ತಾಯಿ ಹಾಲು ಕುಡಿಸಿ ಮಗುವಿನ ಆರೋಗ್ಯ ಕಾಪಾಡಿ

ತಾಯಿ ಹಾಲು ಕುಡಿಸಿ ಮಗುವಿನ ಆರೋಗ್ಯ ಕಾಪಾಡಿ

LK   ¦    Aug 01, 2019 01:49:49 PM (IST)
ತಾಯಿ ಹಾಲು ಕುಡಿಸಿ ಮಗುವಿನ ಆರೋಗ್ಯ ಕಾಪಾಡಿ

ಇವತ್ತು ಮಗುವಿಗೆ ಹಾಲುಣಿಸಿ ಎಂದು ಅರಿವು ಮೂಡಿಸಬೇಕಾದ ಅನಿವಾರ್ಯತೆ ಬಂದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಯಾವುದೇ ಪ್ರಾಣಿಗಳಿರಲಿ ಅದು ತನ್ನ ಮರಿಗೆ ಹಾಲುಣಿಸುವುದರಲ್ಲೇ ಹೆಚ್ಚಿನ ಸಮಯ ಕಳೆಯುತ್ತದೆ. ಆದರೆ ಬುದ್ದಿವಂತರಾದ ಮನುಷ್ಯನಿಗೆ ಹಾಲುಣಿಸಿ ಎಂಬ ಅರಿವು ಮೂಡಿಸಬೇಕಾದ ಅನಿವಾರ್ಯತೆ ಬಂದಿರುವುದು ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತಿದೆ.

ಇತ್ತೀಚಿನ ದಿನಗಳಲ್ಲಿ ತಮ್ಮ ಸೌಂದರ್ಯಕ್ಕೆ ಒತ್ತು ನೀಡುವ ಕೆಲವು ಮಹಿಳೆಯರು ಮಗುವಿಗೆ ಹಾಲುಣಿಸಿದರೆ ಸೌಂದರ್ಯಕ್ಕೆ ಧಕ್ಕೆ ಬರುತ್ತದೆ ಎಂಬ ವೈಜ್ಞಾನಿಕವಾಗಿ ಸತ್ಯವಲ್ಲದ ಸುದ್ದಿಗಳಿಗೆ ಕಿವಿಗೊಟ್ಟು ಹಾಲುಣಿಸದರಿಯುವುದು ಕಂಡು ಬರುತ್ತಿದೆ. ಹೀಗಾಗಿ ಮಕ್ಕಳ ಆರೋಗ್ಯ ಕುಂಟಿತವಾಗಿ ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದೆ. ಇಂತಹ ತಾಯಂದಿರಲ್ಲಿ ಮನೆ ಮಾಡಿರುವ ಅಜ್ಞಾನವನ್ನು ಹೋಗಲಾಡಿಸುವ ಸಲುವಾಗಿಯೇ ವಿಶ್ವದಾದ್ಯಂತ ಸ್ತನ್ಯಪಾನ ಸಪ್ತಾಹವನ್ನು ಆಗಸ್ಟ್ 1ರಿಂದ 7ರವರೆಗೆ ಆಚರಿಸಲಾಗುತ್ತಿದೆ. ಆ ಮೂಲಕ ಸ್ತನ್ಯಪಾನದ ಬಗೆಗೆ ಅರಿವು ಮೂಡಿಸಲಾಗುತ್ತಿದೆ.

