ನೆನಪಿರಲಿ...... ಮಗುವಿಗೆ ತಾಯಿ ಹಾಲೇ ಸರ್ವೋತ್ತಮ

ನೆನಪಿರಲಿ...... ಮಗುವಿಗೆ ತಾಯಿ ಹಾಲೇ ಸರ್ವೋತ್ತಮ

LK   ¦    Jul 29, 2018 02:49:32 PM (IST)
ನೆನಪಿರಲಿ...... ಮಗುವಿಗೆ ತಾಯಿ ಹಾಲೇ ಸರ್ವೋತ್ತಮ

ವಿಶ್ವದಾದ್ಯಂತ ಸ್ತನ್ಯಪಾನ ಸಪ್ತಾಹವನ್ನು ಆಗಸ್ಟ್ 1ರಿಂದ 7ರವರೆಗೆ ಆಚರಿಸಲಾಗುತ್ತಿದೆ. ಆ ಮೂಲಕ ಸ್ತನ್ಯಪಾನದ ಬಗೆಗೆ ಅರಿವು ಮೂಡಿಸಲಾಗುತ್ತಿದೆ. ಹಿಂದಿನಿಂದಲೂ ತಾಯಿಯ ಹಾಲೇ ಮಗುವಿಗೆ ಸರ್ವೋತ್ತಮ ಅಂಥ ಹೇಳುತ್ತಲೇ ಬಂದಿದ್ದೇವೆ. ಆದರೂ ಹಲವು ಕಾರಣಗಳಿಗೆ ಮತ್ತು ಮಕ್ಕಳ ತಾಯಂದಿರಲ್ಲಿರುವ ತಪ್ಪು ಕಲ್ಪನೆಗಳಿಂದಾಗಿ ಮಗುವಿಗೆ ಹಾಲು ನೀಡದೆ ಬಹುಬೇಗ ಹಾಲು ಮರೆಸುವುದು ನಡೆಯುತ್ತಲೇ ಬರುತ್ತಿದೆ. ಹೀಗಾಗಿ ಜಾಥಾ, ಶಿಬಿರ, ಪತ್ರಿಕಾ ಪ್ರಕಟಣೆ, ಜಾಹೀರಾತುಗಳ ಮೂಲಕ ಮಕ್ಕಳಿಗೆ ಎದೆಹಾಲನ್ನು ಕುಡಿಸಿ ಎಂದು ಹೇಳುವ ಸ್ಥಿತಿಗೆ ಬಂದು ತಲುಪುವಂತಾಗಿದೆ.

ಇಷ್ಟಕ್ಕೂ ಮಗುವಿಗೆ ತಾಯಿಯ ಹಾಲನ್ನೇ ಏಕೆ ಉಣಿಸಬೇಕು ಅದರ ಪ್ರಾಮುಖ್ಯತೆ ಏನು ಎಂಬುದು ಒಂದು ಕಡೆಯಾದರೆ ಹಾಲುಣಿಸಿದರೆ ತಾಯಿಯ ಸೌಂದರ್ಯ ಹಾಳಾಗುತ್ತದೆ ಇನ್ನು ಏನೇನೋ ತಪ್ಪು ಕಲ್ಪನೆಗಳು ಕೂಡ ಕೆಲವರು ಮಕ್ಕಳಿಗೆ ಹಾಲು ಕೊಡಿಸುವಲ್ಲಿ ಹಿಂದೇಟು ಹಾಕಲು ಕಾರಣವಾಗುತ್ತಿದೆ.

ಆಧುನಿಕತೆಯ ಭರದಲ್ಲಿ ತಮಗೆ ಗೊತ್ತಿಲ್ಲದ ವಿಚಾರಗಳ ಬಗೆಗಿನ ತಪ್ಪು ಕಲ್ಪನೆಗಳಿಂದಾಗಿ ಪೋಷಕಾಂಶಯುಕ್ತ ಹಾಲನ್ನು ಸೇವಿಸಬೇಕಾದ ಮಕ್ಕಳು ಅದರರಿಂದ ವಂಚಿತರಾಗಿ ಆರೋಗ್ಯ ಕುಂಠಿತಗೊಂಡು ಸಾವಿನಂಚಿಗೆ ತಲುಪುತ್ತಿವೆ. ಹೀಗಾಗಿ ಹಾಲುಣಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯಗಳನ್ನು ವಿಶ್ವದಾದ್ಯಂತ ಮಾಡಲಾಗುತ್ತಿದೆ.

