ಬೇಸಿಗೆಯಲ್ಲಿ ಕಾಡುವ ಸಾಂಕ್ರಾಮಿಕ ರೋಗಗಳತ್ತವೂ ಎಚ್ಚರವಿರಲಿ!

ಬೇಸಿಗೆಯಲ್ಲಿ ಕಾಡುವ ಸಾಂಕ್ರಾಮಿಕ ರೋಗಗಳತ್ತವೂ ಎಚ್ಚರವಿರಲಿ!

LK   ¦    Mar 14, 2020 12:43:42 PM (IST)
ಬೇಸಿಗೆಯಲ್ಲಿ ಕಾಡುವ ಸಾಂಕ್ರಾಮಿಕ ರೋಗಗಳತ್ತವೂ ಎಚ್ಚರವಿರಲಿ!

ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ಯಾವುದಾದರೂ ಸಾಂಕ್ರಾಮಿಕ ರೋಗಗಳು ಅಲ್ಲಲ್ಲಿ ಕಾಡುವುದು ಸಾಮಾನ್ಯ. ಆದರೆ ಈ ಬಾರಿ ಇಡೀ ವಿಶ್ವದಾದ್ಯಂತ ಜನರನ್ನು ಕೊರೋನಾ ಕಂಗೆಡಿಸಿದೆ. ಜತೆಗೆ ಈಗಾಗಲೇ ಹಲವರನ್ನು ಬಲಿತೆಗೆದುಕೊಂಡಿದೆ.

ಈಗ ಎಲ್ಲರೂ ಕೊರೋನಾದ ಭಯದಲ್ಲಿದ್ದಾರೆ. ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು ಕ್ರಮ ವಹಿಸುತ್ತಿವೆ. ಇದೀಗ ಕೊರೋನಾದ ಗುಂಗಿನಲ್ಲಿರುವ ಜನ ಸಾಮಾನ್ಯರೋಗ ಕಾಣಿಸಿಕೊಂಡರೂ ಅದು ಕೊರೋನಾ ಇರಬಹುದಾ ಎಂಬ ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಯಾವುದೇ ಕಾಯಿಲೆ ಬಂದ ಬಳಿಕ ಕಷ್ಟಪಡುವುದಕ್ಕಿಂತ ಬರುವ ಮುನ್ನ ಯಾವುದೆಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಅರಿತು ಪ್ರತಿಯೊಬ್ಬರೂ ಅವರ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಬಹು ಮುಖ್ಯವಾಗಿದೆ.

ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕಣ್ಗಾವಲು ಘಟಕವು ಬೇಸಿಗೆಯಲ್ಲಿ ಹರಡಬಹುದಾದ ಸಾಂಕ್ರಾಮಿಕ ರೋಗಗಳ ತಡೆಗೆ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ಮÁಡಿರುವುದನ್ನು ನಾವು ನೋಡಬಹುದಾಗಿದೆ. ಬೇಸಿಗೆ ಬಂತೆಂದರೆ ಸಾಮಾನ್ಯವಾಗಿ ಜಾಂಡೀಸ್, ಪೋಲಿಯೋ, ಕಾಲರಾ, ಕರುಳುಬೇನೆ, ವಿಷಮ ಶೀತ ಜ್ವರ, ಆಮಶಂಕೆ, ಇಲಿಜ್ವರ, ಇತರೆ ಸೂಕ್ಷ್ಮಜೀವಿಗಳಿಂದ, ಕಲುಷಿತ ನೀರು ಹಾಗೂ ಕಲುಷಿತ ಆಹಾರ ಸೇವನೆ ಮೂಲಕ ವಾಂತಿ-ಭೇದಿಗಳು ಹರಡಲಿದ್ದು ಇವುಗಳ ಬಗ್ಗೆಯೂ ಒಂದಷ್ಟು ಜಾಗ್ರತೆ ವಹಿಸುವುದು ಅಗತ್ಯವಾಗಿದೆ.

