ಕೊರೊನಾ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲ: ಈಶ್ವರ ಖಂಡ್ರೆ

ಕೊರೊನಾ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲ: ಈಶ್ವರ ಖಂಡ್ರೆ

DA   ¦    Jun 15, 2020 04:06:17 PM (IST)
ಕೊರೊನಾ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲ: ಈಶ್ವರ ಖಂಡ್ರೆ

ಬೆಳ್ತಂಗಡಿ: ದೇಶ ಹಾಗೂ ರಾಜ್ಯದಲ್ಲಿ ಕೊರೋನಾ ಮಾಹಾಮಾರಿ ವೇಗವಾಗಿ ಹರಡುತ್ತಿದ್ದು ಇದನ್ನು ತಡೆಗಟ್ಟುವಲ್ಲಿ ರಾಜ್ಯ ಸರಕಾರವು ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ಅವರು ಸೋಮವಾರ ಧರ್ಮಸ್ಥಳದ ಸನ್ನಿಧಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಮಾದ್ಯಮದವರೊಂದಿಗೆ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು, ಸಂಪ್ರದಾಯ ವೃತ್ತಿ ಮಾಡುವವರು ಅನೇಕರು ಸಂಕಷ್ಟದಲ್ಲಿದ್ದಾರೆ ಹಾಗೂ ಆರ್ಥಿಕತೆಯ ಬೆನ್ನೆಲುಬಾಗಿರುವ ವಲಸೆ ಕಾರ್ಮಿಕರು ನಡೆದು ಹೋಗುತ್ತಿರುವ ದೃಶ್ಯ ಮನ ಕಲುಕುವಂತಿದೆ ಅವರನ್ನು ನಿಯಂತ್ರಿಸಲು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದರು.

ಕರೋನಾ ವಾರಿಯರ್ಸ್ ತಮ್ಮ ಜೀವದ ಹಂಗನ್ನು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ ಅಂತಹವರಿಗೆ ರಕ್ಷಣೆ ಸರಕಾರ ನೀಡುತ್ತಿಲ್ಲ. ಪಿಪಿಇ ಕಿಟ್ ಕಳಪೆ ಮಟ್ಟದ್ದು ಸರಬರಾಜಾಗಿದ್ದು ಅವರ ಜೀವಕ್ಕೆ ರಕ್ಷಣೆ ಇಲ್ಲದಂದಾಗಿದೆ. ಬಿಎಂಟಿಸಿ ನೌಕರರಿಗೂ ಮಾಸ್ಕ್, ಸ್ಯಾನಿಟೈಜರ್ ದೊರಕುತ್ತಿಲ್ಲ ಅಂತೆಯೇ ಸ್ಯಾನಿಟೈಜರ್‍ ಗೆ ನೀರು ಬೆರೆಸಿ ಖರೀದಿಯಲ್ಲಿ ಅಕ್ರಮ ಎಸಗಿರುವ ಕುರಿತು ತನಿಖೆಗೆ ಒತ್ತಾಯಿಸುವುದಾಗಿ ತಿಳಿಸಿದರು.

ಕೊರೋನಾ ವೈರಸ್ ನಿರಂತರವಾಗಿ ಹೆಚ್ಚಿತ್ತಿದ್ದು ಅದನ್ನು ತಡೆಗಟ್ಟಲು ಗಂಭೀರವಾಗಿ ಪ್ರಯತ್ನ ನಡೆಸಬೇಕು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಿ ಎಂಬ ಮಾತು ಸರಿಯಲ್ಲ. ಇದರಿಂದ ಸರಕಾರ ಕೈಚೆಲ್ಲಿದೆ ಎಂಬ ಅನುಮಾನ ವ್ಯಕ್ತಪಡಿಸಿದರು. ರಾಷ್ಟ್ರೀಯ ವಿಪತ್ತಿನ ಅಡಿಯಲ್ಲಿ ಜೀವರಕ್ಷಣೆ, ಉಚಿತ ಆರೋಗ್ಯ ಚಿಕಿತ್ಸೆ ಸರಕಾರದ ಮೂಲಭೂತ ಕರ್ತವ್ಯವಾಗಿದ್ದು ಕೋವಿಡ್ ಪರೀಕ್ಷೆ ಹಾಗೂ ಚಿಕಿತ್ಸೆ ಉಚಿತವಾಗಿ ನೀಡಬೇಕೆಂದರು.

