ವಾತಾವರಣದಲ್ಲಿರುವ ಅಪಾಯಕಾರಿ ಮಾಲಿನ್ಯಕಾರಕ - ಬಯೋಏರೋಸಾಲ್ಸ್ ಗಳು

ವಾತಾವರಣದಲ್ಲಿರುವ ಅಪಾಯಕಾರಿ ಮಾಲಿನ್ಯಕಾರಕ - ಬಯೋಏರೋಸಾಲ್ಸ್ ಗಳು

Kapil Kajal   ¦    Aug 13, 2020 12:20:45 PM (IST)
ವಾತಾವರಣದಲ್ಲಿರುವ ಅಪಾಯಕಾರಿ ಮಾಲಿನ್ಯಕಾರಕ - ಬಯೋಏರೋಸಾಲ್ಸ್ ಗಳು

ಬೆಂಗಳೂರು: ವಾಹನ, ಕೈಗಾರಿಕೆಗಳ ಹೊಗೆ, ನಿರ್ಮಾಣ ಕಾಮಗಾರಿಗಳ ಧೂಳು, ತ್ಯಾಜ್ಯಗಳ ಸುಡುವಿಕೆಯು ಬೆಂಗಳೂರಿನ ವಾಯುಮಾಲಿನ್ಯದ ಹಿಂದಿರುವ ಪ್ರಮುಖ ಕಾರಣಗಳಾಗಿದ್ದು, ಇದರ ಜೊತೆಗೆ ತೆರೆದ ಒಳಚರಂಡಿ, ಘನತ್ಯಾಜ್ಯ ಡಂಪಿಂಗ್, ಭೂಕುಸಿತ, ರಾಸಾಯನಿಕಗಳ ಸೇರುವಿಕೆಯಿಂದ ನೊರೆಯುಕ್ಕುವ ಕೆರೆಗಳೂ ವಾಯುಮಾಲಿನ್ಯಕ್ಕೆ ತಮ್ಮದೇ ಕೊಡುಗೆ ನೀಡುತ್ತಿವೆ.

ಬೆಂಗಳೂರು ವಿಶ್ವವಿದ್ಯಾಲಯದ (ಬಿಯು) ಪರಿಸರ ವಿಭಾಗದ (ಡಿಇಎಸ್) ಇದರ ಅಧ್ಯಯನ ಪ್ರಕಾರ 2010ರಿಂದ ತೆರೆದ ಘನತ್ಯಾಜ್ಯ ಡಂಪ್‍ಗಳಿಂದಾಗಿ ಬ್ಯಾಕ್ಟೀರಿಯಲ್ ಏರೋಸಾಲ್ಸ್ ಅಥವಾ ಬಯೋಏರೋಸಾಲ್ಸ್ ಗಳು ವಾತಾವರಣದಲ್ಲಿ ಅಧಿಕಗೊಂಡಿವೆ. ಬಯೋಏರೋಸಾಲ್ಸ್ ಗಳು ಒಂದು ರೀತಿಯಾದ ವಾಯುಗಾಮಿ ಕಣಗಳು ಅಥವಾ ದೊಡ್ಡ ಅಣುಗಳನ್ನು ಹೊತ್ತೊಯ್ಯುವ ಜೀವಿಗಳಾಗಿವೆ ಅಥವಾ ಜೀವಿಗಳಿಂದ (ಬ್ಯಾಕ್ಟೀರಿಯಾ, ಫಂಗಿ, ವೈರಸ್‍ಗಳು ಮತ್ತು ಪರಾಗ) ಬಿಡುಗಡೆಯಾಗುತ್ತವೆ. ಅವುಗಳು ಯಾವುದೇ ರೀತಿಯಾದ ಪರಿಸರದಲ್ಲಿರುವ ಜಲಾಶಯಗಳು, ತಾಜಾ ನೀರು, ಮಣ್ಣು, ಸಸ್ಯಗಳು, ಜೈವಿಕ ರಿಯಾಕ್ಟರ್‍ಗಳು, ತ್ಯಾಜ್ಯ, ಪ್ರಾಣಿಗಳು ಅಥವಾ ಮನುಷ್ಯನ ದೇಹದಿಂದಲೂ ಬಯೋಏರೋಸಾಲ್ಸ್ ಗಳು ಹುಟ್ಟಿಕೊಂಡು ವಾತಾವರಣ ಸೇರಿಕೊಳ್ಳುತ್ತವೆ ಎಂದು ಅಧ್ಯಯನ ತಿಳಿಸುತ್ತದೆ.

