ದುಬೈ: ನಗರದ ಮುರಕಬಾದ್ ಪೊಲೀಸ್ ಠಾಣೆಯ ಹಿಂಬದಿಯ ಜೆಡಬ್ಲ್ಯೂ ಮೆರ್ರಿಯೋಟ್ ಹೋಟೆಲ್ ನಲ್ಲಿ ಅಲ್ ಖಾದಿಸ ಎಜುಕೇಶನಲ್ ಅಕಾಡಮಿ ಇದರ ಯುಎಇ ಸಮಿತಿ ಹಮ್ಮಿಕೊಂಡಿದ್ದ ಬೃಹತ್ ಮೆಹಫಿಲೆ ಮುಹಬ್ಬತ್ ಹಾಗೂ ಯುಎಇ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದಲ್ಲಿ ದುಃಅ ಆಶೀರ್ವಚನ ನೀಡಿ ಮಾತನಾಡಿದ ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಶೈಖುನಾ ಖಾಝೀ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಅವರು ಪವಿತ್ರ ಖುರ್-ಆನ್ ವ್ಯಾಖ್ಯಾನದಲ್ಲಿ ಮುಹಮ್ಮದ್ ಪೈಗಂಬರರ ನಡೆ ನುಡಿ ಚರ್ಯೆಗಳು ಒಳಗೊಂಡಿದೆ. ಸುನ್ನತ್ ಜಮಾಅತ್ ನ ಪಾಲನೆಗಳು ಹೇಗೆ ಎಂಬುವುದು ಅದರಲ್ಲಿ ಬಹಳ ಸ್ಪಷ್ಟವಾಗಿ ವಿವರಿಸಲಾಗಿದೆ ಎಂದರು.
ಕೇವಲ ಕೆಲವೇ ಮಂದಿಗೆ ಮಾಡಿ ತೋರಿಸಲು ಸಾಧ್ಯವಿರುವ ಮಹಾ ಕಾರ್ಯದಲ್ಲಿ ಒಂದಾದ ಬಸ್ ನಿಲ್ದಾಣ, ದಾರಿ ಮಧ್ಯೆ ಹಾಗೂ ರಸ್ತೆ ಬದಿಯಲ್ಲಿ ದಿನನಿತ್ಯ ನಮಗೆ ಕಾಣುವ ಬುದ್ದಿ ಮಾಂದ್ಯ ಮಕ್ಕಳು, ಭಿಕ್ಷೆ ಬೇಡುವ ಮಕ್ಕಳು, ಅಂಗವಿಕಲ ಮಕ್ಕಳನ್ನು ತಂದು ಪುನರ್ವಸತಿ ಕಲ್ಪಿಸಿ ಸಮಾಜದಲ್ಲಿ ಸಾಮಾನ್ಯ ವ್ಯಕ್ತಿಗಳನ್ನಾಗಿ ಮಾಡುವ ಉದ್ದೇಶವಿಟ್ಟು ಅಲ್ ಖಾದಿಸ ಸಂಸ್ಥೆ ಬಹಳಷ್ಟು ವಿಶಾಲವಾಗಿ ಶ್ರಮಿಸುತ್ತಿದೆ. ಇಂತಹ ಬಡ ನಿರ್ಗತಿಕರನ್ನು ಸಂರಕ್ಷಿಸುವುದು ಅಲ್ಲಾಹನಿಗೆ ಮತ್ತು ಮಹಮ್ಮದ್ ಪೈಗಂಬರರು ಅತ್ಯಂತ ಇಚ್ಛಿಸುವ ಸೇವೆಯಾಗಿದೆ ಎಂದು ಬೇಕಲ ಇಬ್ರಾಹಿಂ ಮುಸ್ಲಿಯಾರ್ ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ರಾಜ್ಯ ಆಹಾರ ಮತ್ತು ನಾಗರಿಕ ವ್ಯವಹಾರ ಸಚಿವ ಯುಟಿ ಖಾದರ್ ಮಾತನಾಡಿ ಉಲಮಾಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು ಹಾಗೂ ಅವರು ಕೈಗೊಳ್ಳುವ ಸಾಮಾಜಿಕ, ಶೈಕ್ಷಣಿಕವಾದ ಅಭಿವೃದ್ಧಿ ಯೋಜನೆಗಳಿಗೆ ನಮ್ಮಿಂದಾಗುವ ಸಹಕಾರ ನೀಡುವುದನ್ನು ರೂಡಿಸಿಕೊಳ್ಳಬೇಕು ಆಗ ಮಾತ್ರ ನಮ್ಮ ಸಮುದಾಯದ ಕಟ್ಟಕಡೆಯ ಜನರಿಗೆ ಇದರ ಪ್ರಯೋಜನ ಸಿಗಲು ಸಾಧ್ಯ ಎಂದರು. ಗಲ್ಫ್ ನಾಡಿಗೆ ಬಂದು ದುಡಿಯುವ ಯುವಕರು ಎಲ್ಲರ ಪ್ರೀತಿ ವಿಶ್ವಾಸದಿಂದ ಇಂತಹ ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತರಾಗಿ ಮುಂದೆ ಬಂದರೆ ನಿಮಗೆ ಅಲ್ಲಾಹನ ಫಲ ಲಭಿಸುವ ಅವಕಾಶವನ್ನು ತಾವು ಪಡೆದುಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವ ಮತ್ತು ಮನೋಭಾವ ತಮ್ಮಲ್ಲಿ ಬೆಳೆಸಿಕೊಳ್ಳಬೇಕು ಎಂದು ಸಚಿವ ಖಾದರ್ ಹೇಳಿದರು.
