ಚರ್ಮ ಆರೋಗ್ಯವಾಗಿರಲು ಶುಚಿತ್ವ ಅಗತ್ಯ

ಚರ್ಮ ಆರೋಗ್ಯವಾಗಿರಲು ಶುಚಿತ್ವ ಅಗತ್ಯ

LK   ¦    Oct 21, 2020 01:54:25 PM (IST)
ಚರ್ಮ ಆರೋಗ್ಯವಾಗಿರಲು ಶುಚಿತ್ವ ಅಗತ್ಯ

ಬಹಳಷ್ಟು ಸಾರಿ ಚರ್ಮವೇ ಮೊದಲಿಗೆ ರೋಗಕ್ಕೆ ತುತ್ತಾಗಿ ಬಿಡುತ್ತದೆ. ಶರೀರದ ಮೇಲೆ ದಾಳಿ ಮಾಡುವ ಕೀಟಾಣುಗಳಿಗೆ  ಮೊದಲು ಬಲಿಯಾಗುವುದೇ ಚರ್ಮ. ಇಂತಹ ಚರ್ಮವನ್ನು ಜತನದಿಂದ ನೋಡಿಕೊಂಡರೆ ಮಾತ್ರ ನಾವು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.

ಆರೋಗ್ಯವಂತ ಚರ್ಮ ನಮ್ಮದಾಗಿದ್ದರೆ ಮಾತ್ರ ಆರೋಗ್ಯವಂತ ಬದುಕು ನಮ್ಮದಾಗಲು ಸಾಧ್ಯವಾಗುತ್ತದೆ. ಹಾಗಾದರೆ ಆರೋಗ್ಯವಂತ ಚರ್ಮ ಯಾವುದಪ್ಪಾ ಎಂಬ ಪ್ರಶ್ನೆಗಳು ನಮ್ಮಲ್ಲಿ ಏಳುತ್ತವೆ. ಕಾಂತಿಯಿಂದ ಮಿನುಗುವ, ಮೃದುವಾಗಿರುವ ಚರ್ಮವೇ ಆರೋಗ್ಯವಂತ ಚರ್ಮವಾಗಿದ್ದು, ಕೆಲವೊಮ್ಮೆ  ವಾತಾವರಣದ ಮಾಲಿನ್ಯ, ಅತಿ ಉಷ್ಣ, ಅತಿ ಚಳಿ, ಪೌಷ್ಠಿಕ ಆಹಾರದ ಕೊರತೆ, ಅನಾರೋಗ್ಯ ಪರಿಸರಗಳಲ್ಲಿ ನೆಲೆಸುವುದರಿಂದ ಚರ್ಮದ ಆರೋಗ್ಯಕ್ಕೆ ಧಕ್ಕೆಯುಂಟಾಗುತ್ತದೆ.

ಚರ್ಮವು ಆರೋಗ್ಯವಾಗಿರಲು ಸೂರ್ಯನ ಕಿರಣಗಳ ಅಗತ್ಯವಿದೆಯಾದರೂ, ಕೆಲಮೊಮ್ಮೆ ಅಗತ್ಯಕ್ಕಿಂತ ಹೆಚ್ಚಿನ ಸೂರ್ಯನ ಕಾಂತಿಯಿಂದಲೂ ಚರ್ಮಕ್ಕೆ ಹಾನಿಯಾಗುತ್ತದೆ. ಏಕೆಂದರೆ ಸೂರ್ಯ ಕಿರಣದಲ್ಲಿನ ಅತಿನೇರಳೆ ಬಣ್ಣದ ಕಿರಣಗಳು ಚರ್ಮವನ್ನು ಒಣಗುವಂತೆ ಮಾಡಿ ಮೃದುತ್ವವನ್ನು ನಾಶಮಾಡುತ್ತದೆ.  ಸೂರ್ಯ ಕಿರಣಗಳಿಂದಾಗಿ ಉಂಟಾಗುವ ರೆಡಿಯೇಷನ್‍ನಿಂದಲೂ ಸಹ ಚರ್ಮವು ತನ್ನ ತೇವವನ್ನು ಕಳೆದುಕೊಂಡು ಕಳಾಹೀನವಾಗಿ ಬಿಡುತ್ತದೆ. ಆದುದರಿಂದ ಬೆಳಗಿನ ಎಳೆ ಬಿಸಿಲಿನಲ್ಲಿ ವಾಕಿಂಗ್ ಮಾಡುವುದರಿಂದ ಚರ್ಮ ನುಣುಪಾಗಿರುತ್ತದೆ. ಬಿಸಿಲೇ ತಾಕದಂತೆ ಇದ್ದರೂ ಕೆಲವೊಮ್ಮೆ ಚರ್ಮ ಒಣಗಿ ಸುಕ್ಕು ಕಟ್ಟಿ ಬಿಡುತ್ತದೆ.

