ದುಬೈ: ದುಬೈ ಜುಮೇರಾದ ಎಮಿರೇಟ್ಸ್ ಇಂಟರ್ ನ್ಯಾಷನಲ್ ಸ್ಕೂಲ್ ನ ಎಮಿರೇಟ್ಸ್ ಥಿಯೇಟರ್ ನಲ್ಲಿ ನಂಕ್ ಮಾತೆರ್ಲಾ ಬೋಡು ತುಳು ಹಾಸ್ಯಮಯ ಸಾಂಸಾರಿಕ ನಾಟಕ ದುಬೈಯ ಗಮ್ಮತ್ ಕಲಾವಿದೆರ್ ತಂಡದವರಿಂದ ಶುಕ್ರವಾರ ನಡೆಯಿತು.
ದುಬೈಯಲ್ಲಿ ಬೀಡುಬಿಟ್ಟಿರುವ ಸ್ಥಳೀಯ ಕಲಾವಿದರೆ ನಟಿಸಿ-ನಿರ್ದೇಶಿಸಿರುವ ನಾಟಕ ನೋಡುಗರನ್ನು ಹಾಸ್ಯದ ಜೊತೆಗೆ ಭಾವುಕತೆಗೆ ಒಳಗಾಗುವಂತಹ ನಾಟಕವಾಗಿದ್ದು ಉತ್ತಮ ನಟನಾ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಶುಕ್ರವಾರ ಸಂಜೆ ಪ್ರದರ್ಶನ ತಡರಾತ್ರಿವರೆಗೂ ಮುಂದುವರಿದರೂ. ಜನ ಆಸನಬಿಟ್ಟು ಕದಲಲಿಲ್ಲ. ಆರಂಭದಿಂದ ಕೊನೆಯವರೆಗೂ ಸ್ಥಳೀಯ ಕಲಾವಿದರ ಅಭಿನಯವಂತೂ ತಾವೇನೂ ಖ್ಯಾತ ರಂಗಭೂಮಿಯ ಕಲಾವಿದರಿಗೆ ಕಮ್ಮಿ ಇಲ್ಲ ಎಂಬುದನ್ನು ಈ ನಾಟಕ ಸಾಬೀತು ಪಡಿಸಿತು.
ಮಂಗಳೂರಿನ ಸೇವಾಭಾವ ಚಾರಿಟೇಬಲ್ ಟ್ರಸ್ಟ್ ಗೆ ಸಹಾಯಧನ ನೀಡುವ ಉದ್ದೇಶದಿಂದ ದುಬೈ ಗಮ್ಮತ್ ಕಲಾವಿದೆರ್ ತಂಡದವರು ತಮ್ಮ ಐದನೆ ವರ್ಷದ ಕಿರುಕಾಣಿಕೆಯಾಗಿ ಆಯೋಜಿಸಿದ್ದ ನಾಟಕವನ್ನು ಕಿಶೋರ್ ಡಿ.ಶೆಟ್ಟಿ ಸಾರಥ್ಯದಲ್ಲಿ ಮಂಗಳೂರಿನ ಲಕುಮಿ ತಂಡದ ನವೀನ್ ಶೆಟ್ಟಿ ಅಳಕೆ ರಚಿಸಿದ್ದು, ದುಬೈ ಗಮ್ಮತ್ ಕಲಾವಿದೆರ್ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ನಿರ್ದೇಶಿಸಿದ್ದರು. ಸಂಗೀತ ರಾಜೇಶ್ ಭಟ್ ನೀಡಿದ್ದರು.
ಇದೇ ಸಂದರ್ಭದಲ್ಲಿ ರಂಗಭೂಮಿ, ಕ್ರೀಡೆ, ವೈದ್ಯಕೀಯ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು. ಶಶಿ ಶೆಟ್ಟಿ ರವಿರಾಜ ಶೆಟ್ಟಿ, ಡೋನಾಲ್ಡ್ ಕೋರಿಯಾ ಆಶಾ ಕೋರಿಯಾ, ಗೀತಾ, ಆರ್.ಶೆಟ್ಟಿ, ಡಾ.ರತ್ನಾಕರ ಶೆಟ್ಟಿ, ಕಿಶೋರ್ ಡಿ.ಶೆಟ್ಟಿ, ನವೀನ್ ಶೆಟ್ಟಿ ಅಳಕೆ, ರಾಜೇಶ್ ಭಟ್ ರನ್ನು ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿ ಗೌರವಿಸಿದರು.