ಸಂದೀಪ್ ಕೊಲೆ ಯತ್ನ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

ಸಂದೀಪ್ ಕೊಲೆ ಯತ್ನ ಪ್ರಕರಣ: ಆರು ಮಂದಿ ಆರೋಪಿಗಳ ಬಂಧನ

Nov 21, 2015 03:31:53 PM (IST)

ಕಾಸರಗೋಡು: ನಗರದ ಆಟೋ ಚಾಲಕ ಸಂದೀಪ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಮಂದಿ ಆರೋಪಿಗಳನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಎರಡು ಬೈಕ್, ಎರಡು ಕಾರು, ಕೃತ್ಯಕ್ಕೆ ಬಳಸಿದ ಒಂದು ಚಾಕುವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಇನ್ನೊಂದು ಚಾಕುವನ್ನು ಚಂದ್ರಗಿರಿ ಹೊಳೆಗೆ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.

ಕೃತ್ಯದ ಸಂದರ್ಭದಲ್ಲಿ ಬಳಸಿದ ವಸ್ತ್ರಗಳನ್ನು ಕಿಯೂರಿನಿಂದ ವಶಪಡಿಸಿಕೊಳ್ಳಲಾಗಿದೆ. ಕೃತ್ಯದ ಸೂತ್ರಧಾರ ದುಬೈಯಲ್ಲಿರುವುದಾಗಿ ತಿಳಿದು ಬಂದಿದೆ. ಬಂಧಿತರಲ್ಲಿ ನಗರ ಹೊರ ವಲಯದ ಚೌಕಿ ಕಂಬಾರಿನ ಮುಹಮ್ಮದ್ ಅರಾಫಾತ್( 25),  ಚೌಕಿ ಬದರ್ ನಗರದ ಇಸ್ಮಾಯಿಲ್ ಯಾನೆ ಈಚು (23), ಉಳಿಯತ್ತಡ್ಕದ ಮೊಯ್ದಿನ್ ಕುನ್ಚಿ ಯಾನೆ  ಮುಸ್ತಫಾ (39), ಮೀಪುಗುರಿಯ  ಜುನೈದ್ (19), ಕಿಯೂರಿನ  ರುಮೈಜ್ ( 23) ಮತ್ತು ಹದಿನೇಳು ವರ್ಷದ ಬಾಲಕನು ಒಳಗೊಂಡಿದ್ದಾನೆ.

ಪ್ರಕರಣದಲ್ಲಿ ಒಟ್ಟು ಏಳು ಮಂದಿ ಶಾಮಿಲಾಗಿದ್ದು, ಈ ಪೈಕಿ ಸೂತ್ರಧಾರ ಆಫ್ರಾಜ್ ಎಂದು ತಿಳಿದು ಬಂದಿದ್ದು, ಈತ  ದುಬೈಯಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅರಾಫಾತ್ ಮತ್ತು ಇಸ್ಮಾಯಿಲ್ ಕೃತ್ಯದಲ್ಲಿ  ನೇರವಾಗಿ ಶಾಮಿಲಾಗಿದ್ದು , ಉಳಿದವರು ಆರೋಪಿಗಳಿಗೆ ನೆರವಾದವರು.

ವೈಯುಕ್ತಿಕ  ದ್ವೇಷದಿಂದ ಈ ಕೃತ್ಯ ನಡೆದರೂ ಗಲಭೆ ಸೃಷ್ಟಿಸುವ ಹುನ್ನಾರ ತಂಡದ್ದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ನವಂಬರ್ 12 ರಂದು ಮುಂಜಾನೆ ನಗರದ ಕೆ .ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣ ಬಳಿ ತಂಡವು ಬಟ್ಟ೦ಪಾರೆಯ ಸಂದೀಪ್ ನನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆಗೆತ್ನಿಸಿದ್ದು, ಸಂದೀಪ್ ಮಂಗಳೂರು ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ.