ಕೊರೊನಾ ಸೋಂಕು ಭೀತಿ: ರಾಜ್ಯದಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಘೋಷಣೆ

ಕೊರೊನಾ ಸೋಂಕು ಭೀತಿ: ರಾಜ್ಯದಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಘೋಷಣೆ

MV   ¦    Mar 10, 2020 09:39:39 AM (IST)
ಕೊರೊನಾ ಸೋಂಕು ಭೀತಿ: ರಾಜ್ಯದಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಘೋಷಣೆ

ಬಂಟ್ವಾಳ: ಕೊರೊನಾ ವೈರಸ್ ನಿಂದ ಮಕ್ಕಳಿಗೆ ರಕ್ಷಣೆಯನ್ನು ಕೊಡಬೇಕು ಎನ್ನುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಮಾ.23ರಿಂದಲೇ  ಬೇಸಿಗೆ ರಜೆ ನೀಡುವ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದು, ಮಾ.23 ಕ್ಕೆ ಮುಂಚಿತವಾಗಿ ಪರೀಕ್ಷೆಗಳನ್ನು ಮುಗಿಸುವ ಮಹತ್ವದ ಸುತ್ತೋಲೆ ಹೊರಡಿಸಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಶಾಲೆಗಳಲ್ಲಿನ ಪೂರ್ವಪ್ರಾಥಮಿಕ, ಎಲ್ ಕೆ ಜಿ ,ಯುಕೆಜಿ ತರಗತಿಗಳಿಗೆ ಮಾ.9ರಿಂದಲೇ ರಜೆ ಘೋಷಿಸಿರುವ ಶಿಕ್ಷಣ  ಇಲಾಖೆ,  ಸೋಮವಾರ ರಾಜ್ಯದ ಜಿಲ್ಲೆಗಳ ಉಪನಿರ್ದೇಶಕರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಹೊರಡಿಸಲಾದ ಸುತ್ತೋಲೆಯಲ್ಲಿ   ಮಾರ್ಚ್ 11 ರಿಂದ 16 ರ ಒಳಗಾಗಿ ಒಂದರಿಂದ 5ನೇ ತರಗತಿವರೆಗಿನ ಮಕ್ಕಳ ಪರೀಕ್ಷೆಗಳನ್ನು ನಡೆಸಬೇಕು, ಮಾರ್ಚ್ 23ಕ್ಕೆ ಮುಂಚಿತವಾಗಿ 6ನೇ ತರಗತಿಯಿಂದ 9ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಪರೀಕ್ಷೆಯನ್ನು ಪೂರ್ಣಗೊಳಿಸಬೇಕು. 10ನೇ ತರಗತಿಯ ಪರೀಕ್ಷೆಯನ್ನು ಈಗಾಗಲೇ ನಿಗದಿಪಡಿಸಿರುವ ದಿನಾಂಕಗಳಲ್ಲಿ ನಡೆಸಬೇಕು ಎನ್ನುವ ಸೂಚನೆಗಳನ್ನು ನೀಡಲಾಗಿದೆ.  ಕೋರೋನ ವೈರಸ್ ನ ಭೀತಿ ಎಲ್ಲೆಡೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಹೆಚ್ಚಿನ ಗಮನ ಹರಿಸಿರುವ ಆರೋಗ್ಯ ಇಲಾಖೆಯ ನಿರ್ದೇಶನದ ಮೇರೆಗೆ, ಶಿಕ್ಷಣ ಇಲಾಖೆ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ. 

ಈ ದಿಢೀರ್ ಸುತ್ತೋಲೆಯ ಹಿನ್ನೆಲೆಯಲ್ಲಿ ಕೊರೋನ ವೈರಸ್ ನ ಭೀತಿ ಮತ್ತಷ್ಟು ಹೆಚ್ಚಾದಂತೆ ಅನ್ನಿಸಿದ್ದು,  ಎಲ್ಲೆಡೆ ಆತಂಕ ಮನೆ ಮಾಡಿದೆ. ಈಗಾಗಲೇ ಮಾರ್ಚ್ 16ರಂದು ಪರೀಕ್ಷೆಗಳನ್ನು ನಡೆಸುವ ಉತ್ಸಾಹದಲ್ಲಿದ್ದ ಶಿಕ್ಷಕರು, ಸೋಮವಾರ ಹೊರಡಿಸಿರುವ ಸುತ್ತೋಲೆ ಸುತ್ತೋಲೆಯಿಂದ ಒಂದಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಉಳಿದಂತೆ ಶಾಲೆ ನಡೆಯುವ ದಿನಾಂಕಗಳಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಾರ್ಥನಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಎನ್ನುವ ನಿರ್ದೇಶನ ನೀಡಲಾಗಿದೆ.

ಅಲ್ಲದೆ ವಿದ್ಯಾರ್ಥಿಗಳಲ್ಲಿ ಜ್ವರ, ಕೆಮ್ಮು, ನೆಗಡಿ ಅಥವಾ ಇತರೆ ಯಾವುದೇ ಸಮಸ್ಯೆಗಳಿದ್ದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಸೂಕ್ತ ಚಿಕಿತ್ಸೆ ನೀಡಿ ಕಡ್ಡಾಯವಾಗಿ ರಜೆಯನ್ನು ನೀಡುವುದು ವಿದ್ಯಾರ್ಥಿಗಳು ಸುರಕ್ಷತಾ ಕ್ರಮವಾಗಿ ಮಾಸ್ಕ್ ಧರಿಸಿ ಪರೀಕ್ಷೆಯನ್ನು ಬರೆಯಲು ಇಚ್ಚಿಸಿದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಅನುಮತಿಯನ್ನು ನೀಡುವುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.