ಮನೆಬಿಟ್ಟು ಸೈಕಲ್ ತುಳಿದು 75 ಕಿ.ಮೀ ಕ್ರಮಿಸಿದ ಬಾಲಕ!

ಮನೆಬಿಟ್ಟು ಸೈಕಲ್ ತುಳಿದು 75 ಕಿ.ಮೀ ಕ್ರಮಿಸಿದ ಬಾಲಕ!

Nov 18, 2015 11:59:41 AM (IST)

ಕಾರ್ಕಳ: ಕಲಿಕೆಗೆ ಹೆಚ್ಚಿನ ಒತ್ತು ನೀಡುವಂತೆ ಮನೆ ಮಂದಿ ನೀಡಿದ ಕಿವಿಮಾತಿಗೆ ಬೆಲೆಕೊಡದ ಬಾಲಕನೊಬ್ಬ ತೀರ್ಥಹಳ್ಳಿಯ ಕಮ್ಮಡಿ ಎಂಬಲ್ಲಿ ಮನೆ ತೊರೆದು ಸೈಕಲ್ ಮೂಲಕ 75 ಕಿ.ಮೀ ಕ್ರಮಿಸಿ ಕಾರ್ಕಳ ಬಜಗೋಳಿಯಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ಬಂದಿರುವ ಘಟನೆ ನಡೆದಿದೆ.

ಯುವರಾಜ್(14) ಎಂಬಾತ ಮನೆ ತೊರೆದ ಬಾಲಕ ವಿಶ್ವತೀರ್ಥ ಶಾಲೆಯ 8ನೇ ತರಗತಿ ಕಲಿಯುತ್ತಿದ್ದ ಆತ ಕಲಿಕೆಯಲ್ಲಿ ತೀರಾ ಹಿಂದೆ ಬಿದ್ದಿದ್ದನು. ಇದೇ ಕಾರಣದಿಂದ ಆತನಿಗೆ ಮನೆ ಮಂದಿ ಹೇಳುತ್ತಿದ್ದ ಬುದ್ದಿವಾದ ಕಿರಿಕಿರಿ ಎನ್ನಿಸ ತೊಡಗಿತ್ತು. ಮನೆ ತೊರೆದು 75 ಕಿ.ಮೀ ದೂರದಲ್ಲಿರುವ ಕಾರ್ಕಳ ಬಜಗೋಳಿಯ ಸಂಬಂಧಿಕರೊಬ್ಬರ ಮನೆಗೆ ಬಂದಿದ್ದನು. ಅಲ್ಲೂ ಆತನಿಗೆ ಕಿವಿಮಾತು ಹೇಳಿದರೆಂಬ ಕಾರಣಕ್ಕಾಗಿ ಸೋಮವಾರ ನಸುಕಿನ ಜಾವದಲ್ಲಿ ಸೈಕಲ್ ಏರಿ ಅಲ್ಲಿಂದ ನಾಪತ್ತೆಯಾಗಿದ್ದನು.

ಬಾಲಕನ ವರ್ತನೆಯಿಂದ ಭಯಭೀತರಾದ ಮನೆಮಂದಿ ಕಾರ್ಕಳ ಗ್ರಾಮಾಂತರ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಕೆಂಪು ಬಣ್ಣದ ಪ್ಯಾಂಟ್, ನೀಲಿ ಬಣ್ಣದ ಟೀಶರ್ಟ್, ಜೀನ್ಸ್ ಧರಿಸಿದ್ದು, ನಾಲ್ಕು ಅಡಿ ಎತ್ತರ, ಕನ್ನಡ, ಹಿಂದಿ ಭಾಷೆಗಳನ್ನು ಸಂಭಾಷಿಸಬಲ್ಲವನಾಗಿದ್ದಾನೆ ಎಂಬ ಚಹರೆಯನ್ನು ನೀಡಿದ್ದರು.

ಅದೃಷ್ಟವಷತ್ ಯುವರಾಜ್ ಶಿವಮೊಗ್ಗದ ಸಂಭಂಧಿಕರೊಬ್ಬರ ಮನೆಯಲ್ಲಿ ಇರುವ ಬಗ್ಗೆ ಆತನೇ ಮನೆ ಮಂದಿಗೆ ಸಂಜೆ ನಾಲ್ಕರ ವೇಳೆಗೆ ಕರೆ ಮಾಡಿ ವಿಷಯವನ್ನು ತಿಳಿಸಿರುವುದರಿಂದ ಮನೆಮಂದಿ ನಿಟ್ಟಿರುಸಿರು ಬಿಡುವಂತಾಗಿದೆ ಎಂಬ ಮಾಹಿತಿ ಲಭಿಸಿದೆ.