ದುಬೈ: ತುಳು ನಾಟಕಗಳನ್ನು ಪ್ರದರ್ಶಿಸುವ ಮೂಲಕ ದುಬೈಯಲ್ಲಿ ತುಳು ಭಾಷೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗಮ್ಮತ್ ಕಲಾವಿದೆರ್ ಪ್ರದರ್ಶಿಸುತ್ತಿರುವ ನವೀನ್ ಶೆಟ್ಟಿ ಅಳಕೆ ವಿರಚಿತ ನಂಕ್ ಮಾತೆರ್ಲ ಬೋಡು ಎಂಬ ಹಾಸ್ಯಮಯ ನಾಟಕವನ್ನು ಫೆಬ್ರವರಿ 12 ರಂದು ದುಬೈಯ ಎಮಿರೇಟ್ಸ್ ಥಿಯೇಟರ್ ತಮ್ಮ ಐದನೇ ವಾರ್ಷಿಕೋತ್ಸವದ ಅಂಗವಾಗಿ ಪ್ರದರ್ಶಿಸಲಿದ್ದಾರೆ .
ಇದರ ಅಂಗವಾಗಿ ನವೆಂಬರ್ 6 ಶುಕ್ರವಾರ ಸಂಜೆ ಕರಾಮದ ವಿನ್ನಿಸ್ ರೆಸ್ಟೋರೆಂಟ್ ನಲ್ಲಿ ನಾಟಕದ ಮುಹೂರ್ತವನ್ನು ಹಮ್ಮಿಕೊಳ್ಳಲಾಯಿತು . ಮುಹೂರ್ತ ಪೂಜಾ ವಿಧಿವಿದಾನವನ್ನು ಅರ್ಚಕರಾದ ಲಕ್ಷಿಕಾಂತ್ ಭಟ್ ಅವರು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ರಾಜೇಶ್ ಕುತ್ತಾರ್ ಅವರು ನಿರೂಪಿಸಿಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಅವರು ಸರ್ವ ಸದಸ್ಯರ, ನಾಟಕ ಅಭಿಮಾನಿಗಳ ಹಾಗು ಮಾಧ್ಯಮ ವರ್ಗದವರ ಪ್ರೋತ್ಸಾಹವನ್ನು ಕೋರಿದರು.
ಈ ಸಮಾರಂಭದಲ್ಲಿ ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಹಾಗು ಚಿಲ್ಲಿವಿಲ್ಲಿ ಸಂಸ್ಥೆಯ ಮಾಲಕರಾದ ಸತೀಶ್ ವೆಂಕಟರಮಣ, ಮೆರಿಟ್ ಫ್ರೆಯಿಟ್ ಎಲ್ ಎಲ್ ಸಿ ಯ ವ್ಯವಸ್ಥಾಪಕ ನಿರ್ದೇಶಕ ಜೋಸೆಫ್ ಮಥಾಯಿಸ್ , ಬಿಲ್ಲವಾಸ್ ದುಬೈನ ಅಧ್ಯಕ್ಷರಾದ ಸತೀಶ್ ಪೂಜಾರಿ ಮತ್ತಿತರ ಗಣ್ಯರು ಉಪಸ್ತಿತರಿದ್ದರು.
ಸಂಘಟನೆಯು ಪ್ರತಿ ವರ್ಷವೂ ತನ್ನ ನಾಟಕ ಪ್ರದರ್ಶನದ ಸಂದರ್ಭದಲ್ಲಿ ಒಟ್ಟುಗೂಡುವ ಹಣವನ್ನು ಬಡ ಜನರ ಸೇವೆಗಾಗಿ ಮೀಸಲಿರಿಸಿದ್ದು ಹತ್ತು ಹಲವು ಅನಾಥಾಶ್ರಮಗಳಿಗೆ ದಾನವಾಗಿ ನೀಡುವ ಕಾರ್ಯವನ್ನು ಮಾಡುತ್ತಿದೆ. ಈ ನಾಟಕ ಪ್ರದರ್ಶನದ ಬಗ್ಗೆ ಗಮ್ಮತ್ ಕಲಾವಿದೆರ್ ನ ಮಹಾಪೋಷಕರಾದ ಹರೀಶ್ ಬಂಗೇರ ಅವರು ಮಾತನಾಡಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿರುವ ಎಲ್ಲಾ ತುಳು ನಾಟಕ ಅಭಿಮಾನಿಗಳು ಈ ನಾಟಕವನ್ನು ವೀಕ್ಷಿಸಿ ಸಂಘಟನೆಯ ಸೇವಾ ಕಾರ್ಯವನ್ನು ಪ್ರೋತ್ಸಾಹಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.