ಬಯೋಏರೋಸಾಲ್ಸ್ ಗಳಲ್ಲಿನ ಕಣಗಳು ಸಾಮಾನ್ಯವಾಗಿ ವ್ಯಾಸದಲ್ಲಿ 0.3 ರಿಂದ 100 µm (1 m = 10 ಲಕ್ಷ µm) ಆಗಿರುತ್ತದೆ. ಸಣ್ಣ ಕಣಗಳು ಪ್ರಾಥಮಿಕ ಉಸಿರಾಟದ ಹಂತದಲ್ಲಿ ವ್ಯಾಸದಲ್ಲಿ 1 ರಿಂದ 10 µm ಆಗಿದ್ದು, ದೊಡ್ಡಕಣಗಳ ಉಸಿರಾಟವು ಅವುಗಳ ಮೇಲ್ಮೈಯಲ್ಲಿ ಸಂಗ್ರಹಿತವಾಗುತ್ತದೆ ಎಂದು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಮೈಕ್ರೋಬಯೋಲಜಿ (ಐಜೆಎಂಎಂ) ನಡೆಸಿದ ಅಧ್ಯಯನವೊಂದರಲ್ಲಿ ತಿಳಿಸಿದೆ.

ಫೌಂಡೇಶನ್ ಫಾರ್ ಇಕಾಲಜಿಕಲ್ ಸೆಕ್ಯುರಿಟಿ ಆಫ್ ಇಂಡಿಯಾದ ಆಡಳಿತ ಮಂಡಳಿ ಸದಸ್ಯ ಡಾ. ಯಲ್ಲಪ್ಪಾ ರೆಡ್ಡಿ ಅವರ ಪ್ರಕಾರ ‘ಜೈವಿಕ ಏರೋಸಾಲ್ಸ್ ಗಳ ಹೆಚ್ಚಳಕ್ಕೆ ಕಸದ ವಾಸನೆ ಕಾರಣವಾಗಿದ್ದು, ನಗರದ ಸುತ್ತಮುತ್ತಲಿನ ಕಸದ ರಾಶಿಗಳು ಬಯೋಏರೋಸಾಲ್ಸ್‍ಗಳ ಹೆಚ್ಚಳವಾಗುತ್ತಿದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ’ ಎನ್ನುವ ಅವರು ಬಯೋಏರೋಸಾಲ್ಸ್‍ಗಳಿಂದುಂಟಾಗುವ ಅಪಾಯಗಳಿಗೆ ನಗರದ ನಿವಾಸಿಗಳು ಹಾಗೂ ಆಡಳಿತವೇ ನೇರ ಹೊಣೆಯೆಂದು ದೂರುತ್ತಾರೆ.

ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು (ಬಿಬಿಎಫ್) ನಿಯಂತ್ರಿತ ಮಟ್ಟದಲ್ಲಿರುವ ಪ್ರಮಾಣವೆಂದರೆ ಗಾಳಿಯಲ್ಲಿ ಪ್ರತಿ ಘನಮೀಟರ್‍ಗೆ 10000 (ಅಈU/m3) ಆಗಿದ್ದು, ಬೆಂಗಳೂರು ವಿವಿಯ ಅಧ್ಯಯನ ಪ್ರಕಾರ ಬಿಬಿಎಫ್ ಮಟ್ಟವು 2010ರಲ್ಲಿ 58,827 (ಅಈU/m3) ಆಗಿದ್ದು, 2017ರಲ್ಲಿ ಇದು 83,256 (ಅಈU/m3) ಕ್ಕೆ ಹೆಚ್ಚಳವಾಗಿದೆ.

ಅಧಿಕಗೊಳ್ಳುತ್ತಿರುವ ಗೃಹಬಳಕೆಯಿಂದುಂಟಾಗುವ ತ್ಯಾಜ್ಯ ಸಂಗ್ರಹಣೆ, ಘನತ್ಯಾಜ್ಯ ನಿರ್ವಹಣೆಯ ಬಗೆಗಿರುವ ತಪ್ಪು ಗ್ರಹಿಕೆಗಳು, ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಥಳೀಯರ ನಡುವಿನ ಸಮನ್ವಯತೆಯ ಕೊರತೆ, ಘನತ್ಯಾಜ್ಯಗಳ ಡಂಪಿಂಗ್‍ಗಳಿಂದಾಗಿ ಏರೋಸಾಲ್ಸ್‍ಗಳ ಪ್ರಸರಣದಲ್ಲಿನ ಹೆಚ್ಚಳಕ್ಕೆ ಕಾರಣವಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ವರದಿಯ ಪ್ರಕಾರ, ಬೈರಮಂಗಲ ಜಲಾಶಯದಿಂದ ಸಂಗ್ರಹಿಸಲಾದ ನೀರಿನ ಮಾದರಿಗಳಲ್ಲಿ ಇ.ಕೋಲಿ ಮತ್ತು ಫೆಕಲ್ ಸ್ಟ್ರೆಪ್ಟ್ರೋಕೊಕಿಯಂತಹ ಸೂಕ್ಷ್ಮಾಣುಜೀವಿಗಳ ಮಟ್ಟವು ಡಬ್ಲ್ಯೂಹೆಚ್‍ಒ ನಿಗದಿಪಡಿಸಿದ ಮಟ್ಟಕ್ಕಿಂತ ಹೆಚ್ಚಿದ್ದು, ಈ ನೀರು ಕೃಷಿ ಉದ್ದೇಶಗಳಿಗೆ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಭಾಗದ ಮುಖ್ಯಸ್ಥೆ ಮತ್ತು ಪ್ರಾಧ್ಯಾಪಕಿ ನಂದಿನಿ ಎನ್. ಅವರ ಪ್ರಕಾರ `ಗಾಳಿಯಲ್ಲಿ 2.5 µm ಗಿಂತ ಕಡಿಮೆ ಗಾತ್ರದ ಕಣಗಳಿದ್ದರೆ ಅದನ್ನು ನಾವು ಸರಾಗವಾಗಿ ಉಸಿರಾಡುವಂತಾಗುತ್ತದೆ ಮತ್ತು ಇದೇ ನಾವು ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಎದುರಿಸುತ್ತಿರುವ ಸಮಸ್ಯೆಯಾಗಿದೆ. ಈ ಗಾಳಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರ ಜೀವಿಗಳು ಸೇರಿಕೊಂಡಿದ್ದು, ಇವು ನಾವು ಉಸಿರಾಡುವ ಗಾಳಿಯ ಮೂಲಕ ನೇರವಾಗಿ ನಮ್ಮ ಶ್ವಾಸಕೋಶಕ್ಕೆ ಹೋಗುತ್ತವೆ. ಆ ಮೂಲಕ ಶ್ವಾಸಕೋಶದ ಸೋಂಕುಗಳು ಹಾಗೂ ಉಸಿರಾಟದ ತೊಂದರೆಗಳಿಗೆ ಕಾರಣವಾಗುತ್ತವೆ.

ಒಳಾಂಗಣದಲ್ಲೂ ಬಯೋಏರೋಸಾಲ್ಸ್ ಗಳು

ಈ ಬಯೋಏರೋಸಾಲ್ಸ್‍ಗಳು ನಮ್ಮ ಮನೆಯ ಒಳಗೂ ಇರುತ್ತವೆ. ಇವುಗಳು ನಾವು ವಾಸಿಸುವ ಕಟ್ಟಡ ಮನೆಗಳ ಒಳಾಂಗಣದಲ್ಲಿರುವುದರಿಂದ ಅನೇಕ ರೋಗಗಳಿಗೂ ಕಾರಣವಾಗಬಲ್ಲದು. ಪೀಠೋಪಕರಣಗಳು, ಕಟ್ಟಡ ಸಾಮಾಗ್ರಿಗಳು, ಗೋಡೆ, ಸೀಲಿಂಗ್, ಶಿಲೀಂದ್ರಗಳಿಗೆ ಅವಕಾಶಗಳಾಗುವ ಗೋಡೆಯಲ್ಲಿನ ಹಾಗೂ ನೆಲದಲ್ಲಿನ ತೂತುಗಳು, ಗೋಡೆಗಳ ನಡುವಿನ ಸಂಧುಗಳು, ತಾಜಾ ಗಾಳಿಯ ಸರಿಯಾದ ಪ್ರವೇಶವಿಲ್ಲದ ಕೊಠಡಿಗಳ ಗೋಡೆಗಳು, ಸರಿಯಾಗಿ ಗಾಳಿ ಬೆಳಕಿಲ್ಲದ ಕೊಠಡಿಗಳು, ಕಳಪೆ ನಿಯಂತ್ರಿತ ತಾಪಮಾನವೂ ಮನೆಯೊಳಗೆ ಏರೋಸಾಲ್ಸ್‍ಗಳ ಉಪಸ್ಥಿತಿಗೆ ಕಾರಣವಾಗುತ್ತವೆ ಎಂಬುದಾಗಿ ಐಜೆಎಮ್‍ಎಮ್ ಅಧ್ಯಯನ ತಿಳಿಸಿದೆ.

ಹವಾನಿಯಂತ್ರಿತ ಕೊಠಡಿಗಳು, ಬಸ್‍ಗಳು, ಚಿತ್ರಮಂದಿರ ಹೀಗೆ ಅನೇಕ ಕಡೆಗಳಲ್ಲಿಯೂ ಹವಾನಿಯಂತ್ರಣ ಯಂತ್ರದ ಫಿಲ್ಟರ್ ಬದಲಾಯಿಸದೇ ಇದ್ದ ಸಂದರ್ಭದಲ್ಲಿಯೂ ಬ್ಯಾಕ್ಟೀರಿಯಾ ಹಾಗೂ ಶಿಲೀಂದ್ರಗಳ ಬೆಳವಣಿಗೆಗೆ ಸಹಾಯಕವಾಗುತ್ತವೆ.

ಆರೋಗ್ಯದ ಮೇಲೆ ದುಷ್ಪರಿಣಾಮ

ಬಯೋಏರೋಸಾಲ್ಸ್‍ಗಳು ಮನುಷ್ಯನ ದೇಹವನ್ನು ಪ್ರವೇಶಿಸುವುದರಿಂದ ಹಲವು ರೀತಿಯ ವೈರಸ್‍ಗಳು, ಬ್ಯಾಕ್ಟೀರಿಯಾ, ಫಂಗಿ, ಪ್ರೊಟೊಝೊವಾ ಮತ್ತು ಹೆಲ್ಮಿಂತ್ಸ್, ಅಸ್ತಮಾ, ಅಲರ್ಜಿಕ್ ರೆನಿಟಿಸ್, ಕ್ಯಾನ್ಸರ್ ಹಾಗೂ ಸಾಂಕ್ರಾಮಿಕ ಖಾಯಿಲೆಗಳಿಗೂ ಕಾರಣವಾಗಬಹುದು. ಬ್ಯಾಕ್ಟೀರಿಯಾ ಏರೋಸಾಲ್ಸ್ ಅಥವಾ ಬಯೋ ಏರೋಸಾಲ್ಸ್ ಗಳನ್ನು ಉಸಿರಾಡುವುದರಿಂದ ಶ್ವಾಸಕೋಶ, ಮೂತ್ರದ ಸೋಂಕು, ಬ್ಯಾಕ್ಟರೆಮಿಯಾ, ಬ್ಯಾಕ್ಟೀರಿಯಲ್ ಎಂಡೋಕಾರ್ಡಿಟಿಸ್, ಡೈವರ್ಟಿಕ್ಯುಲಿಟಿಸ್, ಮೈನಿಂಜಿಟಿಸ್ ರೋಗಗಳು ಉಂಟಾಗುವ ಸಾಧ್ಯತೆಯಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ.

ಮನೆಗಳು, ಕಚೇರಿಗಳ ಒಳಾಂಗಣದಲ್ಲಿರುವ ಸೂಕ್ಷ್ಮಾಣುಜೀವಿಗಳನ್ನು ಅತಿಹೆಚ್ಚು ದಕ್ಷತೆಯ ವಾಯುಶುದ್ಧೀಕರಣಗಳ ಬಳಕೆಯ ಮೂಲಕ ಇಲ್ಲವಾಗಿಸಬಹುದು. ಸರಿಯಾದ ಗಾಳಿ ಹರಡುವಿಕೆಗೆ ಅವಕಾಶ ಕಲ್ಪಿಸಿ, ಸೋಂಕುನಿವಾರಕಗಳನ್ನು ಬಳಸುವುದು ಸೇರಿದಂತೆ ಅನೇಕ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದರಿಂದ ಒಳಾಂಗಣ ಬಯೋಏರೋಸಾಲ್ಸ್‍ಗಳನ್ನು ತಡೆಗಟ್ಟಬಹುದು ಎಂದು ಸೆಂಟರ್ ಫಾರ್ ಸಯನ್ಸ್ ಸ್ಪಿರಿಚ್ವಾಲಿಟಿ ಕೇಂದ್ರದ ಮಕ್ಕಳ ತಜ್ಞ ಡಾ. ಶಶಿಧರ ಗಂಗಯ್ಯ ಅವರು ಹೇಳುತ್ತಾರೆ.

ಪರಿಸರ, ಜಲಾಶಯಗಳು, ಸ್ವಚ್ಛ ಪರಿಸರ ಹಾಗೂ ಜೈವಿಕ ತ್ಯಾಜ್ಯ ನಿರ್ವಹಣೆಯನ್ನು ನಿಭಾಯಿಸದೇ ಇದ್ದರೆ ಹೊರಾಂಗಣದಲ್ಲಿರುವ ಬಯೋಏರೋಸಾಲ್ಸ್ ಗಳ ನಿಯಂತ್ರಣ ಅಸಾಧ್ಯ ಎನ್ನುತ್ತಾರೆ ಬೆಂಗಳೂರು ವಿವಿಯ ಪರಿಸರ ವಿಭಾಗದ ಮುಖ್ಯಸ್ಥೆ, ಪ್ರಾಧ್ಯಾಪಕಿ ನಂದಿನಿಯವರು.