ಇದೀಗ ಕಾಡುವ ಜ್ವರವನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ

ಇದೀಗ ಕಾಡುವ ಜ್ವರವನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ

LK   ¦    May 01, 2019 03:00:59 PM (IST)
ಇದೀಗ ಕಾಡುವ ಜ್ವರವನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ

ಸುಡು ಬೇಸಿಗೆಯ ನಡುವೆ ಮಳೆ ಬರಲಾರಂಭಿಸಿದೆ. ಆದರೆ ಈ ಮಳೆಯೊಂದಿಗೆ ಸಾಂಕ್ರಾಮಿಕ ರೋಗಗಳು ಕೂಡ ಜನರನ್ನು ಕಾಡತೊಡಗಿದೆ. ಇಂತಹ ರೋಗಗಳ ಪೈಕಿ ಮಲೇರಿಯಾ, ಹೆಚ್1ಎನ್1 ಆಗಿರಲೂ ಬಹುದು ಆದ್ದರಿಂದ ಇದರ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದಾಗಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆಯೇ ವಾತಾವರಣ ಬದಲಾವಣೆಯಾಗುವುದರಿಂದ ಕೆಲವೊಮ್ಮೆ ಜ್ವರ ಕಾಣಿಸುತ್ತದೆ. ಹೀಗಾಗಿ ಮಾಮೂಲಿ ಜ್ವರ ಎಂದು ನಿರ್ಲಕ್ಷ್ಯ ತಾಳುತ್ತಾ ಯಾವುದೋ ಮಾತ್ರೆ ಸೇವಿಸಿ ತೆಪ್ಪಗಾಗುವ ಬದಲು ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸಿ ಬಂದಿರುವ ಜ್ವರ ಯಾವುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ಕಾಡುವ ಜ್ವರ ಮಲೇರಿಯಾ, ಹೆಚ್1ಎನ್1 ಆಗಿದ್ದರೆ ಜೀವಕ್ಕೆ ಆಪತ್ತು ತಂದರೂ ತರಬಹುದು.

ಹಾಗೆ ನೋಡಿದರೆ ಮಲೇರಿಯ ರೋಗವು ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಸೂಕ್ಷ್ಮಾಣುವಿನಿಂದ ಉಂಟಾಗುತ್ತವೆ ಮತ್ತು ಸೋಂಕು ಹೊಂದಿದ ಹೆಣ್ಣು ಅನಾಫಿಲೀಸ್ ಸೊಳ್ಳೆಗಳು ಮಲೇರಿಯ ರೋಗವನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ. ಮೂರು ಹಂತಗಳ ಗುಣ ಲಕ್ಷಣಗಳನ್ನು ಹೊಂದಿರುವ ಇದು ಮೊದಲಿಗೆ ಚಳಿಯ ಜೊತೆಯಲ್ಲಿ ನಡುಕ ಹಾಗೂ ತಲೆನೋವು ಇರುತ್ತದೆ. ಇದು ಸುಮಾರು 15 ನಿಮಿಷದಿಂದ ಒಂದು ಗಂಟೆಯ ಸಮಯ ಇರಬಹುದು.

ಎರಡನೆಯ ಹಂತದಲ್ಲಿ ಜ್ವರ ತೀವ್ರವಾಗಿರುತ್ತದೆ. ವಿಪರೀತ ತಲೆನೋವು, ವಾಕರಿಕೆ, ವಾಂತಿಯಾಗುವಂತೆ ಅನಿಸುತ್ತದೆ. ವಿಪರೀತ ಬಾಯರಿಕೆ ಅನಿಸುತ್ತದೆ. ಈ ಹಂತ 2 ರಿಂದ 6 ಗಂಟೆಗಳ ಕಾಲ ಇರುತ್ತದೆ.

