ಮಳೆಗಾಲದಲ್ಲಿ ಹರಡುವ ರೋಗಗಳತ್ತ ಎಚ್ಚರಿಕೆ ಅಗತ್ಯ

ಮಳೆಗಾಲದಲ್ಲಿ ಹರಡುವ ರೋಗಗಳತ್ತ ಎಚ್ಚರಿಕೆ ಅಗತ್ಯ

LK   ¦    Jul 22, 2020 11:01:53 AM (IST)
ಮಳೆಗಾಲದಲ್ಲಿ ಹರಡುವ ರೋಗಗಳತ್ತ ಎಚ್ಚರಿಕೆ ಅಗತ್ಯ

ಇದೀಗ ಕೊರೋನಾ ಮಹಾಮಾರಿ ಅಬ್ಬರಿಸುತ್ತಿದ್ದು ಜನ ಭಯದಲ್ಲಿಯೇ ದಿನ ಕಳೆಯುವಂತಾಗಿದೆ. ಜನ ಕೊರೋನಾದ ಭಯದಲ್ಲಿರುವಾಗಲೇ ಇತರೆ ರೋಗಗಳು ಕೂಡ ನಮಗೆ ತಗುಲುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಮಳೆಗಾಲದಲ್ಲಿ ನೀರು ಒಂದು ಕಡೆ ನಿಲ್ಲುವುದರಿಂದ ಅಲ್ಲಿ ಮಾಲಿನ್ಯವುಂಟಾಗಿ ಸೊಳ್ಳೆಗಳು ಆ ಸ್ಥಳಗಳನ್ನು ವಾಸಸ್ಥಾನವಾಗಿ ಮಾಡಿಕೊಂಡು ವಯಸ್ಸಾದ ವ್ಯಕ್ತಿ, ಗರ್ಭಿಣಿಯರು ಮತ್ತು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರ ಮೇಲೆ ತೀವ್ರಗತಿಯಲ್ಲಿ ಡೆಂಗ್ಯೂ, ಚಿಕುನ್‍ಗುನ್ಯ, ಮಲೇರಿಯಾದಂತಹ ಕಾಯಿಲೆಗಳು ಹರಡುತ್ತವೆ. ಆದ್ದರಿಂದ ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವುದಲ್ಲದೆ, ನೀರು ನಿಲ್ಲದಂತೆ ನೋಡಿಕೊಳ್ಳುವುದು ಬಹು ಮುಖ್ಯ.

ಇದು ನಾವು ವಾಸ ಮಾಡುವ ಮನೆಯಾಗಿರಬಹುದು ಅಥವಾ ಕಚೇರಿ, ಇಲಾಖೆ, ಶಾಲೆ ಎಲ್ಲಿಯೇ ಆಗಿರಲಿ ಅಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಅಗತ್ಯ. ಒಂದು ವೇಳೆ ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಇತರರನ್ನು ಸಂಪರ್ಕಿಸದೆ  ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯುವುದು ಇವತ್ತಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ.

ಮಳೆಗಾಲದಲ್ಲಿ ಕಾಣಿಸುವ ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ವೈರಸ್‍ನಿಂದ ಉಂಟಾಗುವ ಕಾಯಿಲೆ, ಈಡಿಸ್ ಈಜಿಪ್ಪೈ  ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಆದ್ದರಿಂದ ಎಲ್ಲ ನೀರಿನ ತೊಟ್ಟಿಗಳು, ಡ್ರಮ್‍ಗಳು, ಬ್ಯಾರೆಲ್‍ಗಳು, ಏರ್‍ಕೂಲರ್, ತೊಟ್ಟಿ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಉಜ್ಜಿ ತೊಳೆದು ಒಣಗಿಸಿ ಮತ್ತೆ ಭರ್ತಿ ಮಾಡುವುದು ಒಳ್ಳೆಯದು. ಇನ್ನು ನೀರು ಸಂಗ್ರಹಿಸುವ ವಸ್ತುಗಳಿಗೆ ಸೊಳ್ಳೆಗಳು ಒಳಗೆ ನುಸುಳದಂತೆ ಮುಚ್ಚಳದಿಂದ ಮುಚ್ಚುವುದು, ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು, ಸೊಳ್ಳೆ ಪರದೆಯನ್ನು ಬಳಸುವುದು ಹಾಗೂ ಮೈತುಂಬ ಬಟ್ಟೆ ಧರಿಸುವುದು ಮುಂಜಾಗ್ರತಾ ಕ್ರಮಗಳಾಗಿವೆ.

ಈಗಾಗಲೇ ರಾಜ್ಯದಾದ್ಯಂತ ಮಲೇರಿಯಾ, ಡೆಂಗ್ಯೂ, ಚಿಕುನ್‍ಗುನ್ಯ ರೋಗ ಪ್ರಕರಣಗಳನ್ನು ತಡೆಗಟ್ಟಲು ಎಲ್ಲ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ನಿರಂತರವಾಗಿ ಎಲ್ಲ ಗ್ರಾಮಗಳಲ್ಲಿ, ನಗರ ಪ್ರದೇಶದ ಎಲ್ಲ ಬಡಾವಣೆಗಳಲ್ಲಿ, ಮುಖ್ಯವಾಗಿ ಕೊಳಚೆ ಪ್ರದೇಶಗಳಲ್ಲಿ ಜ್ವರ ಪ್ರಕರಣಗಳ ತೀವ್ರ ಸಮೀಕ್ಷೆ ಮತ್ತು ಲಾರ್ವ ಸಮೀಕ್ಷೆ ಕಾರ್ಯವನ್ನು ಗುಣಾತ್ಮಕವಾಗಿ ನಡೆಸುತ್ತಾ ಸೊಳ್ಳೆಗಳ ಉತ್ಪತ್ತಿ ತಾಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು ಇವರಿಗೆ ಸಾರ್ವಜನಿಕರು ಸಹಕಾರ ನೀಡಬೇಕಿದೆ.

ಇದಲ್ಲದೆ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ್ಲ ಜ್ವರ ಪ್ರಕರಣಗಳಿಗೂ ಉಚಿತವಾಗಿ ನಿಯಮಾನುಸಾರ ತ್ವರಿತ ಪರೀಕ್ಷೆ ಮತ್ತು ಸಂಪೂರ್ಣ ಚಿಕಿತ್ಸೆಗೆ ಕ್ರಮವಹಿಸಿ, ಅಗತ್ಯವಿದ್ದ ಕಡೆ ಟೆಮಿಫಾಸ್ ಲಾರ್ವ ನಾಶಕ ದ್ರಾವಣವನ್ನು ಉಪಯೋಗಿಸುವ ಮೂಲಕ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸುವುದು ಮತ್ತು ಜೈವಿಕ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಪರಿಣಾಮಕಾರಿ ಆರೋಗ್ಯ ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಅದು ಏನೇ ಇರಲಿ ಕೊರೋನಾ ತಡೆಗೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಹಾಕುವ ಮೂಲಕ ಹೇಗೆ ಎಚ್ಚರಿಕೆ ವಹಿಸುತ್ತಿದ್ದೇವೆಯೋ ಅದೇ ರೀತಿ ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ವಿಚಾರದಲ್ಲಿಯೂ ಸ್ವಚ್ಛತೆ ಕಾಪಾಡುವುದು ಸೇರಿದಂತೆ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.