯರು ನಿಯಮಿತವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ, ಕೊಬ್ಬಿನಾಂಶ ಪರೀಕ್ಷೆ, ಥ್ರೆಡ್‍ಮಿಲ್ ಇಸಿಜಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ, ಪ್ರತಿ ಬಾರಿ ಸಾಮಾನ್ಯ ಸ್ಥಿತಿಯಲ್ಲಿದ್ದರೆ 2ವರ್ಷಕೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಬಹುದು.

ಹೃದಯಘಾತವಾದಾಗ ಸಾಮಾನ್ಯವಾಗಿ ಎದೆಯ ಎಡಭಾಗ, ಮಧ್ಯಭಾಗದಲ್ಲಿ ನೋವು, ಉರಿ ಕಾಣಿಸಿಕೊಳುತ್ತದೆ. ಶೇ.30ರಿಂದ 40ರಷ್ಟು ಮಂದಿಗೆ ಹೃದಯಘಾತವಾದಾಗ ಎದೆಭಾಗದಲ್ಲಿ ನೋವು ಕಾಣಿಸಿಕೊಳುವುದಿಲ್ಲ. ಬದಲಿಗೆ ಗಂಟಲು, ದವಡೆ ನೋವು ಕಾಣಿಸಿಕೊಳ್ಳಬಹುದು, ಬೆನ್ನಿನ ಮೇಲ್ಭಾಗ, ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಂಡು ವಾಂತಿಯಾಗಬಹುದು, ಅತಿಯಾಗಿ ಬೆವರು ಬರಬಹುದು, ಹಾಗಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಎಂದು ನಿರ್ಲಕ್ಷಿಸಿದರೆ ಸಾವಿನ ಅಪಾಯವಿರುತ್ತದೆ. ಹೃದಯಘಾತವಾದ ತಕ್ಷಣ ರೋಗಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಬೇಕು. ಇದಕ್ಕೆ ಎರಡು ರೀತಿಯ ಚಿಕಿತ್ಸೆ ಇದೆ. ರಕ್ತನಾಳದಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ಕರಗಿಸಲು ಮೆಡಿಸಿನ್ ನೀಡಬೇಕು. ನಂತರ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಬೇಕಾಗುತ್ತದೆ.

ಹೃದಯದ ಸಮಸ್ಯೆ ಬಂದ ಬಳಿಕ ಚಿಕಿತ್ಸೆ ಪಡೆಯುವುದು ಇದ್ದದ್ದೇ ಆದರೆ ಅದು ಬರದಂತೆ ವ್ಯಾಯಾಮ, ಆಹಾರಕ್ರಮಗಳ ಮೂಲಕ ನೋಡಿಕೊಳ್ಳುವುದು ಬಹು ಮುಖ್ಯವಾಗಿದೆ.