ವೃದ್ಧಾಪ್ಯದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ

ವೃದ್ಧಾಪ್ಯದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ

LK   ¦    Jan 10, 2020 02:59:17 PM (IST)
ವೃದ್ಧಾಪ್ಯದಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ

ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನೂ ಬದುಕಿನ ಜೀವಿತಾವಧಿಯಲ್ಲಿ ಮೂರು ಹಂತಗಳನ್ನು ದಾಟಲೇ ಬೇಕು. ಅಷ್ಟೇ ಅಲ್ಲ. ಒಂದಲ್ಲ ಒಂದು ದಿನ ಸಾಯಲೇ ಬೇಕು.

ಆದರೆ ತಮ್ಮ ಜೀವಿತಾವಧಿಯಲ್ಲಿ ನಾವು ಆರೋಗ್ಯವಂತರಾಗಿ ಬದುಕುವುದೇ ಈಗ ಸವಾಲ್ ಆಗಿ ಪರಿಣಮಿಸಿದೆ. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅನಾರೋಗ್ಯವಂತರೇ ಆಗಿದ್ದೇವೆ. ಕಾರಣ ಎಲ್ಲೋ ಒಂದು ಕಡೆ ಆರೋಗ್ಯವಂತ ಜೀವನವನ್ನು ರೂಢಿಸಿಕೊಳ್ಳುವಲ್ಲಿ ನಾವು ಎಡವುತ್ತಿದ್ದೇವೆ. ಬಾಲ್ಯ, ಯೌವನ ದಾಟಿಗೆ ಮುಪ್ಪಿಗೆ ಕಾಲಿಡುತ್ತಿದ್ದಂತೆಯೇ ನಾವು ನಮಗೆ ಗೊತ್ತಿಲ್ಲದಂತೆ ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿ ಬಿಡುತ್ತಿದ್ದೇವೆ. ಇದಕ್ಕೆ ಕಾರಣಗಳು ಅನೇಕ ಇರಬಹುದಾದರೂ ಬದುಕಿನ ಕೊನೆಯ ವೃದ್ಧಾಪ್ಯದ ದಿನಗಳನ್ನು ಬಹುತೇಕರು ನೆಮ್ಮದಿಯಾಗಿ ಕಳೆಯುತ್ತಿಲ್ಲ ಎಂಬುದನ್ನು ನಾವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ನಮಗೆಲ್ಲ ಗೊತ್ತಿರುವಂತೆ ಮುಪ್ಪು ಎನ್ನುವುದು ಸಾವಿಗೆ ಸಾಮೀಪ್ಯದ ಘಟ್ಟ. ಹಾಗಾಗಿ ಅದನ್ನು ಇದ್ದಷ್ಟು ದಿನ ಆರೋಗ್ಯಕರ, ಉತ್ಸಾಹಭರಿತ ಮತ್ತು ಸ್ವತಂತ್ರ್ಯ ಜೀವನ ನಡೆಸಲು ಅನುಕೂಲವಾಗುವಂತೆ ಕಳೆಯಬೇಕಾಗಿದೆ. ಆದರೆ ಆ ಭಾಗ್ಯ ಹೆಚ್ಚಿನ ವೃದ್ಧರಿಗಿಲ್ಲ. ಕಾರಣ ಆರ್ಥಿಕ ಸಮಸ್ಯೆಗಳು ಒಂದೆಡೆಯಾದರೆ ಮತ್ತೊಂದೆಡೆ ದೈಹಿಕ ಸಮಸ್ಯೆಗಳು ಇನ್ನು ಕೆಲವರಿಗೆ ಮಾನಸಿಕ ಚಿಂತೆಗಳು. ಇದೆಲ್ಲವೂ ನೆಮ್ಮದಿಯಾಗಿ ಕಳೆಯ ಬೇಕಾಗಿದ್ದ ವೃದ್ಧಾಪ್ಯವನ್ನು ಜಿಗುಪ್ಸೆಗೊಳಪಡಿಸುತ್ತದೆ. ಈ ವೇಳೆ ಬದುಕೇ ಬೇಡ ಎನ್ನುವ ಮಟ್ಟಿಗೆ ಕೆಲವರು ಬಂದು ಬಿಡುತ್ತಾರೆ. ಅವರೇ ಅವರ ಬಗ್ಗೆ ಆಸಕ್ತಿ ಕಳೆದುಬಿಡುತ್ತಾರೆ.

