ಆರೋಗ್ಯದಾಯಕ ಹಣ್ಣು ಹನುಮಫಲ

ಆರೋಗ್ಯದಾಯಕ ಹಣ್ಣು ಹನುಮಫಲ

LK   ¦    Oct 19, 2020 12:08:07 PM (IST)
ಆರೋಗ್ಯದಾಯಕ ಹಣ್ಣು ಹನುಮಫಲ

ಹನುಮಫಲ ಇದು ರಾಮಫಲ, ಸೀತಾಫಲಗಳಂತೆ ಇದ್ದರೂ ಕೂಡ ಆರೋಗ್ಯಕಾರಿ ಗುಣಗಳನ್ನು ಹೆಚ್ಚು ಹೊಂದಿದ್ದು, ಕ್ಯಾನ್ಸರ್ ನಂತಹ ಕಾಯಿಲೆಗೂ ಇದು ಮದ್ದಾಗಿದೆ ಎಂಬುವುದೇ ಇದು ಇವತ್ತು ಹೆಸರುವಾಸಿಯಾಗಲು ಕಾರಣವಾಗಿದೆ.

ಹನುಮಫಲ ಕೇವಲ ತಿನ್ನಲಷ್ಟೆ ಅಲ್ಲ ಇದರ ಹಣ್ಣು ಎಲೆ ಎಲ್ಲವೂ ಔಷಧಿಗಳ ಆಗರ ಎಂದರೆ ನಂಬಲೇ ಬೇಕು. ಅಷ್ಟೇ ಅಲ್ಲ ಕ್ಯಾನ್ಸರ್ ರೋಗಕ್ಕೂ ರಾಮಬಾಣವಂತೆ. ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಬಳಿ ಹೆಗ್ಗವಾಡಿಪುರ ಗ್ರಾಮದ ನಿವಾಸಿ ಪ್ರಗತಿ ಪರ ರೈತ ಮಹೇಶ್‍ಕುಮಾರ್ ಅವರು ತಮ್ಮ ಜಮೀನಿನಲ್ಲಿ ಬೆಳೆಸಿದ್ದು ಇದರ ಔಷಧೀಯ ಗುಣಗಳನ್ನು ಅರಿತ ಜನ ಹಣ್ಣು ಎಲೆಗಾಗಿ ಇವರ ಬಳಿಗೆ ಬರುತ್ತಿದ್ದಾರೆ. ಈಗಾಗಲೇ ಇವರ ಜಮೀನಿಗೆ ನಮ್ಮ ರಾಜ್ಯದವರಲ್ಲದೆ, ತಮಿಳುನಾಡು, ಆಂಧ್ರ, ಕೇರಳದಿಂದಲೂ ಬಂದು ಎಲೆ ಮತ್ತು ಹಣ್ಣನ್ನು ತೆಗೆದುಕೊಂಡು ಹೋಗಿರುವುದು ಮತ್ತು ಹೋಗುತ್ತಿರುವುದು ವಿಶೇಷವಾಗಿದೆ.

ಮಹೇಶ್‍ಕುಮಾರ್ ಅವರು ಮನೆಯ ಮುಂದೆ ಬೆಳೆಸಿರುವ ಹನುಮ ಫಲ ಹಣ್ಣು ಸರಿ ಸುಮಾರು 3 ಕೆ.ಜಿ.ಯಷ್ಟು ತೂಕವಿದ್ದು, ಗಾತ್ರವೂ ದೊಡ್ಡದಾಗಿದೆ. ಇದನ್ನು ಅವರು ಬೆಳೆಸಿದ್ದು ಕೂಡ ಆಕಸ್ಮಿಕವೇ. ಕೆಲವು ವರ್ಷಗಳ ಹಿಂದೆ ಮಹೇಶ್‍ಕುಮಾರ್ ಅಮೇರಿಕಾದಲ್ಲಿ ನಡೆದ ಅಂತರಾಷ್ಟ್ರೀಯ ಬೀಜ ವಿನಿಮಯ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿ ಸಿಕ್ಕ ಬೀಜವನ್ನು ತಂದು ಜತನದಿಂದ ಬಿತ್ತಿ ಮೊಳಕೆಯೊಡೆದು ಗಿಡವಾದ ಬಳಿಕ ಅದನ್ನು ನೆಟ್ಟು ಬೆಳೆಸಿದರು. ಗಿಡವಾಗಿ ಬೆಳೆದು ಹಣ್ಣು ಆದರೂ ಅದು ಯಾವುದು ಎನ್ನುವುದೇ ಗೊತ್ತಿರಲಿಲ್ಲ. ಕೆಲವರು ಅದನ್ನು ನೋಡಿ ಹನುಮಫಲ ಎಂದು ತಿಳಿಸಿದರಂತೆ. ಆಯುರ್ವೇದದಲ್ಲಿ ಹನುಮಫಲದ ಬಗ್ಗೆ ಮಾಹಿತಿ ಹುಡುಕಿದಾಗ ಇದು ಕ್ಯಾನ್ಸರ್‍ಗೆ ರಾಮಬಾಣ ಎಂಬುದು ತಿಳಿದು ಬಂತು.

ಯಾವಾಗ ಹನುಮಫಲದ ಮಹತ್ವ ತಿಳಿಯಿತೋ ಜನ ಎಲೆ ಹಣ್ಣನ್ನು ಹುಡುಕಿಕೊಂಡು ಜನ ಬರತೊಡಗಿದರು. ಹಾಗೆ ಬರುವ ಜನರಿಗೆ ಮಹೇಶ್‍ಕುಮಾರ್ ಎಲೆಗಳನ್ನು ನೀಡಿ ಕಳುಹಿಸುತ್ತಾರೆ. ಕ್ಯಾನ್ಸರ್ ಪೀಡಿತರು ಇದರ ಎಲೆಗಳನ್ನು ಸೇವಿಸಿದರೆ ನಿಯಂತ್ರಣಕ್ಕೆ ಬರುತ್ತದೆಯಂತೆ. ಅದೇನೆ ಇರಲಿ ಹನುಮ ಫಲ ಮಹತ್ವ ಅರಿತವರಿಗಷ್ಟೇ ಎಂಬುವುದಂತು ಸತ್ಯ.