ತೌಕ್ತೆ ಚಂಡಮಾರುತ ; ಕುಟುಂಬಗಳ ಸ್ತಳಾಂತರ

ತೌಕ್ತೆ ಚಂಡಮಾರುತ ; ಕುಟುಂಬಗಳ ಸ್ತಳಾಂತರ

May 16, 2021 10:06:48 AM (IST)
ತೌಕ್ತೆ ಚಂಡಮಾರುತ ; ಕುಟುಂಬಗಳ ಸ್ತಳಾಂತರ

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ತೌಕ್ತೆ ಚಂಡಮಾರುತದ ಪ್ರಭಾವ ತೀವ್ರವಾಗಿದ್ದು, ಕರಾವಳಿಯಲ್ಲಿ ಭಾರಿ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದೆ. ಹಲವೆಡೆ ರಸ್ತೆ, ಶೆಡ್‌ಗಳು, ತೆಂಗಿನ ಮರಗಳು ಸಮುದ್ರಕ್ಕೆ ಸೇರಿವೆ. ಕಡಲ ತೀರದಲ್ಲಿದ್ದ 80ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.ಉಳ್ಳಾಲ ಸಮೀಪದ ಉಚ್ಚಿಲದಲ್ಲಿ ಒಂದು, ಸೋಮೇಶ್ವರದಲ್ಲಿ ಎರಡು ಮನೆಗಳು ಹಾಗೂ ಹಿಂದೂ ಸ್ಮಶಾನ ಸಂಪೂರ್ಣ ಸಮುದ್ರ ಪಾಲಾಗಿವೆ. ಉಳ್ಳಾಲದಲ್ಲಿ 15 ಮತ್ತು ಸೋಮೇಶ್ವರದಲ್ಲಿ 50 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಸರ್ವಿಸ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ.
ಸಸಿಹಿತ್ಲುವಿನ ಮುಂಡ ಬೀಚ್ ಶೇ 80 ಭಾಗ ಕಡಲಿಗೆ ಸೇರಿದೆ. ಅಂಗಡಿ ಹಾಗೂ ಜೀವರಕ್ಷಕದಳದ ವಿಶ್ರಾಂತಿ ಕೊಠಡಿ ಸಮುದ್ರ ಪಾಲಾಗಿವೆ. ಬೀಚ್‌ನ ರಸ್ತೆಗೆ ನೇರವಾಗಿ ಅಲೆ ಅಪ್ಪಳಿಸುತ್ತಿದೆ. ತಣ್ಣೀರುಬಾವಿ, ಬೆಂಗ್ರೆಯಲ್ಲಿ ಕಡಲಿನ ಅಬ್ಬರ ತೀವ್ರವಾಗಿದೆ. ಈ ಪ್ರದೇಶಗಳ ಜನರಿಗೆ ಶಾಲೆಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಕಾಸರಗೋಡು ಜಿಲ್ಲೆ ಉಪ್ಪಳದ ಮುಸೋಡಿಯಲ್ಲಿ ಎರಡಂತಸ್ತಿನ ಕಟ್ಟಡ ನೀರು ಪಾಲಾಗಿದೆ. ಮುಸೋಡಿಯ ಮೂಸಾ ಅವರ ಮನೆಯವರು ಮೊದಲೇ ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದರಿಂದ ಅನಾಹುತ ತಪ್ಪಿದೆ.
ಉಡುಪಿ ಜಿಲ್ಲೆಯ ಮರವಂತೆಯಲ್ಲಿ ಕರಾವಳಿ ಮಾರ್ಗದ ಕಾಂಕ್ರಿಟ್‌ ರಸ್ತೆ ತುಂಡಾಗಿದೆ. ಸಮುದ್ರಕ್ಕೆ ತಾಗಿಕೊಂಡಂತೆ 500 ಮೀಟರ್ ಉದ್ದದ ಭೂಭಾಗ ಕೊಚ್ಚಿಹೋಗಿದೆ. 2 ಮೀನುಗಾರಿಕಾ ಶೆಡ್‌ಗಳಿಗೆ ಹಾನಿಯಾಗಿದೆ. ಇಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.ಕಿರಿಮಂಜೇಶ್ವರದ ಹೊಸಹಿತ್ಲು, ತಾರಾಪತಿ ಪ್ರದೇಶ, ಹೊಸಾಡಿನ ಕಂಚುಕೋಡು, ಶೀರೂರಿನ ದೊಂಬೆಯ ತೀರ, ಗಂಗೊಳ್ಳಿಯಲ್ಲಿ ಕಡಲ್ಕೊರೆತ ಉಂಟಾಗಿದೆ. ಉಪ್ಪುಂದದಲ್ಲಿ ಮನೆಯಂಗಳಕ್ಕೆ ಮಳೆಯ ನೀರಿನ ಜತೆಗೆ ಮೀನುಗಳು ಬಂದಿವೆ. ಕಾಪು ಬೀಚ್‌ನಲ್ಲಿ ತೀರದಲ್ಲಿದ್ದ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಯಿತು. ಬಡಾ, ಉಚ್ಚಿಲ, ಪಡುಬಿದ್ರಿ, ನಡಿಪಟ್ನದಲ್ಲಿ ಕಡಲ್ಕೊರೆತ ಸಂಭವಿಸಿದೆ. ಉಡುಪಿಯ ಮಲ್ಪೆ ಬೀಚ್‌ ತೀರವನ್ನು ನೀರು ಆವರಿಸಿದೆ. ಅಲ್ಲಿದ್ದ ನಾಡದೋಣಿಗಳನ್ನು ಕ್ರೇನ್‌ ಬಳಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಜಿಲ್ಲೆಯಾದ್ಯಂತ ಬಿರುಸಿನ ಮಳೆ ಸುರಿಯುತ್ತಿದೆ.