ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ವಾರ್ಷಿಕೋತ್ಸವ

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ವಾರ್ಷಿಕೋತ್ಸವ

HSA   ¦    Jan 28, 2020 05:06:16 PM (IST)
ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ವಾರ್ಷಿಕೋತ್ಸವ

ಮುಂಬಯಿ:  ಸಂಘದಲ್ಲಿ ಹಣ ಇದ್ದಲ್ಲಿ ಅಲ್ಲಿ ಶಕ್ತಿ ಪ್ರದರ್ಶನವಿರುವುದು ಸಾಮಾನ್ಯ. ದುಡ್ಡು ಇದ್ದಲ್ಲಿ ಅಲ್ಲಿ ಚುಣಾವಣೆಯೂ ನಡೆಯುತ್ತದೆ. ಆದರೆ ಬಗ್ವಾಡಿಯಲ್ಲಿ ಹಾಗಲ್ಲ.  ದೇವರ ಅನುಗ್ರಹದಿಂದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಯು ಶಕ್ತಿ ಶಾಲಿಯಾಗಿ ಬೆಳೆಯಲಿ ಎಂದು ಮೊಗವೀರ ಸಮುದಾಯದ ಖ್ಯಾತ ಉದ್ಯಮಿ ಹಾಗೂ ದಾನಿ ನಾಡೋಜ ಡಾ. ಜಿ. ಶಂಕರ್ ಅಭಿಪ್ರಾಯಪಟ್ಟರು.

ಜ. 25 ರಂದು ಅಂದೇರಿ ಪಶ್ಚಿಮ ಎಂ. ವಿ. ಮಂಡಳಿಯ ಶ್ರೀಮತಿ ಶಾಲಿನಿ ಜಿ. ಶಂಕರ್ ಸಭಾಗೃಹದಲ್ಲಿ ಜರಗಿದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ 79 ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಡಾ. ಜಿ. ಶಂಕರ್ ಅವರು, ಉಪ್ಪಳದಿಂದ ಶಿರೂರು ತನಕ ನಮ್ಮ ಟ್ರಷ್ಟ್ ಸಹಕರಿಸುತ್ತಿದ್ದು, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅವರು ನಮ್ಮವರಾಗಿದ್ದು, ನಿಮಗೂ ಸಹಾಯ ಮಾಡುವುದು ನನ್ನ ಉದ್ದೇಶ. ನಾವೆಲ್ಲರೂ ಸೇರಿ ಈ ಸಂಘವನ್ನು ಶಕ್ತಿಶಾಲಿಯಾಗಿ ಬೆಳೆಸಬೇಕಾಗಿದೆ ಎಂದರು.

 ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕ್ಲಾಸಿಕ್ ಗ್ರೂಪ್ ಆಪ್ ಹೋಟೇಲ್ಸ್ ನ ಸಿ.ಎಂ.ಡಿ. ಸುರೇಶ್ ಆರ್ ಕಾಂಚನ್ ಮಾತನಾಡಿ,  ಅನಾನುಕೂಲವಿದ್ದೂ ನಮ್ಮೆಲ್ಲರ ಮೇಲೆ ಪ್ರೀತಿಯಿಟ್ಟು ಡಾ. ಜಿ. ಶಂಕರ್ ಇವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಬೆಳಕನ್ನು ಚೆಲ್ಲಿದಂತಾಗಿದ್ದು ಇದು ನಮ್ಮೆಲ್ಲರ ಸೌಭಾಗ್ಯ. ನಮ್ಮ ಸಮಾಜವನ್ನು ಬೆಳೆಸುವಲ್ಲಿ  ಇವರ ಕೊಡುಗೆ ಬಗ್ಗೆ ಎಲ್ಲರಿಗೂ ತಿಳಿದಿದೆ. ರಮೇಶ್ ಬಂಗೇರರ ನೇತೃತ್ವದಲ್ಲಿ ಉತ್ತಮ ಕಾರ್ಯವನ್ನು ಇಂದು ಆಯೋಜಿಸಲಾಗಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಇಂದು ಆಗಮಿಸಿ ಸಭಾಗೃಹವು ತುಂಬಿಕೊಂಡಿದೆ.  ಅನ್ನದಾತರಾದ ರಾಜು ಮೆಂಡನ್ ನಮ್ಮ 75 ವರ್ಷದ ಸಂದರ್ಭದಲ್ಲೂ ಸುಮಾರು 3400 ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡಿದವರು.  ಕುಂದಾಪುರದ ನಮ್ಮ ಸಮುದಾಯದ ಸಭಾಗೃಹಕ್ಕೆ ಸಹಕರಿಸಿದವರೇ ಸಹಕರಿಸುತ್ತಿದ್ದು, ಈ ಸಭಾಗೃಹ ಅದೇ ರೀತಿ ಉಚ್ಚಿಲದ ಮಹಾಲಕ್ಶಿ ದೇವಸ್ಥಾನ ಎಲ್ಲರಿಂದ ಆಗಬೇಕಾಗಿದೆ. ನಮ್ಮಲ್ಲಿ ಅನೇಕ ಮಂದಿ ಕೋಟ್ಯಾಧೀಶರು ಇದ್ದು ಎಲ್ಲರೂ ಒಂದಾಗಿ ಡಾ. ಜಿ. ಶಂಕರ್ ರೊಂದಿಗೆ ಕೈಜೋಡಿಸಿ ಈ ಯೋಜನೆಯನ್ನು ಆದಷ್ಟು ಬೇಗನೆ ಸಂಪೂರ್ಣಗೊಳಿಸುವಂತೆ ಸಹಕರಿಸಬೇಕು ಎಂದು ಎಲ್ಲರಲ್ಲಿ ವಿನಂತಿಸುತ್ತಾ ಸಂಘಕ್ಕೆ ವಿವಿಧ ರೀತಿಯಲ್ಲಿ ಸಹಕರಿಸುತ್ತಿರುವವರನ್ನು ನೆನಪಿಸಿಕೊಂಡರು.

ಸಂಘದ ಅಧ್ಯಕ್ಷರಾದ ರಮೇಶ್ ಎಂ ಬಂಗೇರ ಮಾತನಾಡಿ ಸಮಾಜದ ಎಲ್ಲಾ ಹಿರಿಯರನ್ನು ನೆನಪಿಸುತ್ತಾ ನಮ್ಮ ಮೂಲಭೂತ ಉದ್ದೇಶಗಳನ್ನು ಇಟ್ಟುಕೊಂಡು ನಮ್ಮ ಹಿರಿಯ ನಾಯಕರು ಈ ಸಂಘವ ಸ್ಥಾಪಿಸಿದರು. ಆದರೆ ಇಂದು ನಾವು ಬೆಳೆಯುತ್ತ  ಈ ಮೂಲಭೂತ ಉದ್ದೇಶಗಳನ್ನು ಮರೆತಂತೆ ಇದ್ದೇವೆ.  ಇಂದು ಡಾ. ಜಿ. ಶಂಕರ್ ರವರ ಆಗಮನವು ನಮಗೆ ವರಪ್ರಸಾದದಂತೆ. ನನ್ನ ಅಧ್ಯಕ್ಶೀಯ ಅವಧಿಯಲ್ಲಿ ಸಮಾಜಾಭಿವೃದ್ದಿಗಾಗಿ ಪ್ರಾಮಾಣಿಕವಾಗಿ ಸಾಧ್ಯವಾದ ಪ್ರಯತ್ನ ಮಾಡುತ್ತಿರುವೆನು ಎನ್ನುತ್ತಾ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ನೆನಪಿಸಿಕೊಂಡರು.

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಯ ಅಧ್ಯಕ್ಷ ಕೆ. ಎಲ್. ಬಂಗೇರ ಮಾತನಾಡಿ ಕರಾವಳಿಯಿಂದ ಮುಂಬಯಿಗೆ ಬಂದ ಮೊದಲಿಗರಲ್ಲಿ ಮೊಗವೀರರು ಸೇರಿದ್ದಾರೆ ಎನ್ನಲು ನನಗೆ ಹೇಳಲು ಅಭಿಮಾನವಾಗುತ್ತಿದೆ. ನಮ್ಮ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅನೇಕ ಪ್ರತಿಭಾಶಾಲಿ ಜನರಿದ್ದಾರೆ. ನಮ್ಮವರು ನಮ್ಮ ಸಂಸ್ಕೃತಿಯನ್ನು ಬೆಳೆಸುದರೊಂದಿಗೆ ಇತರರೊಂದಿಗೆ ಹೊಂದಿಕೊಳ್ಳುವ ಗುಣವನ್ನು ಹೊಂದಿದವರು. ಮಹಿಳೆಯರನ್ನು ಗೌರವಿಸಿದಲ್ಲಿ ದೇವರು ನೆಲೆಸುತ್ತಾರೆ. ನಾವು ಸಮಾಜಕ್ಕೆ ನೀಡಿದಲ್ಲಿ ನಮಗೆ ದೇವರು ನೀಡುತ್ತಾರೆ. ಜಿ. ಶಂಕರ್ ರಂತಹ ನಾಯಕರನ್ನು ಹೊಂದಿದ ನಾವು ಭಾಗ್ಯಶಾಲಿಗಳು. ಇವತ್ತಿನ ಕಾರ್ಯಕ್ರಮಗಳು ಉತ್ತಮವಾಗಿ ನಡೆದಿದೆ ಎಂದರು.

