ದುಬೈ: ಗಲ್ಫ್ ರಾಷ್ಟ್ರಗಳಲ್ಲಿ ಪ್ರಪ್ರಥಮ ಬಾರಿಗೆ ಸರಕಾರದ ಅನುಮೋದನೆಯೊಂದಿಗೆ ಪ್ರಕಾಶನಗೈದು ಸುಮಾರು ಹತ್ತು ಸಾವಿರಕ್ಕಿಂತಲೂ ಅಧಿಕ ಚಂದಾದಾರರನ್ನು ಸೃಷ್ಟಿಸುವಲ್ಲಿ ಯಶಸ್ವಿಯಾದ ವಿದೇಶಿ ಆವೃತ್ತಿ ಹೊಂದಿರುವ ಕನ್ನಡದ ಏಕೈಕ ಪತ್ರಿಕೆ ಗಲ್ಫ್ ಇಶಾರ ಮಾಸಿಕದ ಯುಎಇ ಆವೃತ್ತಿಯ ಪ್ರಥಮ ವಾರ್ಷಿಕೋತ್ಸವ ಮತ್ತು ಭಾರತದ 68 ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯು ಫೆಬ್ರವರಿ 3 ರಂದು ಸಂಜೆ 6 ಘಂಟೆಗೆ ದುಬೈ ದೇರಾ ಸಿಟಿ ಸೆಂಟರ್ ಹತ್ತಿರದ ಪರ್ಲ್ ಸಿಟಿ ಸೂಟ್ಸ್ ಹೋಟಲ್ ಸಭಾಂಗಣದಲ್ಲಿ ನಡೆಯಲಿದೆ. ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಆಯೋಜಿಸುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಹೆಚ್ ಡಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ.
ಗಲ್ಫ್ ಇಶಾರ ಇಂದು ಜಿಸಿಸಿ ಸಹಿತ ಲಂಡನ್ ಹಾಗೂ ಮಲೇಷ್ಯಾ ರಾಷ್ಟ್ರಗಳಲ್ಲಿ ಕನ್ನಡ ಮಣ್ಣಿನ ಕಂಪನ್ನು ಪಸರಿಸುವ, ಸನಾತನ ಇಸ್ಲಾಮಿನ ನೈಜ ರೂಪವನ್ನು ಕಲಬೆರಕೆಯಿಲ್ಲದೆ ಇತರ ಧರ್ಮಾನುಯಾಯಿಗಳಿಗೆ ವಿವರಿಸಿ ಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾ ಬರುತ್ತಿದೆ, ಸಕಾಲಿಕ ಲೇಖನಗಳ ಮೂಲಕ ಓದುಗರ ಗಮನ ಸೆಳೆಯುತ್ತಾ ಯುವ ಬರಹಗಾರರನ್ನು ಸಮಾಜಕ್ಕೆ ಸಮರ್ಪಿಸುತ್ತಿರುವ ಗಲ್ಫ್ ಇಶಾರ ಕಳೆದ ವರ್ಷ ಕರ್ನಾಟಕ ವಿಧಾನ ಸಭೆಯ ಸಭಾಪತಿಗಳಾಗಿದ್ದ ಸನ್ಮಾನ್ಯ ಕಾಗೋಡು ತಿಮ್ಮಪ್ಪರವರರಿಂದ ಯುಎಇಯಲ್ಲಿ ಲೋಕಾರ್ಪಣೆಗೊಂಡು,ತನ್ನ ಚೊಚ್ಚಲ ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸಂಘಟನೆಯ ಮುಖವಾಣಿ ಗಲ್ಫ್ ಇಶಾರ ಮಾಸಿಕ ಪತ್ರಿಕೆ ಇಂದು ಗಲ್ಫ್ ರಾಷ್ಟ್ರಗಳಾದ್ಯಂತ ಪರಿವರ್ತನೆಯ ಅಲೆಯನ್ನು ಎಬ್ಬಿಸುತ್ತಾ ಗಲ್ಫ್ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಸ್ತುತ ಸಮಾರಂಭದಲ್ಲಿ
ರಾಜ್ಯ ವಕ್ಫ್ ಮಂಡಳಿ ನಿರ್ದೇಶಕರೂ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರೂ ಆದ ಬಹು ಎನ್ ಕೆ ಎಂ ಶಾಫಿ ಸಅದಿ ಬೆಂಗಳೂರು, ಜನಾಬ್ ಯಾಕೂಬ್ ಹೊಸನಗರ (ಕಾರ್ಯದರ್ಶಿ ಎಸ್ ವೈ ಎಸ್ ಕರ್ನಾಟಕ ರಾಜ್ಯ), ಜನಾಬ್ ಬಿಎಂ ಫಾರೂಖ್ (ಫಿಝಾ ಡೆವಲಪರ್ಸ್ ಬೆಂಗಳೂರು), ಜನಾಬ್ ಮುಹಮ್ಮದ್ ಇಕ್ಬಾಲ್ ನಾವುಂದ (ಫ್ರೀಲಾನ್ಸ್ ಖತಾರ್), ಸಂಸದರಾದ ಸಿ ಎಸ್ ಪುಟ್ಟರಾಜು ಮಂಡ್ಯ, ಕೆಸಿಎಫ್ ಅಂತರ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ ಬಾವ ಮಂಗಳೂರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಹಲವು ಸಂಪನ್ಮೂಲ ವ್ಯಕ್ತಿಗಳು, ದಾರ್ಶನಿಕರು, ಚಿಂತಕರು, ಅಂತಾರಾಷ್ಟ್ರೀಯ ಮಟ್ಟದ ಉದ್ಯಮಿಗಳು, ದೇಶ ವಿದೇಶಗಳ ವಿಶಿಷ್ಟ ಅತಿಥಿಗಳು, ಸಾಮಾಜಿಕ ರಾಜಕೀಯ ನಾಯಕರುಗಳು ಆಗಮಿಸಲಿದ್ದು, ಯುಎಇಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಭಾಗವಹಿಸಿ ಸಮಾರಂಭವನ್ನು ಯಶಸ್ವಿಗೊಳಿಸಿ ಕೊಡಲು ಇಶಾರ ವಾರ್ಷಿಕೋತ್ಸವ ನಿರ್ವಹಣಾ ಸಮಿತಿ ಚೇರ್ಮನ್ ಝೈನುದ್ದೀನ್ ಹಾಜಿ ಬೆಳ್ಳಾರೆ ಹಾಗೂ ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಹಾಜಿ ನಾಪೋಕ್ಲು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.