ವಕೀಲ ಸಮುದಾಯಕ್ಕೆ ಪರಿಹಾರಕ್ಕಾಗಿ ಆಗ್ರಹ

ವಕೀಲ ಸಮುದಾಯಕ್ಕೆ ಪರಿಹಾರಕ್ಕಾಗಿ ಆಗ್ರಹ

MV   ¦    Jun 29, 2020 04:11:28 PM (IST)
ವಕೀಲ ಸಮುದಾಯಕ್ಕೆ ಪರಿಹಾರಕ್ಕಾಗಿ ಆಗ್ರಹ

ಬಂಟ್ವಾಳ: ಕೋವಿಡ್ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾದ ವಕೀಲ ಸಮುದಾಯಕ್ಕೂ 50 ಕೋಟಿ ರೂ. ಪ್ರತ್ಯೇಕ ನಿಧಿ ಸ್ಥಾಪಿಸಿ ,  ವಕೀಲರನ್ನು ಸಂಕಷ್ಟದಿಂದ ಪಾರುಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆ ಆಗ್ರಹಿಸಿದೆ.

ಈ ಕುರಿತಾಗಿ ಸೋಮವಾರ  ಬಂಟ್ವಾಳ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆ (ರಿ) ಮಂಗಳೂರು ಜಿಲ್ಲಾಧ್ಯಕ್ಷ ಎಸ್.ಪಿ.ಚಂಗಪ್ಪರವರು ಮಾತನಾಡಿ,  ಕೊರೋನಾ ಲಾಕ್ ಡೌನ್ ನಿಂದಾಗಿ ಮೂರು ತಿಂಗಳಿನಿಂದ ನ್ಯಾಯಾಲಯದ ಕಲಾಪಗಳು ನಡೆಯುತ್ತಿಲ್ಲ. ಇದರಿಂದ ಕಕ್ಷಿದಾರರಿಗೆ ತೊಂದರೆಯಾದಂತೆ, ವಕೀಲಿ ವೃತ್ತಿಯನ್ನೇ ಆಧಾರವಾಗಿಸಿದ ವಕೀಲರಿಗೂ ಸಮಸ್ಯೆಯಾಗಿದೆ. ವಕೀಲರು ಜೀವಂತ ಸತ್ತು ಹೋದ ಸ್ಥಿತಿ ಎದುರಾಗಿದ್ದು, ಸರ್ಕಾರ ಗಮನಹರಿಸುವಂತೆ ಒತ್ತಾಯಿಸಿದರು.

ಬ್ಯಾಂಕುಗಳ ಮೂಲಕ ಕನಿಷ್ಠ ಬಡ್ಡಿಯ ಸಾಲ ಬಿಡುಗಡೆ, ಯುವ ವಕೀಲರಿಗೆ ಕೊಡುವ ಪ್ರೋತ್ಸಾಹಧನ ಏರಿಕೆ, ನ್ಯಾಯಾಂಗ ಬಂಧನದಲ್ಲಿರುವ ಕೈದಿಗಳಿಗೆ ಕಡ್ಡಾಯ ಕೋವಿಡ್ ಟೆಸ್ಟ್, ಅವರ ಕುಟುಂಬಸ್ಥರ ಭೇಟಿಗೆ ಅವಕಾಶ ಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕಾನೂನು ವೇದಿಕೆ ಉಪಾಧ್ಯಕ್ಷರಾದ ಉಮೇಶ್ ಕುಮಾರ್ ವೈ, ಪ್ರಧಾನ ಕಾರ್ಯದರ್ಶಿ ಉದನೇಶ್ವರ ಬಿ, ಸಂಘಟನಾ ಕಾರ್ಯದರ್ಶಿ ವೀರೇಂದ್ರ ಎಂ.ಸಿದ್ಧಕಟ್ಟೆ, ಬಂಟ್ವಾಳ ಘಟಕ ಅಧ್ಯಕ್ಷ ಸುರೇಶ್ ಪೂಜಾರಿ, ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ಜತೆಕಾರ್ಯದರ್ಶಿ ತುಲಸೀದಾಸ್, ಮೋಹನ್ ಕಡೇಶ್ವಾಲ್ಯ, ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ. ಶೆಣೈ ಮೊದಲಾದವರು ಉಪಸ್ಥಿತರಿದ್ದರು