ಕೊರೋನಾ ಲಾಕ್ ಡೌನ್ ಎದುರಿಸಿ ಗೆದ್ದ ಸ್ವಾವಲಂಬಿ ಮಹಿಳೆ

ಕೊರೋನಾ ಲಾಕ್ ಡೌನ್ ಎದುರಿಸಿ ಗೆದ್ದ ಸ್ವಾವಲಂಬಿ ಮಹಿಳೆ

Mounesh Vishwakarma   ¦    May 22, 2020 07:03:05 PM (IST)
ಕೊರೋನಾ ಲಾಕ್ ಡೌನ್ ಎದುರಿಸಿ ಗೆದ್ದ ಸ್ವಾವಲಂಬಿ ಮಹಿಳೆ

ಬಂಟ್ವಾಳ: ಕೊರೋನಾ ಮಹಾಮಾರಿ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಕ್ಕೀಡು ಮಾಡಿದೆ. ಆದರೆ ಇನ್ನೊಬ್ಬರು ಸ್ವಾಭಿಮಾನಿ ಮಹಿಳೆ ಕೊರೋನಾ ತಂದ ಸಂಕಷ್ಟವನ್ನು ಜಾಣ್ಮೆಯಿಂದಲೇ ಎದುರಿಸಿ ಸೈ ಎನ್ನಿಸಿಕೊಂಡಿದ್ದಾರೆ.

ಇವರು ಬೇರಾರು ಅಲ್ಲ, ಕಲ್ಲಡ್ಕ  ಸಮೀಪದ ಪೂರ್ಲಿಪ್ಪಾಡಿ ಅಂಗನವಾಡಿ ಕೇಂದ್ರದ  ಧನಲಕ್ಷ್ಮೀ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ  ಸಕ್ರೀಯ ಸದಸ್ಯೆ ನಾಗರತ್ನ.

ಕಳೆದ 15 ವರ್ಷಗಳಿಂದ ಸ್ತ್ರೀ ಶಕ್ತಿ ಗುಂಪಿನ ಸಹಾಯದಿಂದ ಆರ್ಥಿಕ ನೆರವನ್ನು ಪಡೆದುಕೊಂಡು ಇವರು ನಡೆಸುತ್ತಿರುವ "ಧನಲಕ್ಷ್ಮೀ ಹೋಂ ಫ್ರಾಡಕ್ಟ್" ಕೊರೋನಾ ಸಂಕಷ್ಟದಲ್ಲೂ ಇವರ ದಿಟ್ಟತನಕ್ಕೆ ನೆರವಾಗಿದೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರಾದ ನಾಗರತ್ನರವರು, ಪೂರ್ಲಿಪ್ಪಾಡಿಯ ಸಂಜೀವ ಸುವರ್ಣರನ್ನು ಮದುವೆಯಾದ ಬಳಿಕ ಮನೆ ಸಮೀಪದ  ಅಂಗನವಾಡಿ ಕೇಂದ್ರದ "ಧನಲಕ್ಷ್ಮೀ ಸ್ತ್ರೀ ಶಕ್ತಿ" ಗುಂಪಿಗೆ ಸೇರಿದರು. ಆ ಗುಂಪಿನ ಮೂಲಕ ಸಾಲಪಡೆದುಕೊಂಡು 2005ರಲ್ಲಿ ಇವರು ಆರಂಭಿಸಿದ "ಧನಲಕ್ಷ್ಮೀ ಹೋಂ ಪ್ರಾಡಕ್ಟ್" ಇದೀಗ ತಾಲೂಕಿನ ಪ್ರಮುಖ ತಿಂಡಿ ಉತ್ಪಾದನಾ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ.

ಉಜಿರೆಯ ರುಡ್ ಸೆಟ್ ನಲ್ಲಿ ಉದ್ಯಮ ಶೀಲತೆ ಕುರಿತಾಗಿ ತರಬೇತಿ ಪಡೆದ ನಾಗರತ್ನ‌ ಅವರು ಮನೆಯಲ್ಲಿ ತಿಂಡಿ ತಿನಿಸು‌ತಯಾರಿಸುವ  ಬೇಕರಿ ಘಟಕವನ್ನು ಆರಂಭಿಸಿದರು.  ವ್ಯಾಪಾರಕ್ಕೆಂದು ಸಣ್ಣ ಸಣ್ಣ ಸಭೆಗಳನ್ನು, ಸ್ವಸಹಾಯ ಸಂಘದ ಸಭೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಭೆಗಳನ್ನು ಆಶ್ರಯಿಸಿದರು. ಆ ಬಳಿಕದಿಂದ ಇವರಿಗೆ ದೊರೆತ ಜನಬೆಂಬಲ ಇವರ ಹಂಬಲಗಳನ್ನು ಬೆಳೆಸುತ್ತಾ ಬಂತು. ಆರಂಭದಲ್ಲಿ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಮಾತ್ರ ಸಿಗುತ್ತಿದ್ದ ಇವರ ಹೋಂ ಪ್ರಾಡಕ್ಟ್  ನಲ್ಲಿ‌ ಇದೀಗ ಬೇಡಿಕೆಗೆ ಅನುಗುಣವಾಗಿ 35 ಕ್ಕೂ ಅಧಿಕ ತಿಂಡಿತಿನಿಸುಗಳು ತಯಾರಾಗುತ್ತಲೇ ಇರುತ್ತದೆ. ಇವರು ತಯಾರಿಸುವ ಗೆಣಸಿನ ಸೋಂಟೆ, ತುಕುಡಿ,ಚಟ್ಟಂಬಡೆ ಬಿಸ್ಕೆಟ್ ಗೆ ಭಾರೀ ಬೇಡಿಕೆ ಇದ್ದು, ಇವರು ತಯಾರಿಸುವ 5 ಕ್ಕೂ ಅಧಿಕ‌ಬಗೆಯ ಉಪ್ಪಿನಕಾಯಿ‌ ವಿದೇಶಗಳಿಗೂ ರಫ್ತಾಗಿದೆ. ಮಳೆಗಾಲದಲ್ಲಿ ಎಲ್ಲರೂ ಇಷ್ಟಪಡುವ ಕುರುಕುರು ತಿಂಡಿಗಳನ್ನು ಇವರು ಈಗಾಗಲೇ ತಯಾರಿಸಿ, ದಾಸ್ತಾನು ಇರಿಸಿದ್ದಾರೆ.