ನಾವು ವಾಸವಿರುವ ಮನೆಯ ಸುತ್ತಮುತ್ತ ಕಲುಷಿತ ವಾತಾವರಣ ಇದ್ದಾಗಲೂ ಚರ್ಮಕ್ಕೆ ಕೆಲವು ವ್ಯಾಧಿಗಳು ತಗಲುವ ಸಾಧ್ಯತೆಯಿರುತ್ತದೆ. ಗಾಳಿ, ನೀರು, ಧೂಳು, ಹೊಗೆ, ಅಲರ್ಜಿಕಾರಕ ವಸ್ತುಗಳಿಂದಲೂ ಚರ್ಮಕ್ಕೆ ಹಾನಿಯಾಗುತ್ತದೆ.

ತೇವವಾಗಿ ತಣ್ಣಗಿರುವ ವಾತಾವರಣ ಚರ್ಮಕ್ಕೆ ತುಂಬಾ ಒಳ್ಳೆಯದು. ಹಾಗೆಂದು ಮಿತಿಮೀರಿದ ಚಳಿಯಲ್ಲಿ ಓಡಾಡುವುದು ಒಳ್ಳೆಯದಲ್ಲ. ಚಳಿಗಾಲದಲ್ಲಿ ಹೆಚ್ಚಿನ ಪರಿಣಾಮಗಳು ಚರ್ಮದ ಮೇಲೆಯೇ ಬೀಳುತ್ತದೆ.

ಇನ್ನು ಚರ್ಮದ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಪೌಷ್ಟಿಕಾಂಶವುಳ್ಳ ಆಹಾರ ಸೇವನೆಯೂ ಅಷ್ಟೇ ಅಗತ್ಯವಾಗಿದೆ. ಕೆಲವು ಆಹಾರಗಳು ಚರ್ಮದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಶರೀರಕ್ಕೆ ಹೊಂದಿಕೊಳ್ಳುವ ಆಹಾರವನ್ನಷ್ಟೆ ಸೇವಿಸಬೇಕು. ಕೆಲವು ಆಹಾರಗಳು ಬಾಯಿಗೆ ರುಚಿಕೊಡುತ್ತವೆ. ಆದರೆ ಅವು ಶರೀರಕ್ಕೆ ಹಿಡಿಸದೆ ಅನಾರೋಗ್ಯದಿಂದ ಪರದಾಡುವ ಸ್ಥಿತಿಯೂ ಬರುತ್ತದೆ. ಹೀಗಾಗಿ ಕಾಯಿಪಲ್ಯೆ, ತರಕಾರಿಗಳನ್ನು ಆಹಾರವಾಗಿ ಸೇವಿಸಬೇಕು.

ಕೇಕ್, ತಂಪು ಪಾನೀಯಗಳು, ಸಿಹಿತಿಂಡಿಗಳು, ಮಸಾಲೆಯ ಪದಾರ್ಥ ತಿನ್ನುವುದನ್ನು ಕಡಿಮೆ ಮಾಡಬೇಕು. ಚರ್ಮಕ್ಕೆ ಹೊಂದಿಕೊಳ್ಳುವ ಸಾಬೂನನ್ನು ಅರಿತು ಅದನ್ನೇ ಉಪಯೋಗಿಸಬೇಕು. ಕೃತಕ ಸೌಂದರ್ಯ ವರ್ಧಕಗಳಿಂದ ಆದಷ್ಟು ದೂರವಿರಬೇಕು.  ಬಾದಾಮಿ ಎಣ್ಣೆಯಿಂದ ಚರ್ಮವನ್ನು ಮೃದುವಾಗಿ ಮಾಲೀಸ್ ಮಾಡಬೇಕು. ಬಿಗಿಯಾದ ಉಡುಪುಗಳನ್ನು ಧರಿಸಬಾರದು. ಸೌತೆಕಾಯಿಯನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ, ಚರ್ಮದ ಮೇಲೆ ಇಟ್ಟುಕೊಂಡರೆ ಜಿಡ್ಡು ದೂರವಾಗುತ್ತದೆ. ಧರಿಸುವ ಉಡುಪು ಶುಭ್ರವಾಗಿರುವಂತೆ ನೋಡಿಕೊಳ್ಳಬೇಕು. ಶರೀರ ಹಾಗೂ ಬಟ್ಟೆ ಸ್ವಚ್ಛವಾಗಿರುವಂತೆ ಪ್ರತಿದಿನವೂ ನೋಡಿಕೊಂಡರೆ ಚರ್ಮವನ್ನು ಇತರೆ ವ್ಯಾಧಿಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ.

ವಾತಾವರಣದಲ್ಲಿ ಏರುಪೇರಾದಾಗ ಹಾಗೂ ಶುಚಿಯಾಗಿರಿಸಿಕೊಳ್ಳದ  ಸಂದರ್ಭ ಚರ್ಮದ ಮೇಲೆ ಪರಿಣಾಮ ಬೀರಿ ಹಲವು ಚರ್ಮ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಾವು ಮೊದಲಿಗೆ ಆದ್ಯತೆ ನೀಡಬೇಕಾಗಿರುವುದು ಶುಚಿತ್ವಕ್ಕೆ ಎನ್ನುವುದನ್ನು ಮರೆಯಬಾರದು.