ದ.ಕ. ಮತ್ತು ಉಡುಪಿ ಜಿಲ್ಲಾ ಫಿಶರ್ಸ್ ಫೆಡರೇಶನ್ ಮಂಗಳೂರು ಇದರ ಅಧ್ಯಕ್ಷರಾದ ಯಶಪಾಲ್ ಸುವರ್ಣ ಮಾತನಾಡುತ್ತಾ ಇಲ್ಲಿನ ನಮ್ಮ ಸಮುದಾಯದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಲು ನಮ್ಮ ಹಿರಿಯರು ನಿರ್ಮಿಸಿದ ವೇದಿಕೆ ಮುಂಬಯಿಯ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ. ಹಲವು ಏರು ಪೇರುಗಳನ್ನು ದಾಟಿ ಈ ಸಂಘವು ಉತ್ತಮವಾಗಿ ಮುನ್ನಡೆಯುತ್ತಿದೆ. ನಮ್ಮ ಸಮಾಜ ಒಗ್ಗಟ್ಟಿಗೆ ಹೆಸರು ಮಾಡಿದ ಸಮಾಜ. ದೇವರು ನಮ್ಮ ಎಲ್ಲಾ ಯೋಜನೆಗಳು ಆದಷ್ಟು ಬೇಗನೆ ನೆರವೇರುವಂತೆ ಮಾಡಲಿ ಎಂದರು

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜ ಬಾಂಧವರಾದ ಪ್ರದೀಪ್ ಚಂದನ್ ದಂಪತಿ, ರಾಜು ಮೆಂಡನ್ ವಂಡ್ಸೆ ದಂಪತಿ, ರತ್ನಾಕರ ಚಂದನ್, ಹಿರಿಯ ಯಕ್ಷಗಾನ ಕಲಾವಿದ ರಮೇಶ್ ಬೆಳ್ತೂರು  ಇವರನ್ನು ಗಣ್ಯರು ಸನ್ಮಾನಿಸಿದ್ದು ಮಂಜುನಾಥ ಮೊಗವೀರ ಸನ್ಮಾನ ಪತ್ರವನ್ನು ವಾಚಿಸಿದರು. ಕೆ.ಡಿ. ಚಂದನ್ ಸ್ಮಾರಕ ಫಲಕವನ್ನು ಉತ್ತಮ ಸೇವಾದಳ ಮಾಧವ ಜಿ. ಸುವರ್ಣ, ರೋಬರ್ಟ್ ಕೆನಡಿಯನ್ ಸ್ಮಾರಕ ಫಲಕವನ್ನು ಹೆಚ್ಚು ಧನ ಸಂಗ್ರಹಿಸಿದ ಭಾಸ್ಕರ ಎಂ ಶ್ರೀಯಾನ್, ಜಿ. ಎಂ. ಕೊರಗ ಸ್ಮಾರಕ ಫಲಕವನ್ನು ಉತ್ತಮ ಸಮಾಜ ಸೇವಕ ಮಂಜುನಾಥ ಎಂ. ನಾಯ್ಕ ಇವರಿಗೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿ ಈಕ್ವಿಟಿ ಗ್ರೂಪ್ ಆಫ್ ಹೋಟೇಲ್ಸನ ಗೋಪಾಲ್ ಎಸ್. ಪುತ್ರನ್, ಶಾಸಕಿ ಗೀತಾ ಜೈನ್, ಮೊಗವೀರ ಮಹಾಜನ ಸೇವಾ ಸಂಘದ ಮಾಜಿ ಅಧ್ಯಕ್ಷ ಮಹಾಬಲ ಎಂ. ಕುಂದರ್, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಟ್ರಷ್ಟಿ ಅಜಿತ್ ಸುವರ್ಣ, ಉದ್ಯಮಿ ಶ್ರೀನಿವಾಸ ಕಾಂಚನ್, ಉಡುಪಿ ಮೊಗವೀರ ಯುವ ಸಂಘಟನೆ ಅಧ್ಯಕ್ಷ ವಿನಯ ಕರ್ಕೇರ, ಉದ್ಯಮಿ ವಿನೋದ್ ಕೋಟ್ಯಾನ್, ಮೊಗವೀರ ಮಹಾಜನ ಸೇವಾ ಸಂಘ ಮೀರಾರೋಡ್ ಸಮಿತಿಯ ಗೌ. ಅಧ್ಯಕ್ಷರಾದ ಸಂತೋಷ್ ಪುತ್ರನ್, ಸ್ಟೇಟಸ್ ಹೋಟೇಲಿನ ರತ್ನಾಕರ ಚಂದನ್, ಡೊಂಬಿವಲಿ ಸ್ಥಳೀಯ ಸಮಿತಿಯ ಗೌ. ಅಧ್ಯಕ್ಷರಾದ ನಾರಾಯಣ ಚಂದನ್ ಮೊದಲಾದವರು ಉಪಸ್ಥಿತರಿದ್ದರು.