ಆರಂಭದಲ್ಲಿ ಇಬ್ರಾಹಿಂ ಸಖಾಫಿ ಕೆದುಂಬಾಡಿ ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ಹಾಗೂ ಫರಹಾತುಲ್ ಹಬೀಬ್ ತಂಡದವರಿಂದ ಬುರ್ದಾ, ನಾಥೇ ಶರೀಫ್ ಆಲಾಪನೆ ನಡೆಯಿತು. ಪುಟಾಣಿ ಮಕ್ಕಳಾದ ಆಮಿನಾ ಝೈತೂನಾ, ಸಾರ ಬುರೈದ ಯುಎಇ ರಾಷ್ಟ್ರೀಯ ಗೀತೆ ಹಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಅಲ್ ಖಾದಿಸ ಯುಎಇ ಸಮಿತಿಯಿಂದ ಗಣ್ಯರಿಗೆ ಗೌರವ
ಸಮಾರಂಭದಲ್ಲಿ ರಾಜ್ಯ ಆಹಾರ ಮತ್ತು ನಾಗರಿಕ ವ್ಯವಹಾರ ಸಚಿವ ಯುಟಿ ಖಾದರ್, ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಶೈಖುನಾ ಖಾಝೀ ಬೇಕಲ ಇಬ್ರಾಹಿಂ ಮುಸ್ಲಿಯಾರ್, ಅಲ್ ಖಾದಿಸ ಶಿಲ್ಪಿ ಮೌಲಾನಾ ಮುಹಮ್ಮದ್ ಫಾಝಿಲ್ ರಜ್ವಿ ಕಾವಳಕಟ್ಟೆ, ಕೆ.ಎಸ್.ಎ ರೈಸ್ಕೊ ಗ್ರೂಪ್ ಛೇರ್ಮನ್ ಅಬೂಬಕ್ಕರ್ ಪಡುಬಿದ್ರೆ, ಕೆ.ಎಸ್.ಎ ಅಲ್ ಫಲಾಹ್ ಗ್ರೂಪ್ ಛೇರ್ಮನ್ ನಝೀರ್ ಹುಸೈನ್, ಯುಎಇ ಅಲ್ ಖರೈನ್ ಫಾರ್ಮಾಸಿಸ್ ನ ಸಯ್ಯದ್ ಇಮ್ತಿಯಾಝ್ ಭಾವಜನ್ ಸಾಹೇಬ್, ಟಾಪ್ ಡಿಸೈನ್ ಫರ್ನಿಚರ್ ಎಂ.ಡಿ ಫೈರೋಝ್ ಅಹ್ಮದ್ ಖಾನ್, ಕತಾರ್ ಬೊಲ್ಮನ್ ಗ್ರೂಪ್ ಹಾಜಿ ಕೆ.ವಿ ಅಬ್ದುಲ್ಲಾ, ಕೆ.ಎಂ ರಶೀದ್ ಹಾಜಿ ಬೆಳ್ಳಾರೆ ಮೊದಲಾದವರಿಗೆ ಅಲ್ ಖಾದಿಸ ಯುಎಇ ಸಮಿತಿ ಸ್ಮರಣಿಕೆ ನೀಡಿ ಗೌರವಿಸಿತು.