ವೈದ್ಯಲೋಕದಲ್ಲಿ ಹುಟ್ಟಿದ ಮಗುವಿಗೆ ತಾಯಿಯ ಹಾಲು ಪೋಷಣೆಯ ಪ್ರಾಥಮಿಕ ಮೂಲವಾಗಿರುವುದರಿಂದ ಮಗುವಿಗೆ ಸುರಕ್ಷಿತ, ಪೋಷಣೆ ಮತ್ತು ಆರೋಗ್ಯದ ಅಭಿವೃದ್ಧಿಯನ್ನು ಖಾತರಿಪಡಿಸುತ್ತದೆ. ಇದೊಂದು ರೀತಿಯ ನೈಸರ್ಗಿಕ ಆಹಾರವಾಗಿರುವುದರಿಂದ ಮಗುವಿಗೆ ಸುಲಭವಾಗಿ ಜೀರ್ಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವೈದ್ಯರ ಪ್ರಕಾರ ಮಗುಹುಟ್ಟಿದ ಅರ್ಧ ಗಂಟೆಯೊಳಗೆ ಹಾಲುಕುಡಿಸಬೇಕು. ಒಂದು ವೇಳೆ ಸಿಸೇರಿಯನ್ ಮೂಲಕ ಮಗುಹುಟ್ಟಿದ್ದರೆ ನಾಲ್ಕು ಗಂಟೆ ಅವಧಿಯಲ್ಲಿ ಹಾಲುಣಿಸಬೇಕಂತೆ. ಏಕೆಂದರೆ ತಾಯಿಯ ಎದೆಯಿಂದ ಮೊದಲ ಬಾರಿಗೆ ಬರುವ ಹಾಲು ರೋಗನಿರೋಧಕವಾಗಿರುತ್ತದೆ ಮತ್ತು ಇದರಲ್ಲಿ ಪ್ರೊಟೀನ್, ಖನಿಜಾಂಶ, ವಿಟಮಿನ್ ಇಷ್ಟೇ ಅಲ್ಲ ವಿಟಮಿನ್ ಎ, ಆ್ಯಂಟಿಬಾಡಿಗಳು, ಸೋಂಕು ನಿರೋಧಕಗಳು ಜಾಸ್ತಿ ಇರುತ್ತದೆ. ಮೂರು ದಿನಗಳ ಕಾಲ ಬರುವ ಹಾಲು ಗಾಢಹಳದಿ ಬಣ್ಣದಲ್ಲಿರುತ್ತದೆ.

ಮಗುವಿಗೆ ಹಾಲುಣಿಸುವ ತಾಯಂದಿರು ಮಗುವಿನ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೋ ಅಷ್ಟೇ ಕಾಳಜಿಯನ್ನು ತಮ್ಮ ಆರೋಗ್ಯದ ಬಗ್ಗೆಯೂ ವಹಿಸುವುದು ಅಗತ್ಯವಾಗಿರುತ್ತದೆ. ಹೆರಿಗೆಯ ನಂತರ ದೇಹದಲ್ಲಿ ಒಂದಷ್ಟು ಬದಲಾವಣೆಗಳು ಸಾಮಾನ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಪೌಷ್ಠಿಕ ಆಹಾರ ಸೇವನೆ ಸೇರಿದಂತೆ ಕೆಲವು ಸಲಹೆಗಳನ್ನು ವೈದ್ಯರಿಂದ ಪಡೆದು ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳಬೇಕು.

ಹೆರಿಗೆಯ ನಂತರ ಕೆಲವು ಮಹಿಳೆಯರಲ್ಲಿ ತೂಕ ಹೆಚ್ಚಾಗಬಹುದು. ಇನ್ನು ಕೆಲವರಲ್ಲಿ ಕಡಿಮೆಯೂ ಆಗಬಹುದು. ಇದನ್ನು ನಿಯಂತ್ರಿಸಿ ಸೂಕ್ತ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕಾದರೆ ವೈದ್ಯರ ಸಲಹೆ ಅಗತ್ಯವಾಗಿರುತ್ತದೆ. ತಾಯಂದಿರು ಆರೋಗ್ಯವಾಗಿದ್ದು ಹಾಲು ಉತ್ಪತ್ತಿ ಉತ್ತಮ ಪ್ರಮಾಣದಲ್ಲಿದ್ದರೆ ಮಾತ್ರ ಮಗುವಿಗೆ ಹಾಲುಣಿಸಲು ಸಾಧ್ಯವಾಗುತ್ತದೆ.

ಆಹಾರ ಸೇವನೆ, ದೇಹದ ತೂಕ ಮತ್ತು ಆರೋಗ್ಯದ ಕಾಳಜಿಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಎದೆಹಾಲು ಹಾಲು ಉತ್ಪತ್ತಿಯಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು.

ಹೆಚ್ಚಿನ ಹಾಲುಣಿಸುವ ಮಹಿಳೆಯರು ಅತಿ ತೂಕದ ಸಮಸ್ಯೆಯಿಂದ ಬಳಲುತ್ತಾರೆ. ಇಂತಹವರು ಹಾಲುಣಿಸುವ ಸಮಯದಲ್ಲಿ ಹೆಚ್ಚಿನ ವರ್ಕೌಟ್ ಮಾಡಿದರೆ ಹಾಲಿನ ಉತ್ಪತ್ತಿ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಪ್ರತಿತಿಂಗಳು ಅರ್ಧದಿಂದ ಒಂದು ಕೆಜಿ ವರೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಹೆಚ್ಚು ಪೌಷ್ಠಿಕಾಂಶವುಳ್ಳ ಮತ್ತು ಕಡಿಮೆ ಪ್ರಮಾಣದ ಆಹಾರವನ್ನು ಬೊಜ್ಜು ಹೊಂದಿರುವ ತಾಯಂದಿರು ಸೇವಿಸುವುದು ಒಳ್ಳೆಯದು. ಇನ್ನು ಹಾಲುಣಿಸುವ ಮಹಿಳೆಯರಲ್ಲಿ ತೂಕ ಕಡಿಮೆಯಾಗುವುದು ಕಂಡು ಬಂದರೆ ಅಂಥವರು ಪೌಷ್ಠಿಕಾಂಶಗಳ ಆಹಾರದ ಸೇವನೆಗೆ ಒತ್ತು ನೀಡಬೇಕು.

ಹಾಲು ಉತ್ಪಾದನೆ ಹೆಚ್ಚಾಗಲು ಆಹಾರದಲ್ಲಿ ಬೆಳ್ಳುಳ್ಳಿ, ಹಾಲು, ಬಾದಾಮಿ, ಜೀರಿಗೆ, ಆಡು, ಕುರಿಮಾಂಸಗಳನ್ನು ಸೇವಿಸುವುದು ಒಳ್ಳೆಯದು. ಕೆಲವೊಮ್ಮೆ ಹಾಲುಣಿಸುವ ತಾಯಂದಿರಲ್ಲಿ ಮಲಬದ್ಧತೆ ಕಂಡು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಾಣಂತಿ ಸಮಯದಲ್ಲಿ ಹೆಚ್ಚಿನ ಉಷ್ಣ ಪದಾರ್ಥಗಳನ್ನು ಸೇವಿಸುವುದರಿಂದ ಮಲಬದ್ಧತೆ ಕಂಡು ಬರುವುದರಿಂದ ಅದರ ನಿಯಂತ್ರಣಕ್ಕೆ ಹಸಿ ತರಕಾರಿಗೆ ಹೆಚ್ಚಿನ ಒತ್ತು ನೀಡಬೇಕು. ಮೂಲಂಗಿ ಸೇರಿದಂತೆ ನಾರಿನಂಶ ಹೊಂದಿರುವ ತರಕಾರಿ, ಹಣ್ಣು, ಧಾನ್ಯಗಳನ್ನು ಸೇವಿಸಬೇಕು.

ಇನ್ನು ಆಸ್ಪಿಯೋಪೊರೊಸಿಸ್‍ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದರಿಂದ ಅದರ ತಡೆಗೆ ಆಹಾರದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುವಂತೆ ನೋಡಿಕೊಳ್ಳಬೇಕು. ಹಾಲುಣಿಸುವ ತಾಯಂದಿರು ಕಾಫಿಯಂತಹ ಕೆಫಿನ್ ಅಂಶವುಳ್ಳ ಪಾನೀಯಗಳನ್ನು ದೂರವಿಡಬೇಕು. ಚಾಕೋಲೆಟ್ ಸೇವನೆಗೂ ಕಡಿವಾಣ ಹಾಕಬೇಕು.

ಒಂದು ವೇಳೆ ತಾಯಂದಿರು ಔಷಧಿ, ಆ್ಯಂಟಿಬಯೋಟಿಕ್ ಸೇವಿಸುತ್ತಿದ್ದರೆ ಅಂಥವರು ಎಚ್ಚರ ವಹಿಸಬೇಕು ಏಕೆಂದರೆ ಇದು ಎದೆ ಹಾಲನ್ನು ಸೇರುವುದರಿಂದ ಮಗುವಿನ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಆ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಸೂಕ್ತ. ಸ್ತನ ಕ್ಯಾನ್ಸರ್, ಹೆಚ್‍ಐವಿ ಪಾಸಿಟಿವ್ ಇರುವ ತಾಯಂದಿರು ಹಾಲುಣಿಸುವ ಮುನ್ನ ವೈದ್ಯರಿಂದ ಸೂಕ್ತ ಸಲಹೆಗಳನ್ನು ಪಡೆಯುವುದು ಅತ್ಯಗತ್ಯ.

ಮಗುವಿಗೆ ಹಾಲನ್ನು ಬಿಡಿಸಿದ ನಂತರ ಬೊಜ್ಜುತನ ಕಾಡುತ್ತದೆ. ಈ ಸಂದರ್ಭ ಆಹಾರ ಸೇವನೆಯನ್ನು ಕಡಿಮೆಗೊಳಿಸುವುದು ಒಳ್ಳೆಯದು. ಅದು ಏನೇ ಇರಲಿ ಹಾಲುಣಿಸುವ ತಾಯಂದಿರು ಒಂದಷ್ಟು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶ ಏನೆಂದರೆ ಮಗುವಿನ ಆರೋಗ್ಯದ ಜತೆಗೆ ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕೆಂಬುದನ್ನು ಮರೆಯಬಾರದು.

ಇನ್ನು ಹಾಲುಣಿಸುವ ವಿಚಾರದಲ್ಲಿ ವೈಜ್ಞಾನಿಕವಾಗಿ ಯಾವುದೇ ರೀತಿಯ ಆಧಾರಗಳು ಇಲ್ಲವಾದರೂ ಬಾಯಿಂದ ಬಾಯಿಗೆ ಕೆಲವು ಹಾಗಂತೆ.. ಹೀಗಂತೆ ಎಂಬ ಮಾತುಗಳು ಹರಿದಾಡುತ್ತವೆ. ಅದನ್ನು ಕೆಲವು ಹಾಲುಣಿಸುವ ತಾಯಂದಿರು ನಂಬಿ ಮಗುವಿಗೆ ಹಾಲುಣಿಸುವುದನ್ನು ನಿಲ್ಲಿಸಿಬಿಡುತ್ತಾರೆ. ತಾವು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಒಳ್ಳೆಯದು. ಅವರಿವರ ಮಾತುಗಳಿಗೆ ಕಿವಿಗೊಡದಿರುವುದು ತಾಯಂದಿರಿಗೆ ಮತ್ತು ಮಗುವಿಗೆ ಒಳ್ಳೆಯದು.

ಮಗುವಿಗೆ ಹಾಲುಣಸುವ ತಾಯಂದಿರು ಮಗುವಿನ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರೋ ಅಷ್ಟೇ ಕಾಳಜಿಯನ್ನು ತಮ್ಮ ಆರೋಗ್ಯದ ಬಗ್ಗೆಯೂ ವಹಿಸಬೇಕು. ಹಾಲುಣಿಸುವ ಸಂದರ್ಭಗಳಲ್ಲಿ ತಾಯಿಗೆ ಅಗತ್ಯವಿರುವ ಪೌಷ್ಠಿಕಾಂಶಗಳಾದ ಪ್ರೊಟೀನ್, ಕೊಬ್ಬು, ಕ್ಯಾಲ್ಸಿಯಂ, ಕಬ್ಬಿಣಾಂಶ, ಅಗತ್ಯ ವಿಟಮಿನ್ ಇರುವ ಪೋಷಕಾಂಶಗಳು ಹೇರಳವಾಗಿರುವ ಆಹಾರಗಳನ್ನು ನೀಡಬೇಕಾಗುತ್ತದೆ. ಅಕ್ಕಿ, ರಾಗಿ. ಗೋಧಿ ಸೇರಿದಂತೆ ವಿವಿಧ ಧಾನ್ಯಗಳು, ಸಕ್ಕರೆಯ ಉತ್ಪನ್ನಗಳು, ಕಾಳುಕಡ್ಡಿಗಳಂತಹ ಹೆಚ್ಚಿನ ಕ್ಯಾಲೋರಿಯನ್ನು ತೆಗೆದುಕೊಳ್ಳಬೇಕು.

ಮಗುಹುಟ್ಟಿದ ಮೊದಲ ಆರು ತಿಂಗಳ ಕಾಲ ಪ್ರತಿದಿನ 29ಗ್ರಾಂನಷ್ಟು ಪ್ರೋಟೀನ್ ಅಂಶವುಳ್ಳ ಆಹಾರ ಸೇವಿಸಬೇಕು. ತದ ನಂತರ ವರ್ಷದವರೆಗೆ 15 ಗ್ರಾಂಗೆ ಪ್ರಮಾಣವನ್ನು ಇಳಿಸಬೇಕು. ಪ್ರೊಟೀನ್‍ಯುಕ್ತ ಆಹಾರ ಸೇವನೆ ಕಡಿಮೆ ಮಾಡುವುದು ಒಳ್ಳೆಯದಲ್ಲ ಏಕೆಂದರೆ ಹಾಲಿನ ಗುಣಮಟ್ಟಕ್ಕಿಂತ ಉತ್ಪಾದನೆಯ ಪ್ರಮಾಣ ಕಡಿಮೆಯಾಗುತ್ತದೆ.

ಈ ಸಂದರ್ಭದಲ್ಲಿ ಪ್ರೊಟೀನ್ ಅಂಶವುಳ್ಳ ಬೇಳೆಕಾಳುಗಳು, ನಟ್ಸ್, ಹಾಲು, ಮೊಸರು, ಮೀನು, ಮಾಂಸ, ಮೊಟ್ಟೆಯನ್ನು ಹೆಚ್ಚಾಗಿ ಸೇವಿಸುವುದು ಉತ್ತಮ. ಬಾದಾಮಿ, ಹಸಿರು ತರಕಾರಿಗಳನ್ನು ಹಾಲುಣಿಸುವ ತಾಯಂದಿರು ಅಗತ್ಯವಾಗಿ ಸೇವಿಸಬೇಕು. ಜತೆಗೆ ಕೊಬ್ಬಿನ ಅಂಶವೂ ಅಗತ್ಯವಿರುವುದರಿಂದ ಪ್ರತಿ ದಿನ ಕನಿಷ್ಠ 30ಗ್ರಾಂನಷ್ಟು ಕೊಬ್ಬು ಆಹಾರದಲ್ಲಿ ಬೆರೆತಿರುವಂತೆ ನೋಡಿಕೊಳ್ಳಬೇಕು.

ದೇಹಕ್ಕೆ ಕ್ಯಾಲ್ಸಿಯಂ ಅಗತ್ಯ ಇರುವುದರಿಂದ ಹಾಲಿನ ಉತ್ಪನ್ನ, ರಾಗಿ, ಕಡಲೆಕಾಳು, ಸೊಪ್ಪು ತರಕಾರಿ, ಸೋಯಾಬೀನ್ಸ್ ಸೇವನೆ ಮಾಡಬೇಕು. ಇದರಲ್ಲಿ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದೇಹಕ್ಕೆ ಆರೋಗ್ಯ ಮತ್ತು ಶಕ್ತಿ ನೀಡುತ್ತದೆ.

ಕಬ್ಬಿಣಾಂಶವು ಆರೋಗ್ಯಕ್ಕೆ ಅಗತ್ಯ ಇರುವುದರಿಂದ ರಾಗಿ, ಹಸಿರು ತರಕಾರಿ, ಅವಲಕ್ಕಿ, ದ್ವಿದಳ ಧಾನ್ಯ, ಅಲಸಂದೆ ಕಾಳು, ಹುರುಳಿಕಾಳು, ಡ್ರೈಫ್ರೂಟ್ಸ್, ಮಾಂಸ, ಮೀನು ಸೇವನೆ ಒಳ್ಳೆಯದು.

ವಿಟಮಿನ್‍ಗಳು ಅಗತ್ಯವಾಗಿ ಬೇಕಾಗುವುದರಿಂದ ಏಕದಳ, ದ್ವಿದಳ ಧಾನ್ಯಗಳು, ಬೆಂಡೆ, ತೊಂಡೆ ಕಾಯಿ, ಬೀನ್ಸ್, ಹಸಿರು ಬಟಾಣಿ, ಮಾಂಸ, ಮೊಟ್ಟೆ, ಹಾಲು, ಹಣ್ಣು, ನೆಲ್ಲಿಕಾಯಿ, ಮೊಳಕೆಕಾಳು ಮೊದಲಾದವುಗಳನ್ನು ನಿಗದಿತ ಪ್ರಮಾಣದಲ್ಲಿ ಸೇವಿಸಬೇಕು. ಈ ಆಹಾರಗಳು ದೇಹದ ಆರೋಗ್ಯಕ್ಕೆ ಪೂರಕವಾದ ವಿಟಮಿನ್‍ಗಳನ್ನು ಹೊಂದಿರುವುದರಿಂದ ಆರೋಗ್ಯ ವೃದ್ಧಿಸಲು ಸಹಕಾರಿಯಾಗುತ್ತದೆ.ಇದೆಲ್ಲದರ ನಡುವೆ ದ್ರವ ಆಹಾರದ ಪದಾರ್ಥಗಳಿಗೂ ಒತ್ತು ನೀಡಬೇಕು.