ಕೋವೀಡ್ ಪರೀಕ್ಷೆಯ ಪಲಿತಾಂಶ ತಡವಾಗಿ ಬರುತ್ತಿದ್ದು ಇದರಿಂದ ಶಂಕಿತರಿಂದ ಬೇರೆಯವರಿಗೆ ಹರಡುವ ಸಾಧ್ಯತೆ ಹೆಚ್ಚಿದ್ದು ಪರೀಕ್ಷೆಯನ್ನು ದಿನಂಪ್ರತಿ 25 ಸಾವಿರಕ್ಕೆ ಹೆಚ್ಚಿಸಬೇಕು. ಕೇಂದ್ರ ಸರಕಾರವು 20ಲಕ್ಷ ಕೋಟಿಯ ಪ್ಯಾಕೇಜ್ ಘೋಷಿಸಿತು ಇದರಿಂದ ಬಡವರು, ಮಧ್ಯಮ ವರ್ಗದವರು ಇತರರಿಗೆ ಯಾವುದೇ ಉಪಯೋಗವಾಗಲಿಲ್ಲ. ಅವೈಜ್ಞಾನಿಕ ಲಾಕ್‍ಡೌನ್‍ನಿಂದಾಗಿ ಆರ್ಥಿಕ ಹಿಂಜರಿತವಾಗಿದ್ದು ಆಧಾಯ ತೆರಿಗೆ ಮಿತಿಯ ಕೆಳಗೆ ಇರುವವರಿಗೆ ಕೂಡಲೇ ನೇರವಾಗಿ ರೂ 10 ಸಾವಿರ ರೂ.ಗಳನ್ನು ಅವರ ಖಾತೆಗೆ ವರ್ಗಾವಣೆ ಮಾಡಬೇಕು ಅಂತೆಯೇ 6 ತಿಂಗಳಿಗೆ 7500ರಂತೆ ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಸದ್ಯದಲ್ಲೇ 10ನೇ ತರಗತಿಯ ಪರೀಕ್ಷೆಗಳು ಪ್ರಾರಂಭಗೊಳ್ಳಲಿದ್ದು ಮಕ್ಕಳಿಗೆ ರೋಗ ತಗುಲದಂತೆ ಸರಕಾರವು ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು. ಈಗಿನ ಸರಕಾರ ಕಾನೂನಿನ ತಾರತಮ್ಯ ಮಾಡಿದ್ದು ಕೆಪಿಸಿಸಿ ಅಧ್ಯಕ್ಷ ಜವಾಬ್ದಾರಿ ಸ್ವೀಕಾರಕ್ಕೆ ದಿನ ನಿಗದಿ ಮನವಿಯನ್ನು ತಿರಸ್ಕರಿಸಿದ್ದನ್ನು ಖಂಡಿಸಿದರು. ಈಗಿನ ಎರಡೂ ಸರಕಾರಗಳು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದು ಪೆಟ್ರೋಲ್ ದರ ಹೆಚ್ಚಿಸಿ ಜನರನ್ನು ಲೂಟಿ ಮಾಡುತ್ತಿದ್ದಾರೆ. ಜನವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ತರುತ್ತಿದ್ದು ಕೃಷಿ ಭೂಮಿ ಖರೀದಿಯಿಂದ ಲ್ಯಾಂಡ್ ಮಾಫಿಯಾಕ್ಕೆ ಪ್ರೋತ್ಸಾಹ ನೀಡುತ್ತಿದೆ. ಈ ಬಗ್ಗೆ ವಿಶೇಷ ಅಧಿವೇಶನ ಕರೆದು ಚರ್ಚಿಸಲಿ ಇಲ್ಲವಾದಲ್ಲಿ ಇದು ಬಂಡವಾಳಶಾಹಿಗಳು ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಕೃಷಿ ಭೂಮಿಯನ್ನು ಖರೀದಿಸಿ ತಮ್ಮ ಅಧೀನದಲ್ಲಿಟ್ಟುಕೊಂಡು ವ್ಯವಹಾರಿಕವಾಗಿ ನೋಡುತ್ತಾರೆ. ಇದರಿಂದ ರೈತರು ಭವಿಷ್ಯದಲ್ಲಿ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಇದರ ಬಗ್ಗೆ ಕಾಂಗ್ರೇಸ್ ಪಕ್ಷ ಹೋರಾಟ ನಡೆಸಲಿದೆ ಎಂದರು.

ಮಂಜುನಾಥನ ದರ್ಶನ

ಧರ್ಮಸ್ಥಳಕ್ಕೆ ಪತ್ನಿ ಗೀತರೊಂದಿಗೆ ಆಗಮಿಸಿದ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಅವರು ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸಿ ಜಗತ್ತಿನ ಮಹಾಮಾರಿ ಕೋರೋನಾ ಆದಷ್ಟು ಬೇಗ ಕಡಿಮೆಯಾಗಲಿ. ಇದರಿಂದ ಎಲ್ಲರೂ ಆತಂಕದಲ್ಲಿದ್ದು ಸಂಕಷ್ಟಕ್ಕೆ ಒಳಗಾಗಿದ್ದಾರೆ, ಇದರಿಂದ ಮುಕ್ತವಾಗಿ ಆರೋಗ್ಯ, ಸುಖ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.