ವಿಶೇಷ ಅತಿಥಿಯಾಗಿ ಮಾತನಾಡಿದ ಎನ್. ಎಂ. ಸುವರ್ಣ, ಉದ್ಯಮಿ ಜಗದೀಶ ಶೆಟ್ಟಿ, ಕುಂದಾಪುರ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ. ಕೆ. ಕಾಂಚನ್, ಡಿ. ಕೆ. ಎಮ್. ಎಮ್. ಎಸ್ ನ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್, ಅತಿಥಿ ವಿನಾಯಕ ದೀಕ್ಷಿತ್ ಮಾತನಾಡಿ ಉಪಸ್ಥಿತರಿದ್ದು ಮಾತನಾಡಿದರು.

ಅಪರಾಹ್ನ ಸಂಘದ ಮಹಿಳಾ ವಿಭಾಗದವರಿಂದ ಅರಸಿನ ಕುಂಕುಮ, ಗಣೇಶ್ ಎರ್ಮಾಳ ಬಳಗದ ಸಂಗೀತ ರಸಮಂಜರಿ, ನಂತರ ಅರುಣೋದಯ ಕಲಾನಿಕೇತನದ ಡಾ. ಮೀನಾಕ್ಷೀ ರಾಜು ಶ್ರೀಯಾನ್ ಬಳಗದ ಕಾರ್ಯಕ್ರಮ, ಕನ್ನಡ ಹಾಡುಗಳು, ಮಹಿಳಾ ವಿಭಾಗದವರಿಂದ ಯಕ್ಷಗಾನ ನೃತ್ಯ, ನೃತ್ಯ ವೈಭವ, ಸಮೂಹ ನೃತ್ಯ, ಹಾಸ್ಯ ಲಾಸ್ಯ, ಸಂಘದ ವಿವಿಧ ಸ್ಥಳೀಯ ಸಮಿತಿಗಳ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು, ಫ್ಯಾಶನ್ ಶೋ ಹಾಗೂ ಇನ್ನಿತರ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳು ನಡೆಯಿತು.

ಕಾರ್ಯಕ್ರಮದ ಯಶಸ್ಸಿಗೆ ಉಪಾಧ್ಯಕ್ಷರುಗಳಾದ ಸುರೇಶ್ ಕೆ. ತೋಳಾರ್, ರಾಜು ಶ್ರೀಯಾನ್, ಗೌ. ಪ್ರ. ಕಾರ್ಯದರ್ಶಿ ಮಂಜುನಾಥ ಎಂ. ನಾಯ್ಕ್, ಕಾಂಚನಿ ಕಲಾ ಕೇಂದ್ರದ ಕಾರ್ಯದರ್ಶಿ ಭಾಸ್ಕರ ಶ್ರೀಯಾನ್, ಕೋಶಾಧಿಕಾರಿ ಸತೀಷ್  ಶ್ರೀಯಾನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತ್ರಾ ಸಂತೋಷ್ ಪುತ್ರನ್, ಕಾರ್ಯದರ್ಶಿ ವಸಂತಿ ಕುಂದರ್, ಮೀರಾರೋಡ್ ಸಮಿತಿಯ ಕಾರ್ಯಾಧ್ಯಕ್ಷ ರಘುರಾಮ ಚಂದನ್, ಕಾರ್ಯದರ್ಶಿ ಎನ್.ಜಿ. ಮೆಂಡನ್, ಥಾಣೆ ಸಮಿತಿಯ ಕಾರ್ಯಾಧ್ಯಕ್ಷ ಗೋಪಾಲ ಎಸ್ ಚಂದನ್, ಕಾರ್ಯದರ್ಶಿ ರಾಧಾ ಮೆಂಡನ್, ಡೊಂಬಿವಲಿ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಕಾಂಚನ್, ಕಾರ್ಯದರ್ಶಿ ಬಾಬು ಮೊಗವೀರ, ಸುರೇಶ್ ವಿಠಲ್ ವಾಡಿ, ಗೋಪಾಲ ಕೆ. ಚಂದನ್, ಶೇಖರ ಟಿ ನ್ಯಾಕ್, ಸಂಘದ ಕಾರ್ಯಕಾರಿ ಸಮಿತಿಯ ಹಾಗೂ ಉಪಸಮಿತಿಗಳ, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಕುಂದಾಪುರ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರುಗಳು ಸಹಕರಿಸಿದರು.

 

ವರದಿ : ಈಶ್ವರ ಎಂ. ಐಲ್

ಚಿತ್ರ : ದಿನೇಶ್ ಕುಲಾಲ್, ಭಾಸ್ಕರ ಕಾಂಚನ್