ವೃದ್ಧಾಪ್ಯದಲ್ಲಿ ಪ್ರತಿಯೊಬ್ಬ ವೃದ್ಧರೂ ಮೊದಲಿಗೆ ತಮ್ಮ ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುವತ್ತ ಹೆಜ್ಜೆಯಿಡಬೇಕು. ಮಾನಸಿಕವಾಗಿ ಕುಗ್ಗಿ ಹೋದರೆ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಷ್ಟವಾಗಿರುತ್ತದೆ. ಒಂದು ವೇಳೆ ಪಿಂಚಣಿ ಪಡೆಯುವಂತಹ ವೃದ್ಧರ ಬದುಕು ಕಷ್ಟವಾಗುವುದಿಲ್ಲ. ಆದರೆ ಸಂಧ್ಯಾಕಾಲದಲ್ಲಿ ಮಾಡಿದ ಸಂಪಾದನೆಯನ್ನೆಲ್ಲ ಮಕ್ಕಳಿಗೆ ಖರ್ಚು ಮಾಡಿ ಅವರ ಆಸರೆಯಲ್ಲಿ ಬದುಕುವ ಬಹುತೇಕ ವೃದ್ಧರು ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಹಾಗೆಂದು ಹಣವಿದ್ದ ತಕ್ಷಣಕ್ಕೆ ಆರೋಗ್ಯವನ್ನು ಪಡೆದುಕೊಳ್ಳಲು ಸಾಧ್ಯ ಎಂದು ಹೇಳಲಾಗದು. ಆದರೆ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ತೊಂದರೆಯಾಗಬಹುದು.

ವೃದ್ಧರಲ್ಲಿ ಶಾರೀರಿಕವಾಗಿ ಒಂದಷ್ಟು ಬದಲಾವಣೆಗಳು ಕಂಡು ಬರುವುದರಿಂದ ಒಂದಷ್ಟು ಮಟ್ಟಿಗೆ ಆರೋಗ್ಯದ ಕಡೆಗೆ ಮತ್ತು ಆಹಾರ ಕ್ರಮಗಳತ್ತವೂ ಎಚ್ಚರಿಕೆ ವಹಿಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

ಹೆಚ್ಚಾಗಿ ವಯಸ್ಸಾದವರಲ್ಲಿ ಮೂಳೆಗಳ ದೌರ್ಬಲ್ಯ ಕಂಡುಬರುತ್ತದೆ. ಇನ್ನು ಹೆಂಗಸರಲ್ಲಿ ಋತುಚಕ್ರ ನಿಂತ ಬಳಿಕ ಶರೀರರದಲ್ಲಿ ಈಸ್ಟ್ರೋಜನ್ ಉತ್ಪಾದನೆ ಕಡಿಮೆಯಾಗುವುದು ಮೂಳೆ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಕರುಳಿನಲ್ಲಿ ಕ್ಯಾಲಿಯಂ ಹೀರುವಿಕೆ ಡಿ ಜೀವಸತ್ವದ ಉತ್ಪಾದನೆ ಹಾಗೂ ಶಾರೀರಿಕ ಚಟುವಟಿಕೆಗಳು ಕಡಿಮೆಯಾಗುವುದು ಕೂಡ ಮೂಳೆಗಳು ಸವೆಯಲು ಕಾರಣವಾಗುತ್ತದೆ. ಇದನ್ನು ಕ್ಯಾಲ್ಸಿಯಂ ಹಾಗೂ ಡಿ ಜೀವಸತ್ವವಿರುವ ಮಾತ್ರೆಗಳನ್ನು ಸೇವಿಸುವುದರಿಂದ ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಿಕೊಳ್ಳಬೇಕು.

ವಯಸ್ಸಾದಂತೆಲ್ಲ ಜೀವಕೋಶಗಳ ಆಂತರಿಕ ಕ್ರಿಯೆ ಕುಗ್ಗುವುದರಿಂದ ದೈಹಿಕ ಸಾಮಥ್ರ್ಯವೂ ಕಡಿಮೆಯಾಗುತ್ತದೆ. ಖನಿಜಾಂಶದ ಕೊರತೆಯಿಂದ ಮೂಳೆಗಳು ಶಕ್ತಿ ಕಳೆದುಕೊಳ್ಳುತ್ತವೆ. ಹಲ್ಲು ಮತ್ತು ವಸಡುಗಳು ದುರ್ಬಲಗೊಳ್ಳುತ್ತವೆ. ಇದರಿಂದ ಹಲ್ಲು ಉದುರುತ್ತದೆ. ಬಾಯಲ್ಲಿ ಜೊಲ್ಲು ರಸದ ಉತ್ಪಾದನೆಯೂ ಹೆಚ್ಚಿನ ಪ್ರಮಾಣದಲ್ಲಿ ಆಗದೆ ಬಾಯಿ ಒಣಗುತ್ತಿರುತ್ತದೆ. ಇದರಿಂದ ಆಹಾರವನ್ನು ಅಗೆಯಲು ಮತ್ತು ನುಂಗಲು ಕಷ್ಟವಾಗುತ್ತದೆ.

ನಾಲಿಗೆಯ ಮೇಲಿರುವ ರುಚಿಗ್ರಂಥಿಗಳ ಶಕ್ತಿ ಕುಗ್ಗುವುದರಿಂದ ಆಹಾರದಲ್ಲಿರುವ ಉಪ್ಪು, ಹುಳಿ, ಖಾರ ಸೇರಿದಂತೆ ಒಟ್ಟಾರೆ ರುಚಿಯನ್ನು ಗ್ರಹಿಸುವ ಶಕ್ತಿಯೂ ಕಡಿಮೆಯಾಗಿ ಹಸಿವಾಗುವುದಿಲ್ಲ. ಹಸಿವೇ ಇಲ್ಲದಿದ್ದಾಗ ಊಟ ಮಾಡುವುದಾದರೂ ಹೇಗೆ? ಹೀಗಾಗಿ ಆಹಾರ ಸೇವನೆಯ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗುತ್ತದೆ.

ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆಯೇ ಬೊಜ್ಜಿನ ಸಮಸ್ಯೆ ಕಾಡುತ್ತದೆ. ಇದಕ್ಕೆ ಕಾರಣ ಯಾವುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಿರುವುದು, ವ್ಯಾಯಾಮ ಮಾಡದಿರುವುದು, ಪಥ್ಯಗಳಿಲ್ಲದ, ಶರೀರಕ್ಕೆ ಹೊಂದದ ಆಹಾರ ಮತ್ತು ಅಗತ್ಯಕ್ಕಿಂತ ಹೆಚ್ಚು ಸೇವನೆಯೂ ಬೊಜ್ಜು ಬರಲು ಸಹಕರಿಸುತ್ತದೆ. ಬೊಜ್ಜು ದೇಹ ಮಧುಮೇಹ ಬರಲು ದಾರಿ ಮಾಡಿಕೊಡುತ್ತದೆ.