ಇನ್ನು ಮೂರನೆಯದು ಜ್ವರ ಕಡಿಮೆಯಾಗುತ್ತದೆ ಮತ್ತು ದೇಹವಿಡೀ ವಿಪರೀತ ಬೆವರುತ್ತದೆ. ಸಾಮಾನ್ಯವಾಗಿ ರೋಗಿಗೆ ಗಾಢ ನಿದ್ರೆ ಬರುತ್ತದೆ. ಎಚ್ಚರವಾದಾಗ ಬಳಲಿ ಸುಸ್ತಾದ ಅನುಭವ ಆಗುತ್ತದೆ. ಈ ಹಂತ 2 ರಿಂದ 4 ಗಂಟೆಗಳ ಕಾಲ ಇರುತ್ತದೆ. ಇದನ್ನು ರಕ್ತ ಲೇಪನ ಪರೀಕ್ಷೆಯಿಂದ ಕಂಡು ಹಿಡಿದು ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಹೆಚ್1ಎನ್1 ರೋಗವು ಇನ್‍ಫ್ಲೂಯೆಂಜಾ ಎ ಎಂಬ ವೈರಸ್‍ನಿಂದ ಇದು ಹರಡುತ್ತಿದ್ದು, ಶೀತ, ತಲೆನೋವು, ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡು ಚಳಿಯ ಜತೆ ದೇಹ ಬಳಲುತ್ತಾ.. ಕೆಲವೊಮ್ಮೆ ವಾಂತಿ ಬೇಧಿ ಆಗುವುದು. ಉಸಿರಾಟದಲ್ಲಿ ತೊಂದರೆ ಕಾಣಿಸುವುದು ಈ ಜ್ವರದ ಲಕ್ಷಣವಾಗಿದೆ.

 

ಹೆಚ್1ಎನ್1 ಕಾಣಿಸಿಕೊಂಡರೆ ಭಯಗೊಳ್ಳುವ ಅಗತ್ಯವಿಲ್ಲ. ಈ ರೋಗಕ್ಕೆ ಪರಿಣಾಮಕಾರಿಯಾದ ಔಷಧಿ ಲಭ್ಯವಿದ್ದು ಒಸೆಲ್ಟಮಿವರ್ (ಟ್ಯಾಮಿಫ್ಲೂ) ಔಷಧಿಯನ್ನು ವೈದ್ಯರ ಸಲಹೆ ಮೇರೆಗೆ ಪಡೆಯಬಹುದು. ಹೆಚ್1ಎನ್1 ರೋಗಕ್ಕೆ ಒಳಗಾದವರು ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವ ಟಿಶ್ಯೂ ಪೇಪರ್‍ನಿಂದ ಮೂಗನ್ನು ಮುಚ್ಚಿಕೊಳ್ಳಬೇಕು. ಕೈಗಳನ್ನು ಆಗಿಂದಾಗ್ಗೆ ಸಾಬೂನಿನಿಂದ ತೊಳೆಯಬೇಕು. ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಬೇಕು. ಸೋಂಕು ಇದ್ದಲ್ಲಿ ಮಾಸ್ಕ್ ಧರಿಸಿ ಮನೆಯಲ್ಲಿಯೇ ಇರುವುದು ಉತ್ತಮ. ಸೂಕ್ಷ್ಮ ಹಾಗೂ ಚಿಕ್ಕಮಕ್ಕಳಿಂದ ದೂರವಿರಬೇಕು. ವಿಶ್ರಾಂತಿ ಪಡೆಯಬೇಕು. ಪೌಷ್ಠಿಕ ಆಹಾರ ಸೇವಿಸಬೇಕು. ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.

ಹೆಚ್1ಎನ್1 ಸೋಂಕು ಇತರರಿಗೆ ಬಹು ಬೇಗ ಹರಡುವ ಸಾಧ್ಯತೆ ಹೆಚ್ಚಿರುವ ಕಾರಣ ಸೋಂಕಿತರ ಬಳಿ ಅತೀ ಸಮೀಪ ಹೋಗಬಾರದು. ಹಸ್ತಲಾಘವ, ತಬ್ಬಿಕೊಳ್ಳುವುದು, ಚುಂಬಿಸುವುದನ್ನು ಮಾಡಬಾರದಾಗಿದೆ.ಇನ್ನು ಸೋಂಕಿತರಂತು ವೈದ್ಯರ ಸಲಹೆ ಪಡೆಯದೆ ಔಷಧಿ ಸೇವನೆ ಮಾಡಬಾರದು. ಜನನಿಬಿಡ ಪ್ರದೇಶದಲ್ಲಿ ಕರವಸ್ತ್ರದಿಂದ ಮುಚ್ಚಿಕೊಳ್ಳದೆ ಕೆಮ್ಮುವುದು ಹಾಗೂ ಸೀನುವುದು ಮಾಡಬಾರದು. ಕಣ್ಣು, ಮೂಗು, ಬಾಯಿಯನ್ನು ಆಗಿಂದಾಗ್ಗೆ ಮುಟ್ಟಬಾರದು ಹಾಗೂ ಎಲ್ಲೆಂದರಲ್ಲಿ ಉಗುಳಬಾರದು ಏಕೆಂದರೆ ಇದರಿಂದ ಹೊರ ಬರುವ ವೈರಸ್‍ಗಳು ಆರೋಗ್ಯವಂತರ ಮೇಲೆ ದಾಳಿ ಮಾಡಿ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿದೆ.