ಮಾತು ಮನ ಕೆಡಿಸದಿರಲಿ..

ಮಾತು ಮನ ಕೆಡಿಸದಿರಲಿ..

LK   ¦    Jul 13, 2018 02:15:14 PM (IST)
ಮಾತು ಮನ ಕೆಡಿಸದಿರಲಿ..

ಆರೋಗ್ಯದ ಗುಟ್ಟೇ ಮೈಮನಸ್ಸು ಉಲ್ಲಾಸಿತವಾಗಿರುವುದು. ಜತೆಗೆ ನಾವು ಸದಾ ಸಂತೋಷವಾಗಿರುವುದೇ ಆಗಿದೆ. ಆದರೆ ಈ ಸಂತೋಷವನ್ನು ಕೆಲವೊಮ್ಮೆ ಮಾತನಾಡುವುದರಿಂದ, ಆಟವಾಡುವುದರಿಂದ, ಸಿನಿಮಾ ನೋಡುವುದರಿಂದ ಹೀಗೆ ಒಂದಲ್ಲ ಒಂದು ರೀತಿಯಿಂದ ಪಡೆದುಕೊಳ್ಳುತ್ತೇವೆ.

ಎಲ್ಲವನ್ನೂ ಎಲ್ಲ ಸಮಯದಲ್ಲಿ ಮಾಡಲು ಸಾಧ್ಯವಾಗದಿರಬಹುದು. ಆದರೆ ಮಾತಂತು ಆಡುತ್ತಲೇ ಇರುತ್ತೇವೆ. ಬಹಳಷ್ಟು ಸಾರಿ ಈ ಮಾತುಗಳೇ ನಮಗೆ ಖುಷಿಕೊಡುವುದು. ಆದರೆ ಇಂತಹ ಮಾತುಗಳು ಕೂಡ ಮನಸ್ಸಿಗೆ ನೋವನ್ನುಂಟು ಮಾಡಬಹುದು. ಹೀಗಾಗಿ ಮಾತು ನಮ್ಮ ಮತ್ತು ನಮ್ಮ ಸುತ್ತಲ ಜನರ ಮನಕೆಡಿಸದಂತೆ ನೋಡಿಕೊಳ್ಳುವುದು ಬಹು ಮುಖ್ಯವಾಗಿದೆ.

ಮಾತಿನ ವಿಚಾರದಲ್ಲಿ ಸರ್ವ ಸ್ವಾತಂತ್ರ್ಯ ಹೊಂದಿರುವುದರಿಂದ ಹೀಗೆಯೇ ಆಡಬೇಕೆಂಬ ನಿರ್ಬಂಧವಿಲ್ಲದ ಕಾರಣದಿಂದಾಗಿ ಕೆಲವರು ತಮಗೆ ಅನಿಸಿದ್ದನ್ನು ಮಾತನಾಡಿ ಸಂಕಷ್ಟಕ್ಕೀಡಾಗುತ್ತಾರೆ ಅಥವಾ ಬೇರೆಯವರನ್ನು ಸಂಕಷ್ಟಕ್ಕೀಡು ಮಾಡುತ್ತಾರೆ. ಮತ್ತೆ ಕೆಲವರ ಮಾತಿನಿಂದ ಮನೆ, ಮನ ಹಾಳಾಗುತ್ತದೆ.

ಮುತ್ತು ಒಡೆದರೆ ಹೋಯಿತು. ಮಾತು ಆಡಿದರೆ ಹೋಯಿತು ಎಂಬ ಮಾತಿದೆ. ಒಮ್ಮೆ ಯಾರಿಗಾದರು ನಾವು ಮನ ನೋಯುವಂತೆ ಮಾತನಾಡಿದರೆ ಮತ್ತೆ ನಾವು ಯಾವ ಕ್ಷಮೆ ಕೇಳಿದರೂ ಪ್ರಯೋಜನವಿಲ್ಲ. ಹೊಡೆದ ಏಟನ್ನು ಮರೆಯ ಬಹುದು ಆಡಿದ ಮಾತನ್ನು ಮರೆಯಲಾರರು ಎಂಬ ಹಿರಿಯರ ಮಾತುಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ.