ವಯಸ್ಸಾದವರಲ್ಲಿ ನಿದ್ರೆ ಬಾರದಿರುವುದು, ಸುಸ್ತು, ಏನೋ ಒಂದು ರೀತಿಯ ಕಳವಳ ಕಂಡು ಬರುತ್ತದೆ. ಇದು ರಕ್ತ ಹೀನತೆಯಿಂದ ಬರುವ ಸಮಸ್ಯೆಗಳು. ಕಬ್ಬಿಣ ಮತ್ತು ಸಿ ಜೀವಸತ್ವ ಸಮರ್ಪಕವಾಗಿ ಸಿಗದಿದ್ದಾಗ ರಕ್ತಹೀನತೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಸೊಪ್ಪು ತರಕಾರಿ, ಕಾಳುಗಳು, ಅತ್ತಿಹಣ್ಣು, ಲಿವರ್, ಮೊಟ್ಟೆ, ಸೋಯಾಬಿನ್ ಮೊದಲಾದವುಗಳನ್ನು ಸೇವಿಸಬೇಕು.

ವಯಸ್ಸಾದವರನ್ನು ಕಾಡುವ ಮತ್ತೊಂದು ಸಮಸ್ಯೆ ಎಂದರೆ ಮಲಬದ್ಧತೆ. ಮಲಗಟ್ಟಿಯಾಗಿ ಮಲ ವಿಸರ್ಜಿಸಲು ಕಷ್ಟವಾಗುವುದು ಮತ್ತು ಅನಿಯಮಿತವಾಗಿ ವಿಸರ್ಜನೆಯಾಗುವುದೇ ಮಲಬದ್ಧತೆಯ ಲಕ್ಷಣಗಳು. ಇದರೊಂದಿಗೆ ಹೊಟ್ಟೆ ಉಬ್ಬರ, ಆಲಸ್ಯ ಮತ್ತು ಹೊಟ್ಟೆ ತುಂಬಿದಂತೆ ಇರುತ್ತದೆ.

ಇದನ್ನು ಹೋಗಲಾಡಿಸಲು ನಾರಿನ ಅಂಶ ಹೆಚ್ಚಿರುವ ತರಕಾರಿಗಳನ್ನು ಮತ್ತು ಹೆಚ್ಚು ಪ್ರಮಾಣದಲ್ಲಿ ನೀರು ಸೇವಿಸುವುದು ಉತ್ತಮ. ನಿಯಮಿತ ಆಹಾರ ಸೇವನೆ, ತಮ್ಮ ಶರೀರಕ್ಕೆ ಯಾವುದಾದರೂ ಆಹಾರ ಸ್ಪಂದಿಸುವುದಿಲ್ಲ ಎಂಬುದು ಗೊತ್ತಾದ ಬಳಿಕ ಮತ್ತೊಮ್ಮೆ ಅದರಿಂದ ದೂರವಿರುವ ಪ್ರಯತ್ನ ಮಾಡಬೇಕು. ಆದಷ್ಟು ದ್ರವ ಆಹಾರಕ್ಕೆ ಆದ್ಯತೆ ನೀಡಬೇಕು.

ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರ ಮಾಡುವುದು, ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಒಂದಷ್ಟು ಸಮಯವನ್ನು ಕಳೆಯುವುದು, ಹೀಗೆ ಒಂದಷ್ಟು ಮನಸ್ಸನ್ನು ಶಾಂತಗೊಳಿಸುವ ಕ್ರಿಯೆಗಳತ್ತ ಗಮನಹರಿಸಬೇಕು. ಮಾನಸಿಕವಾಗಿ ನಾವು ನೆಮ್ಮದಿಯನ್ನು ಮೊದಲಿಗೆ ಕಂಡುಕೊಂಡರೆ ಉಳಿದ ಸಮಸ್ಯೆಗಳನ್ನು ಎದುರಿಸುವುದು ಕಷ್ಟವಾಗಲಾರದು. ಹೀಗಾಗಿ ವೃದ್ಧಾಪ್ಯದಲ್ಲಿ ಮೊದಲಿಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ.