ಪತಿಯ ಕಿರುಕುಳ ಪತ್ನಿ ಆತ್ಮಹತ್ಯೆ: ಕೊಲೆ ಶಂಕೆ

ಪತಿಯ ಕಿರುಕುಳ ಪತ್ನಿ ಆತ್ಮಹತ್ಯೆ: ಕೊಲೆ ಶಂಕೆ

Nov 28, 2015 02:06:06 PM (IST)

ಉಳ್ಳಾಲ: ಪತಿಯ ದೈಹಿಕ ಹಾಗೂ ಮಾನಸಿಕ ಕಿರುಕುಳ ತಾಳಲಾರದೆ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಬಳಿಯ ಕೈರಂಗಳದ ದರ್ಖಾಸ್ ಗೌಸಿಯಾ ಕಂಪೌಂಡ್ ಸಮೀಪ ನಡೆದಿದ್ದು ಮಹಿಳೆಯ ಅನುಮಾನಾಸ್ಪದ ಸಾವಿನ ಹಿಂದೆ ಕೊಲೆ ಶಂಕೆ ವ್ಯಕ್ತವಾಗಿದೆ.

ಶಾಜಿದಾ(21)ಆತ್ಮಹತ್ಯೆಗೆ ಶರಣಾದ ಮಹಿಳೆ. ಮೂರೂವರೆ ವರುಷದ ಹಿಂದೆ ಪರಂಗಿಪೇಟೆ ಮೂಲದ ಪ್ರಸ್ತುತ ಮುಡಿಪಿನಲ್ಲಿ ಆಟೋ ಡ್ರೈವರ್ ಆಗಿ ದುಡಿಯುತ್ತಿದ್ದ ಅಝರ್ ಎಂಬಾತನನ್ನು ಮದುವೆಯಾದ ಶಾಜಿದಾಗೆ ಮಹಮ್ಮದ್ ಹಪೀಝ್ (ಎರಡೂವರೆ ವರುಷ) ಹಾಗೂ ಅನಾಸ್(ಒಂದೂವರೆ ವರುಷ) ಎಂಬ ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿಗೆ ನಿತ್ಯವೂ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದು ಪತಿ ಮಾದಕ ವ್ಯಸನಿ ಎಂಬ ಆರೋಪ ಇದೆ.

ಹಾಗಾಗಿ ಆರು ತಿಂಗಳ ಹಿಂದೆ ಮಹಿಳೆ ತಾಯಿಯ ಮನೆ ಸಮೀಪದ ಇಸ್ಮಾಯಿಲ್ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ  ಪತಿ ಅಝರ್ ಜೊತೆಗೆ ವಾಸವಿದ್ದ ಶಾಜಿದಾ ಅವರು ಗಂಡನನ್ನು ಅದೆಷ್ಟು ಬಾರಿ ಸರಿದಾರಿಗೆ ತರಲು ಪ್ರಯತ್ನಿಸಿದರೂ ಪತಿ ಮಾದಕ ವ್ಯವಸನದಿಂದ ಹೊರಬರಲಿಲ್ಲ ಎಂದು ತಾಯಿ ಆರೋಪಿಸಿದ್ದಾರೆ.

ಪತಿ ನಿರಂತರ ಕಿರುಕುಳ ನೀಡುತ್ತಾ ಬಂದಿದ್ದು ಗುರುವಾರ ರಾತ್ರಿಯೂ ಕಿರುಕುಳ ನೀಡಿದ್ದಾಗಿ ಶುಕ್ರವಾರ ಬೆಳಗ್ಗೆ ಶಾಜಿದಾ ತಾಯಿಯ ಬಳಿ ಅಳಲನ್ನು ತೋಡಿಕೊಂಡಿದ್ದು, ತನ್ನ ಜೀವಕ್ಕೇನಾದರೂ ಸಂಭವಿಸಿದರೆ ತನ್ನ ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ತಾಯಿಯಲ್ಲಿ ಅಲವತ್ತುಕೊಂಡಿರುವುದು ಆತ್ಮಹತ್ಯೆಯೋ ಕೊಲೆಯೇ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಮಗಳ ನೋವಿನ ಮಾತು ಕೇಳಿ ತಾಯಿ ಸಮಾಧಾನ ಪಡಿಸಿ ಗಂಡನ ಮನೆಗೆ ಕಳುಹಿಸಿದ ಬಳಿಕ ಮಹಿಳೆ ಸಾವಿಗೀಡಾಗಿದ್ದು ಮೃತ ಮಹಿಳೆ ಶಾಜಿದಾ ಅವರ ತಾಯಿ ಬೀಪಾತಿಮ್ಮ ಕೊಣಾಜೆ ಠಾಣೆಗೆ ನೀಡಿದ ದೂರಿನ ಮೇರೆಗೆ ಆರೋಪಿ ಅಝರ್ನನ್ನು ಕೊಣಾಜೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.