ನಾಲ್ಕು ಜನ ಒಂದೆಡೆ ಸೇರಿದಾಗ ನಾವ್ಯಾರೂ ನಮ್ಮ ವಿಚಾರಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಎಲ್ಲರೂ ಬೇರೆಯವರ ಬಗ್ಗೆಯೇ ಹೆಚ್ಚು ಮಾತನಾಡುತ್ತಾರೆ. ಬೇರೆಯವರ ವಿಚಾರದ ಮಾತು ಒಂದು ರೀತಿಯಲ್ಲಿ ನಮಗೆ ಸುಖ ಕೊಡುತ್ತದೆ. ಅದೊಂದು ರೀತಿಯಲ್ಲಿ ತೇಜೋವಧೆ ಎಂಬ ಅರಿವಿದ್ದರೂ ಬೇರೆಯವರ ಮುಂದೆ ಒಬ್ಬ ವ್ಯಕ್ತಿಯನ್ನು ಹಾಸ್ಯ ಮಾಡಿ ಖುಷಿ ಪಡುತ್ತೇವೆ.

ನಮ್ಮ ನಿಮ್ಮ ನಡುವೆ ದಿನನಿತ್ಯ ಸಿಗುವ ಜನರನ್ನೇ ಗಮನಿಸಿ ನೋಡಿದರೆ ಒಬ್ಬೊಬ್ಬರ ಮಾತಿನ ವರಸೆ ಒಂದೊಂದು ರೀತಿಯಲ್ಲಿರುತ್ತದೆ. ಒಬ್ಬರು ತಮ್ಮನ್ನೇ ಹೊಗಳಿಕೊಂಡರೆ, ಮತ್ತೆ ಕೆಲವರು ತಮ್ಮ ಸಂಪತ್ತಿನ ಪ್ರದರ್ಶನ ಮಾಡುತ್ತಿರುತ್ತಾರೆ. ಇನ್ನು ಬೇರೆಯವರ ಕಷ್ಟ ನೋಡಿ ತಮ್ಮ ಮಾತಿನ ಮೂಲಕವೇ ಸಂತಸ ಪಡುವವರು ಇದ್ದಾರೆ.

ಬಹಳಷ್ಟು ಸಾರಿ ಮಾತಿನ ಭರಾಟೆಯಲ್ಲಿ ಹಿಂದೆ ಮುಂದೆ ಯೋಚಿಸದೆ ಏನೇನೋ ಮಾತನಾಡಿ ಬಿಡುತ್ತೇವೆ. ಆದರೆ ಆ ಮಾತು ನಮ್ಮ ಎದುರಿಗೆ ಇರುವ ವ್ಯಕ್ತಿಯ ಮನಸ್ಸಿಗೆ ಎಷ್ಟು ಘಾಸಿಯನ್ನುಂಟು ಮಾಡಿದೆ ಎಂಬ ಪರಿವೇ ನಮಗೆ ಇರುವುದಿಲ್ಲ. ಮಾತಿನ ಭರದಲ್ಲಿ ಮತ್ತೊಬ್ಬರನ್ನು ಅಪಹಾಸ್ಯ, ಅಪಮಾನ, ತೇಜೋವಧೆ ಮಾಡುವುದು ಹೆಚ್ಚಿನವರ ಚಾಳಿ. ಮಾತಿನಿಂದ ಬೇರೆಯವರನ್ನು ಚುಚ್ಚಿ ನಾವು ಖುಷಿಪಡುವುದು ನಿಜಕ್ಕೂ ಒಳ್ಳೆಯದಲ್ಲ. ನಾವು ಬೇರೆಯವರನ್ನು ತೆಗಳಿ ಸಂತೋಷಪಟ್ಟರೆ ನಮ್ಮನ್ನು ತೆಗಳಲು ಮತ್ತೊಬ್ಬರಿರುತ್ತಾರೆ.

ಆ ತಕ್ಷಣಕ್ಕೆ ಮಾತನಾಡಬೇಕೆಂಬ ಕಾರಣಕ್ಕೆ ಅಷ್ಟೇ ಅಲ್ಲ ಬೇರೆಯವರ ಗಮನ ತಮ್ಮತ್ತ ಸೆಳೆಯುವುದಕ್ಕೋಸ್ಕರ ಕಥೆ ಕಟ್ಟಿ ಮಾತನಾಡುವುದನ್ನು ರೂಢಿಸಿಕೊಂಡ ಜನರಿದ್ದಾರೆ. ಆದರೆ ಅವರ ಬಾಯಿಚಪಲಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ ಎಂಬ ಅರಿವು ಅವರಿಗೆ ಇರುವುದಿಲ್ಲ.

