ಮೊಗವೀರ ಮಾಸಿಕದ ಮಾಜಿ ಸಂಪಾದಕ ಜಿ.ಕೆ ರಮೇಶ್ ಗೆ ಕೆ.ಟಿ ವೇಣುಗೋಪಾಲ್ ಮಾಧ್ಯಮ ಪ್ರಶಸ್ತಿ

ಮೊಗವೀರ ಮಾಸಿಕದ ಮಾಜಿ ಸಂಪಾದಕ ಜಿ.ಕೆ ರಮೇಶ್ ಗೆ ಕೆ.ಟಿ ವೇಣುಗೋಪಾಲ್ ಮಾಧ್ಯಮ ಪ್ರಶಸ್ತಿ

Jan 04, 2021 08:18:09 AM (IST)
ಮೊಗವೀರ ಮಾಸಿಕದ ಮಾಜಿ ಸಂಪಾದಕ ಜಿ.ಕೆ ರಮೇಶ್ ಗೆ ಕೆ.ಟಿ ವೇಣುಗೋಪಾಲ್ ಮಾಧ್ಯಮ ಪ್ರಶಸ್ತಿ

ಮುಂಬಯಿ: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಯ ಚೊಚ್ಚಲ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-2020 ಪುರಸ್ಕಾರಕ್ಕೆ ಹಿರಿಯ ಪತ್ರಕರ್ತ, ಮೊಗವೀರ ಮಾಸಿಕದ ಮಾಜಿ ಸಂಪಾದಕ  ಜಿ.ಕೆ ರಮೇಶ್ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ವಾರ್ಷಿಕ ಪುರಸ್ಕಾರ ಪ್ರಕ್ರಿಯೆ ನಡೆಸಿದ್ದು ದ್ವಿತೀಯ ಬಾರಿ ಕೊಡಮಾಡುವ ಈ ವಾರ್ಷಿಕ ಪುರಸ್ಕಾರಕ್ಕಾಗಿ ಸಂಘದ ಸಲಹಾ ಸಮಿತಿ ಸದಸ್ಯೆ ಹಾಗೂ ಪುರಸ್ಕಾರ ಸಮಿತಿ ಕಾರ್ಯಧ್ಯಕ್ಷೆ ಡಾ. ಸುನೀತಾ ಎಂ.ಶೆಟ್ಟಿ ಮತ್ತು ಸಂಘದ ವಿಶೇಷ ಆಮಂತ್ರಿತ ಸದಸ್ಯರುಗಳೂ, ಪುರಸ್ಕಾರ ಸಮಿತಿ ಸದಸ್ಯರಾದ ಸಾ. ದಯಾ ಮತ್ತು ಹರೀಶ್ ಹೆಜ್ಮಾಡಿ ಅವರು 2020ನೇ ವಾರ್ಷಿಕ ಪುರಸ್ಕಾರಕ್ಕೆ ಮುಂಗಾರು ಕನ್ನಡ ದೈನಿಕದ ಹಿರಿಯ ಮುಂಬಯಿ ವರದಿಗಾರ, ಮೊಗವೀರ ಮಾಸಿಕದ ಮಾಜಿ ಸಂಪಾದಕ ಜಿ.ಕೆ ರಮೇಶ್ ಅವರನ್ನು ಆಯ್ಕೆಗೊಳಿಸಿದ್ದಾರೆ.

ವಾರ್ಷಿಕವಾಗಿ ಪ್ರದಾನಿಸಲ್ಪಡುವ ಈ ಪುರಸ್ಕಾರವು ತಲಾ ರೂಪಾಯಿ 25,000/- ನಗದು, ಸ್ಮರಣಿಕೆ  ಮತ್ತು ಪುರಸ್ಕಾರಪತ್ರ ಹೊಂದಿರುತ್ತದೆ.

ಮುಂಬಯಿ ಕನ್ನಡ ಪತ್ರಿಕೋದ್ಯಮ ರಂಗಕ್ಕೆ ನಿಷ್ಠುರತೆಯೊಂದಿಗೆ ಸುಮಾರು ಮೂರುವರೆ ದಶಕಗಳ ದೀರ್ಘಾವಧಿಯ ಅನುಪಮ, ಅತ್ಯಮೂಲ್ಯ ಸೇವೆಗೈದು ಸಮಾಜಮುಖಿ ದೃಷ್ಟಿಕೋನವುಳ್ಳವರಾಗಿ ಪತ್ರಿಕೋದ್ಯಮವನ್ನು ಪ್ರತಿಷ್ಠಿತವಾಗಿರಿಸಿ ಅಗ್ರಗಣ್ಯ ಪತ್ರಕರ್ತರೆನಿಸಿದ ಕೆ.ಟಿ ವೇಣುಗೋಪಾಲ್ 2009ರಲ್ಲಿ ಸ್ವರ್ಗಸ್ಥರಾದರೂ ಅವರು ಇಂದಿಗೂ ಜನಮಾನಸದಲ್ಲಿ ನೆಲೆಯಾಗಿರುವ ಶ್ರೇಷ್ಠ ಪತ್ರಕರ್ತಗಿದ್ದಾರೆ. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಹಿರಿಯ ಸದಸ್ಯರಾಗಿದ್ದು ಸಂಘದ ಸಂವಿಧಾನ ರಚನಾ ಸಮಿತಿಯ ಕಾರ್ಯಾಧ್ಯಕ್ಷ ಆಗಿದ್ದ ಅವರ ಸೇವೆ ಅನನ್ಯವೂ ಸ್ಮರಣೀಯವೂ ಆಗಿದೆ. ಪತ್ರಿಕೋದ್ಯಮದ ಘನತೆಯನ್ನೇ ಪ್ರತಿಷ್ಠಿತವಾಗಿರಿಸಿದ ಕೆಟಿವಿ ನಿಷ್ಠೆಯನ್ನು ಭಾವೀ ಪತ್ರಕರ್ತರಿಗೆ ಮಾದರಿ ಆಗಿಸುವ ನಿಟ್ಟಿನಲ್ಲಿ   ಪತ್ರಕರ್ತರ ಸಂಘವು ಕೆ.ಟಿ ವೇಣುಗೋಪಾಲ್ ಸ್ಮರಣಾರ್ಥ ವಾರ್ಷಿಕವಾಗಿ ಓರ್ವ ಶ್ರೇಷ್ಠ ಮತ್ತು ಹಿರಿಯ ಪತ್ರಕರ್ತರಿಗೆ  ಕೊಡಮಾಡುತ್ತಿದೆ. 2020ನೇ ಸಾಲಿನ ಈ ಪುರಸ್ಕಾರವನ್ನು ಈ ಬಾರಿ ಹೊರನಾಡಿನಲ್ಲಿ ಜಿ.ಕೆ ರಮೇಶ್ ಅವರ ಪತ್ರಿಕೋದ್ಯಮದ ಸುದೀರ್ಘಾವಧಿಯ ಮತ್ತು ಅನುಪಮ ಸೇವೆಗಾಗಿ ಪ್ರದಾನಿಸಲಿದೆ ಎಂದು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮತ್ತು ಗೌರವ  ಪ್ರಧಾನ ಕಾರ್ಯದರ್ಶಿ ಅಶೋಕ ಎಸ್.ಸುವರ್ಣ ತಿಳಿಸಿದ್ದಾರೆ.

ಶೀಘ್ರದಲ್ಲೇ ನಡೆಸಲಾಗುವ  ಪತ್ರಕರ್ತರ ಸಂಘದ ಸಭೆ/  ಕಾರ್ಯಕ್ರಮದಲ್ಲಿ ಈ ಬಾರಿಯ ಪುರಸ್ಕಾರವನ್ನು ಜಿ.ಕೆ ರಮೇಶ್ ಇವರಿಗೆ ಪ್ರದಾನಿಸಲಾಗುವುದು ಎಂದು ಪತ್ರಕರ್ತರ ಸಂಘದ ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ  ತಾಳಿಪಾಡಿ ತಿಳಿಸಿದ್ದಾರೆ.