ಪಟ್ಲ ಸಂಭ್ರಮ-ದುಬೈ 2019; ಆಮಂತ್ರಣ ಪತ್ರ, ಪ್ರವೇಶ ಪತ್ರ ಬಿಡುಗಡೆ ಸಮಾರಂಭ

ಪಟ್ಲ ಸಂಭ್ರಮ-ದುಬೈ 2019; ಆಮಂತ್ರಣ ಪತ್ರ, ಪ್ರವೇಶ ಪತ್ರ ಬಿಡುಗಡೆ ಸಮಾರಂಭ

HSA   ¦    Sep 25, 2019 03:18:07 PM (IST)
ಪಟ್ಲ ಸಂಭ್ರಮ-ದುಬೈ 2019; ಆಮಂತ್ರಣ ಪತ್ರ, ಪ್ರವೇಶ ಪತ್ರ ಬಿಡುಗಡೆ ಸಮಾರಂಭ

ದುಬೈ: ಇದೇ ಬರುವ 2019 ಅಕ್ಟೋಬರ್ ತಿಂಗಳ 18ರಂದು ದುಬೈಯ ಶೇಖ್ ರಶೀದ್ ಅಡಿಟೋರಿಯಂ, ಇಂಡಿಯನ್ ಸ್ಕೂಲ್ ನಲ್ಲಿ ನಡೆಯಲಿರುವ ಪಟ್ಲ ಸಂಭ್ರಮ ದುಬೈ 2019 ಮತ್ತು ಯಕ್ಷಗಾನ ಅಭ್ಯಾಸ ತರಗತಿ ದುಬೈಯ ಕಲಾವಿದರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆಯಲಿರುವ ಪೂರ್ವರಂಗ ಸಹಿತ ‘ಮಹಿಷಮರ್ಧಿನಿ ಜಗಜ್ಜನನಿ’ ಯಕ್ಷಗಾನ ಪ್ರದರ್ಶನದ ಆಮಂತ್ರಣ ಮತ್ತು ಪ್ರವೇಶ ಪತ್ರ ಬಿಡುಗಡೆ ಇತ್ತೀಚೆಗೆ ಪ್ರಖ್ಯಾತ ಉದ್ಯಮಿಗಳು, ಕಲಾಪೋಷಕರು, ಕಲಾವಿದರ ಸಮ್ಮುಖದಲ್ಲಿ ದುಬಾಯಿ-ಗೀಸೈಸ್ ನ ಫಾರ್ಚೂನ್ ಫ್ಲಾಝದಲ್ಲಿ ಸಂಭ್ರಮದಿಂದ ಸಂಪನ್ನಗೊಂಡಿತು.

ದುಬೈ ಪಟ್ಲ ಘಟಕದ ಅಧ್ಯಕ್ಷ ಸರ್ವೋತ್ತಮ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸೇರಿದ ಗಣ್ಯರೆಲ್ಲ ದೀಪ ಬೆಳಗಿ ಉದ್ಘಾಟಿಸಿದರು. ಘಟಕದ ಗೌರವಾಧ್ಯಕ್ಷರಾದ ವೀನಸ್ ಗ್ರೂಪ್ ಮಾಲಕರಾದ ವಾಸುದೇವ ಭಟ್ ಪಟ್ಲ ಸಂಭ್ರಮಕ್ಕೆ ಶುಭ ಹಾರೈಸಿ, ಸರ್ವೋತ್ತಮ ಶೆಟ್ಟರ ಜೊತೆಗೂಡಿ ಆಮಂತ್ರಣ ಪತ್ರ ಬಡುಗಡೆ ಮಾಡಿದರು. ಮೋಹಿನಿ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು ಪ್ರವೇಶ ಪತ್ರ ಬಿಡುಗಡೆ ಮಾಡಿದರು.

ಸರ್ವೋತ್ತಮ ಶೆಟ್ಟರು ಕಾರ್ಯಕ್ರಮದ ರೂಪುರೇಷೆಗಳನ್ನು ಸಭೆಯ ಮುಂಡಿಟ್ಟರು. ಫೋರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ಮಾಲಕರಾದ ಪ್ರವೀಣ್ ಶೆಟ್ಟ ಅವರು ಪ್ರಧಾನ ಅಭ್ಯಾಗತರಾಗಿ ಆಗಮಿಸಲಿರುವ ಪ್ರಸಿದ್ಧ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ದಂಪತಿ, ಪ್ರಸಿದ್ಧ ತುಳು ಚಲನಚಿತ್ರ, ರಂಗ ಕಲಾವಿದ ಅರವಿಂದ ಬೋಳಾರ್, ಎನ್.ಎಮ್.ಸಿ. ಸಂಸ್ಥೆಯ ಸ್ಥಾಪಕ, ಚೇಯರ್ ಮನ್ ಡಾ.ಬಿ.ಆರ್.ಶೆಟ್ಟಿ, ಮತ್ತು ಪ್ರಖ್ಯಾತ ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಸೊ ಇವರೆಲ್ಲರ ಮಾಹಿತಿಗಳನ್ನು ಸಭೆಗೆ ಒದಗಿಸಿದರು.

ಕಾರ್ಯಕ್ರಮದ ಸಂಪೂರ್ಣ ವಿವರಗಳನ್ನು ಸಂಘಟಕ ಕೊಟ್ಟಿಂಜ ದಿನೇಶ ಶೆಟ್ಟಿ ಮತ್ತು ದುಬೈ ಯಕ್ಷಗಾನ ಅಭ್ಯಾಸ ತರಗತಿಯ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು ಸಭೆಯ ಮುಂದಿಟ್ಟರು.

ಅತಿಥಿಗಳಾಗಿ ಭಾಗವಹಿಸಿದ ಗುಣಶೀಲ ಶೆಟ್ಟಿ ಏಸ್ ಕ್ರೇನ್ಸ್, ದುಬೈ ಪದ್ಮಶಾಲಿ ಸಮುದಾಯದ ಅಧ್ಯಕ್ಷರಾದ ರವಿ ಶೆಟ್ಟಿಗಾರ್, ಬಾಲಕೃಷ್ಣ ಸಾಲಿಯಾನ್, ನೋವೆಲ್ ಅಲ್ಮೆಡ, ಲೊನಾಲ್ಡ್ ಡಿಸೋಜ, ದುಬೈ ಯಕ್ಷಗಾನ ಅಭ್ಯಾಸ ತರಗತಿಯ ಹಿರಿಯ ಹಿಮ್ಮೇಳ ಕಲಾವಿದರು-ಮಾರ್ಗದರ್ಶರೂ ಆದ ವೆಂಕಟೇಶ ಶಾಸ್ತ್ರಿ ಪುತ್ತಿಗೆ ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಅಧ್ಯಕ್ಷ ಸರ್ವೋತ್ತಮ ಶೆಟ್ಟರು ದುಬಾಯಿಯ ಯಕ್ಷಪ್ರೇಮಿಗಳು, ಕಲಾಪೋಷಕರು, ದಾನಿಗಳೆಲ್ಲರು ಪ್ರೋತ್ಸಾಹ, ಸಲಹೆ , ಸಹಕಾರಗಳನ್ನು ನೀಡಬೇಕೆಂದು ಎಲ್ಲರನ್ನೂ ವಿನಂತಿಸಿಕೊಂಡರು. ರಾಜೇಶ್ ಕುತ್ತಾರು ಕಾರ್ಯಕ್ರಮ ನಿರ್ವಹಿಸಿದರು.