 

ವೈದ್ಯಲೋಕದಲ್ಲಿ ಹುಟ್ಟಿದ ಮಗುವಿಗೆ ತಾಯಿಯ ಹಾಲು ಪೋಷಣೆಯ ಪ್ರಾಥಮಿಕ ಮೂಲವಾಗಿರುವುದರಿಂದ ಹಾಲುಣಿಸುವುದನ್ನು ಮಗುವಿನ ಜೀವನದ ಆರಂಭದ ಅವಧಿ ಎಂದೇ ಹೇಳಲಾಗುತ್ತದೆ. ಏಕೆಂದರೆ ಎದೆಹಾಲು ಮಗುವಿಗೆ ಸುರಕ್ಷಿತ, ಪೋಷಣೆ ಮತ್ತು ಆರೋಗ್ಯದ ಅಭಿವೃದ್ಧಿಯನ್ನು ಖಾತರಿಪಡಿಸುತ್ತದೆ. ಇದೊಂದು ರೀತಿಯ ನೈಸರ್ಗಿಕ ಆಹಾರವಾಗಿರುವುದರಿಂದ ಮಗುವಿಗೆ ಸುಲಭವಾಗಿ ಜೀರ್ಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

 

ತಾಯಿಯ ಎದೆಯಿಂದ ಮೊದಲ ಬಾರಿಗೆ ಬರುವ ಹಾಲು ರೋಗನಿರೋಧಕವಾಗಿರುತ್ತದೆ ಮತ್ತು ಇದರಲ್ಲಿ ಪ್ರೊಟೀನ್, ಖನಿಜಾಂಶ, ವಿಟಮಿನ್ ಇಷ್ಟೇ ಅಲ್ಲ ವಿಟಮಿನ್ ಎ, ಆ್ಯಂಟಿಬಾಡಿಗಳು, ಸೋಂಕು ನಿರೋಧಕಗಳು ಜಾಸ್ತಿ ಇರುತ್ತದೆ. ಮೂರು ದಿನಗಳ ಕಾಲ ಬರುವ ಹಾಲು ಗಾಢಹಳದಿ ಬಣ್ಣದಲ್ಲಿರುತ್ತದೆ. 

ಮಗುವಿಗೆ ಆರು ತಿಂಗಳು ತುಂಬುವವರೆಗೂ ವಿಟಮಿನ್, ಖನಿಜಾಂಶ ಅಥವಾ ಔಷಧಿಗಳಂತಹ ಡ್ರಾಪ್‍ಗಳನ್ನು ಹೊರತು ಪಡಿಸಿ ವೈದ್ಯರ ಸಲಹೆ ಇಲ್ಲದೆ ಯಾವುದೇ ರೀತಿಯ ಘನ ಅಥವಾ ದ್ರವ ರೂಪದ ಪದಾರ್ಥಗಳನ್ನು ನೀಡಬಾರದು. ಏಕೆಂದರೆ ಈ ರೀತಿಯ ಆಹಾರವನ್ನು ನೀಡುವುದರಿಂದ ಮಗು ಹಾಲು ಸೇವನೆಯನ್ನು ಕಡಿಮೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಪರಿಣಾಮ ಮಗುವಿನ ಆರೋಗ್ಯ ಕುಂಠಿತವಾಗಿ ಬಿಡುತ್ತದೆ.

ಮಗುವಿಗೆ ಬೆಳಿಗ್ಗೆ ಮತ್ತು ರಾತ್ರಿ ಸಮಯದಲ್ಲಿ ಆಗಾಗ್ಗೆ ಹಾಲುಣಿಸಬೇಕು. ಇದನ್ನು ವೈದ್ಯರು ಬೇಡಿಕೆಯ ಸ್ತನ್ಯಪಾನ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಮಗುವಿಗೆ ಹಾಲಿನ ಅವಶ್ಯಕತೆಯಿರುತ್ತದೆ. ಹಾಗಾಗಿ ಮಗುವಿನ ಬೇಡಿಕೆಯನ್ನು ಅರಿತುಕೊಂಡು ಹಾಲನ್ನು ನೀಡಬೇಕಾಗುತ್ತದೆ. ತಾಯಂದಿರು ಹೆಚ್ಚಿನ ಸಮಯದವರೆಗೆ ಹಾಲುಣಿಸುವುದರಿಂದ ಉತ್ತಮ ಹಾಲು ಉತ್ಪಾದನೆಗೆ ಸಹಕಾರಿಯಾಗುತ್ತದೆ.

ಮಗುವಿಗೆ ಆರು ತಿಂಗಳ ಕಾಲ ಕಡ್ಡಾಯವಾಗಿ ಹಾಲನ್ನು ಮಾತ್ರ ನೀಡಬೇಕು. ಆ ನಂತರ ವೈದ್ಯರ ಸಲಹೆ ಪಡೆದು ಪೂರಕ ಆಹಾರಗಳನ್ನು ನೀಡಲು ಶುರುಮಾಡಬಹುದು. ಮಗುವಿಗೆ ಎರಡು ವರ್ಷಗಳ ಕಾಲ ಹಾಲುಣಿಸಲು ಅಡ್ಡಿಯಿಲ್ಲ.

