ಅಂತಾರಾಜ್ಯ ರಸ್ತೆಯ ಶೋಚನೀಯ ಸ್ಥಿತಿ

ಅಂತಾರಾಜ್ಯ ರಸ್ತೆಯ ಶೋಚನೀಯ ಸ್ಥಿತಿ

GK   ¦    Jan 09, 2021 08:38:09 AM (IST)
ಅಂತಾರಾಜ್ಯ ರಸ್ತೆಯ ಶೋಚನೀಯ ಸ್ಥಿತಿ

ಸುಳ್ಯ: ಬಸ್, ಲಾರಿ, ಸೇರಿದಂತೆ  ನೂರಾರು ವಾಹನಗಳು ದಿನಂಪ್ರತಿ ನೂರಾರು ವಾಹನಗಳು ಓಡಾಡುತ್ತಿದ್ದರೂ  ಸಮರ್ಪಕವಾಗಿ ಅಭಿವೃದ್ಧಿ ಕಾಣದ ಕಾರಣ ಸುಳ್ಯ- ಪಾಣತ್ತೂರು ಅಂತಾರಾಜ್ಯ ರಸ್ತೆಯು ಅಪಘಾತ ವಲಯವಾಗಿ ಮಾರ್ಪಾಡಾಗುತ್ತಿದ್ದು ಅಪಘಾತವನ್ನು ಆಹ್ವಾನಿಸುವಂತಿದೆ.

ಸುಳ್ಯ-ಪಾಣತ್ತೂರು ರಸ್ತೆಯಲ್ಲಿ ಕಲ್ಲಪಳ್ಳಿ ಸಮೀಪ ಪರಿಯಾರಂ ಎಂಬಲ್ಲಿ ಮದುವೆ ದಿಬ್ಬಣ ಪ್ರಯಾಣಿಸಿದ ಬಸ್ ಅಪಘಾತ ಸಂಭವಿಸಿ ಏಳು ಮಂದಿ ಮೃತಪಟ್ಟು ಹಲವು ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ರಸ್ತೆಯ  ಶೋಚನೀಯ ಸ್ಥಿತಿ ಚರ್ಚೆಗೆ ಗ್ರಾಸವಾಗಿದೆ. ಕಿರಿದಾದ ರಸ್ತೆ, ಕಡಿದಾದ ಇಳಿಜಾರುಗಳು, ತಿರುವುಗಳು ರಸ್ತೆಯಲ್ಲಿ ವಾಹನ ಚಾಲಕರಿಗೆ ಸವಾಲನ್ನು ತಂದೊಡ್ಡುತ್ತಿದೆ.