ಹಾಗೆ ನೋಡಿದರೆ ನಾವೆಲ್ಲರೂ ಮಾತುಗಾರರೇ ಹಾಗೆಂದು ಆಲೋಚಿಸಿ ಮಾತನಾಡದೆ ಸಣ್ಣರಾಗುವುದು ನಿಜಕ್ಕೂ ಒಳ್ಳೆಯ ಲಕ್ಷಣವಲ್ಲ. ಚಿಕೇನಕೊಪ್ಪ ಶ್ರೀಚೆನ್ನವೀರ ಶರಣರು ನಾಲಿಗೆಯಿಂದ ನುಡಿ ಬಿಡುವ ಮೊದಲು ನಿನ್ನೊಳಗೆ ಇರುವ ಅವನನ್ನು ಒಂದು ಮಾತು ಕೇಳು ಎಂದು ಒಂದೆಡೆ ಹೇಳಿದ್ದಾರೆ. ನಾವೆಲ್ಲರೂ ಮಾತನಾಡುವ ಮುನ್ನ ಯೋಚಿಸಬೇಕು. ನಾವು ಆಡುವ ಮಾತು ಮತ್ತೊಬ್ಬರ ಮನೆ ಮತ್ತು ಮನ ಕೆಡಿಸುವ ಮುನ್ನ ಎಚ್ಚರಿಕೆ ಇರಲಿ.

ಇತ್ತೀಚೆಗೆ ಸಮಾಜದಲ್ಲಿ ಗಣ್ಯರೆನಿಸಿಕೊಂಡ ಹಲವು ವ್ಯಕ್ತಿಗಳು ತಮ್ಮ ಘನತೆಗೆ ತಕ್ಕದಲ್ಲದ ಮಾತುಗಳನ್ನಾಡಿ ಪೇಚಿಗೆ ಸಿಲುಕುವುದು, ಕ್ಷಮೆ ಕೇಳುವುದು ಕಂಡು ಬರುತ್ತಿದೆ. ಮತ್ತೆ ಕೆಲವರು ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಜನವಲಯದಲ್ಲಿ ಚಾಲ್ತಿಯಲ್ಲಿರುತ್ತಾರೆ. ಕೆಲವರಿಗೆ ಬೇರೆಯರ ಬಗ್ಗೆ ತೇಜೋವಧೆಯ ಹೇಳಿಕೆಗಳನ್ನು ನೀಡುವುದು ಅಭ್ಯಾಸ. ಆ ಮೂಲಕ ಸದಾ ಸುದ್ದಿಯಲ್ಲಿರಬೇಕೆಂದು ಕೊಳ್ಳುತ್ತಾರೆ. ಆದರೆ ಅದು ಹೆಚ್ಚು ದಿನ ಉಳಿಯಲ್ಲ. ಕಾರಣ ಮುಂದೊಂದು ದಿನ ಅವರ ಯಾವ ಮಾತನ್ನು ಜನ ಗಂಭೀರವಾಗಿ ಪರಿಗಣಿಸದೆ ಜೋಕರ್‍ ನಂತೆ ಬಿಂಬಿತರಾಗುತ್ತಾರೆ.

ಒಬ್ಬ ವ್ಯಕ್ತಿ ತನ್ನ ಘನತೆಯನ್ನು ಉಳಿಸಿಕೊಳ್ಳಬೇಕಾದರೆ ಆತ ಆಡುವ ಮಾತುಗಳು ಕೂಡ ತೂಕವಿರಬೇಕು. ಅಷ್ಟೇ ಅಲ್ಲ ಆಯಾಯ ಸನ್ನಿವೇಶಗಳನ್ನು ಅರಿತು ಮಾತನಾಡುವ ಕೌಶಲ್ಯತೆ ಹೊಂದಿರಬೇಕು. ಇಲ್ಲದೆ ಹೋದರೆ ಸಾಮಾನ್ಯ ವ್ಯಕ್ತಿಯಿಂದ ಗೌರವಾನ್ವಿತ ವ್ಯಕ್ತಿ ವರೆಗೆ ಒಂದಲ್ಲ ಒಂದು ಕಾರಣಕ್ಕೆ ಸಮಾಜದ ಮುಂದೆ ಬೆತ್ತಲೆಯಾಗಬೇಕಾಗುತ್ತದೆ. ಆಡಿದರೆ ಮಾತು ಮುತ್ತಿನ ಹಾರದಂತಿರಬೇಕು ಎಂದು ದಾಸವರೇಣ್ಯರು ಹೇಳಿದ್ದಾರೆ. ಅದು ಸಾರ್ವಕಾಲಿಕ ಸತ್ಯ ಎಂಬುದನ್ನು ಅರಿತು ಯಾವುದೇ ಮಾತನ್ನು ಆಡುವ ಮುನ್ನ ಕ್ಷಣ ಯೋಚಿಸುವುದು ಒಳಿತು.