ಅಲ್ ಖಾದಿಸ ಶಿಲ್ಪಿ ಮೌಲಾನಾ ಮುಹಮ್ಮದ್ ಫಾಝಿಲ್ ರಜ್ವಿ ಕಾವಳಕಟ್ಟೆ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕೆ.ಎಸ್.ಎ ರೈಸ್ಕೊ ಗ್ರೂಪ್ ಛೇರ್ಮನ್ ಅಬೂಬಕ್ಕರ್ ಪಡುಬಿದ್ರೆ, ಕೆ.ಎಸ್.ಎ ಅಲ್ ಫಲಾಹ್ ಗ್ರೂಪ್ ಛೇರ್ಮನ್ ನಝೀರ್ ಹುಸೈನ್, ಯುಎಇ ಅಲ್ ಖರೈನ್ ಫಾರ್ಮಾಸಿಸ್ ನ ಸಯ್ಯದ್ ಇಮ್ತಿಯಾಝ್ ಭಾವಜನ್ ಸಾಹೇಬ್, ಟಾಪ್ ಡಿಸೈನ್ ಫರ್ನಿಚರ್ ಎಂ.ಡಿ ಫೈರೋಝ್ ಅಹ್ಮದ್ ಖಾನ್, ಕತಾರ್ ಬೊಲ್ಮನ್ ಗ್ರೂಪ್ ಹಾಜಿ ಕೆ.ವಿ ಅಬ್ದುಲ್ಲಾ, ಕೆ.ಸಿ.ಎಫ್ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಜಿ ಶೇಖ್ ಬಾವ, ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್ ಉಪಾಧ್ಯಕ್ಷ ಕೆ.ಎಂ ರಶೀದ್ ಹಾಜಿ ಬೆಳ್ಳಾರೆ, ಅಲ್ ಖಾದಿಸ ಇಸ್ಲಾಮಿಕ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಅಲ್-ಹಾಫಿಲ್ ಸುಫಿಯಾನ್ ಸಖಾಫಿ, ಅಲ್ ಖಾದಿಸ ಯುಎಇ ಸಮಿತಿ ಕೋಶಾಧಿಕಾರಿ ಬಶೀರ್ ಆಸ್ಟರ್, ಬಿಸಿಎಫ್ ಲತೀಫ್ ಮುಲ್ಕಿ ಸೇರಿದಂತೆ ಕೆ.ಸಿ.ಎಫ್ ಯುಎಇ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
ಗಣ್ಯ ಅತಿಥಿಗಳನ್ನು ಸ್ವಾಗತ ಸಮಿತಿಯ ಕಮ್ಯುನಿಕೇಷನ್ ಕೊರ್ಡಿನೇಟರ್ ಮುಹಮ್ಮದ್ ಅಝೀಮ್ ಉಚ್ಚಿಲ ಅವರು ವೇದಿಕೆಗೆ ಬರಮಾಡಿಕೊಂಡರು. ಬಳಿಕ ಅಲ್ ಖಾದಿಸ ಸಂಸ್ಥೆಯ ಕಾರ್ಯಚಟುವಟಿಕೆ ಒಳಗೊಂಡ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಈ ವೇಳೆ ಅಲ್ ಖಾದಿಸ ಇಸ್ಲಾಮಿಕ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಹಾಫಿಲ್ ಸುಫಿಯಾನ್ ಸಖಾಫಿ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಸಂಸ್ಥೆಯ ಪ್ರಸಕ್ತ ಬೇಡಿಕೆಯ ಕುರಿತು ವಿವರಣೆ ನೀಡಿದರು. ಕೆ.ಎಸ್.ಎ ರೈಸ್ಕೊ ಗ್ರೂಪ್ ಛೇರ್ಮನ್ ಅಬೂಬಕ್ಕರ್ ಪಡುಬಿದ್ರೆ, ಕೆ.ಎಸ್.ಎ ಅಲ್ ಫಲಾಹ್ ಗ್ರೂಪ್ ಛೇರ್ಮನ್ ನಝೀರ್ ಹುಸೈನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಯುಎಇ ಸಮಿತಿಯೂ ಹೊರತಂದ ಅಲ್ ಖಾದಿಸ ಸಂಸ್ಥೆಯ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಮೆಹಫಿಲೆ ಮುಹಬ್ಬತ್ ಕಾರ್ಯಕ್ರಮದ ಸ್ವಾಗತ ಸಮಿತಿ ಉಪಾಧ್ಯಕ್ಷ ಬಶೀರ್ ಬೊಳುವಾರು ಸ್ವಾಗತಿಸಿ, ಮಾಧ್ಯಮ ಸಂಯೋಜಕ ರಿಯಾಝ್ ಕೊಂಡಂಗೇರಿ ಅವರು ಕಾರ್ಯಕ್ರಮ ಬಹಳ ಸುಂದರವಾಗಿ ನಿರೂಪಿಸಿದರು. ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಸಲೀಂ ಅಲ್ತಾಫ್ ಫರಂಗಿಪೇಟೆ ಅವರು ಧನ್ಯವಾದ ಸಲ್ಲಿಸಿದರು. ಸ್ವಯಂ ಸೇವಕರಾಗಿ ದುಬೈ ಕೆ.ಸಿ.ಎಫ್ ಸದಸ್ಯರು ಸಹಕರಿಸಿದ್ದರು.