ರಸ್ತೆಯ ಪರಿಚಯ ಇಲ್ಲದೆ ಬರುವವರು ಅಪಘಾತಕ್ಕೆ ಸಿಲುಕುವ ಅಪಾಯವಿದೆ. ರಸ್ತೆಯಲ್ಲಿ ಸುಳ್ಯದಿಂದ ಬಡ್ಡಡ್ಕವರೆಗೆ ಕರ್ನಾಟಕದ ಭಾಗದ ರಸ್ತೆಯು ಸಂಪೂರ್ಣ ನಾಶದ ಅಂಚಿನಲ್ಲಿದೆ. ಹೆಸರಿಗೆ ಡಾಮರು ರಸ್ತೆಯಾದರೂ ಡಾಮರು ಎದ್ದು ಹೋಗಿ ಡಾಮರಿನ ಪಳೆಯುಳಿಕೆ ಮಾತ್ರ ಉಳಿದುಕೊಂಡಿದೆ. ಅಲ್ಲಲ್ಲಿ ಡಾಮರು ಸಂಪೂರ್ಣ ಎದ್ದುಹೋಗಿ ಆಳೆತ್ತರದ ಹೊಂಡಗಳು ನಿರ್ಮಾಣವಾಗಿದೆ. ಮಳೆ ಬಂದರೆ ಮಳೆ ನೀರು, ಕೆಸರು ತುಂಬುವ ರಸ್ತೆ ಬೇಸಿಗೆಯಲ್ಲಿ ಧೂಳುಮಯವಾಗುತ್ತದೆ.  ಅಲ್ಲಲ್ಲಿ ನಿರ್ಮಾಣವಾಗಿರುವ ಹೊಂಡ ತುಂಬಿದ ರಸ್ತೆಯಲ್ಲಿ ಪ್ರಯಾಣಿಸುವುದು ವಾಹನ ಸವಾರರಿಗೆ ದೊಡ್ಡ ಸವಾಲಾಗಿದೆ. ಹೊಂಡಗಳಲ್ಲಿ ಚಕ್ರಗಳು ಹೂತು ಹೋದರೆ ಮತ್ತೆ ಮೇಲೇಳುವುದೇ ದುಸ್ತರವಾಗಿದೆ. ಮೊದಲೇ ಅಗಲ ಕಿರಿದಾದ ರಸ್ತೆಯಲ್ಲಿ ಈಗ ಹೊಂಡಗಳು ತುಂಬಿರುವುದು ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆ 20 ಕಿ.ಮಿ.ಉದ್ದವಿದೆ. ಇದರಲ್ಲಿ ಸುಳ್ಯದಿಂದ ಗಡಿಪ್ರದೇಶ ಬಾಟೋಳಿವರೆಗೆ 10 ಕಿ.ಮಿ.ಕರ್ನಾಟಕದ ಭಾಗದಲ್ಲಿ ಹಾದು ಹೋಗುತ್ತದೆ. ಇದರಲ್ಲಿ ಸುಳ್ಯದಿಂದ ಬಡ್ಡಡ್ಕವರೆಗೆ ಸುಮಾರು ಎಂಟು ಕಿ.ಮಿ.ರಸ್ತೆ ಸಂಪೂರ್ಣ ಹಾಳಾಗಿದೆ.

ಮೂರು ಜಿಲ್ಲೆಗಳ ಸಂಪರ್ಕ ಸೇತು:

ಸುಳ್ಯ-ಪಾಣತ್ತೂರು ರಸ್ತೆಯು ಮೂರು ಜಿಲ್ಲೆಗಳ ಸಂಪರ್ಕಕ್ಕೆ ಅತ್ಯಂತ ಸಮೀಪದ ಮತ್ತು ಬಹು ಉಪಯೋಗಿ ರಸ್ತೆಯಾಗಿದೆ. ದಕ್ಷಿಣ ಕನ್ನಡ, ಕಾಸರಗೋಡು ಮತ್ತು ಕೊಡಗು ಜಿಲ್ಲೆಯಲ್ಲಿ ಸಂಪರ್ಕಿಸುತ್ತದೆ. 2018ರಲ್ಲಿ ಕೊಡಗಿನಲ್ಲಿ ಭೂಕುಸಿತ ಉಂಟಾಗಿ ಮಂಗಳೂರು-ಮಡಿಕೇರಿ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಮುಚ್ಚಿದ್ದಾಗ ಕೊಡಗು ಸಂಪರ್ಕಕ್ಕೆ ತಿಂಗಳ ಕಾಲ ಸುಳ್ಯ-ಪಾಣತ್ತೂರು ಅಂತಾರಾಜ್ಯ ರಸ್ತೆಯನ್ನು ಪರ್ಯಾಯವಾಗಿ ಬಳಸಲಾಗಿತ್ತು. ಆ ಸಂದರ್ಭದಲ್ಲಿಯೇ ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂಬ ಬೇಡಿಕೆ ಉಂಟಾಗಿದ್ದರೂ ಯಾವುದೇ ಅಭಿವೃದ್ಧಿ ಕಂಡಿಲ್ಲ.

ಪರಿಯಾರಂ ರಸ್ತೆಯ ಇಳಿಜಾರು ಕಡಿತ ಮಾಡಲು ಗ್ರಾ.ಪಂ.ನಿರ್ಧಾರ

ಭೀಕರ ಬಸ್ ಅಪಘಾತ ನಡೆದ ಪಾಣತ್ತೂರು -ಸುಳ್ಯ ಅಂತಾರಾಜ್ಯ ರಸ್ತೆಯ ಪರಿಯಾರಂನಲ್ಲಿ ರಸ್ತೆಯ ಇಳಿಜಾರು ಕಡಿತ ಮಾಡಿ ಅಭಿವೃದ್ಧಿ ಪಡಿಸಲು ಪನತ್ತಡಿ ಗ್ರಾಮ ಪಂಚಾಯತ್ ಸಭೆ ನಿರ್ಣಯ ಕೈಗೊಂಡಿದೆ. ಚಡವು ಸೇರಿ  ಸೇರಿದಂತೆ 3 ಕಿ.ಮೀ ಉದ್ದದ ರಸ್ತೆಯ ಅಭಿವೃದ್ಧಿಯ ಬಗ್ಗೆ  ಪಂಚಾಯತ್ ಸಭೆ ಚರ್ಚಿಸಿತು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಈ ರಸ್ತೆಯಲ್ಲಿ ಪಾಣತ್ತೂರಿನಿಂದ ಪರಿಯಾರಂ ಮೇಲ್ಭಾಗದವರೆಗೆ ರಸ್ತೆ ಅಭಿವೃದ್ಧಿಗೆ  ಮೂರು ಕೋಟಿ ಅನುದಾನ ಇದೆ. ಈ  ಅಂದಾಜು ಪಟ್ಟಿಯನ್ನು  ನವೀಕರಿಸಿ ರಸ್ತೆಯನ್ನು ಅಭಿವೃದ್ಧಿ ಮಾಡಲು ಬೇಡಿಕೆ ಇರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. 3 ಕಿ.ಮೀ ಉದ್ದದ ರಸ್ತೆಯನ್ನು ನವೀಕರಸಬೇಕಾಗಿದ್ದು ಇದರಲ್ಲಿ ಪರಿಯಾರಂ ನಲ್ಲಿ 450 ಮೀ ಕಡಿದಾದ ಏರಿಕೆ, ಇಳಿಯುವಿಕೆ ಮತ್ತು ಕರ್ವ್ ಇದೆ.  ಏರಿಕೆ ಕಡಿಮೆ ಮಾಡಿ  ನವೀಕರಣ ಮಾಡಲು ಇದಕ್ಕೆ ಮೂರು ಕೋಟಿ ಬದಲು 5.26 ಕೋಟಿ ರೂ. ಮೀಸಲಿರಿಸಬೇಕೆಂದು ಬೇಡಿಕೆ ಸಲ್ಲಿಸಲು ನಿರ್ಧರಿಸಲಾಯಿತು. ರಸ್ತೆಯಲ್ಲಿ ಈಗಾಗಲೇ ಪರಿಯಾರಂ ಮೇಲ್ಭಾಗದಿಂದ ಕಲ್ಲಪಳ್ಳಿವರೆಗೆ 3 ಕೋಟಿ ಅಭಿವೃದ್ಧಿ ಪೂರ್ತಿಯಾಗಿದೆ. ಕಲ್ಲಪಳ್ಳಿಯಿಂದ ಬಾಟೋಳಿವರೆಗೆ 3.74 ಕೋಟಿ ಮೌಲ್ಯದ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ.

ಅಲ್ಲದೆ ಕಲ್ಲಪಳ್ಳಿಯಿಂದ ಪಾಣತ್ತೂರುವರೆಗೆ ರಸ್ತೆ ಬದಿಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ನಿರ್ಧರಿಸಲಾಯಿತು.  ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಪ್ರಸನ್ನ ಪ್ರಸಾದ್ ವಹಿಸಿದ್ದರು. ಉಪಾಧ್ಯಕ್ಷ ಪಿ.ಎಂ.ಕುರಿಯಾಕೋಸ್, ಪಂಚಾಯತ್ ಸದಸ್ಯರಾದ ರಾಧಾಕೃಷ್ಣ ಕಲ್ಲಪಳ್ಳಿ, ಕೆ.ಜೆ.ಜೇಮ್ಸ್,  ಕೆ.ಕೆ.ವೇಣುಗೋಪಾಲ್,  ಎನ್ ವಿನ್ಸೆಂಟ್ ಮತ್ತಿತರರು ಮಾತನಾಡಿದರು.