 

ವೈದ್ಯರ ಪ್ರಕಾರ ಮಗು ಆಗಾಗ ಹಾಲನ್ನು ಹೀರಿಕೊಳ್ಳುವುದು, ಸ್ತನದಲ್ಲಿ ಹಾಲು ಸಂಪೂರ್ಣ ಖಾಲಿಯಾದ ಅನುಭವ ಇದೆಲ್ಲವೂ ಯಶಸ್ವಿ ಹಾಲುಣಿಸುವಿಕೆಯ ಅಂಶಗಳಂತೆ. ಇನ್ನು ಅನಾರೋಗ್ಯದಿಂದ ಬಳಲುವ ಅಥವಾ ಔಷಧಿ ಸೇವಿಸುವ ತಾಯಂದಿರು ವೈದ್ಯರು ಹಾಲು ನೀಡಬಾರದು ಎಂದು ಹೇಳುವ ತನಕ ಹಾಲುಣಿಸುವುದನ್ನು ನಿಲ್ಲಿಸಬಾರದು. ಒಂದು ವೇಳೆ ತಾತ್ಕಾಲಿಕವಾಗಿ ಹಾಲುಣಿಸುವುದನ್ನು ನಿಲ್ಲಿಸಿದ್ದರೆ ಮತ್ತೆ ವೈದ್ಯರ ಸಲಹೆ ಮೇರೆಗೆ ಹಾಲುಣಿಸುವುದನ್ನು ಮುಂದುವರೆಸಬಹುದು.

ಮಗುವಿಗೆ ಅತಿಸಾರ ಅಥವಾ ವಾಂತಿಯಾಗುತ್ತಿದ್ದರೆ ತಾಯಿ ಸ್ತನಪಾನ ನಿಲ್ಲಿಸುವ ಅಗತ್ಯವಿಲ್ಲ. ಮಗುವಿನ ಕರುಳು ಸೋಂಕಿಗೆ ಎದೆಹಾಲು ಅತ್ಯುತ್ತಮ ಆಹಾರ. ಸ್ವಲ್ಪ ಸಮಯದವರೆಗೂ ಇತರೆ ಗಟ್ಟಿ ಆಹಾರವನ್ನು ನಿಲ್ಲಿಸುವುದು ಒಳ್ಳೆಯದು. ಆದರೆ ಹಾಲುಕುಡಿಸುವುದನ್ನು ಮಾತ್ರ ನಿಲ್ಲಿಸದೆ ಮುಂದುವರೆಸಬೇಕು.

ರಾತ್ರಿವೇಳೆ ಹಾಲುಣಿಸುವುದು ಮುಖ್ಯವಲ್ಲ ಎನ್ನುವವರಿದ್ದಾರೆ. ಆದರೆ ಇದು ತಪ್ಪು ಕಲ್ಪನೆ. ಏಕೆಂದರೆ ಹಾಲು ಉತ್ಪಾದನೆಗೆ ಕಾರಣವಾದ ಹಾರ್ಮೋನ್‍ಗಳು ರಾತ್ರಿ ವೇಳೆಯಲ್ಲಿ ಗರಿಷ್ಠ ಪ್ರಮಾಣದಲ್ಲಿರುತ್ತವೆ. ಇವುಗಳ ಉತ್ಪಾದನೆಗಾಗಿ ರಾತ್ರಿ ವೇಳೆ ಸ್ತನಪಾನ ಮಾಡಿಸುವುದು ಅಗತ್ಯ.

 

ಹಾಲುಣಿಸುವಾಗ ಸ್ತನಗಳನ್ನು ಬದಲಾಯಿಸಬೇಕು ಎಂಬುದಾಗಿ ಕೆಲವರು ಹೇಳುತ್ತಾರೆ. ಆದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಶಿಶು ಮೊದಲನೆಯ ಸ್ತನವನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು. ಹಾಲುಣಿಸುವಾಗ ಬರುವ ಮೊದಲ ಹಾಲು ನೀರಿನ ರೂಪದಲ್ಲಿದ್ದು, ಕೊಬ್ಬಿನ ಅಂಶ ಕಡಿಮೆ ಇರುತ್ತದೆಯಲ್ಲದೆ, ಮಗುವಿನ ದಾಹವನ್ನು ಕಡಿಮೆ ಮಾಡುತ್ತದೆ.

 

ಆ ನಂತರ ಬರುವ ಹಾಲು ಹೆಚ್ಚು ಕೊಬ್ಬಿನಾಂಶದಿಂದ ಕೂಡಿರುತ್ತದೆ. ಇದು ಮಗುವಿನ ಹಸಿವನ್ನು ಇಂಗಿಸುತ್ತದೆ. ದೇಹಕ್ಕೆ ಹೆಚ್ಚಿನ ಕ್ಯಾಲೋರಿಯನ್ನು ಒದಗಿಸುತ್ತದೆ. ಇದೆಲ್ಲಕ್ಕಿಂತ ಮಗುವಿಗೆ ಹಾಲುಣಿಸುವ ತಾಯಂದಿರು ಅವರಿವರು ಹೇಳುವ ಸಲಹೆಗಳನ್ನು ಕೇಳಿ ಸಮಸ್ಯೆಗಳನ್ನು ಸೃಷ್ಠಿಸಿಕೊಳ್ಳುವುದಕ್ಕಿಂತ ವೈದ್ಯರನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ತಮ್ಮ ಮತ್ತು ಮಗುವಿನ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು ಎಂಬುವುದನ್ನು ಮರೆಯಬಾರದು.