ಬೇಸಿಗೆಯಲ್ಲಿ ಹರಡುವ ಈ ರೋಗಗಳ ಬಗ್ಗೆಯೂ ಹೆಚ್ಚಿನ ಗಮನಹರಿಸುವುದು ಅಗತ್ಯವಾಗಿದ್ದು, ರೋಗವು ಹರಡದಂತೆ ಮುನ್ನಚ್ಚರಿಕೆಯಾಗಿ ಕುದಿಸಿ, ಆರಿಸಿದ ನೀರನ್ನು ಕುಡಿಯಲು ಉಪಯೋಗಿಸಬೇಕು. ಬಿಸಿಯಾದ ಆಹಾರ ಪದಾರ್ಥಗಳನ್ನು ಉಪಯೋಗಿಸಬೇಕು. ಆಹಾರ ಪದಾರ್ಥಗಳನ್ನು ಮುಚ್ಚಿಡಬೇಕು. ರಸ್ತೆ ಬದಿಗಳಲ್ಲಿ, ಹೋಟೆಲ್‍ಗಳಲ್ಲಿ, ತೆರೆದಿಟ್ಟು ಮಾರುವ ಹಣ್ಣು ಹಂಪಲು ಹಾಗೂ ಆಹಾರ ಪದಾರ್ಥಗಳನ್ನು ಉಪಯೋಗಿಸಬಾರದು. ಹೋಟೆಲ್‍ಗಳಲ್ಲಿ ಕುಡಿಯಲು ಬಿಸಿ ನೀರನ್ನು ಕೇಳಿ ಪಡೆಯಬೇಕು. ಊಟಕ್ಕೆ ಮುಂಚಿತವಾಗಿ ಕೈಗಳನ್ನು ಶುಚಿಗೊಳಿಸಬೇಕು. ಬಯಲಿನಲ್ಲಿ ಮಲ, ಮೂತ್ರ ವಿಸರ್ಜನೆ ಮಾಡದೆ ಶೌಚಾಲಯವನ್ನು ಬಳಸಬೇಕು. ಮಲ ವಿಸರ್ಜನೆ ನಂತರ ಕೈಗಳನ್ನು ಸೋಪಿನಿಂದ ತೊಳೆಯಬೇಕು. ವಾಂತಿಭೇದಿ ಕಾಣಿಸಿಕೊಂಡರೆ ಅತಿಯಾಗಿ ನೀರು ಸೇವಿಸಬೇಕು ಅಥವಾ ಓಆರ್‍ಎಸ್ ಪಾನಕ ಸೇವಿಸಬೇಕು. ಮನೆಯ ಒಳಗೆ, ಹೊರಗಡೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು.

ಹಳ್ಳಿಗಳಲ್ಲಿ ಜ್ವರ, ಕಾಮಾಲೆ, ವಾಂತಿಭೇದಿ, ರಕ್ತದೊಂದಿಗೆ ಭೇದಿ ಆಗುವುದು, ಹೊಟ್ಟೆನೋವು ಮತ್ತು ಭೇದಿ ರೋಗಲಕ್ಷಣಗಳು ಕಾಣಿಸಿಕೊಂಡರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಅಥವಾ ಆರೋಗ್ಯ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡಬೇಕು. ಶುದ್ದ ಕುಡಿಯುವ ನೀರು, ಶುಚಿಯಾದ ಆಹಾರ ಪದಾರ್ಥಗಳು, ಸ್ವಚ್ಛ ಕೈಗಳು ರೋಗಗಳಿಂದ ಮುಕ್ತಿಗೊಳಿಸುವುದರಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.

ಇದೀಗ ಕೊರೋನಾ ವೈರಸ್ ಭಯ ಕಾಡುತ್ತಿರುವುದರಿಂದ ಆದಷ್ಟು ಎಚ್ಚರಿಕೆಯನ್ನು ವಹಿಸಲೇ ಬೇಕಾಗಿದೆ. ಆಗಾಗ್ಗೆ ಕೈತೊಳೆಯುವುದು, ಶೀತ, ಜ್ವರ, ನೆಗಡಿ ಇರುವ ವ್ಯಕ್ತಿಗಳಿಂದ ಅಂತರ ಕಾಪಾಡಿಕೊಳ್ಳುವುದು, ಜನಸಂದಣಿಯಿಂದ ದೂರ ಇರುವುದು ಹೀಗೆ ಒಂದಷ್ಟು ಎಚ್ಚರಿಕೆಯನ್ನು ಕೈಗೊಳ್ಳಲೇ ಬೇಕಾಗಿದೆ.