ಆರಂಭದಲ್ಲಿ ಬಂಟ್ವಾಳದ ಹೋಟೆಲ್ ನಲ್ಲಿ‌ಅಡುಗೆ ಕೆಲಸ‌ ಮಾಡಿಕೊಂಡಿದ್ದ ನಾಗರತ್ನರ ಪತಿ, ಸಂಜೀವ ಸುವರ್ಣರು ಕೂಡ ಪತ್ನಿಯ ಜೊತೆ ಸೇರಿಕೊಂಡು‌ ಉದ್ಯಮಕ್ಕೆ ನೆರವಾಗುತ್ತಿದ್ದಾರೆ.

ಇಬ್ಬರು ಗಂಡು ಮಕ್ಕಳೂ‌ ಕೂಡ ಅಪ್ಪ ಅಮ್ಮನ ಜೊತೆ ಕೈ ಜೋಡಿಸಿದ್ದು,ಧನಲಕ್ಷ್ಮೀ ಸ್ವಸಹಾಯ ಗುಂಪಿನ ಓರ್ವ ಸದಸ್ಯೆ  ಕೂಡ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರೀ ಶಕ್ತಿ ಗುಂಪಿನ ಸದಸ್ಯರಾಗಿ ಮಾದರಿಯಾಗಿ ಇವರ ಮುನ್ನಡೆಸುತ್ತಿರುವ ಬೇಕರಿ ಉದ್ಯಮದ ಸಾಧನೆಯನ್ನು ಗಮನಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2019-20 ನೇ ಸಾಲಿನ ಜಿಲ್ಲಾ ಮಟ್ಟದ  ಸ್ತ್ರೀಶಕ್ತಿ ಸಮಾವೇಶದಲ್ಲಿ "ಯಶಸ್ವಿ ಉದ್ಯಮಿ" ಎಂದು ಗುರುತಿಸಿ ಗೌರವಿಸಿದೆ.

ಕೊರೋನಾ ಲಾಕ್ ಡೌನ್ ಸಂದರ್ಭ ಅದೆಷ್ಟೋ ಮಂದಿಕೆಲಸವಿಲ್ಲ, ಗಳಿಕೆ ಇಲ್ಲ ಎಂದು ಕಂಗೆಡುತ್ತಿದ್ದರೆ, ನಾಗರತ್ನ ರವರು ಕಷ್ಟಪಟ್ಟು ಬೆಳೆಸಿದ ಬೇಕರಿ ಉದ್ಯಮ ಅವರನ್ನು ತಲೆ ಎತ್ತಿ ನಿಲ್ಲುವಂತೆ ಮಾಡಿದೆ.

ಸ್ವಾವಲಂಬನೆಯ ಪಾಠ ಕಲಿಯಬೇಕಾದ ಈ ಕಾಲದಲ್ಲಿ  ನಾಗರತ್ನ ರಂತಹ ಸ್ವಾಭಿಮಾನಿ‌‌ ಮಹಿಳೆಯರು ಇಡೀ ಸಮಾಜಕ್ಕೆ ಆದರ್ಶ ಎಂದರೆ ತಪ್ಪಲ್ಲ.

ನಾಗರತ್ನರು ಕಷ್ಟ ಜೀವಿ, ಅವರ ಮನೆಮಂದಿಯ ಪ್ರೋತ್ಸಾಹವೂ ಇದೆ. ಇಲಾಖೆ ಕೂಡ ಇಂತಹ ಮಹಿಳೆಯರನ್ನು ಗುರುತಿಸಿ ಬೆಂಬಲಿಸುತ್ತಿದೆ.

ಗಾಯತ್ರಿ ಕಂಬಳಿ, ಶಿಶುಅಭಿವೃದ್ಧಿ ಯೋಜನಾಧಿಕಾರಿ, ಬಂಟ್ವಾಳ

ಇಲಾಖೆ, ಮನೆಮಂದಿ, ಸಮಾಜ ನೀಡಿದ ಬೆಂಬಲದಿಂದ ಯಶಸ್ವಿ ಉದ್ಯಮಿ ಎನ್ನಿಸಿದ್ದೇನೆ. ಮುಂದೆಯೂ ಸಾಕಷ್ಟು ಗುರಿ ಇರಿಸಿಕೊಂಡಿದ್ದೇನೆ.

ನಾಗರತ್ನ ಮಾಲಕಿ, ಧನಲಕ್ಷ್ಮೀ ಹೋಂ ಪ್ರಾಡಕ್ಟ್